
ಬೆಂಗಳೂರು: ಕನ್ನಡದ ಇತ್ತೀಚೆಗಿನ ಸೂಪರ್ ಹಿಟ್ ಚಿತ್ರ ಅಂದರೆ ಅದು 'ಪ್ರೇಮದ ಊರಲಿ'. ನಿಮಗೆ ಗೊತ್ತಾ? ಈ ಚಿತ್ರದ ಟೈಟಲ್ ಹಿಂದೆ ಕುತೂಹಲಕಾರಿ ಕಥೆ ಒಂದು ಇದೆ. ಈ ಕುರಿತು ಚಿತ್ರದ ನಿರ್ದೇಶಕ ಮನೋಜ್ ಕುಮಾರ್ ಮಾತನ್ನಾಡಿದ್ದಾರೆ.
ಅವರ ಪ್ರಕಾರ.. ಚಿತ್ರಕ್ಕೆ ಯಾವ ಟೈಟಲ್ ಇಡಬೇಕು ಎಂದು ಚರ್ಚೆ ನಡೆಯುತ್ತಿತ್ತು. ಸಿನಿಮಾದಲ್ಲಿ ಕೆಲಸ ಮಾಡಿದವರು ಬೇರೆ ಬೇರೆ ಹೆಸರುಗಳನ್ನು ಯೋಚಿಸಿದ್ದರು. ಟೆಕ್ನಿಕಲ್ ಟೀಮ್ ಸೇರಿದಂತೆ ಹಲವರು 'ಪ್ರೇಮದ ಊರಲ್ಲಿ' ಟೈಟಲ್‌ಗೆ ಒಪ್ಪಿಗೆ ನೀಡಿರಲಿಲ್ಲ. ನನಗೂ ಕೂಡ ಮನಸ್ಸಿರಲಿಲ್ಲ. ಎಲ್ಲೋ ಒಂದು ಕಡೆ ಈ ಟೈಟಲ್ ಸ್ವಲ್ಪ ಹಳೆಯದಾಗಿ ಕಾಣಿಸಬಹುದೇನೋ ಎಂದು ಎಲ್ಲರೂ ಯೋಚಿಸುತ್ತಿದ್ದರು. ಆದರೆ, ನಿರ್ಮಾಪಕ ದೇವೇಂದ್ರ ಅವರು ಮಾತ್ರ, ಇದೇ ಟೈಟಲ್ ಬೇಕು ಎಂದು ಗಟ್ಟಿಯಾಗಿ ನಿಂತುಕೊಂಡು ಹಠ ಹಿಡಿದಿದ್ದರಂತೆ ಎಂದಿದ್ದಾರೆ.
ಇನ್ನು, ಟೈಟಲ್ ಹಿಂದಿರುವ ಸಿನಿಮಾದ ಕಾನ್ಸೆಪ್ಟ್ ಕೂಡ ಅಷ್ಟೇ ವಿಶೇಷವಾಗಿದೆ. ಸಿನಿಮಾದಲ್ಲಿ ಅಪ್ಪ ಮತ್ತು ಮಗ ಇಬ್ಬರೇ ಇರುತ್ತಾರೆ. ಅವರ ಬದುಕು ತುಂಬಾ ಸಂತೋಷದಿಂದ ಕೂಡಿರುತ್ತದೆ. ಅವರಿಗೆ ಬೇರೆ ಯಾವುದೇ ಕಷ್ಟಗಳಾಗಲಿ, ಹೋರಾಟವಾಗಲಿ ಇರುವುದಿಲ್ಲ. ಮನೆಯಲ್ಲಿ ಅಪ್ಪನಿಗೆ ಹೆಂಡತಿ ಇರುವುದಿಲ್ಲ, ಮಗನಿಗೆ ತಾಯಿ ಇರುವುದಿಲ್ಲ. ಹೀಗಾಗಿ.. ಮದುವೆಗೆ ಮನೆಗೊಬ್ಬಳು ಓದಿರುವ ಹೆಣ್ಣು ಮಗಳನ್ನು ಸೊಸೆಯಾಗಿ ಕರೆತರಬೇಕು ಎಂಬುದು ಮಾತ್ರ ಜೀವನದ ದೊಡ್ಡ ಹೋರಾಟವಾಗಿರುತ್ತದೆ.
ಊರಿನಿಂದ ಆಚೆ ಇರುವ ಅವರ ಸುಂದರವಾದ ಒಂದೇ ಒಂದು ಮನೆಯೇ ಪ್ರೇಕ್ಷಕರಿಗೆ ಒಂದು ಊರಿನಂತೆ ಕಾಣಿಸಬೇಕು ಎಂಬುದು ಚಿತ್ರತಂಡದ ಉದ್ದೇಶವಾಗಿತ್ತು. ಹೀಗೆ ಒಂದು ಸುಂದರ ಮನೆಯನ್ನು ಕಟ್ಟಿಕೊಡುವ ಕಲ್ಪನೆಗೆ 'ಯಜಮಾನ' ಸಿನಿಮಾ ಸ್ವಲ್ಪ ಸ್ಫೂರ್ತಿಯಾಗಿತ್ತಂತೆ.
ಇಡೀ ಕಥೆ ಒಂದು ಸುಂದರ 'ಊರು' ಮತ್ತು 'ಮನೆ'ಯ ಸುತ್ತಲೇ ಸಾಗುತ್ತಿದ್ದ ಕಾರಣ ಸಿನಿಮಾಕ್ಕೆ ಹಾಡಿನ ಸಾಹಿತ್ಯ ಬರೆಯುವಾಗ ಅನಿರೀಕ್ಷಿತವಾಗಿ ಪ್ರೇಮದ ಊರಲಿ ಎಂಬ ಸಾಲು ಬಂದುಬಿಟ್ಟಿತು. ಆ ಸಾಲು ಕೇಳಲು ತುಂಬಾ ಚೆನ್ನಾಗಿ ಅನಿಸಿದ್ದರಿಂದ.. ನಾವು ಮೊದಲೇ ಊರು ಎಂಬ ಕಲ್ಪನೆಯಲ್ಲೇ ಇದ್ದೇವೆ. ಹಾಗಾಗಿ ಸಿನಿಮಾಕ್ಕೆ 'ಪ್ರೇಮದ ಊರಲಿ' ಅಂತಾನೇ ಟೈಟಲ್ ಇಡೋಣ ಎಂದು ನಿರ್ಧರಿಸಿ ಅಂತಿಮಗೊಳಿಸಲಾಯಿತು ಎಂದು ನಿರ್ದೇಶಕರು ತಿಳಿಸಿದ್ದಾರೆ.
ಪ್ರೇಮದ ಊರಲಿ ಸಿನಿಮಾವು ಸೆಪ್ಟೆಂಬರ್ 25 ರಂದು ಬಿಡುಗಡೆ ಆಯಿತು. ಮನೋಜ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ರಂಗಾಯಣ ರಘು (ನಾಗಣ್ಣ), ಶ್ರೀರಾಮ್ / ಶ್ರೀ ಮಹಾದೇವ್ (ಸಂತು), ತಪಸ್ವಿನಿ ಪೂಣಚ್ಚ (ರುಕ್ಮಿಣಿ), ರಮಿಕಾ ಶಿವು, ಗೋವಿಂದೇ ಗೌಡ ಮೊದಲಾದವರು ನಟಿಸಿದ್ದಾರೆ. ಚಿತ್ರಕ್ಕೆ ಸುನಾದ್ ಗೌತಮ್ ಅವರು ಸಂಗೀತ ಸಂಯೋಜನೆ ಾಡಿದ್ದಾರೆ. ಆರಂಭದಲ್ಲಿ ಕೆಲವೇ ಕೆಲವು ಥಿಯೇಟರ್‍ಗಳಲ್ಲಿ ಓಡುತ್ತಿದ್ದ ಸಿನಿಮಾ, ಆನಂತರ ರಾಜ್ಯಾದ್ಯಂತ ಆವರಿಸಿಕೊಂಡಿತು. ಬೆನ್ನಲ್ಲೇ ಭರ್ಜರಿ ಹಿಟ್ ಆಗಿ, ದೇಶ ಹಾಗೂ ವಿದೇಶಗಳಲ್ಲೂ ಪ್ರದರ್ಶನ ಕಂಡು ಮೆಚ್ಚುಗೆಗೆ ಪಾತ್ರವಾಯಿತು. ದೊಡ್ಡ ದೊಡ್ಡ ಸ್ಟಾರ್‍ಗಳಿಂದ ಈ ಸಿನಿಮಾಗೆ ಮೆಚ್ಚುಗೆ ಸಿಕ್ಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.