'ದೊಡ್ಮನೆ' ಅಂದ್ರೆ ಬಿಗ್ ಬಾಸ್ ಮನೆ ಅಲ್ಲ, ಡಾ.ರಾಜ್‌ಕುಮಾರ್ ಮನೆ; ಆ ಹೆಸರು ಬಂದಿರೋದ್ರ ಹಿಂದೆ ಇದೆ ಈ ಕಥೆ!

Published : Nov 29, 2026, 11:24 AM IST
Dr Rajkumar Home

ಸಾರಾಂಶ

ಒಂದು ಹೋಟೆಲ್‌ನ ಫ್ಯಾನ್ ಪ್ಲೇಟ್ ಕೆಳಗೆ ಬಿದ್ದ ಘಟನೆಯಿಂದ ಆರಂಭವಾಗಿ, ನಿರ್ಮಾಪಕ ಚೆಟ್ಟಿಯಾರ್ ಅವರ ಸಲಹೆಯಂತೆ ₹15 ಲಕ್ಷಕ್ಕೆ ಸ್ವಂತ ಮನೆ ಖರೀದಿಸುವವರೆಗೆ ನಡೆದ ಈ ಪಯಣ ಅಣ್ಣಾವ್ರ ಬದುಕಿನ ಅಪರೂಪದ ನೆನಪು. ಇಂದಿನ ಪೀಳಿಗೆಯ ಹಲವು ಅಭಿಮಾನಿಗಳಿಗೆ 'ದೊಡ್ಮನೆ' ಎಂಬ ಹೆಸರಿನ ಹಿಂದಿನ ಕಥೆ ಗೊತ್ತಿಲ್ಲದಿದ್ದರೆ ಈ ಸ್ಟೋರಿ ನೋಡಿ..

ರೂ. 15 ಲಕ್ಷಕ್ಕೆ ಖರೀದಿಸಿದ ಆ ಮನೆಗೆ 'ದೊಡ್ಮನೆ' ಹೆಸರು ಬಂದಿದ್ದೇಗೆ?

ಕರ್ನಾಟಕ ರತ್ನ, ಕನ್ನಡ ಚಿತ್ರರಂಗದ ವರನಟ ಡಾ. ರಾಜ್‌ಕುಮಾರ್ ಅವರ ಜೀವನದಲ್ಲಿ ನಡೆದಿರುವ ಹಲವು ಸ್ವಾರಸ್ಯಕರ ಘಟನೆಗಳು ಇಂದಿಗೂ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸುತ್ತವೆ. ಸಿನಿಮಾಗಳ ಮೂಲಕ ಕೋಟ್ಯಂತರ ಜನರ ಮನಸ್ಸಿನಲ್ಲಿ ಮನೆ ಮಾಡಿದ್ದ ಅಣ್ಣಾವ್ರು ಬೆಂಗಳೂರಿನಲ್ಲಿ ತಮ್ಮದೇ ಆದ ಸ್ವಂತ ಮನೆ ಖರೀದಿಸಿದ ಹಿಂದೆಯೂ ಒಂದು ಆಸಕ್ತಿದಾಯಕ ಕಥೆಯಿದೆ. ಹೋಟೆಲ್ ಬದಲಾಯಿಸುವ ಸಂದರ್ಭದಲ್ಲಿ ನಡೆದ ಅನಿರೀಕ್ಷಿತ ಘಟನೆ, ಬಳಿಕ ನಿರ್ಮಾಪಕರೊಬ್ಬರ ಸಲಹೆಯಂತೆ ಮನೆ ಖರೀದಿಸಿದ ಪ್ರಸಂಗ ಹಾಗೂ ಆ ಮನೆಗೆ 'ದೊಡ್ಮನೆ' ಎಂಬ ಹೆಸರು ಬಂದ ರೀತಿ ನಿಜಕ್ಕೂ ವಿಶೇಷವಾಗಿದೆ.

ಹೈಲ್ಯಾಂಡ್ಸ್ ಬಿಟ್ಟು ಅಜಂತಾ ಹೋಟೆಲ್‌ಗೆ ತೆರಳಿದ್ದ ಅಣ್ಣಾವ್ರು!

ಡಾ. ರಾಜ್‌ಕುಮಾರ್ ಅವರು ಬೆಂಗಳೂರಿಗೆ ಬಂದಾಗ ಹೈಲ್ಯಾಂಡ್ಸ್ ಹೋಟೆಲ್‌ನಲ್ಲಿ ಉಳಿದುಕೊಳ್ಳುತ್ತಿದ್ದರಂತೆ. ಆ ದಿನಗಳಲ್ಲಿ ಅಣ್ಣಾವ್ರು ಅಲ್ಲಿಯೇ ತಮ್ಮ ವಾಸ್ತವ್ಯವನ್ನು ಮುಂದುವರಿಸಿದ್ದರು. ಹೀಗಿರುವಾಗ ಒಮ್ಮೆ ನಿರ್ಮಾಪಕರೊಬ್ಬರು ಅವರನ್ನು ಭೇಟಿಯಾಗಿ, ನೀವು ಈ ಹೋಟೆಲ್‌ನಲ್ಲಿ ಉಳಿದುಕೊಳ್ಳುವುದು ಬೇಡ. ನಿಮಗಾಗಿ ಮತ್ತೊಂದು ಉತ್ತಮ ಹೋಟೆಲ್ ನೋಡಿದ್ದೇನೆ ಎಂದು ಹೇಳಿದ್ದರಂತೆ.

ಅವರು ಸೂಚಿಸಿದ್ದು ಬೆಂಗಳೂರಿನ ಎಂಜಿ ರಸ್ತೆಯಲ್ಲಿದ್ದ ಅಜಂತಾ ಹೋಟೆಲ್. ನಿರ್ಮಾಪಕರ ಮಾತಿಗೆ ಗೌರವ ನೀಡಿದ ಅಣ್ಣಾವ್ರು ತಮ್ಮ ವಾಸ್ತವ್ಯವನ್ನು ಹೈಲ್ಯಾಂಡ್ಸ್‌ನಿಂದ ಅಜಂತಾ ಹೋಟೆಲ್‌ಗೆ ಬದಲಾಯಿಸಿಕೊಂಡರು. ಆದರೆ, ಹೊಸ ಹೋಟೆಲ್‌ಗೆ ಹೋದ ಬೆನ್ನಲ್ಲೇ ಅಲ್ಲಿ ಒಂದು ಅನಿರೀಕ್ಷಿತ ಘಟನೆ ನಡೆದಿತ್ತು.

ಅಣ್ಣಾವ್ರು ಉಳಿದುಕೊಂಡಿದ್ದ ಕೋಣೆಯ ಸೀಲಿಂಗ್ ಫ್ಯಾನ್‌ನ ಪ್ಲೇಟ್ ಏಕಾಏಕಿ ಕೆಳಗೆ ಬಿದ್ದಿತ್ತಂತೆ. ಇದರಿಂದ ಸಹಜವಾಗಿಯೇ ಅವರು ಅಚ್ಚರಿಗೊಂಡಿದ್ದರು. ಹೊಸದಾಗಿ ಬಂದ ಹೋಟೆಲ್‌ನಲ್ಲಿ ಇಂತಹ ಘಟನೆ ನಡೆದಿದ್ದರಿಂದ, 'ಇದ್ಯಾಕೋ ಗ್ರಹಚಾರ ಸರಿಯಿಲ್ಲ' ಎಂದುಕೊಂಡು ಮತ್ತೆ ಹಳೆಯ ಹೈಲ್ಯಾಂಡ್ಸ್ ಹೋಟೆಲ್‌ಗೆ ವಾಪಸ್ ತೆರಳಿದರಂತೆ. ಈ ಸಣ್ಣ ಘಟನೆ ಅಣ್ಣಾವ್ರ ಜೀವನದ ಸ್ವಾರಸ್ಯಕರ ನೆನಪುಗಳಲ್ಲಿ ಒಂದಾಗಿ ಉಳಿದಿದೆ.

ಚೆಟ್ಟಿಯಾರ್ ಸಲಹೆಯಂತೆ ಮನೆ ಖರೀದಿಸಿದ ಡಾ. ರಾಜ್‌ಕುಮಾರ್!

ಹೋಟೆಲ್ ಬದಲಾವಣೆಯ ಪ್ರಸಂಗದ ಬಳಿಕ ಅಣ್ಣಾವ್ರ ಜೀವನದಲ್ಲಿ ಮತ್ತೊಂದು ಮಹತ್ವದ ಅಧ್ಯಾಯ ಆರಂಭವಾಯಿತು. 'ಬೇಡರ ಕಣ್ಣಪ್ಪ' ಚಿತ್ರದ ನಿರ್ಮಾಣ ಸಂಸ್ಥೆಯಾಗಿದ್ದ ಎವಿಎಂ ಪ್ರೊಡಕ್ಷನ್ಸ್‌ನ ಮಾಲೀಕ ಚೆಟ್ಟಿಯಾರ್ ಅವರು ಡಾ. ರಾಜ್‌ಕುಮಾರ್ ಅವರಿಗೆ ಬೆಂಗಳೂರಿನಲ್ಲಿ ಸ್ವಂತ ಮನೆ ಖರೀದಿಸುವಂತೆ ಸಲಹೆ ನೀಡಿದ್ದರಂತೆ.

ಒಂದು ದಿನ ಅಣ್ಣಾವ್ರನ್ನು ಭೇಟಿಯಾದ ಚೆಟ್ಟಿಯಾರ್ ಅವರು, ಬೆಂಗಳೂರಿನ ಸದಾಶಿವನಗರದಲ್ಲಿ ಮನೆಯೊಂದಿರುವ ವಿಶಾಲವಾದ ಜಾಗವನ್ನು ನೋಡಿದ್ದೇನೆ. ನೀವು ಅದನ್ನು ಖರೀದಿಸಿದರೆ ಒಳ್ಳೆಯದು ಎಂದು ಸೂಚಿಸಿದ್ದರಂತೆ. ಅವರ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ ಡಾ. ರಾಜ್‌ಕುಮಾರ್ ಅವರು ಆ ಜಾಗಕ್ಕೆ ತೆರಳಿ ಮನೆಯನ್ನು ಪರಿಶೀಲಿಸಿದರು. ಬಳಿಕ ಅದನ್ನು ಖರೀದಿಸುವ ನಿರ್ಧಾರ ಮಾಡಿದರು.

ಅಂದಿನ ಕಾಲದಲ್ಲೇ ಬರೋಬ್ಬರಿ 15 ಲಕ್ಷ ರೂಪಾಯಿ ನೀಡಿ ಅಣ್ಣಾವ್ರು ಆ ವಿಶಾಲವಾದ ಮನೆಯನ್ನು ಖರೀದಿಸಿದ್ದರು ಎನ್ನಲಾಗಿದೆ. ಹೀಗೆ ರಾಜ್‌ಕುಮಾರ್ ಕುಟುಂಬಕ್ಕೆ ಬೆಂಗಳೂರಿನಲ್ಲಿ ತಮ್ಮದೇ ಆದ ಶಾಶ್ವತ ನೆಲೆ ಸಿಕ್ಕಂತಾಯಿತು.

ಆ ಮನೆಗೆ 'ದೊಡ್ಮನೆ' ಹೆಸರು ಬಂದಿದ್ದೇಗೆ?

ಸದಾಶಿವನಗರದಲ್ಲಿದ್ದ ಆ ಮನೆ ವಿಶಾಲವಾದ ಜಾಗ ಹಾಗೂ ದೊಡ್ಡ ಕಟ್ಟಡವನ್ನು ಹೊಂದಿತ್ತು. ಅಣ್ಣಾವ್ರ ಕುಟುಂಬದ ವಾಸ್ತವ್ಯ ಆರಂಭವಾದ ಬಳಿಕ ಆ ಮನೆ ಎಲ್ಲರ ಗಮನ ಸೆಳೆಯತೊಡಗಿತು. ಮನೆಯ ವಿಶಾಲತೆ ಮತ್ತು ಅಲ್ಲಿನ ವಾತಾವರಣದಿಂದಾಗಿ ಜನರು ಅದನ್ನು ಪ್ರೀತಿಯಿಂದ 'ದೊಡ್ಮನೆ' ಎಂದು ಕರೆಯಲು ಆರಂಭಿಸಿದರು. ಕ್ರಮೇಣ ಈ ಹೆಸರು ಕೇವಲ ಮನೆಯ ಗುರುತಾಗಿ ಉಳಿಯದೆ, ಡಾ. ರಾಜ್‌ಕುಮಾರ್ ಕುಟುಂಬದ ಹೆಸರಿನೊಂದಿಗೂ ಬೆಸೆದುಕೊಂಡಿತು.

ಅಣ್ಣಾವ್ರು ವಾಸವಿದ್ದ ಆ ಮನೆ ರಾಜ್ ಕುಟುಂಬದ ಅನೇಕ ಸುಂದರ ಕ್ಷಣಗಳಿಗೆ ಸಾಕ್ಷಿಯಾಗಿತ್ತು. ಕುಟುಂಬದ ಸಂಭ್ರಮ, ಮಕ್ಕಳ ಬಾಲ್ಯದ ನೆನಪುಗಳು ಹಾಗೂ ಹಲವು ವಿಶೇಷ ಸಂದರ್ಭಗಳು ಆ ಮನೆಯೊಂದಿಗೆ ಬೆಸೆದುಕೊಂಡಿದ್ದವು. ಹೀಗಾಗಿ ಅದು ಕೇವಲ ಒಂದು ನಿವಾಸವಾಗಿರದೆ, ಅಭಿಮಾನಿಗಳ ಪಾಲಿಗೂ ಭಾವನಾತ್ಮಕ ನೆನಪಿನ ತಾಣವಾಗಿತ್ತು.

ಹಳೆಯ ಮನೆ ಇಲ್ಲ, ಆದರೆ 'ದೊಡ್ಮನೆ' ಹೆಸರು ಇಂದಿಗೂ ಜೀವಂತ!

ಕಾಲ ಬದಲಾದಂತೆ ಸದಾಶಿವನಗರದಲ್ಲಿದ್ದ ಹಳೆಯ ಮನೆಯನ್ನು ಕೆಡವಿ, ಅದೇ ಜಾಗದಲ್ಲಿ ಎರಡು ಪ್ರತ್ಯೇಕ ಮನೆಗಳನ್ನು ನಿರ್ಮಿಸಲಾಗಿದೆ ಎನ್ನಲಾಗಿದೆ. ಈ ಮನೆಗಳಲ್ಲಿ ಒಂದರಲ್ಲಿ ಪುನೀತ್ ರಾಜ್‌ಕುಮಾರ್ ಅವರ ಕುಟುಂಬ ಹಾಗೂ ಮತ್ತೊಂದರಲ್ಲಿ ರಾಘವೇಂದ್ರ ರಾಜ್‌ಕುಮಾರ್ ಅವರ ಕುಟುಂಬ ವಾಸಿಸುತ್ತಿದೆ.

ಇಂದು ಅಣ್ಣಾವ್ರು ವಾಸವಿದ್ದ ಆ ಹಳೆಯ ಕಟ್ಟಡ ಕಣ್ಣಿಗೆ ಕಾಣದಿದ್ದರೂ, 'ದೊಡ್ಮನೆ' ಎಂಬ ಹೆಸರು ಮಾತ್ರ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ರಾಜ್‌ಕುಮಾರ್ ಕುಟುಂಬವನ್ನು ಇಂದಿಗೂ ಅಭಿಮಾನಿಗಳು ಪ್ರೀತಿಯಿಂದ 'ದೊಡ್ಮನೆ ಕುಟುಂಬ' ಎಂದೇ ಕರೆಯುತ್ತಾರೆ.

ಒಂದು ಹೋಟೆಲ್‌ನ ಫ್ಯಾನ್ ಪ್ಲೇಟ್ ಕೆಳಗೆ ಬಿದ್ದ ಘಟನೆಯಿಂದ ಆರಂಭವಾಗಿ, ನಿರ್ಮಾಪಕ ಚೆಟ್ಟಿಯಾರ್ ಅವರ ಸಲಹೆಯಂತೆ ₹15 ಲಕ್ಷಕ್ಕೆ ಸ್ವಂತ ಮನೆ ಖರೀದಿಸುವವರೆಗೆ ನಡೆದ ಈ ಪಯಣ ಅಣ್ಣಾವ್ರ ಬದುಕಿನ ಅಪರೂಪದ ನೆನಪು. ಇಂದಿನ ಪೀಳಿಗೆಯ ಅಭಿಮಾನಿಗಳಿಗೂ 'ದೊಡ್ಮನೆ' ಎಂಬ ಹೆಸರಿನ ಹಿಂದಿನ ಕಥೆ ತಿಳಿದರೆ ಅಣ್ಣಾವ್ರ ಕುಟುಂಬದ ಮೇಲಿನ ಅಭಿಮಾನ ಮತ್ತಷ್ಟು ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ.

ಇತ್ತೀಚೆಗೆ ಬಿಗ್ ಬಾಸ್ ಮನೆಯನ್ನು (ಕನ್ನಡದ ಬಿಗ್ ಬಾಸ್ ಶೋ) ದೊಡ್ಮನೆ ಅಂತ ಕೆಲವರು ಕರೆಯುತ್ತಾರೆ. ಆದರೆ, ಅದು ದೊಡ್ಮನೆ ಆಗಲ್ಲ, ಬದಲಿಗೆ 'ದೊಡ್ಡ ಯಜಮಾನರ ಮನೆ' ಆಗಬಹುದಷ್ಟೇ. ಏಕೆಂದರೆ, ಅದು ಬಿಗ್ ಬಾಸ್ ಮನೆ, ಬಿಗ್ ಮನೆ ಅಲ್ಲ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಿರ್ಮಾಪಕರ ಪ್ರೀತಿಯೇ ಸಂಭಾವನೆ ಎನ್ನುತ್ತಿದ್ದ ಸುನೀಲ್; 90ರ ದಶಕದ ಸ್ಟಾರ್ ನಟನ ಸ್ಮರಿಸಿದ ಸಾ.ರಾ. ಗೋವಿಂದು!
'ಇದ್ಯಾಕೋ ಗ್ರಹಚಾರ ಸರಿ ಇಲ್ಲ'.. ಮೂಡ್ ಕೆಟ್ಟು ಡಾ ರಾಜ್‌ಕುಮಾರ್ ಆ ಹೊಟೆಲ್‌ಗೇ ವಾಪಸ್ ಹೋದ್ರು; ಅಲ್ಲಿ ಪವಾಡ ಆಯ್ತು!