
‘ಸಾಹಸಸಿಂಹ’ ಡಾ. ವಿಷ್ಣುವರ್ಧನ್ ಅವರ 75ನೇ ಹುಟ್ಟುಹಬ್ಬ ಆಚರಣೆ ಗುರುವಾರ ನಡೆಯಲಿದೆ. ಮೈಸೂರಿನಲ್ಲಿರುವ ಡಾ. ವಿಷ್ಣುವರ್ಧನ್ ಸ್ಮಾರಕದ ಬಳಿ ಪತ್ನಿ ಭಾರತಿ ವಿಷ್ಣುವರ್ಧನ್, ಅಳಿಯ ಅನಿರುದ್ಧ್ ಸೇರಿದಂತೆ ಇಡೀ ಕುಟುಂಬ ಪೂಜೆ ಸಲ್ಲಿಸಲಿದೆ. ಡಾ.ವಿಷ್ಣು ಸೇನಾ ಸಮಿತಿ ಬೆಂಗಳೂರಿನಲ್ಲಿಯೇ ಅಭಿಮಾನ್ ಸ್ಟುಡಿಯೋ ಸಮೀಪದಲ್ಲಿ ಡಾ.ವಿಷ್ಣುವರ್ಧನ್ ಹುಟ್ಟುಹಬ್ಬ ಆಚರಿಸಲಿದೆ.
ಕಳೆದ ಹಲವು ವರ್ಷಗಳಿಂದ ವಿಷ್ಣು ಹುಟ್ಟುಹಬ್ಬದಂದು ಅಭಿಮಾನಿಗಳು ಅಭಿಮಾನ್ ಸ್ಟುಡಿಯೋದಲ್ಲಿರುವ ಸಮಾಧಿಗೆ ಪೂಜೆ ಸಲ್ಲಿಸುತ್ತಿದ್ದರು. ಈ ಸಲ ಸಮಾಧಿ ನೆಲಸಮ ಮಾಡಿರುವುದರಿಂದ, ಕೋರ್ಟ್ ಆದೇಶ ಇರುವುದರಿಂದ ಅಭಿಮಾನಿಗಳಿಗೆ ಅಭಿಮಾನ್ ಸ್ಟುಡಿಯೋ ಒಳಗೆ ಪ್ರವೇಶ ಇಲ್ಲ. ಅದಕ್ಕಾಗಿ ಡಾ. ವಿಷ್ಣು ಸೇನಾ ಸಮಿತಿಯು ಅಭಿಮಾನ್ ಸ್ಟುಡಿಯೋ ಸಮೀಪದಲ್ಲಿರುವ ಜೆಎಸ್‌ಎಸ್ ಮಹಾವಿದ್ಯಾಪೀಠದ ಎದುರು ಇರುವ ಎರಡು ಎಕರೆ ಜಾಗದಲ್ಲಿ ವಿಷ್ಣುವರ್ಧನ್ ಅವರ ಜನ್ಮದಿನದ ಸಂಭ್ರಮ ಆಚರಿಸಲಿದೆ.
ಈ ಕುರಿತು ಮಾಹಿತಿ ನೀಡಿರುವ ಡಾ. ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್, ‘ಅಭಿಮಾನಿಗಳು ನಿರಾಶರಾಗಬಾರದು ಎಂಬ ಕಾರಣಕ್ಕೆ ಅಭಿಮಾನ್ ಸ್ಟುಡಿಯೋ ಸಮೀಪದಲ್ಲಿಯೇ ತಾತ್ಕಾಲಿಕವಾದ ಅದ್ದೂರಿ ಮಂಟಪ ನಿರ್ಮಿಸಿ, ವಿಷ್ಣುವರ್ಧನ್ ಅವರ ಭಾವಚಿತ್ರ ಇಟ್ಟು ಪೂಜೆ ಮಾಡಲಾಗುವುದು. ಅನ್ನ ಸಂತರ್ಪಣೆ ಕೂಡ ಆಯೋಜಿಸಲಾಗಿದೆ ಎಂದರು..
ಮೈಸೂರು ಸ್ಮಾರಕ ಸಮೀಪ ಎಫ್‌ಟಿಐಐ: ಮೈಸೂರಿನಲ್ಲಿ ಸರ್ಕಾರ ಡಾ। ವಿಷ್ಣುವರ್ಧನ್ ಸ್ಮಾರಕ್ಕಾಗಿ 5 ಎಕರೆ ಜಾಗ ನೀಡಿದ್ದು, 3 ಎಕರೆಯಲ್ಲಿ ಸ್ಮಾರಕ ನಿರ್ಮಿಸಲಾಗಿದೆ. ಉಳಿದ ಎರಡು ಎಕರೆಯಲ್ಲಿ ಫಿಲಂ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಫ್‌ಟಿಐಐ) ಶಾಖೆ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಕುರಿತು ಮಾತನಾಡಿರುವ ಅಳಿಯ ಅನಿರುದ್ಧ್, ‘ಪುಣೆಯಲ್ಲಿರುವ ಎಫ್‌ಟಿಐಐನ ಶಾಖೆ ದಕ್ಷಿಣ ಭಾರತದಲ್ಲಿ ಎಲ್ಲೂ ಇಲ್ಲ. ಹೀಗಾಗಿ ವಿಷ್ಣುವರ್ಧನ್ ಹೆಸರಿನಲ್ಲಿ ಸ್ಮಾರಕದ ಬಳಿಯೇ ಎಫ್‌ಟಿಐಐ ಶಾಖೆ ನಿರ್ಮಿಸುವ ಯೋಜನೆ ಇದೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿ ಯೋಜನೆಯಾಗಿದ್ದು, ಈ ಯೋಜನೆ ವಿಷ್ಣುವರ್ಧನ್ ಪ್ರತಿಷ್ಠಾನದ ಮೂಲಕ ಆಗಲಿದೆ. ಇದಕ್ಕೆ ಮುಖ್ಯಮಂತ್ರಿಗಳು ಅಧ್ಯಕ್ಷರಾಗಿದ್ದಾರೆ. ವಿಷ್ಣು ಅವರ ಹೆಸರಿನಲ್ಲಿ ಎಫ್‌ಟಿಐಐ ಶಾಖೆ ಆರಂಭವಾದರೆ ದಕ್ಷಿಣ ಭಾರತಕ್ಕೇ ಹೆಮ್ಮೆಯ ಸಂಗತಿ ಆಗಲಿದೆ’ ಎಂದಿದ್ದಾರೆ.
ಕಿಚ್ಚ ಸುದೀಪ್ ನೇತೃತ್ವದಲ್ಲಿ ವೀರಕಪುತ್ರ ಶ್ರೀನಿವಾಸ್, ಅಶೋಖ್ ಖೇಣಿ ಮುಂತಾದವರ ಸಹಭಾಗಿತ್ವದಲ್ಲಿ ನಿರ್ಮಾಣವಾಗಲಿರುವ ಡಾ. ವಿಷ್ಣು ದರ್ಶನ ಕೇಂದ್ರದ ನೀಲಿ ನಕ್ಷೆ ಗುರುವಾರ ಬಿಡುಗಡೆಯಾಗಲಿದೆ. ಇದರ ಜೊತೆಗೆ ರಕ್ತದಾನ ಹಾಗೂ ನೇತ್ರದಾನಕ್ಕೆ ಹೆಸರುಗಳನ್ನು ನೋಂದಣಿ ಮಾಡಿಕೊಳ್ಳುವ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ. ಬೆಳಗ್ಗೆಯಿಂದ ಸಂಜೆವರೆಗೂ ದಾದಾ ಹೆಸರಿನಲ್ಲಿ ಸಂಗೀತ ಕಾರ್ಯಕ್ರಮ ಕೂಡ ನಡೆಯಲಿದೆ’ ಎಂದು ಹೇಳಿದರು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.