Dr Rajkumar ಚಿತ್ರಗಳಿಗೆ ಕುಂಚ ಸ್ಪರ್ಶ: ಅಣ್ಣಾವ್ರ ಹುಟ್ಟುಹಬ್ಬಕ್ಕೆ ಅಭಿಮಾನಿಯ ಉಡುಗೊರೆ

By Govindaraj SFirst Published Apr 22, 2022, 3:16 AM IST
Highlights

ವರನಟ ಡಾ.ರಾಜಕುಮಾರ್‌ ಅಭಿಮಾನಿಯೊಬ್ಬರು ಅಣ್ಣಾವ್ರು ಅಭಿನಯಿಸಿರುವ ಎಲ್ಲ ಚಿತ್ರಗಳನ್ನು ಕುಂಚದಲ್ಲಿ ಅರಳಿಸಿ ನಟಸಾರ್ವಭೌಮನ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ನೀಡುವುದರೊಂದಿಗೆ ಅಭಿಮಾನ ಮೆರೆದಿದ್ದಾರೆ. 

ಮಂಡ್ಯ (ಏ.22): ವರನಟ ಡಾ.ರಾಜಕುಮಾರ್‌ (Dr Rajkumar) ಅಭಿಮಾನಿಯೊಬ್ಬರು (Fan) ಅಣ್ಣಾವ್ರು ಅಭಿನಯಿಸಿರುವ ಎಲ್ಲ ಚಿತ್ರಗಳನ್ನು ಕುಂಚದಲ್ಲಿ ಅರಳಿಸಿ ನಟಸಾರ್ವಭೌಮನ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ನೀಡುವುದರೊಂದಿಗೆ ಅಭಿಮಾನ ಮೆರೆದಿದ್ದಾರೆ. ಮಂಡ್ಯ ತಾಲೂಕು ಮರಲಿಂಗನದೊಡ್ಡಿ ಗ್ರಾಮದ ನರಸಿಂಹಾಚಾರ್‌ (Narasimhachar) ಅಪ್ಪಟ ಡಾ.ರಾಜಕುಮಾರ್‌ ಅಭಿಮಾನಿ. ಸಂತೆಕಸಲಗೆರೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಗರದ ಮೋನ ಆಟ್ಸ್‌ರ್‍ನಲ್ಲಿ ಚಿತ್ರಕಲಾವಿದರಾಗಿದ್ದ ನರಸಿಂಹಾಚಾರ್‌ ನಂತರ ಚಿತ್ರಕಲೆಯಲ್ಲಿ ಡಿಪ್ಲೋಮಾ ಪದವಿ ಪಡೆದುಕೊಂಡರು. ಇವರ ಚಿತ್ರಕಲೆಗೆ ಡಾ.ರಾಜಕುಮಾರ್‌ ಅವರೇ ಸ್ಫೂರ್ತಿ ಎನ್ನುತ್ತಾರೆ.

ಚಿಕ್ಕ ವಯಸ್ಸಿನಿಂದಲೂ ರಾಜ್‌ ಅಭಿನಯದ ಚಿತ್ರಗಳನ್ನೇ ನೋಡುತ್ತಾ ಬೆಳೆದ ನರಸಿಂಹಾಚಾರ್‌ ಅವರಿಗೇ ಗೊತ್ತಿಲ್ಲದಂತೆ ವರನಟನ ಅಭಿಮಾನಿಯಾದರು. 1986ರಲ್ಲೇ ಡಾ.ರಾಜಕುಮಾರ್‌ ನಟಿಸಿರುವ 100ಕ್ಕೂ ಹೆಚ್ಚು ಚಿತ್ರಗಳನ್ನು ಬರೆಯಲು ಆರಂಭಿಸಿದ್ದರು. ಆದರೆ, ಅನಿವಾರ್ಯ ಕಾರಣಗಳಿಂದ ಅದನ್ನು ಪೂರ್ತಿಗೊಳಿಸಲಾಗಲಿಲ್ಲ. ಮನೆಯಲ್ಲಿದ್ದ ಚಿತ್ರಗಳು ನೋಡಲು ಆಕರ್ಷಕವಾಗಿದ್ದರಿಂದ ಸ್ನೇಹಿತರು ತೆಗೆದುಕೊಂಡು ಹೋದರು. ಅವರ ನಟನೆಯ ಎಲ್ಲ ಚಿತ್ರಗಳನ್ನು ಚಿತ್ರರೂಪಕ್ಕಿಳಿಸುವ ಕನಸು ಕನಸಾಗಿಯೇ ಉಳಿಯಿತು. ಆನಂತರ ಚಿತ್ರಕಲೆಯಲ್ಲಿ ಡಿಪ್ಲೋಮಾ ಪದವಿ ಪಡೆದು 2004ರಲ್ಲಿ ಚಿತ್ರಕಲಾ ಶಿಕ್ಷಕರಾಗಿ ಕೆಲಸಕ್ಕೆ ಸೇರಿದರು.

Latest Videos

Dr Rajkumar Death Anniversary; ಕುಟುಂಬದವರಿಂದ ಅಣ್ಣಾವ್ರ ಸಮಾಧಿಗೆ ವಿಶೇಷ ಪೂಜೆ

2020 ಮತ್ತು 2021ರ ಲಾಕ್‌ಡೌನ್‌ ಸಮಯದಲ್ಲಿ ನರಸಿಂಹಾಚಾರ್‌ ಮನೆಯಲ್ಲೇ ಉಳಿಯಬೇಕಾದ ಪರಿಸ್ಥಿತಿ ಎದುರಾಯಿತು. ಆ ಸಮಯದಲ್ಲಿ ರಾಜ್‌ ಅವರ ಎಲ್ಲ ಚಲನಚಿತ್ರಗಳನ್ನು ಚಿತ್ರರೂಪಕ್ಕಿಳಿಸುವ ಕನಸು ಮತ್ತೆ ಚಿಗುರೊಡೆಯಿತು. ಮೊದಲು ತಮ್ಮ ಬಳಿ ಇದ್ದ 28 ಚಿತ್ರಗಳನ್ನು ಸೇರಿಸಿಕೊಂಡು ಅಲ್ಲಿಂದ ಮುಂದಕ್ಕೆ ಚಿತ್ರರಚನೆಗೆ ಮುಂದಾದರು. ಈ ಚಿತ್ರಲೇಖನದಲ್ಲಿ ರಾಜಕುಮಾರ್‌ ನಾಯಕನಟನಾಗಿ ನಟಿಸಿರುವ 206+03 (ಗೌರವ ನಟ) ಚಲನಚಿತ್ರಗಳನ್ನು ಪೆನ್ಸಿಲ್‌, ಪೆನ್‌ ಮತ್ತು ಕಲರ್‌ಗಳಲ್ಲಿ ರಚಿಸಿ ಎಲ್ಲಾ ಚಿತ್ರಗಳ ಶೀರ್ಷಿಕೆಗಳನ್ನು ಮೂಲ ವಿನ್ಯಾಸವನ್ನೇ ಆಧರಿಸಿ ಬರೆದಿದ್ದಾರೆ. ಜೊತೆಗೆ ಡಾ.ರಾಜ್‌ ಜೊತೆ ನಟಿಸಿರುವ ಎಲ್ಲಾ ಪ್ರಮುಖ ನಾಯಕಿಯರನ್ನು ಸೇರಿಸುವ ಪ್ರಯತ್ನ ಮಾಡಿದ್ದಾರೆ.

ಈ ಎಲ್ಲ ಚಿತ್ರಗಳನ್ನು ಕ್ರಮಸಂಖ್ಯೆಗೆ ಅನುಗುಣವಾಗಿ ಬಿಡುಗಡೆಯಾದ ವರ್ಷವನ್ನೂ ದಾಖಲಿಸಿದ್ದಾರೆ. ಚಿತ್ರಲೇಖನಕ್ಕೆ ಐದು ತಿಂಗಳ ಕಾಲಾವಧಿ ತೆಗೆದುಕೊಂಡಿರುವ ನರಸಿಂಹಾಚಾರ್‌, ಪ್ರತಿ ಚಿತ್ರರಚನೆಗೆ ಸರಾಸರಿ ಐದು ಗಂಟೆಗಳ ಸಮಯ ತೆಗೆದುಕೊಂಡಿದ್ದಾರೆ. ಅರ್ಧದಷ್ಟು ಚಿತ್ರಗಳನ್ನು ಫ್ರೀ-ಹ್ಯಾಂಡ್‌ ಮೆತೆಡ್‌ನಲ್ಲಿ, ಉಳಿದ ಅರ್ಧದಷ್ಟು ಚಿತ್ರಗಳನ್ನು ಗ್ರಾಫ್‌ (ಚೆಕ್ಸ್‌) ಮೆತೆಡ್‌ನಲ್ಲಿಯೂ ಬರೆದಿದ್ದಾರೆ. ಕನ್ನಡಪ್ರಭ ಪೇಪರ್‌ ಕಟಿಂಗ್ಸ್‌ಗಳನ್ನಿಟ್ಟುಕೊಂಂಡು ಫೇಸ್‌ಬುಕ್‌, ಗೂಗಲ್‌ನಲ್ಲಿ ಹುಡುಕಾಟ ನಡೆಸಿ ಎಲ್ಲ ಚಿತ್ರಗಳ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಈ ಚಿತ್ರಲೇಖನದ ಮೂಲಕ ನರಸಿಂಹಾಚಾರ್‌ ತಮ್ಮ ಬಹುದಿನಗಳ ಆಸೆಯಾಗಿದ್ದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಡಾ.ರಾಜ್‌ ಅಭಿನಯದ ಚಲನಚಿತ್ರಗಳನ್ನು ಸಮಸ್ತ ಜನರಿಗೆ ಮರು ನೆನಪಿಸುವ ಪ್ರಯತ್ನ ಇದಾಗಿದೆ.

ಕನಸು ನನಸಾಗಲಿಲ್ಲ: ಡಾ.ರಾಜಕುಮಾರ್‌ ಅವರು ಬದುಕಿದ್ದ ಸಮಯದಲ್ಲಿಯೇ ಚಿತ್ರಲೇಖನವನ್ನು ಪೂರ್ಣಗೊಳಿಸಿ ಅವರಿಂದಲೇ ಬಿಡುಗಡೆಗೊಳಿಸುವ ಉತ್ಕಟಾಕಾಂಕ್ಷೆಯಿಂದ ಚಿತ್ರರಚಿಸಲು ಶುರು ಮಾಡಿದೆ. ಅನಿವಾರ್ಯ ಕಾರಣಗಳಿಂದ ನೂರು ಚಿತ್ರಗಳನ್ನು ಪೂರೈಸಿದ್ದ ನನಗೆ ಮುಂದಿನ ನೂರು ಚಿತ್ರಗಳನ್ನು ಬಿಡಿಸಲು ಸಾಧ್ಯವಾಗಲೇ ಇಲ್ಲ. ಅಣ್ಣಾವ್ರ ಅಮೃತ ಹಸ್ತದಿಂದ ಚಿತ್ರಲೇಖನ ಬಿಡುಗಡೆ ಮಾಡಿಸಲು ಸಾಧ್ಯವಾಗಲಿಲ್ಲವೆಂಬ ನೋವು ನನ್ನನ್ನು ಸದಾ ಕಾಡುತ್ತಿದೆ. ಕೊನೆಗೆ ರಾಜ್‌ಕುಮಾರ್‌ ಕುಟುಂಬದ ಅಣ್ಣಾವ್ರ ಸಮಾಧಿ ಬಳಿ ಚಿತ್ರಲೇಖನ ಬಿಡುಗಡೆ ಮಾಡಿಸೋಣವೆಂದರೆ ಪುನೀತ್‌ ಸಾವು ಎದುರಾಯಿತು. ಅದಕ್ಕಾಗಿ ಅಭಿಮಾನಿಗಳಿಗೆ ಇದನ್ನು ಸಮರ್ಪಣೆ ಮಾಡುತ್ತಿದ್ದೇನೆ. ಅವರು ನೋಡಿ ಮೆಚ್ಚಿಕೊಂಡರೆ ನನ್ನ ಶ್ರಮವೂ ಸಾರ್ಥಕಗೊಳ್ಳುತ್ತದೆ ಎಂದು ಚಿತ್ರಪ್ರದರ್ಶನ ಆಯೋಜಿಸಿದ್ದಾರೆ.

ಏ.24ರಂದು ಚಿತ್ರಕಲಾ ಪ್ರದರ್ಶನ: ಚಿತ್ರಕಲಾ ಶಿಕ್ಷಕ ನರಸಿಂಹಾಚಾರ್‌ ಕುಂಚದಲ್ಲಿ ಅರಳಿರುವ ಪದ್ಮಭೂಷಣ ಡಾ.ರಾಜಕುಮಾರ್‌ ನಟಿಸಿರುವ ಎಲ್ಲ ಚಿತ್ರಗಳನ್ನು ನೆನಪಿಸುವ 206 ಚಿತ್ರಗಳ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಏ.24ರಂದು ಅಣ್ಣಾವ್ರ ಹುಟ್ಟುಹಬ್ಬ. ಅಂದೇ ನಗರದ ಬನ್ನೂರು ರಸ್ತೆಯಲ್ಲಿರುವ ಶ್ರೀಯೋಗಿನಾರೇಯಣ ಸಮುದಾಯ ಭವನದಲ್ಲಿ ಚಿತ್ರಪ್ರದರ್ಶನ ಏರ್ಪಡಿಸಲಾಗಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಚಿತ್ರಕಲಾ ಪ್ರದರ್ಶನವಿರಲಿದೆ.

Dr Rajkumar Statue ರಾಜ್‌ ಕುಮಾರ್‌ ಕಂಚಿನ ಪುತ್ಥಳಿ ಕದ್ದ ಅಪ್ರಾಪ್ತರು!

ನನ್ನ ಕನಸು ನನಸಾಗಿರುವುದಕ್ಕೆ ಖುಷಿಯಾಗುತ್ತಿದೆ. ಆದರೆ, ರಾಜಕುಮಾರ್‌ ಅವರಿಂದ ಬಿಡುಗಡೆ ಮಾಡಿಸಲು ಸಾಧ್ಯವಾಗಲಿಲ್ಲವೆಂಬ ಕೊರಗು ಇದ್ದೇ ಇದೆ. ಅಣ್ಣಾವ್ರ ಸಿನಿಮಾಗಳು ಮೌಲ್ಯಾಧಾರಿತ, ಸಾಮಾಜಿಕ ಸಂದೇಶವನ್ನು ಬೀರಿದಂತಹ ಅಪೂರ್ವ ಚಿತ್ರಗಳು. ಅವುಗಳು ಇಂದಿನ ಪೀಳಿಗೆಯವರಿಗೆ ಗೊತ್ತಾಗಬೇಕು. ಮಹಾನ್‌ ನಟನ ಚಿತ್ರಗಳು ಜನಮಾನಸದಲ್ಲಿ ಶಾಶ್ವತವಾಗಿ ಉಳಿಯಬೇಕೆಂಬ ಉದ್ದೇಶದಿಂದ ಚಿತ್ರರೂಪಕ್ಕಿಳಿಸಿದ್ದೇನೆ. ಅಭಿಮಾನಿಗಳು ಇದನ್ನು ಮೆಚ್ಚಿಕೊಂಡರೆ ನನ್ನ ಶ್ರಮ ಸಾರ್ಥಕ.
-ನರಸಿಂಹಾಚಾರ್‌, ಚಿತ್ರಕಲಾ ಶಿಕ್ಷಕರು

click me!