
ಇಂದಿನ ಸಿನಿಮಾ ಜಗತ್ತಿನಲ್ಲಿ ಒಂದು ಪಾತ್ರ ಸಿಗಬೇಕೆಂದರೆ ಆಡಿಷನ್, ಲುಕ್ ಟೆಸ್ಟ್, ಮಾರುಕಟ್ಟೆ ಮೌಲ್ಯ, ಸಾಮಾಜಿಕ ಜಾಲತಾಣಗಳ ಜನಪ್ರಿಯತೆ ಹೀಗೆ ದೊಡ್ಡ ಪಟ್ಟಿಯೇ ಇರುತ್ತದೆ. ಆದರೆ ಒಂದು ಕಾಲದಲ್ಲಿ ಕಲಾವಿದನಿಗೆ ಪಾತ್ರವೊಂದನ್ನು ನೀಡಿದಾಗ, ಈ ಪಾತ್ರ ನಿನ್ನಿಂದ ಸಾಧ್ಯವೇ? ಎನ್ನುವುದಕ್ಕಿಂತ, ಈ ಪಾತ್ರಕ್ಕೆ ನೀನು ಹೇಗೆ ಜೀವ ತುಂಬುತ್ತೀಯ? ಎನ್ನುವುದಷ್ಟೇ ಮುಖ್ಯವಾಗಿತ್ತು. ಇಂತಹ ನಂಬಿಕೆಗೆ ಅತ್ಯುತ್ತಮ ನಿದರ್ಶನವೆಂದರೆ ವರನಟ ಡಾ. ರಾಜ್ಕುಮಾರ್ ಅವರು 1958ರ ‘ಭೂಕೈಲಾಸ’ ಚಿತ್ರದಲ್ಲಿ ನಿರ್ವಹಿಸಿದ ರಾವಣನ ಪಾತ್ರ.
ನಿರ್ದೇಶಕ ಕೆ. ಶಂಕರ್ ಅವರು ರಾವಣನ ವೇಷಧಾರಿ ರಾಜ್ಕುಮಾರ್ ಅವರಿಗೆ ದೃಶ್ಯವೊಂದನ್ನು ವಿವರಿಸುತ್ತಿರುವ ಅಪರೂಪದ ಛಾಯಾಚಿತ್ರವೊಂದರ ಹಿಂದೆ ಕನ್ನಡ ಚಿತ್ರರಂಗದ ಸ್ವಾಭಿಮಾನ, ಸರಳತೆ ಮತ್ತು ಅಪ್ಪಟ ಪ್ರತಿಭೆಯ ಗೆಲುವಿನ ರೋಚಕ ಕಥೆಯಿದೆ.
ಪ್ರಖ್ಯಾತ ಎವಿಎಂ ಸಂಸ್ಥೆಯ ನಿರ್ಮಾಪಕ ಎ. ವಿ. ಮೇಯಪ್ಪನ್ (ಮೇಯಪ್ಪ ಚೆಟ್ಟಿಯಾರ್) ಅವರು 1958ರಲ್ಲಿ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ‘ಭೂಕೈಲಾಸ’ ಚಿತ್ರವನ್ನು ನಿರ್ಮಿಸಲು ಮುಂದಾದರು. ತೆಲುಗಿನಲ್ಲಿ ಎನ್. ಟಿ. ರಾಮರಾವ್ (NTR) ಅವರಿಗೆ ರಾವಣನ ಪಾತ್ರ ನೀಡಲಾಗಿತ್ತು. ಕನ್ನಡದಲ್ಲಿ ಈ ಪಾತ್ರಕ್ಕೆ ಅಣ್ಣಾವ್ರನ್ನು ಆಯ್ಕೆ ಮಾಡಲಾಗಿತ್ತು.
ಆದರೆ ಸಂಭಾವನೆಯ ವಿಷಯ ಬಂದಾಗ ಕಥೆಗೆ ತಿರುವು ಸಿಕ್ಕಿತು. ತೆಲುಗಿನಲ್ಲಿ ಎನ್. ಟಿ. ರಾಮರಾವ್ ಅವರಿಗೆ ₹20,000 ಸಂಭಾವನೆ ನೀಡಿದ್ದ ನಿರ್ಮಾಪಕರು, ಕನ್ನಡದಲ್ಲಿ ರಾಜ್ಕುಮಾರ್ ಅವರಿಗೆ ಕೇವಲ ₹2,000 ನೀಡಲು ಮುಂದಾದರು. ತಮ್ಮ ಕಲೆಯ ಮೌಲ್ಯವನ್ನು ಚೆನ್ನಾಗಿ ಅರಿತಿದ್ದ ಅಣ್ಣಾವ್ರು ಇದಕ್ಕೆ ಸುಮ್ಮನೆ ಒಪ್ಪಿಕೊಳ್ಳಲಿಲ್ಲ. “ಸ್ವಾಮಿ, ₹5,000 ಸಂಭಾವನೆ ನೀಡಿದರೆ ಖಂಡಿತ ಅಭಿನಯಿಸುತ್ತೇನೆ, ಇಲ್ಲವಾದರೆ ನನಗೆ ಈ ಪಾತ್ರ ಬೇಡ” ಎಂದು ನೇರವಾಗಿ ಮತ್ತು ವಿನಯಪೂರ್ವಕವಾಗಿ ಹೇಳಿದರು. ಇಂದಿನ ಕಾಲವಾಗಿದ್ದರೆ ಇದನ್ನು ‘ಅಹಂಕಾರ’ ಎಂದು ಚರ್ಚಿಸಲಾಗುತ್ತಿತ್ತೇನೋ, ಆದರೆ ಅಂದು ಅಣ್ಣಾವ್ರ ಆ ಮಾತು ಕಲಾವಿದನ ಸ್ವಾಭಿಮಾನದ ಪ್ರತೀಕವಾಗಿತ್ತು.
ನಿರ್ಮಾಪಕ ಮೇಯಪ್ಪ ಚೆಟ್ಟಿಯಾರ್ ಕೂಡ ಪಟ್ಟು ಬಿಡಲಿಲ್ಲ. “ಹೋಗಯ್ಯ, ನೀನಿಲ್ಲದಿದ್ದರೆ ಮತ್ತೊಬ್ಬ!” ಎಂದು ಹೇಳಿ, ನಟ ಉದಯಕುಮಾರ್ ಅವರನ್ನು ಕರೆಸಿ ರಾವಣನ ವೇಷಭೂಷಣ ಹಾಕಿಸಿದರು. ಆದರೆ ಮೇಕಪ್ ಪೂರ್ಣಗೊಂಡಾಗ ಉದಯಕುಮಾರ್ ಅವರ ಮುಖದಲ್ಲಿ ರಾವಣನ ಗಾಂಭೀರ್ಯಕ್ಕಿಂತ ಹನುಮಂತನ ಛಾಯೆಯೇ ಹೆಚ್ಚಾಗಿ ಕಾಣಿಸಿತಂತೆ! ತಕ್ಷಣವೇ ಆ ಪ್ರಯತ್ನ ಕೈಬಿಟ್ಟ ನಿರ್ಮಾಪಕರು, ನಂತರ ಕಲ್ಯಾಣ್ ಕುಮಾರ್ ಅವರಿಗೂ ರಾವಣನ ವೇಷ ಹಾಕಿ ನೋಡಿದರು. ಆದರೆ ನಿರ್ದೇಶಕರು ಮತ್ತು ನಿರ್ಮಾಪಕರು ನಿರೀಕ್ಷಿಸಿದ್ದ ಆ ಗಂಭೀರ ರಾವಣನ ರೂಪ ಅಲ್ಲಿಯೂ ಸಿಗಲಿಲ್ಲ.
ಕೊನೆಗೆ ತಮ್ಮ ನಿರ್ಧಾರ ಬದಲಿಸಿದ ನಿರ್ಮಾಪಕರು, ಸಹಾಯಕರನ್ನು ಕರೆದು “ಹೋಗಿ, ಆ ಮುತ್ತುರಾಜನನ್ನೇ ಕರೆತನ್ನಿ!” ಎಂದು ಹೇಳಿ ಕಳುಹಿಸಿದರಂತೆ. ಅಣ್ಣಾವ್ರು ₹5,000 ಸಂಭಾವನೆಯೊಂದಿಗೆ ಚಿತ್ರತಂಡಕ್ಕೆ ಮರಳಿದರು. ಆದರೆ ನಿಜವಾದ ಇತಿಹಾಸ ಸೃಷ್ಟಿಯಾಗಿದ್ದು ಹಣದ ಒಪ್ಪಂದದಲ್ಲಲ್ಲ, ಬದಲಾಗಿ ಬೆಳ್ಳಿತೆರೆಯ ಮೇಲೆ!
ರಾವಣನ ಪಾತ್ರಕ್ಕೆ ಬಣ್ಣ ಹಚ್ಚಿದ ಡಾ. ರಾಜ್ಕುಮಾರ್, ಆ ಪಾತ್ರವನ್ನು ಕೇವಲ ಒಬ್ಬ ನೆಗೆಟಿವ್ ಪಾತ್ರವಾಗಿ ಉಳಿಸಲಿಲ್ಲ. ರಾವಣನ ಅಪಾರ ಪಾಂಡಿತ್ಯ, ಶಿವಭಕ್ತಿ, ರಾಜಗಾಂಭೀರ್ಯದ ಜೊತೆಗೆ ಅವನ ಪತನಕ್ಕೆ ಕಾರಣವಾದ ದುರಹಂಕಾರ ಮತ್ತು ಮಹತ್ವಾಕಾಂಕ್ಷೆ ಹೀಗೆ ಪಾತ್ರದ ಪ್ರತಿಯೊಂದು ಪದರವನ್ನೂ ತಮ್ಮ ಗಂಭೀರ ಕಂಠ, ತೀಕ್ಷ್ಣ ಕಣ್ಣೋಟ ಮತ್ತು ಅಮೋಘ ಭಾಷೆ, ಹಾವಭಾವದ ಮೂಲಕ ಜೀವಂತಗೊಳಿಸಿದರು. ಯಾವುದೇ ಆಡಂಬರದ ತಾಂತ್ರಿಕತೆಯಿಲ್ಲದೆ, ಕೇವಲ ನಟನೆಯ ಶಕ್ತಿಯಿಂದ ಪ್ರೇಕ್ಷಕರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿದರು.
ತೆಲುಗು ಅವತರಣಿಕೆಯಲ್ಲಿ ರಾವಣನಾಗಿ ನಟಿಸಿದ್ದ ಮೇರುನಟ ಎನ್. ಟಿ. ರಾಮರಾವ್ ಅವರೇ ಅಣ್ಣಾವ್ರ ಅಭಿನಯವನ್ನು ಕಂಡು “ಭೇಷ್ ತಮ್ಮುಡು!” ಎಂದು ಮನಸಾರೆ ಪ್ರಶಂಸಿಸಿದ್ದರಂತೆ. ಒಬ್ಬ ದಿಗ್ಗಜ ಕಲಾವಿದ ಮತ್ತೊಬ್ಬ ಕಲಾವಿದನ ಪ್ರತಿಭೆಯನ್ನು ಗುರುತಿಸಿ ಬೆನ್ನುತಟ್ಟಿದ ಅಪರೂಪದ ಕ್ಷಣವದು.
ಇನ್ನು ಭೂಕೈಲಾಸ ಚಿತ್ರೀಕರಣದ ಸಮಯದಲ್ಲಿ ಮತ್ತೊಂದು ಸುಂದರ ಘಟನೆ ನಡೆಯುತ್ತಿತ್ತು. ಚಿತ್ರದಲ್ಲಿ ನಾರದನ ಪಾತ್ರ ನಿರ್ವಹಿಸಿದ್ದ ಕಲ್ಯಾಣ್ ಕುಮಾರ್, ಶೂಟಿಂಗ್ ಬಿಡುವಿನ ವೇಳೆಯಲ್ಲಿ ಅಣ್ಣಾವ್ರಿಗೆ ಕಾರು ಡ್ರೈವಿಂಗ್ ಕಲಿಸುತ್ತಿದ್ದರು. ಅಂದಿನ ದಿನಗಳಲ್ಲಿ ಕಲಾವಿದರ ನಡುವೆ ಆರೋಗ್ಯಕರ ಸ್ಪರ್ಧೆಯಿತ್ತೇ ಹೊರತು ಅಸೂಯೆ ಇರಲಿಲ್ಲ. ಒಬ್ಬರನ್ನೊಬ್ಬರು ಬೆಳೆಸುವ, ಕಲೆಗೆ ಬೆಲೆ ಕೊಡುವ ಮತ್ತು ಸ್ನೇಹಕ್ಕೆ ನಿಜವಾದ ಅರ್ಥ ನೀಡುವ ಸುಂದರ ವಾತಾವರಣ ಚಿತ್ರರಂಗದಲ್ಲಿತ್ತು.
ಮೈಸೂರಿನ ‘ಶ್ರೀ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿ’ಯ ಜನಪ್ರಿಯ ನಾಟಕವನ್ನು ಆಧರಿಸಿ ‘ಭೂಕೈಲಾಸ’ ಚಿತ್ರವನ್ನು ನಿರ್ಮಿಸಲಾಗಿತ್ತು. 1940ರಲ್ಲಿ ಇದೇ ಕಥೆಯನ್ನು ತೆಲುಗಿನಲ್ಲಿ ನಿರ್ಮಿಸಿದ್ದ ಎ. ವಿ. ಮೇಯಪ್ಪನ್, 1958ರಲ್ಲಿ ಕನ್ನಡ ಮತ್ತು ತೆಲುಗಿನಲ್ಲಿ ಅದ್ಧೂರಿಯಾಗಿ ತೆರೆಗೆ ತಂದರು. ಕರ್ನಾಟಕದ ಪ್ರಸಿದ್ಧ ಕ್ಷೇತ್ರ ಗೋಕರ್ಣದ ಆತ್ಮಲಿಂಗದ ಪೌರಾಣಿಕ ಹಿನ್ನೆಲೆಯನ್ನು ಈ ಚಿತ್ರ ಅತ್ಯಂತ ಸೊಗಸಾಗಿ ಕಟ್ಟಿಕೊಟ್ಟಿತು.
ನಿರ್ದೇಶನ ಕೆ. ಶಂಕರ್, ನಿರ್ಮಾಣ: ಎ. ವಿ. ಮೇಯಪ್ಪನ್ (ಎವಿಎಂ ಪ್ರೊಡಕ್ಷನ್ಸ್) ಡಾ. ರಾಜ್ಕುಮಾರ್ ರಾವಣನಾಗಿ, ಕಲ್ಯಾಣ್ ಕುಮಾರ್ ನಾರದನಾಗಿ, ಜಮುನಾ ಅವರು ಮಂಡೋದರಿಯಾಗಿ, ಬಿ. ಸರೋಜಾ ದೇವಿ ಅವರು ಪಾರ್ವತಿಯಾಗಿ, ಕೆ. ಎಸ್. ಅಶ್ವತ್ಥ್ ಶಿವನಾಗಿ ಮಿಂಚಿದರು.
‘ಭೂಕೈಲಾಸ’ದ ಈ ಘಟನೆ ಸಾರುವ ಸತ್ಯ ಒಂದೇ, ಪಾತ್ರವೊಂದಕ್ಕೆ ಬದಲಿ ಕಲಾವಿದನನ್ನು ಕರೆತರಬಹುದು, ಆದರೆ ಆ ಪಾತ್ರಕ್ಕೆ ತನ್ನ ಆತ್ಮವನ್ನೇ ಧಾರೆಯೆರೆಯುವ ಅಪ್ಪಟ ಕಲಾವಿದನನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ಅಂದು “ನೀನಿಲ್ಲದಿದ್ದರೆ ಮತ್ತೊಬ್ಬ” ಎಂದಿದ್ದ ನಿರ್ಮಾಪಕರೇ ಕೊನೆಗೆ ಮುತ್ತುರಾಜನನ್ನು ಕರೆಸಿಕೊಳ್ಳಬೇಕಾಯಿತು. ಏಕೆಂದರೆ ಡಾ. ರಾಜ್ಕುಮಾರ್ ಎನ್ನುವುದು ಕೇವಲ ಒಂದು ಸ್ಥಾನವಲ್ಲ, ಅದೊಂದು ಸುವರ್ಣ ಯುಗ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.