
ಪರಭಾಷೆಯಲ್ಲೂ ನಟಿಸಿದ್ದರು ವರನಟ ಡಾ. ರಾಜ್‌ಕುಮಾರ್; ಆ ಒಂದೇ ಸಿನಿಮಾ ಯಾವುದು ಗೊತ್ತಾ?
ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಡಾ. ರಾಜ್‌ಕುಮಾರ್ (Dr Rajkumar) ಅವರ ಹೆಸರು ಎಂದೆಂದಿಗೂ ಚಿರಸ್ಥಾಯಿ. ತಮ್ಮ ಅದ್ಭುತ ಅಭಿನಯ, ಕಂಚಿನ ಕಂಠ, ಸರಳ ವ್ಯಕ್ತಿತ್ವ ಮತ್ತು ಕನ್ನಡ ಭಾಷೆಯ ಮೇಲಿನ ಅಪಾರ ಅಭಿಮಾನದಿಂದ ಕೋಟ್ಯಂತರ ಜನರ ಮನಸ್ಸಿನಲ್ಲಿ ನೆಲೆಸಿರುವ ವರನಟ, ತಮ್ಮ ಇಡೀ ವೃತ್ತಿಜೀವನದಲ್ಲಿ ಒಂದೇ ಒಂದು ಪರಭಾಷಾ ಸಿನಿಮಾದಲ್ಲಿ ನಟಿಸಿದ್ದರು ಎನ್ನುವುದು ಅನೇಕರಿಗೆ ಗೊತ್ತಿಲ್ಲದ ಸಂಗತಿ. ಹಾಗಾದರೆ ಆ ಸಿನಿಮಾ ಯಾವುದು? ತೆಲುಗು ಚಿತ್ರರಂಗದಲ್ಲಿ ಅವರು ಯಾವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು? ಇಲ್ಲಿದೆ ಕುತೂಹಲಕಾರಿ ಮಾಹಿತಿ.
ಮುತ್ತುರಾಜ್ ಆಗಿ ಜನಿಸಿದ ಡಾ. ರಾಜ್‌ಕುಮಾರ್ ಅವರ ಕಲಾಯಾನ ಆರಂಭವಾಗಿದ್ದು ರಂಗಭೂಮಿಯಿಂದ. ಬಾಲ್ಯದಲ್ಲಿಯೇ ಗುಬ್ಬಿ ವೀರಣ್ಣ ಅವರ ನಾಟಕ ಕಂಪನಿಯಲ್ಲಿ ಅಭಿನಯಿಸುತ್ತಾ ನಟನೆಯ ಪಟ್ಟುಗಳನ್ನು ಕಲಿತರು. ರಂಗಭೂಮಿಯಲ್ಲಿ ಸಿಕ್ಕ ಅನುಭವ, ಸ್ಪಷ್ಟ ಉಚ್ಚಾರಣೆ ಮತ್ತು ಅದ್ಭುತ ಕಂಠಸಿರಿ ಮುಂದೆ ಅವರ ಸಿನಿಪಯಣಕ್ಕೆ ಭದ್ರ ಬುನಾದಿಯಾಯಿತು. 1954ರಲ್ಲಿ ಬಿಡುಗಡೆಯಾದ 'ಬೇಡರ ಕಣ್ಣಪ್ಪ' ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸಿದ ಅವರು, ಮೊದಲ ಸಿನಿಮಾದಲ್ಲೇ ಪ್ರೇಕ್ಷಕರ ಮನಗೆದ್ದರು.
ನಂತರ ಸಾಮಾಜಿಕ, ಪೌರಾಣಿಕ, ಐತಿಹಾಸಿಕ ಹಾಗೂ ಭಕ್ತಿ ಪ್ರಧಾನ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದರು. 'ಮಯೂರ', 'ಬಭ್ರುವಾಹನ', 'ಭಕ್ತ ಕುಂಬಾರ', 'ಸತ್ಯ ಹರಿಶ್ಚಂದ್ರ' ಮತ್ತು 'ಬಂಗಾರದ ಮನುಷ್ಯ' ಸೇರಿದಂತೆ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದ ಮೇರು ನಟ ಎನಿಸಿಕೊಂಡರು. ನಟನೆಯ ಜೊತೆಗೆ ಗಾಯನದಲ್ಲೂ ಗುರುತಿಸಿಕೊಂಡ ಅವರು, 'ಜೀವನ ಚೈತ್ರ' ಚಿತ್ರದ 'ನಾದಮಯ ಈ ಲೋಕವೆಲ್ಲ' ಹಾಡಿಗೆ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದರು. ಗೋಕಾಕ್ ಚಳವಳಿಯಲ್ಲಿ ಭಾಗವಹಿಸಿ ಕನ್ನಡ ಭಾಷೆಯ ಹಕ್ಕಿಗಾಗಿ ಧ್ವನಿ ಎತ್ತಿದ್ದರು.
ಇನ್ನು ಅವರ ಏಕೈಕ ಪರಭಾಷಾ ಸಿನಿಮಾ 1954ರಲ್ಲಿ ಬಿಡುಗಡೆಯಾದ ತೆಲುಗಿನ 'ಕಾಳಹಸ್ತಿ ಮಹಾತ್ಯಮ್'. ಕನ್ನಡದ 'ಬೇಡರ ಕಣ್ಣಪ್ಪ' ಚಿತ್ರದ ಕಥೆಯನ್ನೇ ತೆಲುಗಿನಲ್ಲಿ ನಿರ್ಮಿಸಲಾಗಿತ್ತು. ಎರಡೂ ಚಿತ್ರಗಳನ್ನು ಹೆಚ್.ಎಲ್.ಎನ್. ಸಿಂಹ ನಿರ್ದೇಶಿಸಿದ್ದರು. ಕನ್ನಡದಲ್ಲಿ ಕಣ್ಣಪ್ಪನಾಗಿ ಮಿಂಚಿದ್ದ ರಾಜ್, ತೆಲುಗು ಆವೃತ್ತಿಯಲ್ಲಿ 'ತಿನ್ನಡು' ಪಾತ್ರ ನಿರ್ವಹಿಸಿ ಅಲ್ಲಿಯೂ ಮೆಚ್ಚುಗೆ ಗಳಿಸಿದರು. ಬಳಿಕ ಈ ಕಥೆ ತಮಿಳಿನಲ್ಲಿ 'ವೇಡನ್ ಕಣ್ಣಪ್ಪನ್' ಹೆಸರಿನಲ್ಲಿ ಬಿಡುಗಡೆಯಾಯಿತು.
ಈ ಚಿತ್ರದ ನಂತರ ಪರಭಾಷೆಗಳಿಂದ ಹಲವು ಅವಕಾಶಗಳು ಬಂದರೂ ರಾಜ್‌ಕುಮಾರ್ ಕನ್ನಡ ಚಿತ್ರರಂಗವನ್ನೇ ತಮ್ಮ ಕಾರ್ಯಕ್ಷೇತ್ರವನ್ನಾಗಿ ಆಯ್ಕೆ ಮಾಡಿಕೊಂಡರು. ಕನ್ನಡ ನಾಡು, ನುಡಿ ಮತ್ತು ಕಲೆಗೆ ಜೀವನವನ್ನೇ ಮುಡಿಪಾಗಿಟ್ಟ ಅವರ ಈ ನಿರ್ಧಾರ ಇಂದಿಗೂ ಅಭಿಮಾನಿಗಳ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.