
ರಾಮನಗರ[ಫೆ.06]: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪುತ್ರ ನಿಖಿಲ್ ಅವರ ವಿವಾಹ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸುವ ಸಲುವಾಗಿ ರಾಮನಗರ ಮತ್ತು ಚನ್ನಪಟ್ಟಣ ನಡುವೆ ಇರುವ ಅರ್ಚಕರಹಳ್ಳಿ ಬಳಿಯ 54 ಎಕರೆ ವಿಶಾಲ ಜಾಗವನ್ನು ಬುಧವಾರ ಪರಿಶೀಲನೆ ನಡೆಸಿದರು.
ರಾಮನಗರ ತಮಗೆ ರಾಜಕೀಯವಾಗಿ ಜನ್ಮ ನೀಡಿದ ಜಿಲ್ಲೆ. ಹೀಗಾಗಿ ಜಿಲ್ಲೆ ಜನರ ಆಶೀರ್ವಾದ ನನ್ನ ಮಗನಿಗೂ ಸಿಗಲಿ ಎಂಬ ಉದ್ದೇಶದಿಂದ ರಾಮನಗರ ಮತ್ತು ಚನ್ನಪಟ್ಟಣ ಮಧ್ಯದಲ್ಲಿ ಪುತ್ರ ನಿಖಿಲ್ ಮದುವೆ ಸಮಾರಂಭ ಆಯೋಜನೆ ಮಾಡುವುದಾಗಿ ಕುಮಾರಸ್ವಾಮಿ ಹೇಳಿದ್ದರು. ಅದರಂತೆಯೇ ಕುಮಾರಸ್ವಾಮಿ ತಮ್ಮ ಆತ್ಮೀಯರೊಂದಿಗೆ ರಾಮನಗರ ಮತ್ತು ಚನ್ನಪಟ್ಟಣದ ನಡುವೆ ಬರುವ ಅರ್ಚಕರಹಳ್ಳಿ ಸಮೀಪ ಜಾನಪದ ಲೋಕದ ಪಕ್ಕದಲ್ಲಿ ವಿಶಾಲವಾದ ಜಮೀನನ್ನು ವೀಕ್ಷಿಸಿದ್ದಾರೆ. ಅಲ್ಲದೆ ಜಮೀನಿನ ಮಾಲೀಕತ್ವ ಹೊಂದಿರುವವರೊಂದಿಗೆ ಔಪಚಾರಿಕವಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಬೆಂಗಳೂರಿಗರಿಗೆ ತೊಂದರೆಯಾಗದಂತೆ ನಿಖಿಲ್ ಮದುವೆ
ನಿಖಿಲ್ ಮದುವೆ ಕಾರ್ಯಕ್ಕಾಗಿ ವೀಕ್ಷಿಸಿರುವ ಜಾಗ ಸುಮಾರು 54 ಎಕರೆ ಪ್ರದೇಶವಿದೆ. ಇದರಲ್ಲಿ ಸೆಂಟ್ರೆಲ್ ಮುಸ್ಲಿಂ ಅಸೋಸಿಯೇಷನ್(ಸಿಎಂಎ) 22 ಎಕರೆ, ಉದ್ಯಮಿಗೆ ಸೇರಿದ 23 ಎಕರೆ ಹಾಗೂ ಉಳಿಕೆ ಭೂಮಿ ಇತರರ ಒಡೆತನದಲ್ಲಿದೆ. ಈ ಸ್ಥಳ ರಾಮನಗರದಿಂದ 5 ಕಿ.ಮೀ ಹಾಗೂ ಚನ್ನಪಟ್ಟಣದಿಂದ 8 ಕಿ.ಮೀ ದೂರದಲ್ಲಿದೆ. ಮೈಸೂರು-ಬೆಂಗಳೂರು ಹೆದ್ದಾರಿ ಪಕ್ಕದಲ್ಲಿಯೇ ಇರುವುದರಿಂದ ಸೂಕ್ತವಾದ ಸ್ಥಳವೆಂಬ ನಿರ್ಧಾರಕ್ಕೆ ಬಂದಿದ್ದು ಭೋಜನ ವ್ಯವಸ್ಥೆ ಹಾಗೂ ವಾಹನಗಳ ನಿಲುಗಡೆಗಾಗಿಯೇ ಪ್ರತ್ಯೇಕ ಸ್ಥಳಗಳ ವ್ಯವಸ್ಥೆ ಮಾಡಲು ಕುಮಾರಸ್ವಾಮಿ ಕುಟುಂಬದವರು ಉದ್ದೇಶಿಸಿದ್ದಾರೆ ಎಂದು ಗೊತ್ತಾಗಿದೆ. ಫೆ.10ರಂದು ಬೆಂಗಳೂರಿನಲ್ಲಿ ನಿಖಿಲ್ ನಿಶ್ಚಿತಾರ್ಥ ನೆರವೇರಲಿದ್ದು, ಹಿರಿಯರ ಸಮ್ಮುಖದಲ್ಲಿ ಮದುವೆ ದಿನಾಂಕ ನಿಗದಿಯಾಗಲಿದೆ.
ಗೋವಾದಲ್ಲಿ ಫಿಲ್ಮಿ ಸ್ಟೈಲ್ ಪ್ರಪೋಸ್; ಏಪ್ರಿಲ್‌ನಲ್ಲಿ ನಿಖಿಲ್ ಮದುವೆ ಡೇಟ್ ಫಿಕ್ಸ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.