ಅಣ್ಣಾವ್ರ ಅಪಹರಣದಿಂದ ಅಪ್ಪು ಅಗಲಿಕೆವರೆಗೆ; ಸ್ಯಾಂಡಲ್‌ವುಡ್‌ಗೆ ಆದ ಮರೆಯಲಾಗದ ಐದು ಆಘಾತಗಳು!

Published : Nov 21, 2026, 07:43 AM IST
5 Darkest Days in Sandalwood History

ಸಾರಾಂಶ

ಕನ್ನಡ ಚಿತ್ರರಂಗದ 9 ದಶಕಗಳ ಇತಿಹಾಸದಲ್ಲಿ ಅದ್ಭುತ ಸಾಧನೆಗಳು ಮತ್ತು ಕಹಿ ಘಟನೆಗಳಿವೆ. ಸತಿ ಸುಲೋಚನಾದಿಂದ ಕೆಜಿಎಫ್‌ವರೆಗಿನ ಯಶಸ್ಸು ಹಾಗೂ ಶಂಕರ್ ನಾಗ್, ಪುನೀತ್ ಅಗಲಿಕೆಯಂತಹ ಘಟನೆಗಳನ್ನು ಇಲ್ಲಿ ವಿವರಿಸಲಾಗಿದೆ.

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ 9 9 ದಶಕಗಳಿಗೂ ಹೆಚ್ಚಿನ ಶ್ರೀಮಂತ ಇತಿಹಾಸವಿದೆ. ಕೇವಲ ಮನರಂಜನೆಗಷ್ಟೇ ಸೀಮಿತವಾಗದೆ, ನಾಡು-ನುಡಿಯ ರಕ್ಷಣೆಗೆ ನಿಂತು, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಕೀರ್ತಿ ಪತಾಕೆ ಹಾರಿಸಿದ ಹೆಮ್ಮೆ ನಮ್ಮ ಚಿತ್ರರಂಗಕ್ಕಿದೆ. ಈ ಸುದೀರ್ಘ ಪಯಣದಲ್ಲಿ ಕನ್ನಡ ಚಿತ್ರರಂಗ ಹಲವು ಐತಿಹಾಸಿಕ ಮೈಲಿಗಲ್ಲುಗಳನ್ನು ಸಾಧಿಸಿದರೆ, ಮತ್ತೊಂದೆಡೆ ಇಡೀ ಕರುನಾಡನ್ನೇ ಶೋಕಸಾಗರದಲ್ಲಿ ಮುಳುಗಿಸಿದ ಕೆಲವು ಆಘಾತಕಾರಿ ಘಟನೆಗಳಿಗೂ ಸಾಕ್ಷಿಯಾಗಿದೆ.

ವಾಕ್‌ಚಿತ್ರ 'ಸತಿ ಸುಲೋಚನಾ' (1934)

ಮಾರ್ಚ್ 3, 1934 ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ. ಅಂದು ಬಿಡುಗಡೆಯಾದ 'ಸತಿ ಸುಲೋಚನಾ' ಕನ್ನಡದ ಮೊದಲ ವಾಕ್‌ಚಿತ್ರವಾಗಿ (ಟಾಕಿ ಸಿನಿಮಾ) ಇತಿಹಾಸ ಸೃಷ್ಟಿಸಿತು. ಈ ಚಿತ್ರದ ಮೂಲಕ ಬೆಳ್ಳಿತೆರೆಯಲ್ಲಿ ಕನ್ನಡದ ಮಾತುಗಳು ಮೊಳಗಿ, ಸ್ಯಾಂಡಲ್‌ವುಡ್‌ಗೆ ಭದ್ರ ಬುನಾದಿ ಹಾಕಲಾಯಿತು.

ರಾಷ್ಟ್ರ ಪ್ರಶಸ್ತಿಗಳ ಗರಿಮೆ (1970)

1970ರಲ್ಲಿ ತೆರೆಕಂಡ 'ಸಂಸ್ಕಾರ' ಚಿತ್ರವು ಕನ್ನಡಕ್ಕೆ ಮೊದಲ ಬಾರಿಗೆ ರಾಷ್ಟ್ರಪತಿಗಳ 'ಸ್ವರ್ಣ ಕಮಲ' ಪ್ರಶಸ್ತಿ ತಂದು ಕೊಟ್ಟಿತು. ಆ ಬಳಿಕ ಖ್ಯಾತ ನಿರ್ದೇಶಕ ಗಿರೀಶ ಕಾಸರವಳ್ಳಿಯ ಘಟಶ್ರಾದ್ಧ, 'ತಬರನ ಕಥೆ'ಯಂತಹ ಕಲಾತ್ಮಕ ಚಿತ್ರಗಳು ರಾಷ್ಟ್ರಮಟ್ಟದಲ್ಲಿ ಮನ್ನಣೆ ಪಡೆದವು.

ಗೋಕಾಕ್ ಚಳವಳಿ (1982)

ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕೆಂದು ಒತ್ತಾಯಿಸಿ 1982ರಲ್ಲಿ ನಡೆದ ಐತಿಹಾಸಿಕ 'ಗೋಕಾಕ್ ಚಳವಳಿ' ಇಂದಿಗೂ ಅಜರಾಮರ. ವರನಟ ಡಾ. ರಾಜ್‌ಕುಮಾರ್ ಅವರು ಈ ಚಳವಳಿಯ ನೇತೃತ್ವ ವಹಿಸಿದ್ದರು. ಇಡೀ ಕನ್ನಡ ಚಿತ್ರರಂಗ ಒಗ್ಗಟ್ಟಾಗಿ ಬೀದಿಗಿಳಿದು ಹೋರಾಟ ನಡೆಸಿದ ಆ ಕ್ಷಣ ಕನ್ನಡದ ಅಸ್ಮಿತೆಯನ್ನು ಎತ್ತಿ ಹಿಡಿದಿತ್ತು.

ಪ್ಯಾನ್ ಇಂಡಿಯಾ ಕ್ರಾಂತಿ (2018-2022)

ಪ್ರಾದೇಶಿಕ ಭಾಷೆಗಷ್ಟೇ ಸೀಮಿತವಾಗಿದ್ದ ಕನ್ನಡ ಚಿತ್ರರಂಗವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ 'ಕೆಜಿಎಫ್' (KGF) ಮತ್ತು 'ಕಾಂತಾರ' ಸಿನಿಮಾಗಳಿಗೆ ಸಲ್ಲುತ್ತದೆ. 2018ರಿಂದ 2022ರ ಅವಧಿಯಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದವು. ಇಂದು ಭಾರತೀಯ ಚಿತ್ರರಂಗವೇ ಸ್ಯಾಂಡಲ್‌ವುಡ್ ಕಡೆ ತಿರುಗಿ ನೋಡುವಂತೆ ಮಾಡಿದ ಪ್ಯಾನ್ ಇಂಡಿಯಾ ಕ್ರಾಂತಿ.

ಕಹಿ ಘಟನೆಗಳು

ಶಂಕರ್ ನಾಗ್ ದುರಂತ ಅಂತ್ಯ (1990)

ತಮ್ಮ ಹೊಸ ಬಗೆಯ ಆಲೋಚನೆಗಳು, ತಂತ್ರಜ್ಞಾನ ಮತ್ತು ವೇಗದ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ದಿಕ್ಕು ತೋರಿಸುತ್ತಿದ್ದ ಪ್ರತಿಭಾವಂತ ನಟ, ನಿರ್ದೇಶಕ 'ಕರಾಟೆ ಕಿಂಗ್' ಶಂಕರ್ ನಾಗ್. 1990ರಲ್ಲಿ ದಾವಣಗೆರೆ ಬಳಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಅಕಾಲಿಕವಾಗಿ ನಿಧನರಾದದ್ದು ಕನ್ನಡ ಚಿತ್ರರಂಗಕ್ಕೆ ಎಂದಿಗೂ ತುಂಬಲಾರದ ನಷ್ಟವಾಯಿತು.

ಡಾ. ರಾಜ್‌ಕುಮಾರ್ ಅಪಹರಣ (2000)

ಜುಲೈ 30, 2000ರಂದು ಗಾಜನೂರಿನ ತೋಟದ ಮನೆಯಿಂದ ಕಾಡುಗಳ್ಳ ವೀರಪ್ಪನ್ ವರನಟ ಡಾ.ರಾಜ್‌ಕುಮಾರ್ ಅವರನ್ನು ಅಪಹರಿಸಿದ್ದ. ಅಭಿಮಾನಿಗಳ ಆತಂಕ, ಪ್ರಾರ್ಥನೆ ಮತ್ತು ಸರ್ಕಾರದ ಸತತ ಪ್ರಯತ್ನಗಳ ಬಳಿಕ 108 ದಿನಗಳ ನಂತರ ಅಣ್ಣಾವ್ರು ಸುರಕ್ಷಿತವಾಗಿ ಬಿಡುಗಡೆಯಾಗಿ ಮರಳಿದಾಗ ಕರುನಾಡೇ ಸಂಭ್ರಮಿಸಿತ್ತು.

ಸೌಂದರ್ಯ ದುರಂತ (2004)

ಅದ್ಭುತ ನಟನೆ ಮೂಲಕ ಕೋಟ್ಯಂತರ ಅಭಿಮಾನಿಗಳ ಮನಗೆದ್ದಿದ್ದ ಬಹುಭಾಷಾ ನಟಿ ಸೌಂದರ್ಯ ಸಾವು ಬರಸಿಡಿಲಿನಂತೆ ಬಡಿದಿತ್ತು. 2004ರಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದಾಗ ಬೆಂಗಳೂರಿನ ಜಕ್ಕೂರು ಬಳಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದು ಅಭಿಮಾನಿಗಳಿಗೆ ತೀವ್ರ ಆಘಾತ ನೀಡಿತ್ತು.

'ಮಾಸ್ತಿಗುಡಿ' ದುರಂತ (2016)

2016ರಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ 'ಮಾಸ್ತಿಗುಡಿ' ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ದುರಂತ ಸಂಭವಿಸಿತು. ಚಿತ್ರೀಕರಣದ ವೇಳೆ ಹೆಲಿಕಾಪ್ಟರ್‌ನಿಂದ ನೀರಿಗೆ ಜಿಗಿದ ಸಾಹಸ ಕಲಾವಿದರಾದ ಅನಿಲ್ ಮತ್ತು ಉದಯ್ ದುರಂತ ಅಂತ್ಯಕಂಡರು. ಇದು ಸ್ಯಾಂಡಲ್‌ವುಡ್ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ಉಳಿಯಿತು.

'ಪವರ್ ಸ್ಟಾರ್' ಅಗಲಿಕೆ (2021)

ಅಕ್ಟೋಬರ್ 29, 2021... ಕನ್ನಡಿಗರು ಎಂದಿಗೂ ಮರೆಯಲಾಗದ ಕರಾಳ ದಿನ. 'ಪವರ್ ಸ್ಟಾರ್' ಪುನೀತ್ ರಾಜ್‌ಕುಮಾರ್ ಹೃದಯಾಘಾತದಿಂದ ಅಕಾಲಿಕವಾಗಿ ನಿಧನರಾದ ಸುದ್ದಿ ಇಡೀ ಕರುನಾಡನ್ನೇ ಶೋಕಸಾಗರದಲ್ಲಿ ಮುಳುಗಿಸಿತ್ತು. ತಮ್ಮ ನಟನೆಗಿಂತಲೂ ಹೆಚ್ಚಾಗಿ ಮಾನವೀಯತೆ ಮತ್ತು ಸಮಾಜಮುಖಿ ಕಾರ್ಯಗಳಿಂದ ಜನಮನ ಗೆದ್ದಿದ್ದ ಅಪ್ಪು ಅಗಲಿಕೆಯ ನೋವು ಇಂದಿಗೂ ಅಭಿಮಾನಿಗಳ ಮನದಲ್ಲಿ ಕಾಡುತ್ತಿದೆ.

ನೋವು-ನಲಿವು, ಸವಾಲು-ಯಶಸ್ಸುಗಳ ನಡುವೆ ಕನ್ನಡ ಚಿತ್ರರಂಗ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಅಗಲಿದ ದಿಗ್ಗಜರ ನೆನಪು ಮತ್ತು ಸಾಧನೆಗಳ ಸ್ಫೂರ್ತಿಯೊಂದಿಗೆ ಸ್ಯಾಂಡಲ್‌ವುಡ್ ಮುಂದೆಯೂ ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂಬುದೇ ಪ್ರತಿಯೊಬ್ಬ ಕನ್ನಡಿಗನ ಆಶಯ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಕರುನಾಡ ತಾಯಿ ಸದಾ ಚಿನ್ಮಯಿ' ಹಾಡಿನಲ್ಲೇ ಕನ್ನಡದ ಬಾವುಟ ಉಲ್ಟಾ! 41 ವರ್ಷಗಳ ಬಳಿಕ ಈಗ ವೈರಲ್​
'ಲಕ್ಷ್ಮೀಪುತ್ರ' ವೇದಿಕೆಯಲ್ಲಿ ಯಶ್ ಅವರ ಫೇಮಸ್ ಡೈಲಾಗ್ ಹೊಡೆದ ಚಿಕ್ಕಣ್ಣ; ಖಡಕ್ ಸಂದೇಶ ಪಾಸ್ ಮಾಡಿದ್ದು ಯಾರಿಗೆ?