ಕಾಂತಾರಾ ಚಿತ್ರ ಕುರಿತು ವಿವಾದಾತ್ಮಕ ಹೇಳಿಕೆ, ನಟ ಚೇತನ್ ವಿರುದ್ಧ ಬೆಂಗಳೂರಿನಲ್ಲಿ FIR!

By Suvarna NewsFirst Published Oct 22, 2022, 10:04 PM IST
Highlights

ದೈವರಾಧನೆ, ಭೂತಕೋಲ ಹಿಂದೂ ಸಂಸ್ಕೃತಿಯಲ್ಲ ಎಂಬ ವಿವಾದಾತ್ಮ ಹೇಳಿಕೆ ನೀಡಿದ ನಟ ಚೇತನ್‌ಗೆ ಸಂಕಷ್ಟ ಹೆಚ್ಚಾಗಿದೆ. ಇದೀಗ ಬೆಂಗಳೂರಿನಲ್ಲಿ ದೂರು ದಾಖಲಾಗಿದ್ದು, ಉತ್ತರಿಸುವಂತೆ ಪೊಲೀಸರು ಶೀಘ್ರದಲ್ಲೇ ನೋಟಿಸ್ ಜಾರಿ ಮಾಡಲಿದ್ದಾರೆ.

ಬೆಂಗಳೂರು(ಅ.22): ಕಾಂತಾರಾ ಚಿತ್ರ ದೇಶ ವಿದೇಶದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಕರಾವಳಿಯ ದೈವಾರಾಧನೆ, ಮಣ್ಣಿನ ಸಂಸ್ಕೃತಿಯನ್ನು ಸಾರುವ ಈ ಚಿತ್ರ ಹಲವು ದಾಖಲೆಗಳನ್ನು ಪುಡಿ ಮಾಡಿದೆ. ರಿಷಬ್ ಶೆಟ್ಟಿ ನಿರ್ದೇಶನದ ಈ ಚಿತ್ರದ ಕುರಿತು ನಟ ಚೇತನ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಭೂತಕೂಲ ಹಿಂದೂ ಸಂಸ್ಕೃತಿಯಲ್ಲ ಎಂಬ ಚೇತನ್ ಹೇಳಿಕೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಇದೀಗ ರಾಜ್ಯದ ಹಲವು ಭಾಗಗಳಲ್ಲಿ ಚೇತನ್ ವಿರುದ್ಧ ದೂರು ದಾಖಲಾಗುತ್ತಿದೆ. ಇದೀಗ ಬೆಂಗಳೂರಿನ ಶೇಷಾದ್ರಿಪುರಂ ಠಾಣೆಯಲ್ಲಿ ಚೇತನ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದಡಿ ದೂರು ದಾಖಲಾಗಿದೆ. ಶಿವಕುಮಾರ್ ಎಂಬುವವರು ದೂರು ನೀಡಿದ್ದಾರೆ.

ಚೇತನ್ ಹೇಳಿಕೆ ಹಿಂದೆ ಕೋಮು ದ್ವೇಷ ಸೃಷ್ಟಿಸುವ ಹುನ್ನಾರ ಇದೆ. ಇಷ್ಟೇ ಅಲ್ಲ ದೈವರಾಧಾನೆ ಹಾಗೂ ನಂಬಿಕೆಯನ್ನೇ ಪ್ರಶ್ನಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಜಾತಿ -ಜಾತಿಗಳ ನಡುವೆ ವಿಷ ಬೀಜ ಬಿತ್ತಿ ಕೋಮು ಗಲಭೆಗೆ ಪ್ರಚೋದನೆ ನೀಡಿದ್ದಾರೆ. ಹೀಗಾಗಿ ಕಾನೂನು ಕ್ರಮ ಕೈಗೊಳ್ಳುವಂತೆ ಶಿವಕುಮಾರ್ ದೂರಿನಲ್ಲಿ ಕೋರಿದ್ದಾರೆ. ಐಪಿಸಿ ಸೆಕ್ಷನ್ 505 ಅಡಿ ಪ್ರಕರಣ ದಾಖಲಾಗಿದೆ.  

ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲವೇ ಅಲ್ಲ; ಸುದ್ದಿಗೋಷ್ಠಿಯಲ್ಲಿ ನಟ ಚೇತನ್ ಹೇಳಿಕೆ

ದೂರು ದಾಖಲಿಸಿರುವ ಶೇಷಾದ್ರಿಪುರಂ ಠಾಣಾ ಪೊಲೀಸರು ಶೀಘ್ರದಲ್ಲೇ ಉತ್ತರಿಸುವಂತೆ ನೋಟಿಸ್ ನೀಡುವ ಸಾಧ್ಯತೆ ಇದೆ. ಇದೀಗ ರಾಜ್ಯದ ಉದ್ದಗಲಕ್ಕೂ ನಟ ಚೇತನ್ ವಿರುದ್ಧ ಪ್ರಕರಣ ದಾಖಲಾಗುತ್ತಿದೆ. ಇಷ್ಟೇ ಅಲ್ಲ ಭಾರಿ ಪ್ರತಿಭಟನೆಗಳು ನಡೆಯುತ್ತಿದೆ. 

ಮಡಿಕೇರಿಯಲ್ಲೂ ದೂರು ದಾಖಲು
ದೈವಾರಾಧನೆ ಹಿಂದೂ ಸಂಪ್ರದಾಯವಲ್ಲವೆಂದು ಹೇಳಿಕೆ ನೀಡುವ ಮೂಲಕ ನಟ ಚೇತನ್‌ ಲಕ್ಷಾಂತರ ಭಕ್ತರ ಮನಸ್ಸಿಗೆ ನೋವುಂಟು ಮಾಡಿದ್ದಾರೆ ಮತ್ತು ಸಮಾಜದಲ್ಲಿ ಗೊಂದಲ ಸೃಷ್ಟಿಸಿ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕೊಡಗು ಯುವಸೇನೆ ಮಡಿಕೇರಿಯಲ್ಲಿ ದೂರು ದಾಖಲಿಸಿದೆ. ಯುವಸೇನೆಯ ಜಿಲ್ಲಾ ಉಪಾಧ್ಯಕ್ಷ ನಡುಮುಟ್ಟು ಪ್ರವೀಣ್‌ ಅವರು ಡಿವೈಎಸ್ಪಿಗೆ ದೂರು ಸಲ್ಲಿಸಿ ಚೇತನ್‌ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ನಿರ್ದೇಶಕ ರಿಷಬ್‌ ಶೆಟ್ಟಿನಿರ್ದೇಶನದ ದೈವಾರಾಧನೆಯ ಕಥೆಯಾಧಾರಿತ ಕಾಂತಾರ ಚಿತ್ರ ಹಾದಿ ತಪ್ಪುತ್ತಿರುವ ಯುವ ಜನಾಂಗಕ್ಕೆ ಮಾರ್ಗದರ್ಶನ ಮಾಡುವಲ್ಲಿ ಯಶಸ್ವಿಯಾಗಿದೆ ಮತ್ತು ದೈವಶಕ್ತಿಯನ್ನು ಪ್ರತಿಬಿಂಬಿಸಿದೆ. ಚಿತ್ರ ಲಕ್ಷಾಂತರ ಭಕ್ತರ ಮನಸೂರೆಗೊಳ್ಳುತ್ತಿರುವ ಹೊತ್ತಿನಲ್ಲೇ ನಟ ಚೇತನ್‌ ದೈವಾರಾಧನೆಯ ಕುರಿತು ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಪ್ರವೀಣ್‌ ಅಸಮಾಧಾನ ವ್ಯಕ್ತಪಡಿಸಿದರು. ಯವಸೇನೆಯ ಮುಖಂಡ ಕುಲೀಪ್‌ ಪೂಣಚ್ಚ ಕೂಡಾ ಚೇತನ್‌ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.\

OMG..! ಎಂಥಾ ಸಿನಿಮಾ, ಮತ್ತೆ ನನ್ನ ಊರಿಗೆ ಕೊಂಡೊಯ್ತು; 'ಕಾಂತಾರ' ನೋಡಿದ ಶಿಲ್ಪಾ ಶೆಟ್ಟಿ

ಧಾರವಾಡದಲ್ಲಿ ದೂರು ದಾಖಲು
ಕಾಂತಾರ’ ಚಿತ್ರದಲ್ಲಿ ತೋರಿಸಿರುವಂತೆ ಭೂತದ ಕೋಲ, ದೈವಾರಾಧನೆ ಹಿಂದೂ ಸಂಸ್ಕೃತಿಗೆ ಸೇರಿದ ಆಚರಣೆ ಅಲ್ಲ. ಅದು ಮೂಲ ನಿವಾಸಿಗಳಾದ ಆದಿವಾಸಿಗಳ ಹಬ್ಬ. ಅದನ್ನು ಹಿಂದೂ ಧರ್ಮದ ಜತೆ ಸೇರಿಸಿರುವುದು ತಪ್ಪು’ ಎಂದು ಹೇಳಿಕೆ ನೀಡಿರುವ ನಟ ಚೇತನ್‌ ವಿರುದ್ಧ ಧಾರವಾಡ ಉಪನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಹಿಂದೂ ಜಾಗರಣ ವೇದಿಕೆ ಮುಖಂಡ ಜಯತೀರ್ಥ ಮಳಗಿ ದೂರು ದಾಖಲಿಸಿದ್ದಾರೆ. ಚೇತನ್‌ ಹಿಂದೂ ಧರ್ಮ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ದೂರು ನೀಡಿದ್ದಾರೆ.

click me!