ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್ ಜಿಮ್ ರವಿ ಅವರ ಮಾತಿದು. ಬಿಗ್‌ಬಾಸ್, ಪೋಷಕ ಪಾತ್ರಗಳಲ್ಲಿ ನಟನೆ, ಜೊತೆಗೆ ಚಿರಂಜೀವಿ, ಪವನ್ ಕಲ್ಯಾಣ್‌ರಂಥಾ ಸ್ಟಾರ್‌ಗಳಿಗೆ ಜಿಮ್ ಟ್ರೈನರ್ ಆಗಿ ಗುರುತಿಸಿಕೊಂಡಿದ್ದ ರವಿ ಈಗ ‘ಪುರುಷೋತ್ತಮ’ ಚಿತ್ರದ ಮೂಲಕ ಹೀರೋ ಆಗುತ್ತಿದ್ದಾರೆ.
. ಈ ಚಿತ್ರದ ಮುಹೂರ್ತದ ವೇಳೆ ಮಾತನಾಡಿದ ಜಿಮ್ ರವಿ, ‘ಹೀರೋ ಆಗಬೇಕು ಅನ್ನೋದು ಹತ್ತು ವರ್ಷಗಳ ಕನಸು. ಬರೇ ಒದೆ ತಿನ್ನೋದು ಮಾತ್ರನಾ ಅಪ್ಪಾ ಅಂತ ಮಗನೂ ಕೇಳ್ತಿದ್ದ. ಹಲವರ ವ್ಯಂಗ್ಯದ ಮಾತುಗಳನ್ನೂ ಕೇಳಿದ್ದೇನೆ. ಇವೆಲ್ಲ ನಾನು ನಾಯಕನಾಗಲು ಸ್ಫೂರ್ತಿಯಾಗಿವೆ’ ಎಂದರು.
‘ನಾನು ಅಣ್ಣಾವ್ರ ಅಭಿಮಾನಿ. ಅವರು ಸಿನಿಮಾದಲ್ಲಿ ಹೇಳಿದಂತೆ ಬದುಕಿದವನು. ನಾನು ಇನ್‌ಕಂ ಟ್ಯಾಕ್ಸ್ ಇನ್ಸ್‌ಪೆಕ್ಟರ್ ಆಗಿದ್ದಾಗ ಅವರನ್ನು ಭೇಟಿಯಾಗಿದ್ದೆ. ನನ್ನ ದೇಹ ನೋಡಿದ ಅವರು, ಇನ್ನು ಮೇಲಿಂದ ನಾನೇ ನಿಮ್ಮ ಅಭಿಮಾನಿ ಅಂದಿದ್ರು. ದೇಹ ದೇವಸ್ಥಾನದ ಹಾಗೆ. ಕೊನೇವರೆಗೂ ಚೆನ್ನಾಗಿ ಕಾಪಾಡ್ಕೋಬೇಕು ಅಂದಿದ್ದರು. ಅವರ ಮಾತನ್ನು ಶಿರಸಾ ಪಾಲಿಸುತ್ತಿದ್ದೇನೆ. ಆದರೆ ಈ ಸಿನಿಮಾದಲ್ಲಿ ನನ್ನ ದೇಹ ಪ್ರದರ್ಶನ ಇಲ್ಲ. ಪತ್ನಿಯನ್ನು ಮಗುವಿನಂತೆ, ಗೆಳತಿಯಂತೆ ಪ್ರೀತಿಸಬೇಕು. ಹೆಂಡತಿ, ಮಕ್ಕಳನ್ನು ಪ್ರೀತಿಸಿದಷ್ಟುನಾವು ಚೆನ್ನಾಗಿರ್ತೀವಿ ಅನ್ನೋದನ್ನು ಹೇಳೋ ಚಿತ್ರವಿದು’ ಎಂದರು.
ನಿರ್ದೇಶಕ ಅಮರನಾಥ್ ಮಾತನಾಡಿ, ‘ಈ ಚಿತ್ರದಲ್ಲಿ ಆ್ಯಕ್ಷನ್ ಆಗಲಿ, ಸ್ಪೋಟ್ಸ್‌ರ್ ಆಗಲಿ, ದೇಹ ಪ್ರದರ್ಶನವಾಗಲೀ ಇಲ್ಲ. ರವಿ ಮಧ್ಯವಯಸ್ಕ ಫ್ಯಾಮಿಲಿ ಮ್ಯಾನ್ ಆಗಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಹತ್ತು ವರ್ಷದ ಮಗುವೂ ಇರುತ್ತೆ. ಈವರೆಗೆ ಎಲ್ಲರೂ ಅವರ ದೇಹವನ್ನು ತೋರಿಸಿದರು, ನಾವು ಅವರೊಳಗಿರುವ ಕಲಾವಿದನನ್ನು ತೋರಿಸುತ್ತೇವೆ’ ಎಂದರು.
ಜಿಮ್ ತೆರೆಯಲು ಪ್ರಧಾನಿಗೆ ಪತ್ರ ಬರೆದ ಬಾಡಿ ಬಿಲ್ಡರ್ ರವಿ!
ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್, ‘ನನಗೆ ಒಂದು ಹಾಡಿನಲ್ಲಾದರೂ ರವಿಯವರ ದೇಹಸಿರಿ ಪ್ರದರ್ಶಿಸಬೇಕೆಂಬ ಆಸೆಯಿದೆ. ಚಿತ್ರದ ನಾಲ್ಕೂ ಹಾಡುಗಳೂ ಸೊಗಸಾಗಿವೆ’ ಎಂದರು.
ಹಿರಿಯ ನಿರ್ದೇಶಕ ಎಸ್ ನಾರಾಯಣ್ ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ಹಿರಿಯ ನಟ ಜೈ ಜಗದೀಶ್, ನಿರ್ಮಾಪಕಿ ವಿಜಯಲಕ್ಷ್ಮೇ ಸಿಂಗ್, ಶಾಸಕ ಮಸಾಲೆ ಜಯರಾಮ್, ಒಗ್ಗರಣೆ ಡಬ್ಬಿ ಖ್ಯಾತಿಯ ಮುರಳಿ, ನಟ ಪ್ರಭು ಮತ್ತಿತರರಿದ್ದರು.
ರವೀಸ್ ಜಿಮ್ ಪ್ರೊಡಕ್ಷನ್ ಮೂಲಕ ಜಿಮ್ ರವಿ ಅವರೇ ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ಮುಂದಿನ ವಾರದಿಂದ ಚಿತ್ರೀಕರಣ ಆರಂಭವಾಗಲಿದೆ. ಇನ್ನಷ್ಟೇ ನಾಯಕಿ ಆಯ್ಕೆ ಆಗಬೇಕಿದೆ.