
‘ನಮ್ಮ ಸಿನಿಮಾ ರಿಲೀಸ್ ಆದ ಮೊದಲ ದಿನ, ನಿರ್ದೇಶಕ ಸುನಿ, ಮನೆಮಂದಿಗೆ ಟಿಕೆಟ್ ತೆಗೆಸಿಕೊಟ್ಟರೂ ಅವರು ಸಿನಿಮಾ ನೋಡೋಕೆ ಒಪ್ಪಿರಲಿಲ್ಲ. ಥೇಟರ್‌ಗಳಲ್ಲೂ ನಿರೀಕ್ಷಿತ ಪ್ರತಿಕ್ರಿಯೆ ಕಾಣಲಿಲ್ಲ. ಇದು ನನಗೆ ಆತಂಕ ತಂದಿತ್ತು’ ಎಂದು ನಟ ಗಣೇಶ್ ಹೇಳಿದ್ದಾರೆ. ‘ಸಖತ್’(Sakath) ಸಿನಿಮಾದ ಸಕ್ಸಸ್ ಮೀಟ್‌ನಲ್ಲಿ ಅವರು ಸಿನಿಮಾ ಬಿಡುಗಡೆಯ ಮೊದಲ ದಿನದ ಆತಂಕ ಬಳಿಕ ಆನಂದವಾಗಿ ಹೇಗೆ ಬದಲಾಯ್ತು ಅನ್ನೋದನ್ನು ವಿವರಿಸಿದರು. ‘ನಂತರದ ದಿನಗಳಲ್ಲಿ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣತೊಡಗಿತು. ಮೂರನೇ ವಾರ ನಿರ್ಮಾಪಕರು ಸಿನಿಮಾ ಲಾಭ ಮಾಡ್ತಿದೆ ಅಂದಾಗ ನಿಟ್ಟುಸಿರು ಬಿಡುವಂತಾಯ್ತು’ ಎಂದರು ಗಣೇಶ್.
ನಿರ್ದೇಶಕ ಸಿಂಪಲ್ ಸುನಿ(Simple Suni), ‘ಈ ಚಿತ್ರವನ್ನು ನೆಟ್‌ಫ್ಲಿಕ್ಸ್ ಖರೀದಿಸಿದೆ. ಸ್ಯಾಟಲೈಟ್ ರೈಟ್ಸ್ ಉದಯ ಟಿವಿ ಪಾಲಾಗಿದೆ. ಶುರುವಲ್ಲಿ ನಮ್ಮ ಸಿನಿಮಾ ಜೊತೆಗೆ ಫೈಟ್ ಮಾಡಲು ಯಾರೂ ಇಲ್ಲ ಅಂದುಕೊಂಡಿದ್ದೆ. ಆದರೆ ಸಿನಿಮಾ ರಿಲೀಸ್ ಹೊತ್ತಿಗೆ ಭರ್ಜರಿ ಫೈಟ್ ಸೃಷ್ಟಿಯಾಯ್ತು. ಒಮಿಕ್ರಾನ್(Omicron) ಕೊಟ್ಟಫೈಟ್ ಅದು’ ಎಂದರು.
ಕುರುಡನ ಪಾತ್ರಕ್ಕೆ ಗಣೇಶ್ ಆಯ್ಕೆ ಮಾಡಲು ಕಾರಣ ರಿವೀಲ್ ಮಾಡಿದ ನಿರ್ದೇಶಕ ಸುನಿ!
ನಾಯಕಿ ನಿಶ್ವಿಕಾ ನಾಯ್ಡು ಸಿನಿಮಾ ರಿಲೀಸ್‌ಗೂ ಮುನ್ನ ಸಕ್ಸಸ್ ಮೀಟ್‌ನಲ್ಲಿ ಸಿಗೋಣ ಎಂದ ತನ್ನ ಮಾತು ನಿಜವಾದದ್ದಕ್ಕೆ ಹೆಮ್ಮೆಯಿಂದ ಬೀಗಿದರು. ನಿರ್ಮಾಪಕ ಸುಪ್ರೀತ್, ನಟರಾದ ಗಿರಿ, ಧರ್ಮ ಇದ್ದರು.
ಪುಷ್ಪ ರಿಲೀಸ್‌ನಿಂದ ಸಮಸ್ಯೆ ಆಗಿಲ್ಲ, ಆದರೆ ಡಬ್ಬಿಂಗ್ ವರ್ಶನ್ ಮೊದಲು ಬರಲಿ
‘ಪುಷ್ಪ ರಿಲೀಸ್‌ನಿಂದ ‘ಸಖತ್’ ಚಿತ್ರದ ಪ್ರದರ್ಶನಕ್ಕೆ ಯಾವುದೇ ರೀತಿ ತೊಂದರೆ ಆಗಿಲ್ಲ. ನಮ್ಮ ಯಾವ ಚಿತ್ರಗಳನ್ನೂ ಥೇಟರ್‌ಗಳು ತೆಗೆದುಹಾಕಿಲ್ಲ. ಆದರೆ ಇಂಥಾ ಸನ್ನಿವೇಶಗಳಲ್ಲಿ ಸರ್ಕಾರ ಕನ್ನಡ ಚಿತ್ರಗಳಿಗೆ ಹೆಚ್ಚೆಚ್ಚು ಸಪೋರ್ಟ್ ಮಾಡಬೇಕು. ಕನ್ನಡಕ್ಕೆ ಮೊದಲ ಪ್ರಾಶಸ್ತ್ಯ ಸಿಗುವಂತಾಗಬೇಕು. ಇಂಥಾ ದೊಡ್ಡ ಬಜೆಟ್ ಸಿನಿಮಾಗಳು ಬರುವಾಗ ಮೊದಲು ಡಬ್ಬಿಂಗ್ ವರ್ಶನ್ ಬರಬೇಕು. ಒಂದು ವಾರದ ಬಳಿಕ ಮೂಲ ಭಾಷೆಯ ಸಿನಿಮಾ ಪ್ರದರ್ಶನವಾಗಬೇಕು. ಆದರೆ ನಾವೇನೇ ಹೇಳಿದರೂ ಕೊನೆಯಲ್ಲಿ ಕಮರ್ಷಿಯಲ್ ಸಕ್ಸಸ್‌ಗೇ ಮಣೆ ಹಾಕ್ಬೇಕಾಗುತ್ತೆ. ನಾನು ಇಂಡಸ್ಟ್ರಿಗೆ ಬಂದಾಗಿನಿಂದ ಈ ಸಮಸ್ಯೆ ಇದೆ. ಈಗಲೂ ಇದೆ. ಈ ಬಗ್ಗೆ ದೊಡ್ಡವರು ಮಾತಾಡ್ಬೇಕು, ನಾವೆಲ್ಲ ಅವರ ಬೆಂಬಲಕ್ಕಿರುತ್ತೇವೆ. ಜೊತೆಗೆ ನಾವು ಇಂಥಾ ದೊಡ್ಡ ಬಜೆಟ್‌ನ ಒಳ್ಳೆಯ ಸ್ಕಿ್ರಪ್ಟ್ ಇರುವ ಚಿತ್ರ ಮಾಡಿ ಸ್ಪರ್ಧೆ ಕೊಡುವುದು ಅನಿವಾರ್ಯ ಎಂದು ನಟ ಗಣೇಶ್ ಹೇಳಿದ್ದಾರೆ.
ಪರಭಾಷಾ ಸಿನಿಮಾ ಅಬ್ಬರ
ಕೊರೋನಾ ಲಾಕ್‌ಡೌನ್, ರೂಪಾಂತರಿ ವೈರಸ್ ಟೆನ್ಷನ್ ನಡುವೆ ಸಿಂಪಲ್ ನಿರ್ದೇಶಕ ಸುನಿ, ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಿಶ್ವಿಕಾಗೆ ಆ್ಯಕ್ಷನ್ ಕಟ್ ಹೇಳಿ 'ಸಖತ್' ಸಿನಿಮಾವನ್ನು ನವೆಂಬರ್ 26ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದ್ದರು. ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಸಖತ್ ಸಿನಿಮಾ ನಿರ್ದೇಶಕರ ನಿರೀಕ್ಷೆ ಮುಟ್ಟುವಲ್ಲಿ ಯಶಸ್ವಿಯಾಗಿದೆಯೇ? ಚಿತ್ರ ಮಂದಿರಗಳನ್ನು ಪ್ರವೇಶಿಸಿದವರ ಭಾವನೆಗಳಲ್ಲಿ ಬದಲಾವಣೆ ಕಂಡು ಭಾವುಕರಾಗಿದ್ದಾರೆ ಸುನಿ.
ಖಾಸಗಿ ಯುಟ್ಯೂಬ್ ಚಾನೆಲ್‌ವೊಂದಕ್ಕೆ ಸಂದರ್ಶನ ನೀಡಿರುವ ಸುನಿ ಅವರಿಗೆ ಒಂದು ಪ್ರಶ್ನೆ ಕಾಡುತ್ತಿದೆಯಂತೆ, ಜನರು ಯಾಕೆ ಸಿನಿಮಾ ನೋಡಕ್ಕೆ ಬರ್ತಿಲ್ಲ ಎಂದು. ಅವರು ಮಾತುಗಳನ್ನು ಬಹುತೇಕ ಕನ್ನಡಿಗರು ಸತ್ಯ ಎಂದು ಒಪ್ಪಿಕೊಂಡಿದ್ದಾರೆ ಕೂಡ. ಅಲ್ಲದೆ ಇದಕ್ಕೆ ಕ್ರಮ ತೆಗೆದುಕೊಳ್ಳದಿದ್ದರೆ, ಖಂಡಿತ ಮುಂಬರುವ ದಿನಗಳಲ್ಲಿ ಬಿಡುಗಡೆ ಆಗುವ ಪರ ಭಾಷೆ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತವೆ. ಹಾಗೆಯೇ ಕನ್ನಡಿಗರ ಸಿನಿಮಾಗಳಿಗೆ ಬೆಲೆ ಇರುವುದಿಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.