ರಂಗಭೂಮಿ ಕಲಾವಿದ, ಸಿನಿಮಾ ನಟ, ಕನ್ನಡ ಹೋರಾಟಗಾರ, ರಾಜಕಾರಣಿ ಮುಖ್ಯಮಂತ್ರಿ ಚಂದ್ರು ಎಪ್ಪತ್ತರ ಹೊಸಿಲಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ಅವರ ಹೊಸ ನಾಟಕ ಮತ್ತೆ ಮುಖ್ಯಮಂತ್ರಿ ಪ್ರದರ್ಶನ ಕಾಣುತ್ತಿದೆ. ಅವರ ಆತ್ಮಕಥನ 'ರಂಗವನದ ಚಂದ್ರತಾರೆ' ಕೂಡ ಬಿಡುಗಡೆ ಆಗುತ್ತಿದೆ. ಚಂದ್ರು ತಮ್ಮ ಬದುಕಿನ ರಸಮಯ ಕ್ಷಣಗಳನ್ನು ರಸವತ್ತಾಗಿ ನೆನಪಿಸಿಕೊಂಡದ್ದು ಇಲ್ಲಿದೆ.
1. ನಾನು ಮುಖ್ಯಮಂತ್ರಿ ಚಂದ್ರು.
ಇಡೀ ಕರ್ನಾಟಕಕ್ಕೆ ನಾಲ್ಕು ದಶಕಗಳಿಂದ ನಾನು ಮುಖ್ಯಮಂತ್ರಿ. ನಾನು ಮಾಡಿದ ನಾಟಕದ ಮುಖ್ಯಮಂತ್ರಿ ಪಾತ್ರದಿಂದ ನನಗೀ ಹೆಸರು ಬಂತು. ಆದರೆ ಮುಖ್ಯಮಂತ್ರಿಗಿರುವ ಯಾವ ಸವಲತ್ತೂ ನನಗಿಲ್ಲ. ಯಾವ ಅನುಕೂಲವೂ ಇಲ್ಲದ ಅಪಾಯವೂ ಇಲ್ಲದ ಮುಖ್ಯಮಂತ್ರಿಗಿರಿ ಅಂದರೆ ನನ್ನದೇ! ಆ ಮಂತ್ರಿಗಿರಿಯ ಯಾವ ಧಿಮಾಕೂ ನನಗಿಲ್ಲ.
2. ನಾನು ಹುಟ್ಟಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಹೊನ್ನಸಂದ್ರ ಗ್ರಾಮದಲ್ಲಿ (1953ರ ಆಗಸ್ಟ್ 28). ತಂದೆ ನರಸಿಂಹಯ್ಯ, ತಾಯಿ ತಿಮ್ಮಮ್ಮನವರ ಮಗನಾಗಿ. ಇಬ್ಬರು ಅಕ್ಕಂದಿರು, ಇಬ್ಬರು ತಂಗಿಯರ ನಡುವಿನ ಒಬ್ಬನೇ ಮಗ ನಾನು. ಐವರು ಮಕ್ಕಳ ಪೈಕಿ ಮಧ್ಯದವನು. ನಾನು, ಶಾಂತಾ, ಲಲಿತಾ, ಪ್ರೇಮಾ, ಕಮಲಾ ನನ್ನ ಸೋದರಿಯರು. ಈಗ ಇಬ್ಬರು ಮಾತ್ರ ಇದ್ದಾರೆ.
3. ನನ್ನ ಮೂಲ ಹೆಸರು ನರಸಪ್ಪ ಉರೂಫ್ ನರಸೇಗೌಡ. ತಾತ ನರಸೇಗೌಡನ ಹೆಸರು ನನಗಿಡಲಾಯಿತು. ನಾವು ಕೃಷಿ ಸಮಾಜದವರು. ಊರಿಗೆ ಗೌಡಿಕೆ ಮಾಡುತ್ತಿದ್ದುದರಿಂದ ನರಸಪ್ಪ ಇದ್ದವರು ನರಸೇಗೌಡ ಆದರು. ದಾಖಲಾತಿಗೆ ಬರೋ ವೇಳೆಗೆ ನನ್ನ ಹೆಸರು ಎಚ್.ಎನ್. ಚಂದ್ರಶೇಖರ (ಹೊನ್ನಸಂದ್ರ ನರಸಿಂಹಯ್ಯ ಚಂದ್ರಶೇಖರ) ಅಂತ ಆಯ್ತು.
ಬಣ್ಣ ಹಚ್ಚದೆ ಮಾಡಿದ ಮೊದಲ ಆ್ಯಕ್ಟಿಂಗ್
ಸಿದ್ಧಗಂಗಾ ಮಠದಲ್ಲಿ ದಿನವೂ ಸಂಜೆ ವೇಳೆ ಮುಕ್ಕಾಲು ಗಂಟೆ ಶ್ರಮದಾನ ಅಂತ ಇರ್ತಿತ್ತು. ಕಟ್ಟಡ ಕಟ್ಟುವ ಸೈಟಿನಲ್ಲಿ ಇಟ್ಟಿಗೆ, ಮರಳು ಹೊತ್ತು ಕೊಡುವುದು, ಹೊಲ ಉಳುವುದು, ನೀರು ಹನಿಸುವುದು... ಹೀಗೆ ವಿದ್ಯಾರ್ಥಿಗಳಿಗೆ ಶ್ರಮದ ಬೆಲೆ, ಬೆವರಿನ ಬೆಲೆ ಏನೂಂತ ತಿಳೀಲಿ ಅನ್ನುವುದಕ್ಕಾಗಿ ಈ ಶಿಕ್ಷಣ ಇತ್ತು. ಅಲ್ಲೊಬ್ಬರು ವೀರಭದ್ರಯ್ಯ ಅಂತ ಮೇಷ್ಟಿ್ರದ್ದರು. ಅವರಿಗು ನನಗೂ ಸ್ವಲ್ಪ ಘರ್ಷಣೆ ಆಗಿತ್ತು. ಆ ಕೋಪದಿಂದ ಅವರು ನನಗೆ ಹೆಚ್ಚು ಇಟ್ಟಿಗೆ ಹೊರಿಸಿ ಕಳಿಸುತ್ತಿದ್ದರು. ನನ್ನ ವಯಸ್ಸಿನವರಿಗೆ ಎಂಟು ಇಟ್ಟಿಗೆ ಹೊರಿಸಿದರೆ ನನಗೆ ಹನ್ನೆರಡು ಇಟ್ಟಿಗೆ ಹೊರಿಸುತ್ತಿದ್ದರು. ಭಾರ ತಡೆಯಲಾರದೆ ನೆತ್ತಿ ಉರಿ ಬಂದಿತ್ತು. ಇದರಿಂದ ತಪ್ಪಿಸಿಕೊಳ್ಳುವ ಉಪಾಯ ಯೋಚಿಸುತ್ತಿದ್ದೆ.
ಒಂದು ದಿನ ಇಟ್ಟಿಗೆ ಹೊರುವ ಸಮಯಕ್ಕೆ ಸರಿಯಾಗಿ ಸ್ವಾಮೀಜಿ ಅದೇ ದಾರಿಯಲ್ಲಿ ನಮ್ಮ ಕಡೆಗೆ ಬರುತ್ತಿದ್ದರು. ಇದೇ ಸರಿಯಾದ ಸಮಯ ಅನ್ನಿಸಿತು. ವೀರಭದ್ರಯ್ಯ ಮೇಷ್ಟಿ್ರಗೆ ಬುದ್ಧಿ ಕಲಿಸಬೇಕು ಅಂತ ಅನ್ನಿಸಿತು. ಸ್ವಾಮಿಗಳು ನೋಡುತ್ತಿರುವಂತೆಯೇ ತಲೆ ಸುತ್ತಿ ಬಂದಂತೆ ಬಿದ್ದುಬಿಟ್ಟೆ. ಅವರು ಗಾಬರಿಯಾಗಿ ಓಡಿ ಬಂದು ಪಕ್ಕ ಕೂತು ನೀರು ತರಿಸಿ ತಟ್ಟಿದರು. ಮೆಲ್ಲನೆ ಕಣ್ತೆರೆದೆ. ಪ್ರಜ್ಞೆ ಬಂದಂತೆ ನಾಟಕವಾಡಿದೆ. ಸ್ವಾಮಿಗಳು ಕೇಳಿದಾಗ ಏನನ್ನೂ ಮುಚ್ಚಿಡದೆ ವೀರಭದ್ರಯ್ಯ ಮೇಷ್ಟು್ರ ನನ್ನ ತಲೆ ಮೇಲೆ ದಿನವೂ ಹೆಚ್ಚು ಇಟ್ಟಿಗೆ ಹೊರಿಸುತ್ತಿದ್ದುದನ್ನು ಹೇಳಿದೆ. ಅವರು ಹೊರಿಸುತ್ತಿದ್ದುದು ಹನ್ನೆರಡು ಇಟ್ಟಿಗೆಯಾದರೂ ಹದಿನೈದಂತ ಸುಳ್ಳು ಹೇಳಿದೆ. ಸ್ವಾಮಿಗಳಿಗೆ ಸಿಟ್ಟು ಬಂತು. ವೀರಭದ್ರಯ್ಯ ಅವರನ್ನು ಚೆನ್ನಾಗಿ ಬೈದರು.
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರಕ್ಕೆ ಮನಸ್ಸಿಲ್ಲ: ಮುಖ್ಯಮಂತ್ರಿ ಚಂದ್ರು
‘ಈ ಮಕ್ಕಳು ಹೊತ್ತು ಕಟ್ಟಡ ಕಟ್ಟಬೇಕಿಲ್ಲ. ಶ್ರಮ ಜೀವನದ ಪರಿಚಯ ಮಾಡಿಕೊಡಬೇಕೇ ವಿನಾ ಕಷ್ಟಕೊಡುವುದಲ್ಲ. ಅವರೆಲ್ಲ ವಿದ್ಯಾರ್ಥಿಗಳು, ಓದಲು ಬಂದಿರುವವರು. ನೀವು ತಪ್ಪು ಮಾಡಿದ್ದೀರಿ. ನೀವೇ ಇವನನ್ನು ರೂಮಿಗೆ ಬಿಟ್ಟು, ಮೂರು ದಿನ ಅವನ ರೂಮಿಗೇ ಊಟ ತಗೊಂಡು ಹೋಗಿ ಕೊಟ್ಟು ಬನ್ನಿ. ಜ್ವರಗಿರ ಬಂದಾತು. ಮೆಣಸಿನಸಾರು ಮಾಡಿಸಿಕೊಡಿ’ ಎಂದು ಮೇಷ್ಟಿ್ರಗೆ ಆದೇಶ ಮಾಡಿದರು. ಈ ಘಟನೆಯಿಂದ ನಾನು ಸ್ವಾಮಿಗಳಿಗೆ ಹತ್ತಿರವಾದೆ.
ಅದೇ ನನ್ನ ಬದುಕಿನಲ್ಲಿ ಬಣ್ಣ ಹಚ್ಚದೆ ಮಾಡಿದ ಮೊದಲ ಆ್ಯಕ್ಟಿಂಗ್!
ನಾಟಕದಲ್ಲಿ ಡೈಲಾಗ್ ಮರೆತಾಗ
ಬೆಂಗಳೂರಿನ ಸರ್ಕಾರಿ ಕಲಾ ಹಾಗೂ ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್ಸಿ. ಓದುವಾಗ ಅಲ್ಲೊಬ್ಬರು ಪ್ರಾಣಿಶಾಸ್ತ್ರದ ಮೇಷ್ಟು್ರ ಇದ್ದರು. ಅವರಿಗೆ ನಾಟಕದ ಹುಚ್ಚಿತ್ತು. ಕಲಾದರ್ಶಿ ಎಂಬ ಹೆಸರಲ್ಲಿ ನಾಟಕಗಳನ್ನು ಬರೆಯುತ್ತಿದ್ದರು.
‘ನಾಟಕ ಆಡ್ತಿರೇನ್ರಯ್ಯ?’ ಅಂತ ಕೇಳಿದರು.
ನಾವು ಹುಮ್ಮಸ್ಸಿನಿಂದ ‘ಹುಂ ಸಾರ್ ಆಡಿಸಿ’ ಅಂದೆವು.
ಅವರೇ ಬರೆದ ‘ಏಜ್ ಬಾರ್’ ಅನ್ನುವ ನಾಟಕ. ನನಗೆ ತಂದೆಯ ಪಾತ್ರ. ನಿತ್ಯ ತಾಲೀಮು ಮಾಡುತ್ತಿದ್ದೆವು. ಮದುವೆಯಾಗದ ಮಗಳ ಪಾತ್ರವನ್ನು ತಾಲೀಮಿಗಾಗಿ ಮೇಷ್ಟು್ರ ಮಾಡುತ್ತಿದ್ದರು. ಮೇಷ್ಟಿ್ರಗೆ ಒಂದು ಆಸೆ. ನಾಟಕ ಪ್ರದರ್ಶನಕ್ಕೆ ಸ್ತ್ರೀ ಭೂಮಿಕೆಗೆ ನುರಿತ ನಟಿಯೊಬ್ಬಳನ್ನು ಕರೆಸಬೇಕೆಂದು. ಸರಿ, ಕರೆಸಿಯೇಬಿಟ್ಟರು. ಗಿರಿಜಮ್ಮ (ಗಿರಿಜಾ ಲೋಕೇಶ್) ವೃತ್ತಿ ರಂಗಭೂಮಿಯ ಬಹಳ ದೊಡ್ಡ ಕಲಾವಿದೆ. ಅವರಿಗಾಗ ಸಣ್ಣ ವಯಸ್ಸು. ನಾವೂ ಇಪ್ಪತ್ತೆರಡರ ಏರು ಯೌವ್ವನದ ಹುಡುಗರು. ಅವರನ್ನು ನೋಡಿ ತುಂಬಾ ಥ್ರಿಲ್ ಆಗಿಬಿಟ್ಟಿದ್ದೆವು. ನಾಟಕ ಶುರುವಾಯಿತು. ಗಿರಿಜಮ್ಮ ಅವರದು ಮಗಳ ಪಾತ್ರ. ನಾನು ತಂದೆ. ನಾಟಕ ಮಧ್ಯೆ ಗಿರಿಜಮ್ಮ ಬಂದು ಹಿಂದಿನಿಂದ ನನ್ನ ತಬ್ಬಿಕೊಂಡು, ‘ಅಪ್ಪಾ, ಹೇಳೀಪ್ಪ. ಯಾಕೆ ಸುಮ್ಮನಾದ್ರಿ... ಮಾತಾಡಿ’ ಅಂತ ಡೈಲಾಗ್ ಹೇಳುತ್ತಿದ್ದಾರೆ. ನನಗೆ ತಬ್ಬಿಬ್ಬಾಯಿತು. ಗಂಟಲ ಪಸೆಯೇ ಆರಿಹೋಯ್ತು. ಆವರೆಗೂ ಯಾವ ಹೆಣ್ಣುಮಕ್ಕಳನ್ನು ಇಷ್ಟುನಿಕಟವಾಗಿ ಮುಟ್ಟುವುದಿರಲಿ, ನೋಡಿಯೂ ಇರಲಿಲ್ಲ. ಸ್ತಂಭೀಭೂತನಾಗಿ ನಿಂತುಬಿಟ್ಟೆ. ಮಾತುಗಳು ಹೊರಡಲಿಲ್ಲ. ತಕ್ಷಣ ತೆರೆ ಎಳೆದು ಬೇರೆ ದೃಶ್ಯ ಶುರು ಮಾಡಿದರು.
ಪುಟ್ಟ ಹುಡುಗ ನನ್ನ, ರಾಜ್ ಕುಮಾರ್ ಜೀವ ಉಳಿಸಿದ; 'ಒಂದು ಮುತ್ತಿನ ಕಥೆ' ಅನುಭವ ಬಿಚ್ಚಿಟ್ಟ ಚಂದ್ರು
ಆಮೇಲೆ ಗಿರಿಜಮ್ಮ ಬಂದು, ‘ಇದೇನ್ ಚಂದ್ರು? ನೀವು ತಂದೆ, ನಾನು ಮಗಳು. ಮುಟ್ಟಿದ್ರೆ, ತಬ್ಬಿಕೊಂಡ್ರೆ ಏನಾಯ್ತು? ಹಂಗೇ ಡೈಲಾಗ್ ಮರೆತುಬಿಡೋದಾ?’ ಕೇಳಿದ್ರು.
ನಾನು, ‘ನಂಗೆ ಹಂಗನಿಸಲಿಲ್ಲಮ್ಮ. ದಯವಿಟ್ಟು ಮುಂದಿನ ಪ್ರದರ್ಶನದಲ್ಲಿ ನೀವು ಮುಟ್ಟಿತಬ್ಬಿಕೊಳ್ಳಬೇಡಿ. ಹಾಗೆ ಡೈಲಾಗ್ ಹೇಳಿ’ ಅಂದೆ. ಅವರು, ‘ಬರೀ ಮುಟ್ಟೋದಲ್ಲ, ಕಚ್ಚಿಬಿಡ್ತೀನಿ’ ಅಂತ ನಕ್ಕರು. ಇದಾದ ಕೆಲವಾರು ವರ್ಷಗಳ ನಂತರ ಅದೇ ಗಿರಿಜಮ್ಮ- ನಾನು ಮೂವತ್ತಕ್ಕೂ ಅಧಿಕ ಸಿನಿಮಾಗಳಲ್ಲಿ ಹಾಗೂ ಸೀರಿಯಲ್‌ಗಳಲ್ಲಿ ಗಂಡ ಹೆಂಡತಿ ಪಾತ್ರ ಮಾಡಿದೆವು.