
'ಕೆರೆಬೇಟೆ' ಟೈಟಲ್ ಮೂಲಕವೇ ಸ್ಯಾಂಡಲ್‌ವುಡ್‌ನಲ್ಲಿ ಬಾರಿ ಕುತೂಹಲ ಮೂಡಿಸಿರುವ ಸಿನಿಮಾ. ಈಗಾಗಲೇ ಟೈಟಲ್ ಪೋಸ್ಟರ್ ರಿಲೀಸ್ ಮಾಡಿರುವ ಸಿನಿಮಾತಂಡ ಇದೀಗ ಮೋಷನ್ ಪೋಸ್ಟರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದೆ. 'ಕೆರೆಬೇಟೆ' ಮಲೆನಾಡು ಭಾಗದ ಮೀನು ಬೇಟೆಯಾಗುವ ಒಂದು ಪದ್ಧತಿ. ಮೊದಲ ಬಾರಿಗೆ ಮೀನು ಬೇಟೆಯನ್ನು ತೆರೆಮೇಲೆ ತರುತ್ತಿದ್ದಾರೆ ನಿರ್ದೇಶಕ ರಾಜ್‌ಗುರು. ನಾಯಕನಾಗಿ ಗೌರಿಶಂಕರ್ ಎಸ್‌ಆರ್‌ಜಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಎರಡು ಸಿನಿಮಾಗಳನ್ನು ಮಾಡಿರುವ ಗೌರಿಶಂಕರ್ ಇದೀಗ ವಿಭಿನ್ನವಾದ ಒಂದೊಳ್ಳೆ ಹಳ್ಳಿ ಸೊಗಡಿನ ಸಿನಿಮಾ ಮೂಲಕ ತೆರೆಮೇಲೆ ಮಿಂಚಲು ಸಜ್ಜಾಗಿದ್ದಾರೆ.
ಸದ್ಯ ರಿಲೀಸ್ ಆಗಿರುವ ಮೋಷನ್ ಪೋಸ್ಟರ್‌ನಲ್ಲಿ ನಾಯಕ ಗೌರಿಶಂಕರ್ ಕೂಣಿ ಹಿಡಿದು ಕೆರೆಯಲ್ಲಿ ಮೀನು ಬೇಟೆಯಾಡುತ್ತಿದ್ದಾರೆ. ಉದ್ದ ಕೂದಲು ಹಾಗೂ ದಾಡಿ ಬಿಟ್ಟುಕೊಂಡು ರಾ ಲುಕ್‌ನಲ್ಲಿ ನಾಯಕ ಕಾಣಿಸಿಕೊಂಡಿದ್ದು ಅವರ ಹಿಂದೆ ದೊಡ್ಡದೊಂದು ಗುಂಪೇ ಇದೆ. ಮೊದಲ ಬಾರಿಗೆ ಮೀನುಬೇಟೆಯನ್ನು ತೆರೆಮೇಲೆ ತರುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ರಾಜ್‌ಗುರು ಮತ್ತು ತಂಡ.
ಅಂದಹಾಗೆ ನಿರ್ದೇಶಕ ರಾಜ್‌ಗುರು ಅವರಿಗೆ ಇದು ಚೊಚ್ಚಲ ಸಿನಿಮಾ. ಈ ಮೊದಲು ನಿರ್ದೇಶಕ ಪವನ್ ಒಡೆಯರ್ ಜೊತೆ ಗೂಗ್ಲಿ, ರಣವಿಕ್ರಮ, ನಟಸಾರ್ವಭೌಮ, ಜೆಸ್ಸಿ, ರೆಮೋ ಹಾಗೂ ಇನ್ನು ಅನೇಕ ಸಿನಿಮಾಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವ ಹೊಂದ್ದು ಇದೀಗ ಕೆರೆಬೇಟೆ ಮೂಲಕ ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗಿ ಹೊರಹೊಮ್ಮುತ್ತಿದ್ದಾರೆ ರಾಜ್‌ಗುರು. ಮಲೆನಾಡಿನವರೇ ಆದ ರಾಜ್‌ಗುರು ಚಿಕ್ಕವಯಸ್ಸಿನಿಂದ ಕೆರೆಬೇಟೆ ನೋಡುತ್ತಾ, ಆಡುತ್ತಾ ಬೆಳೆದವರು. ಅದನ್ನೇ ಇಟ್ಟುಕೊಂಡು ಈಗ ಸಿನಿಮಾ ಮಾಡಿರುವುದು ವಿಶೇಷ. ಮಲೆನಾಡಿನ ಜೀವನ ಶೈಲಿಯನ್ನು ಅಷ್ಟೆ ನೈಜ್ಯವಾಗಿ ಕಟ್ಟಿಕೊಡುವ ಪ್ರಯತ್ನ ಈ ಸಿನಿಮಾದಲ್ಲಿ ಮಾಡಲಾಗಿದೆ.
5 ವರ್ಷಗಳ ಬಳಿಕ ರಾಜಹಂಸ ಖ್ಯಾತಿಯ ಗೌರಿ ಶಂಕರ್ ರೀ-ಎಂಟ್ರಿ: ಅ.24ರಂದು ಚಿತ್ರದ ಶೀರ್ಷಿಕೆ ಬಿಡುಗಡೆ
ಈ ಸಿನಿಮಾದಲ್ಲಿ ಗೌರಿಶಂಕರ್ ಅವರಿಗೆ ನಾಯಕಿಯಾಗಿ ಬಿಂದು ಶಿವರಾಜ್ ನಟಿಸಿದ್ದಾರೆ. ಬಿಂದು ಅವರಿಗೆ ಇದು ಮೊದಲ ಸಿನಿಮಾ. ಇನ್ನೂ ಉಳಿದಂತೆ ಸಿನಿಮಾದಲ್ಲಿ ಗೋಪಾಲ್ ದೇಶಪಾಂಡೆ, ಸಂಪತ್ ಕುಮಾರ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರಕ್ಕೆ ಗಗನ್ ಬದೇರಿಯಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಸಿನಿಮಾಗೆ ನಾಯಕ ಗೌರಿಶಕಂಕರ್ ಅವರ ಜನಮನ ಸಿನಿಮಾಸ್ ಬ್ಯಾನರ್‌ನಲ್ಲಿ ಅವರ ಸಹೋದರ ಜೈಶಂಕರ್ ಪಟೇಲ್ ಬಂಡವಾಳ ಹೂಡಿದ್ದಾರೆ. ಈಗಾಗಲೇ ಶಿವಮೊಗ್ಗ ಜಿಲ್ಲೆಯ ಸಿಗಂದೂರ ಹಾಗೂ ಸೊರಬ ಸುತ್ತ-ಮುತ್ತ ಚಿತ್ರೀಕರಣ ಮಾಡಲಾಗಿದ್ದು ಸುಮಾರು 70ರಷ್ಟು ಚಿತ್ರೀಕರಣ ಮಾಡಿ ಮುಗಿದ್ದಾರೆ. ಸದ್ಯ ಮೋಷನ್ ಪೋಸ್ಟರ್ ಮೂಲಕ ಕುತೂಹಲ ಹೆಚ್ಚಿಸಿದ್ದು ಮುಂದಿನ ವರ್ಷದ ಪ್ರಾರಂಭದಲ್ಲಿ ತೆರೆಮೇಲೆ ಬರುವ ಪ್ಲಾನ್ ಮಾಡಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.