
ಬೆಂಗಳೂರು (ಅ.08): ಕನ್ನಡ ಚಿತ್ರರಂಗದ ನಟ ದರ್ಶನ್ ಅವರ ಬಂಧನ, ಜಾಮೀನು ರದ್ದು ಮತ್ತು ಕುಟುಂಬಕ್ಕೆ ನೀಡುತ್ತಿರುವ ತೊಂದರೆಗಳ ಹಿಂದಿನ ರಾಜಕೀಯ ಷಡ್ಯಂತ್ರದ ಹಾಗೂ ಸರ್ಕಾರದ ನಡೆಯ ವಿರುದ್ಧ ದರ್ಶನ್ ಅಭಿಮಾನಿಗಳ ಸಂಘಟನೆಗಳು ಸಿಡಿದೆದ್ದಿವೆ. ಅಖಿಲ ಕರ್ನಾಟಕ ಡಿ ಬಾಸ್ ಅಭಿಮಾನಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ನಡೆಸಲು ಕರೆ ನೀಡಲಾಗಿದ್ದು, ಈ ಎಲ್ಲ ಸಮಸ್ಯೆಗಳಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (ಡಿ.ಕೆ.ಶಿ.) ಅವರೇ ಸೂತ್ರಧಾರ ಎಂದು ನೇರವಾಗಿ ಆರೋಪಿಸಲಾಗಿದೆ.
ದರ್ಶನ್ ಅವರನ್ನು ಜೈಲಿಗೆ ಕಳುಹಿಸಿದ್ದು ಮತ್ತು ನಂತರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಹಾಕಿಸಿ ಜಾಮೀನು ರದ್ದು ಮಾಡಿಸಿದ್ದು 'ಕಳ್ಳ ಕಾಂಗ್ರೆಸ್ ಪಕ್ಷ' ಎಂದು ಅಭಿಮಾನಿ ಸಂಘವು ತೀವ್ರವಾಗಿ ಟೀಕಿಸಿದೆ. ದರ್ಶನ್ ನಾಯ್ಡು ಜಾತಿಯವರು. ಮುನಿರತ್ನಂ ಆಪ್ತ ಎಂಬ ಕಾರಣಕ್ಕೆ ಜೈಲಿನಿಂದ ಹೊರಬಂದ ಬಳಿಕ ದರ್ಶನ್ ಕಾಂಗ್ರೆಸ್ ಪರ ನಿಲ್ಲಲಿಲ್ಲ. ರಾಜರಾಜೇಶ್ವರಿ ನಗರದಲ್ಲಿ (ಆರ್.ಆರ್.ನಗರ) ಕುಸುಮಾ ಸೋಲಿಗೆ ದರ್ಶನ್ ಕಾರಣ ಎಂಬ ಅತಿರೇಕದಿಂದ ವರ್ತಿಸುತ್ತಿದ್ದ ಕಾಂಗ್ರೆಸ್‌ನವರಿಗೆ 'ರೇಣುಕಾಸ್ವಾಮಿ ಕೊಲೆ ಕೇಸು' ಒಂದು ಅಸ್ತ್ರವಾಗಿ ಸಿಕ್ಕಿತು ಎಂದು ಆರೋಪಿಸಲಾಗಿದೆ.
ಈ ಹಿಂದೆ ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರ ಗೆಲುವಿಗೆ ಯಶ್ ಮತ್ತು ದರ್ಶನ್ ಅವರು ಬೆಂಬಲ ನೀಡಿದ್ದರಿಂದಲೇ ಅದು ಡಿ.ಕೆ.ಶಿವಕುಮಾರ್ ಅವರ ಕೆಂಗಣ್ಣಿಗೆ ಗುರಿಯಾಗಿತ್ತು. ಜಾಮೀನು ಮಾಡಿಸಲು ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರನ್ನು ಮನೆಗೆ ಕರೆದು ಮಾತನಾಡಿಸಿ, ಬಿಜೆಪಿ ಮತ್ತು ಮುನಿರತ್ನಂ ಅವರನ್ನು ಬೆಂಬಲಿಸದಂತೆ ತಿಳಿಹೇಳಿದ ಕಾಂಗ್ರೆಸ್, ಈಗ ದರ್ಶನ್ ಮತ್ತು ಅವರ ಕುಟುಂಬಕ್ಕೆ ತೊಂದರೆ ನೀಡುವ ಮೂಲಕ ಹಿಂಸೆ ನೀಡುತ್ತಿದೆ. ಇದಕ್ಕೆಲ್ಲ ಸೂತ್ರಧಾರ ಹಾಗೂ ಪಾತ್ರದಾರ ಡಿ.ಕೆ. ಶಿವಕುಮಾರ್ ಅವರೇ ಎಂದು ಅಭಿಮಾನಿ ಸಂಘ ಸ್ಪಷ್ಟವಾಗಿ ಹೆಸರಿಸಿದೆ.
ಕಾಂಗ್ರೆಸ್ ಸರ್ಕಾರದ ವಿರುದ್ಧದ ಈ ಆಕ್ರೋಶಕ್ಕೆ ಮತ್ತೊಂದು ಘಟನೆಯನ್ನು ಜೋಡಿಸಿದ ಅಭಿಮಾನಿ ಸಂಘ, ಡಾ.ವಿಷ್ಣುವರ್ಧನ್ ಅವರಿಗೆ ಅವಮಾನಿಸಿದ್ದು ಮತ್ತು ಅವರ ಸಮಾಧಿಯನ್ನು ಕೆಡವಿ ಹಾಕಿದ್ದು ಇದೇ ಕಾಂಗ್ರೆಸ್ ಸರ್ಕಾರ ಎಂದಿದೆ. ಹೈಕೋರ್ಟ್‌ನಲ್ಲಿ ಕೇಸ್ ಇದ್ದರೂ ಅದನ್ನು ಬಗೆಹರಿಸದೇ, ಯಾವುದೇ ಸಮಸ್ಯೆಗಳನ್ನು ಪರಿಹರಿಸದೇ ಈಗ ಸರ್ಕಾರವು ಕರ್ನಾಟಕ ರತ್ನ ಪ್ರಶಸ್ತಿ ನೀಡಿ ನಾಟಕವಾಡುತ್ತಿದೆ. ಈ ನಾಟಕ ರಾಜ್ಯದ ಜನತೆಗೆ ತಿಳಿದಿದೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊನೆಯಲ್ಲಿ, ಅಭಿಮಾನಿ ಸಂಘವು ಮುಂಬರುವ ಚುನಾವಣೆಗಳಿಗೆ ಸಂಬಂಧಿಸಿದಂತೆ ಅಖಿಲ ಕರ್ನಾಟಕ ಮಟ್ಟದ ಕರೆಯನ್ನು ನೀಡಿದೆ. 'ದರ್ಶನ್ ಅಭಿಮಾನಿಗಳ, ಅವರ ಕುಟುಂಬದ ಅಭಿಮಾನಿಗಳ ಒಂದೇ ಒಂದು ಮತವು ಕಾಂಗ್ರೆಸ್‌ಗೆ ಬೇಡ. ನಮ್ಮ ತಾಕತ್ತು ಒಗ್ಗಟ್ಟು ತೋರಿಸೋಣ ಎಂದು ಪ್ರಕಟಿಸಿದೆ. ಯಾರೇ ಗೆಲ್ಲಲಿ, ಯಾವುದೇ ಪಕ್ಷ ಗೆಲ್ಲಲಿ, ಕಾಂಗ್ರೆಸ್ ಮಾತ್ರ ಸೋಲಬೇಕು. ಮುಖ್ಯವಾಗಿ ಡಿ.ಕೆ. ಶಿವಕುಮಾರ್ ಸೋಲಬೇಕು. ದರ್ಶನ್ ಅಭಿಮಾನಿಗಳ ತಾಕತ್ತು ಮತಗಳಾಗಿ ಪರಿವರ್ತನೆಯಾಗಲಿ ಎಂದು ಕರೆ ನೀಡಿದೆ. ಮುಂದಿನ ದಿನಗಳಲ್ಲಿ ದರ್ಶನ್ ಅವರು ಸ್ವತಂತ್ರವಾಗಿ ಸ್ಪರ್ಧಿಸಿ ಚುನಾಯಿತ ಸದಸ್ಯರಾಗುವ ಮೂಲಕ ತಮ್ಮ ಜನಬೆಂಬಲವನ್ನು ಸಾಬೀತುಪಡಿಸಲಿ ಎಂಬ ಆಶಯವನ್ನು ಕೂಡ ಅಭಿಮಾನಿ ಸಂಘವು ವ್ಯಕ್ತಪಡಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.