
ಬೆಂಗಳೂರು: ನಟ, ನಿರ್ದೇಶಕ ಉಪೇಂದ್ರ ಅವರ ವೃತ್ತಿಜೀವನದ ಅತ್ಯಂತ ಯಶಸ್ವಿ ಚಿತ್ರಗಳಲ್ಲೊಂದಾದ 'ಎ' ಸಿನಿಮಾ ನಿರ್ಮಿಸಿದ ಸಿಲ್ಕ್ ಮಂಜು (ಎ. ಮಂಜು) ಇದೀಗ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ನಗರದ ಸೌತ್ ಎಂಡ್ ಸರ್ಕಲ್‌ನಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿಸಲು ಆರ್ಥಿಕ ನೆರವಿನ ಅಗತ್ಯ ಎದುರಾಗಿದೆ.
'ಎ' ಚಿತ್ರದ ಯಶಸ್ಸಿನ ಹಿಂದೆ ನಿರ್ಮಾಪಕರಾಗಿ ನಿಂತಿದ್ದ ಮಂಜು, ಆ ನಂತರವೂ ಹಲವು ಚಿತ್ರಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದರು. ಇತ್ತೀಚೆಗೆ ಅವರು ನಿರ್ಮಿಸಿದ 'ಟೆರರ್' ಚಿತ್ರದ ನಂತರ ಎದುರಾದ ಆರ್ಥಿಕ ನಷ್ಟ, ತಮ್ಮ ನಿರ್ಮಾಣದ ವಿವಿಧ ಚಿತ್ರಗಳಲ್ಲಿ ಕಳೆದುಕೊಂಡ ಹಣ ಸೇರಿದಂತೆ ಹಲವು ಕಾರಣಗಳಿಂದ ಅವರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ. ಈಗ ಪರಿಸ್ಥಿತಿ ಎಷ್ಟರ ಮಟ್ಟಿಗೆ ತಲುಪಿದೆಯೆಂದರೆ, ಆಸ್ಪತ್ರೆಯ ಚಿಕಿತ್ಸೆಯ ವೆಚ್ಚವನ್ನೂ ಭರಿಸಲು ಕಷ್ಟವಾಗುತ್ತಿದೆ ಎಂಬುದು ಅವರ ಆಪ್ತರ ಆತಂಕ.
ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿ ದುಡಿದ ವ್ಯಕ್ತಿಯೊಬ್ಬರು ಇಂದು ಅನಾರೋಗ್ಯದ ವೇಳೆ ಚಿಕಿತ್ಸೆಯ ಹಣಕ್ಕೂ ಪರದಾಡುವ ಸ್ಥಿತಿ ಬಂದಿರುವುದು ಚಿತ್ರರಂಗದ ಕಾಳಜಿಗೊಳಗಾಗಬೇಕಾದ ಸಂಗತಿ. ವಿಪರ್ಯಾಸವೆಂದರೆ, ಮಂಜು ಅವರ ಸ್ಥಿತಿ ಇಷ್ಟು ಗಂಭೀರವಾಗಿದೆ ಎಂಬುದು ಚಿತ್ರರಂಗದ ಬಹುತೇಕರ ಗಮನಕ್ಕೂ ಬಂದಿಲ್ಲ ಎನ್ನಲಾಗುತ್ತಿದೆ.
ಸಂಕಷ್ಟದಲ್ಲಿ ನಿರ್ಮಾಪಕ
ಸಿನಿಮಾ ಯಶಸ್ವಿಯಾದಾಗ ಅದರ ಸುತ್ತ ನಿಲ್ಲುವ ಚಿತ್ರರಂಗ, ಒಬ್ಬ ನಿರ್ಮಾಪಕ ಸಂಕಷ್ಟದಲ್ಲಿದ್ದಾಗಲೂ ಆತನ ಜೊತೆಯಲ್ಲಿ ನಿಲ್ಲಬೇಕಾದ ಜವಾಬ್ದಾರಿ ಹೊಂದಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ರಾಜ್ಯ ಸರ್ಕಾರ ತಕ್ಷಣವೇ ಈ ವಿಚಾರವನ್ನು ಗಮನಿಸಿ, ಸಾಧ್ಯವಾದ ಎಲ್ಲಾ ರೀತಿಯ ನೆರವನ್ನು ಒದಗಿಸಬೇಕು ಎಂಬ ಮನವಿ ಕೇಳಿಬರುತ್ತಿದೆ.
ಚಿಕಿತ್ಸೆಗೆ ಅಗತ್ಯವಿರುವ ನೆರವು ಸಕಾಲದಲ್ಲಿ ದೊರೆಯದೇ ಹೋದರೆ ಅವರ ಆರೋಗ್ಯ ಸ್ಥಿತಿ ಇನ್ನಷ್ಟು ಬಿಗಡಾಯಿಸುವ ಆತಂಕವಿದೆ. ಹಲವು ವರ್ಷಗಳ ಕಾಲ ಕನ್ನಡ ಚಿತ್ರರಂಗದ ಭಾಗವಾಗಿದ್ದ ಮಂಜು ಅವರಿಗೆ ಈಗ ಚಿತ್ರರಂಗವೇ ಒಂದು ಕೈ ಚಾಚಬೇಕಾದ ಸಮಯ. ಅವರ ಚಿಕಿತ್ಸೆಗೆ ತುರ್ತು ನೆರವು ದೊರೆಯಲಿ ಎಂಬುದು ಅವರ ಕುಟುಂಬ, ಆಪ್ತರು ಹಾಗೂ ಚಿತ್ರರಂಗದವರ ಆಶಯ.
ಇದನ್ನೂ ಓದಿ: ಸ್ಟಾರ್‌ಗಳಿಲ್ಲ.. ಹೈಪ್ ಇಲ್ಲ, ಆದರೂ ಧಮಾಕಾ: ಈಗ ಈ ಅಖಾಡಕ್ಕೆ ಧುಮುಕಿದ ‘ಪ್ರೇಮದ ಊರಲಿ’
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.