ಬಬ್ರುವಾಹನ ಛಾಯಾಗ್ರಾಹಕ ಎಸ್ .ವಿ ಶ್ರೀಕಾಂತ್ ನಿಧನ

By Suvarna NewsFirst Published May 8, 2020, 12:57 PM IST
Highlights

ಗೆಜ್ಜೆ  ಪೂಜೆ.  ಉಪಾಸನೆ ಸೇರಿ 60ಕ್ಕೂ ಹೆಚ್ಚು ಚಿತ್ರಗಳಿಗೆ ಛಾಯಾಗ್ರಹಣ ಮಾಡಿ ಸೈ ಎನಿಸಿಕೊಂಡಿದ್ದ ಛಾಯಾಗ್ರಾಹಕ ಎಸ್.ವಿ.ಶ್ರೀಕಾಂತ್ ಇಹಲೋಕ ತ್ಯಜಿಸಿದ್ದಾರೆ. ಇವರ ಛಾಯಾಗ್ರಹಣ ಮಾಡಿದ ಅನೇಕ ಚಿತ್ರಗಳಿಗೆ ರಾಜ್ಯ ಪ್ರಶಸ್ತಿ  ಪುರಸ್ಕಾರಗಳೂ ದಕ್ಕಿದ್ದವು. 

ಬೆಂಗಳೂರು (ಮೇ 8): ಗೆಜ್ಜೆಪೂಜೆ, ಬಬ್ರುವಾಹನದಂಥ ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ ಕನ್ನಡ ಚಿತ್ರರಂಗದ ಹಿರಿಯ ಛಾಯಾಗ್ರಾಹಕರಾದ  ಎಸ್ ವಿ ಶ್ರೀಕಾಂತ್ ಮೇ 7ರ ಸಂಜೆ ಬೆಂಗಳೂರಿನ  ಸ್ವಗೃಹದಲ್ಲಿ ನಿಧನರಾದರು. ಅವರಿಗೆ  87 ವರ್ಷ ವಯಸ್ಸಾಗಿತ್ತು. ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. 

ಶ್ರೀಕಾಂತ್ ಅವರು ಮಡದಿ ಹಾಗೂ ಪುತ್ರ ಸೇರಿ ಹಲವಾರು ಆಪ್ತರನ್ನು ಅಗಲಿದ್ದಾರೆ.

ಬಿಎಸ್ ಸಿ ಪದವೀಧರರಾದ ಶ್ರೀಕಾಂತ್ ಅವರು ಮದ್ದೂರಿನವರು. ಮದ್ರಾಸಿನ ಗೋಲ್ಡನ್ ಸ್ಟುಡಿಯೋ ಸೇರಿಕೊಂಡ ಮೇಲೆ ಸುಮಾರು 60 ಕ್ಕೂ ಹೆಚ್ಚು ಸಿನಿಮಾಗಳಿಗೆ ಛಾಯಾಗ್ರಾಹಕನಾಗಿ ಕೆಲಸ ಮಾಡಿದ್ದಾರೆ .  

ಸ್ಯಾಂಡಲ್ ವುಡ್ ಮಾತ್ರವಲ್ಲದೆ ಬಾಲಿವುಡ್‌ನಲ್ಲೂ ತಮ್ಮ ಕ್ಯಾಮೆರಾದ  ಕೈಚಳಕ ತೋರಿಸಿದ್ದ ಇವರು ಅನೇಕ ಕ್ಲಾಸಿಕ್ ಸಿನಿಮಾಗಳ ಹಿಂದಿನ ಶಕ್ತಿಯಾಗಿದ್ದರು. ಡಾ ರಾಜ್ ಕುಮಾರ್ ಅವರ ಹಲವಾರು ಚಿತ್ರಗಳಿಗೆ ಛಾಯಾಗ್ರಾಹಕನಾಗಿ ಕೆಲಸ ಮಾಡಿರುವ ಹೆಗ್ಗಳಿಕೆ ಇವರದು . 

ಕನ್ನಡದ ನಟಿ ತೇಜಸ್ವಿನಿ ಪ್ರಕಾಶ್‌ಗೆ ಪಿತೃ ವಿಯೋಗ

ಬಬ್ರುವಾಹನ, ಸಾಕ್ಷಾತ್ಕಾರ, ಗೆಜ್ಜೆಪೂಜೆ, ಉಪಾಸನೆ, ಜೀವನಚಿತ್ರದಂತಹ ಕನ್ನಡದ ಎವರ್ ಗ್ರೀನ್ ಕನ್ನಡ ಚಿತ್ರಗಳಿಗೆ ದುಡಿದಿದ್ದಾರೆ. ವಿಶೇಷವೆಂದರೆ ಶ್ರೀಕಾಂತ್ ಅವರು ಮೂ ರುಬಾರಿ ರಾಜ್ಯ ಪ್ರಶಸ್ತಿ ಪುರಸ್ಕೃತರಾಗಿದ್ದರು. 1960 ರಿಂದ 40 ವರ್ಷಗಳ ಕಾಲ ಅನೇಕ ಡಾ ರಾಜಕುಮಾರ್ ಚಿತ್ರಗಳಿಗೆ  ಛಾಯಾಗ್ರಹಣ ಮಾಡಿರುವುದರಲ್ಲಿ ಬಬ್ರುವಾಹನ ಸದಾ ಮನಸಿನಲ್ಲಿ  ಉಳಿಯುಯುವುದು.  ಕಾರಣ  ಅಲ್ಲಿ ಬಳಸಲಾದ  ಟ್ರಿಕ್ ಶಾಟ್ಸ್ . 'ಟ್ರಿಕ್ ಫೋಟೋಗ್ರಫಿ ಎಕ್ಸ್‌ಪರ್ಟ್' ಎಂದೇ ಪ್ರಸಿದ್ಧರಾಗಿದ್ದ ಇವರು ಕನ್ನಡದ ಶ್ರೇಷ್ಠ ಛಾಯಾಗ್ರಾಹಕ ಎಂದರೆ ತಪ್ಪಲ್ಲ . ತಮ್ಮ ಅದ್ಭುತ ಪ್ರತಿಭೆಯಿಂದ ಆಗಿನ ಕಾಲಕ್ಕೆ ದ್ವಿಪಾತ್ರಗಳ ಪ್ರಯೋಗ ಮಾಡಿದ್ದರು ಎನ್ನುವುದೇ ವಿಶೇಷ .

ಗೆಜ್ಜೆ  ಪೂಜೆ, ಉಪಾಸನೆ ಹಾಗೂ ಮಾರ್ಗದರ್ಶಿ ಚಿತ್ರಗಳ ಛಾಯಾಗ್ರಹಣಕ್ಕೆ  ರಾಜ್ಯ ಪ್ರಶಸ್ತಿ ಪಡೆದಿದ್ದರು. 60ಕ್ಕೂ ಹೆಚ್ಚು ಚಿತ್ರಗಳಿಗೆ ಕೆಲಸ ಮಾಡಿರುವ ಎಸ್ ವಿ ಶ್ರೀಕಾಂತ್ ಛಾಯಾಗ್ರಹಣದ ಚಿತ್ರಗಳು ಸ್ವರ್ಣ ಗೌರಿ, ಪ್ರೇಮಮಯಿ,  ಮನಸಿದ್ದರೆ ಮಾರ್ಗ, ಬಹಾದ್ದೂರ್  ಗಂಡು,  ನಾ ನಿನ್ನ  ಬಿಡಲಾರೆ,  ಹಣ್ಣಲೇ ಚಿಗುರಿದಾಗ,  ಅದೇ ಕಣ್ಣು, ಶ್ರಾವಣ ಬಂತು,  ರಾಣಿ ಮಹಾರಾಣಿ, ವಿಜಯ್ ವಿಕ್ರಮ್, ಎಡಕಲ್ಲು ಗುಡ್ಡದ ಮೇಲೆ ಹಾಗೂ ಇನ್ನಿತರ  ಸಿನಿಮಾಗಳು.

ಈ ಹಿರಿಯ ಜೀವದ ಅಗಲಿಕೆಗೆ ಚಿತ್ರರಂಗದ ಅನೇಕರು ಸಂತಾಪ ಸೂಚಿಸಿದ್ದಾರೆ .

click me!