ಅದ್ದೂರಿ ಸಿನಿಮಾಗಳ ಸರದಾರ; ಕೋಟಿ ಕನಸುಗಾರ ರಾಮು ಬಗ್ಗೆ ಇಂಟ್ರೆಸ್ಟಿಂಗ್ ವಿಚಾರಗಳು!

By Kannadaprabha News  |  First Published Apr 27, 2021, 8:52 AM IST

ಪರಮ ಮೌನಿ. ಮಹಾನ್‌ ವಿನಯವಂತ, ಅಪರೂಪದ ಸಜ್ಜನ. ಮುಗುಳ್ನಗು ಮತ್ತು ವೈರಾಗ್ಯ ಬೆರೆತಂಥ ಒಂದು ನೋಟ. ಚಿತ್ರರಂಗದ ಬಗ್ಗೆ ಕನಸು ಮತ್ತು ಭಯ.


ಜೋಗಿ

ರಾಮು ಚಿತ್ರರಂಗಕ್ಕೆ ಬಂದಾಗ ಕಾಣಿಸುತ್ತಿದ್ದದ್ದು ಹಾಗೆ. ಮೂವತ್ತು ಚಿತ್ರಗಳನ್ನು ನಿರ್ಮಾಣ ಮಾಡಿದ ನಂತರವೂ ಅವರು ಹಾಗೆಯೇ ಇದ್ದರು. ತೂಕ ಹೇಗೆ ಹೆಚ್ಚಾಗಲಿಲ್ಲವೋ ಹಾಗೆಯೇ ಅವರ ವರ್ತನೆಯೂ ಬದಲಾಗಲಿಲ್ಲ. ಸಿನಿಮಾ ಪತ್ರಕರ್ತರಿಗೆ ಅವರೊಂದು ಒಗಟು, ಉತ್ತರವಿಲ್ಲದ ಪ್ರಶ್ನೆ. ಯಾವ ಪ್ರಶ್ನೆಗೂ ಅವರು ಉತ್ತರ ಕೊಟ್ಟವರೇ ಅಲ್ಲ.

Latest Videos

ಕೋಟಿ ನಿರ್ಮಾಪಕ ಅಂತ ರಾಮುವನ್ನು ಹೆಸರು ಕೊಟ್ಟದ್ದು ಕನ್ನಡಪ್ರಭ ಸಂಪಾದಕ ರವಿ ಹೆಗಡೆ. ಹಂಸಲೇಖಾ ಸಂಗೀತ, ಓಂಪ್ರಕಾಶ್‌ ರಾವ್‌ ನಿರ್ದೇಶನ, ಥ್ರಿಲ್ಲರ್‌ ಮಂಜು ಸಾಹಸ, ಜನಾರ್ದನ್‌ ಸಂಕಲನ ಇದ್ದ ಆ ಚಿತ್ರ ಹಲವರ ಅದೃಷ್ಟವನ್ನು ಬದಲಿಸಿತು. ದೇವರಾಜ್‌ ಅವರು ಆಕ್ಷನ್‌ ಹೀರೋ ಆಗಿ ಮಿಂಚಿದರು. ಥ್ರಿಲ್ಲರ್‌ ಮಂಜು ಸಾಹಸ ಸನ್ನಿವೇಶ ಚಿತ್ರರಂಗದ ಹೊಡೆದಾಟದ ಚಿತ್ರಣವನ್ನೇ ಬದಲಿಸಿತು. ಅದು ಕನ್ನಡದ ಅತ್ಯಂತ ಅದ್ದೂರಿ ಬಜೆಟ್ಟಿನ ಚಿತ್ರವಾಗಿತ್ತು. ಅಷ್ಟೇ ದೊಡ್ಡ ಗೆಲುವನ್ನೂ ಕಂಡಿತು.

ಹಾಗೆ ನೋಡಿದರೆ ಕನ್ನಡಪ್ರಭಕ್ಕೂ ರಾಮು ಅವರಿಗೂ ಹತ್ತಿರದ ಸಂಬಂಧ. ಪ್ರತಿಯೊಂದು ಚಿತ್ರದ ಮುಹೂರ್ತಕ್ಕೂ ಮುಂಚೆ ಅವರು ಕನ್ನಡಪ್ರಭಕ್ಕೆ ಬಂದು ಆಗಿನ ಸಂಪಾದಕ ವೈಯನ್ಕೆ ಅವರಿಗೆ ಆಹ್ವಾನ ಪತ್ರಿಕೆ ಕೊಟ್ಟು ಆಶೀರ್ವಾದ ಪಡೆದು ಹೋಗುತ್ತಿದ್ದರು. ಅದಕ್ಕೊಂದು ಕಾರಣವೂ ಇತ್ತು.

ಗಾಡ್‌ಫಾದರ್‌ ಇಲ್ಲದೆ ಬೆಳೆದ ಸಾಧಕ ಕೋಟಿ ರಾಮು! 

ರಾಮು ಬೆಂಗಳೂರಿಗೆ ಬಂದ ಆರಂಭದ ದಿನಗಳಲ್ಲಿ ಬೆಂಗಳೂರು ಗಾಲ್‌್ಫ ಕ್ಲಬ್ಬಿನಲ್ಲಿ ಸರ್ವರ್‌ ಆಗಿ ಕೆಲಸ ಮಾಡುತ್ತಿದ್ದರು. ಗಾಲ್‌್ಫ ಕ್ಲಬ್‌ ಸದಸ್ಯರಾಗಿದ್ದ ವೈಯನ್ಕೆ ಎಲ್ಲಾ ಸರ್ವರ್‌ಗಳನ್ನೂ ಮಾತಾಡಿಸುತ್ತಿದ್ದರು. ಅದೇ ರೀತಿ ರಾಮು ಜತೆಗೂ ಮಾತಾಡಿದ್ದರು. ರಾಮು ತನ್ನ ಸಿನಿಮಾ ಕನಸುಗಳನ್ನು ವೈಯನ್ಕೆ ಮುಂದೆ ಹಂಚಿಕೊಂಡಿದ್ದರು. ವೈಯನ್ಕೆ ಶುಭಹಾರೈಸಿ ಉತ್ಸಾಹ ತುಂಬಿದ್ದರು. ರಾಮು ಅದನ್ನು ಕೊನೆಯ ತನಕವೂ ಮರೆತಿರಲಿಲ್ಲ.

ರಾಮು ಅವರೊಳಗೆ ಒಬ್ಬ ಕನಸುಗಾರನಿದ್ದ. ಹೊಟೇಲ್‌ ಹುಡುಗರಿಗೆ ಆ ಕಾಲದ ಏಕೈಕ ಮನರಂಜನೆ ಎಂದರೆ ಸ್ಟಾರ್‌ ಸಿನಿಮಾಗಳು, ಏಕೈಕ ಕನಸೆಂದರೆ ಸಿನಿಮಾ ನಟರನ್ನು ಹತ್ತಿರದಿಂದ ನೋಡುವುದು, ಆದರೆ ರಾಮು ಅದಕ್ಕಿಂತ ದೊಡ್ಡ ಕನಸು ಕಂಡರು. ತಮ್ಮ ಸಂಪಾದನೆಯನ್ನು ಸೇರಿಸಿ, ಬೇರೆ ಬೇರೆ ಭಾಷೆಯ ಚಿತ್ರಗಳನ್ನು ವಿತರಣೆ ಮಾಡಲು ಆರಂಭಿಸಿದರು. ಕ್ರಮೇಣ ಅದು ಅವರಿಗೆ ಫಲ ಕೊಟ್ಟಿತು. ಸ್ವಂತ ನಿರ್ಮಾಣಕ್ಕೂ ಕೈ ಹಾಕಿದರು. ಅದರಲ್ಲಿ ಗೆದ್ದರು. ಎಕೆ 47 ಅವರ ನಿರ್ಮಾಣದ ಅತ್ಯಂತ ಯಶಸ್ವೀ ಸಿನಿಮಾ ಆಗಿ ಹೆಸರು ಮಾಡಿತು.

ಮಾಲಾಶ್ರೀಯವರನ್ನು ಮದುವೆಯಾದದ್ದು ಅವರ ಜೀವನದ ಬಹುದೊಡ್ಡ ತಿರುವು. ರಾಮು ಸದ್ಗುಣಗಳಿಗೆ ಮನಸೋತ ಮಾಲಾಶ್ರೀ ಅವರನ್ನು ಪ್ರೀತಿಸಿ ಕೈ ಹಿಡಿದರು. ಮದುವೆಯ ನಂತರ ಮಾಲಾಶ್ರೀ ಅಭಿನಯದ ಏಳೆಂಟು ಸಿನಿಮಾಗಳನ್ನು ಅದ್ದೂರಿಯಾಗಿ ನಿರ್ಮಿಸಿದವರು ರಾಮು. ರಾಮು ಕೊನೆಯ ತನಕವೂ ಮಾಲಾಶ್ರೀಯವರ ಅಭಿಮಾನಿಯಾಗಿಯೇ ಉಳಿದವರು. ಅವರ ನಟನೆಯನ್ನು ಮೆಚ್ಚಿ ಮಾತಾಡುತ್ತಲೇ ಇದ್ದರು. ರಾಮು ಪದೇ ಪದೇ ಹೇಳುತ್ತಿದ್ದ ಮಾತು ಇದು: ಮನೆಯಲ್ಲಿ ಸೂಪರ್‌ಸ್ಟಾರ್‌ ಇಟ್ಕೊಂಡು ಸಿನಿಮಾ ಮಾಡದೇ ಇರೋದಕ್ಕಾಗುತ್ತಾ? ಅದಕ್ಕೇ ವರ್ಷಕ್ಕೊಂದು ಸಿನಿಮಾ ಅವರನ್ನೇ ಹಾಕಿಕೊಂಡು ಮಾಡ್ತಿದ್ದೀನಿ’.

ಕನಸಿನ ರಾಣಿ ಮಾಲಾಶ್ರೀ ಪುತ್ರಿ ಅನನ್ಯಾರಾಮು ಸ್ಟೈಲಿಶ್‌ ಫೋಟೋಗಳು! 

ರಾಮು ಕೊನೆಯ ಕೆಲವು ವರ್ಷಗಳಲ್ಲಿ ಚಿತ್ರರಂಗದಲ್ಲಿ ಅಷ್ಟೇನೂ ಕ್ರಿಯಾಶೀಲರಾಗಿರಲಿಲ್ಲ. ಅವರು ನಿರ್ಮಿಸಿದ ಚಿತ್ರಗಳು ಅವರಿಗೆ ಯಶಸ್ಸು ತಂದುಕೊಡಲಿಲ್ಲ. ಚಿತ್ರರಂಗದ ವಿತರಣೆಯ ಶೈಲಿ ಮತ್ತು ನಿರ್ಮಾಣದ ರೀತಿ ಬದಲಾಗಿದ್ದನ್ನು ಅರಗಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ‘ಈಗ ಮೊದಲಿನಂತೆ ಸಿನಿಮಾ ಮಾಡುವುದು ಕಷ್ಟ. ಮಾರುಕಟ್ಟೆಯ ಜಾಯಮಾನ ಬದಲಾಗಿದೆ’ ಅಂತ ಅವರು ಆಪ್ತರ ಬಳಿ ಹೇಳುತ್ತಿದ್ದರು.

ಅರ್ಜುನಗೌಡ ಚಿತ್ರದ ಮೂಲಕ ಮತ್ತೆ ಚಿತ್ರರಂಗದಲ್ಲಿ ಯಶಸ್ಸು ಕಾಣುವ ಕನಸು ಕಟ್ಟಿಕೊಂಡಿದ್ದ ರಾಮು ಅವರನ್ನು ಕೊರೋನಾ ಕೊಂಡೊಯ್ದಿದೆ. ಯಾವತ್ತೂ ಯಾರ ಜೊತೆಗೂ ಕಣ್ಣಲ್ಲಿ ಕಣ್ಣಿಟ್ಟು ಮಾತಾಡಿದವರಲ್ಲ ರಾಮು. ಕೊರೋನಾದ ಕಣ್ಣಿಗೆ ಅವರು ಬಿದ್ದದ್ದು ದುರ್ದೈವ ಮತ್ತು ಆಘಾತಕರ.

click me!