ಇಷ್ಟು ಬೇಗ ತವರುಮನೆ, ಆ oneway ಸ್ವರ್ಗಕ್ಕೆ ಹೋಗುವ ಆತುರವೇನಿತ್ತು? ; ಸ್ಪಂದನಾ ವಿಜಯ್‌ ಬಾಲ್ಯದ ಬಗ್ಗೆ ರೇಖಾರಾಣಿ ಕಾಶ್ಯಪ್

Published : Aug 07, 2023, 12:28 PM ISTUpdated : Aug 07, 2023, 12:31 PM IST
ಇಷ್ಟು ಬೇಗ ತವರುಮನೆ, ಆ oneway ಸ್ವರ್ಗಕ್ಕೆ ಹೋಗುವ ಆತುರವೇನಿತ್ತು? ; ಸ್ಪಂದನಾ ವಿಜಯ್‌ ಬಾಲ್ಯದ ಬಗ್ಗೆ ರೇಖಾರಾಣಿ ಕಾಶ್ಯಪ್

ಸಾರಾಂಶ

ಸ್ಪಂದನಾ ವಿಜಯ್‌ ರಾಘವೇಂದ್ರ ಸೌಮ್ಯ ಮುಖದ ಸುಂದರ ಹಠಮಾರಿ ಎಂದು ನಿರ್ದೇಶಕಿ ರೇಖಾರಾಣಿ ಕಾಶ್ಯಪ್ ಬರೆದುಕೊಂಡಿದ್ದಾರೆ.   

ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಬಾಂಕಾಕ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸ್ಪಂದನಾ ವ್ಯಕ್ತಿತ್ವ ಹೇಗೆ, ಎಷ್ಟು ಸಿಂಪಲ್ ಅನ್ನೋ ವಿಚಾರ ಇಷ್ಟು ದಿನ ವಿಜಯ್ ಮಾತ್ರ ಹೇಳುತ್ತಿದ್ದರು ಆದರೆ ಮೊದಲ ಸಲ ನಿರ್ದೇಶಕಿ ರೇಖಾರಾಣಿ ಕಾಶ್ಯಪ್ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಸ್ಪಂದನಾ! ನನ್ನ ಅಚ್ಚು!
ಅವಳು ಹುಟ್ಟಿದಾಗಿನಿಂದ ಇದುವರೆಗೂ ನಾನವಳನ್ನು ಆ ಹೆಸರಿನಿಂದ ಕರೆದೇ ಇಲ್ಲ. ಕರೆದುದೆಲ್ಲಾ ಅಚ್ಚು ಎಂದೇ!.
ಸೌಮ್ಯ ಮುಖದ ಸುಂದರ ಹಠಮಾರಿ. ಆಸೆಪಟ್ಟಿದ್ದನ್ನು ನೆರವೇರಿಸಲು ಅಪ್ಪ ಅಮ್ಮ, ಅಣ್ಣ ತುದಿಗಾಲಲ್ಲಿ ನಿಂತಿರುತ್ತಿದ್ದರು. ನಂತರ ಬಂದ ಗಂಡ ವಿಜಯರಾಘವೇಂದ್ರನೋ! ದೇವಾ, ಅಳತೆ ಮಾಡಿಟ್ಟ ಹಾಗೆ ಸಿಕ್ಕ ಅಮೂಲ್ಯ ವಜ್ರ. ಆತನ ಪ್ರಪಂಚದಲ್ಲಿ ಮೊದಲು ಪ್ರೀತಿಯ ಪತ್ನಿಗೆ ಸ್ಥಾನ. ನಂತರ ಮಿಕ್ಕೆಲ್ಲ. 

KETO DIET ಅಪಾಯಕಾರಿ; ಇದ್ದಕ್ಕಿದ್ದಂತೆ 16 ಕೆಜಿ ತೂಕ ಇಳಿಸಿಕೊಂಡ ಸ್ಪಂದನಾ!

ಬಹಳ ಮುಗ್ದೆಯಾಗಿದ್ದ ನನ್ನ ಅಚ್ಚುವನ್ನು ಒಮ್ಮೆ ಸದಾಶಿವನಗರ ಪಾರ್ಕ್ ಬಳಿ ಹರೆಯದ ಹುಡುಗನೊಬ್ಬನ ಜೊತೆ ಕಾರಿನಲ್ಲಿ ಕುಳಿತು ಹರಟೆಹೊಡೆಯುತ್ತಿದ್ದುದ್ದನ್ನು ಕಂಡು ಜೀವ ಬಾಯಿಗೆ ಬಂದಿತ್ತು. ಅವಳಪ್ಪ ಬಿ.ಕೆ. ಶಿವರಾಂ ಮೊದಲೇ ಹುಲಿ. ' ನಿನ್ನ ಪ್ರಾಣಪಕ್ಷಿ ಎಲ್ಲಿಟ್ಟಿದ್ದೀಯ ಹೇಳು' ಎಂದು ರೇಗಿಸಿದಾಗಲೆಲ್ಲಾ ಮಗಳನ್ನು ಮುದ್ದುಮಾಡುತ್ತಾ ' ಅಚ್ಚು ಒಳಗಿದೆ ನನ್ನ ಪ್ರಾಣಪಕ್ಷಿ' ಎನ್ನುತ್ತಿದ್ದ. ಅಪ್ಪನ ಅಪಾರ  ಪ್ರೀತಿ ಅವಳ confidence levelನ್ನು ಸದಾ ಉತ್ತುಂಗದಲ್ಲಿಟ್ಟಿತ್ತು. ಇಂತಹ ಅಪ್ಪನ ಬಳಿ ಮಗಳ ಹಿತರಕ್ಷಣೆಯ ದೃಷ್ಟಿಯಿಂದ ಚಾಡಿ ಹೇಳಲೋ? ಬೇಡವೊ? ಎಂದು ಬಹಳ ದಿನ ಒದ್ದಾಡಿದ್ದೆ. ನಂತರ ಕರೆಮಾಡಿ ನಿನ್ನ ಜೊತೆ ಕಾರಿನಲ್ಲಿದ್ದ ಹುಡುಗನ ವಿವರ ಕೊಡು ಎಂದೆ. ' ಆಂಟಿ, ನಾನು ಮದುವೆಯಾದರೆ ಅವರನ್ನೇ...ಅಪ್ಪನನ್ನು ಒಪ್ಪಿಸಿ' ಎಂದಳು. ಎಷ್ಟು ಹಠಮಾಡಿದರೂ ಹುಡುಗ ಯಾರೆಂದು ಹೇಳುತ್ತಿಲ್ಲ. ಕಡೆಗೆ ' ಆಂಟಿ, ಸಿನೆಮಾದವನು ಅಂದರೆ ನೀವೆಲ್ಲಾ ಬೇಡ ಅನ್ನುತ್ತೀರಿ. ಅದಕ್ಕೆ ಅವರ ಹೆಸರು ಹೇಳೊಲ್ಲ' ಎಂದಳು. ಹಾಗಾದರೆ ನಾನೂ ನಿನ್ನ ಪ್ರೀತಿಗೆ ಸಪೋರ್ಟ್ ಮಾಡೊಲ್ಲ ಎಂದೆ.

ಅಚ್ಚು ಮೇಲೆ ಕಣ್ಗಾವಲು ಹಾಕಿದರೂ ನನ್ನ ಕೈಗೆ ಎಲ್ಲೂ ಸಿಕ್ಕಿಹಾಕಿಕೊಳ್ಳದ ಜಾಣತನ ತೋರುವಷ್ಟು ದೊಡ್ಡವಳಾಗಿಬಿಟ್ಟಿದ್ದಳು. ಬಹಳ ಗಲಾಟೆ ಮಾಡಿದ ನಂತರ ಸಣ್ಣ ಧ್ವನಿಯಲ್ಲಿ ಹೇಳಿದಳು ಚಿನ್ನಾರಿ ಮುತ್ತ!
ಈ ಮಧ್ಯೆ ನನ್ನ ಆಪ್ತ ಹಾಗೂ ನನ್ನ soulmate ಶಿವರಾಂಗೆ ಅಚ್ಚು ವಿಷಯ ಹೇಳಲೇಬೇಕೆಂದು ನಿರ್ಧರಿಸಿದ್ದರೂ, ಷೂಟಿಂಗ್ ನಲ್ಲಿ ಬಿಜಿಯಾದೆ. 

ಬೆಳಿಗೆ ಬೆಳಿಗ್ಗೆ ಶಿವರಾಂ ಕರೆ. ' ನಿನ್ನ ಮಗಳು ಅಚ್ಚುಗೆ ಮದುವೆ ಮಾಡ್ತಿದ್ದೀನಿ ಅಂತ! ಮತ್ತೆ ನನ್ನ ಜೀವ ಬಾಯಿಗೆ ಬಂತು. ಹು..ಡು...ಗ..ಯಾರು? ಎಂದೆ ನಡುಗುವ ಧ್ವನಿಯಲ್ಲಿ. ಯಾವುದೇ ಕಾರಣಕ್ಕೂ ಅಚ್ಚು ಕನಸು ಛಿದ್ರವಾಗುವುದು ನನಗಿಷ್ಟವಾಗಿರಲಿಲ್ಲ. ಏಕೆಂದರೆ ನಮ್ಮ ಪಾಲಿಗೆ ಅವಳು ಸ್ವರ್ಗದಿಂದ ನೇರವಾಗಿ ನಮ್ಮ ಕೈಗೆ ಸಿಕ್ಕ ಹೂವು.
ನಿಧಾನವಾಗಿ, ಸಮಾಧಾನಕರವಾದ ಧ್ವನಿಯಲ್ಲಿ ಶಿವರಾಂ ಹೇಳಿದ್ದು  ' ಅಚ್ಚನೇ ಆರಿಸಿಕೊಂಡಿದ್ದಾಳೆ. ವಿಜಯರಾಘವೇಂದ್ರ. ಒಳ್ಳೆ ಹುಡುಗನನ್ನೇ ಆರಿಸಿಕೊಂಡಿದ್ದಾಳಲ್ವಾ?'
ಶಿವರಾಂ ಮಾತು ಕೇಳುತ್ತಿದ್ದಂತೆ ನೂರಾರು ಬಂಡೆಗಳು ತಲೆಯಿಂದ ಕೆಳಗೆ ಇಳಿದ ಸುಂದರ ಅನುಭವ. 
ಇಲ್ಲಿ ವಿಜಯರಾಘವೇಂದ್ರ ಪುಣ್ಯ ಮಾಡಿದ್ದನೋ...ಅಚ್ಚು ಪುಣ್ಯಮಾಡಿದ್ದಳೋ ಗೊತ್ತಿಲ್ಲ ಅವರ ದಾಂಪತ್ಯಜೀವನ ಸ್ವರ್ಗದ ಗೋಡೆಗಳಿಂದ ರಚನೆಯಾಗಿತ್ತು.

ನಮ್ದು ಲವ್ ಮ್ಯಾರೇಜ್‌ ಅಲ್ಲ ಪಕ್ಕಾ ಅರೇಂಜ್ಡ್‌ ಮ್ಯಾರೇಜ್; ವಿಜಯ್ ರಾಘವೇಂದ್ರ-ಸ್ಪಂದನಾ ಮ್ಯಾರೇಜ್ ಸ್ಟೋರಿ!

ನಾನವಳನ್ನು ಆಗಾಗ್ಗೆ ಚಿನ್ನಾರಿ ಮುತ್ತಿ ಎಂದರೆ ಅಲ್ಲ, ನಾನು ಅಚ್ಚು ಎನ್ನುತ್ತಿದ್ದಳು.
 ಅಚ್ಚು ಚಿಕ್ಕವಳಿದ್ದಾಗ ಅವಳ ಮಾವನ ಮನೆ ಬೆಳ್ತಂಗಡಿಯಲ್ಲಿ ಷೂಟಿಂಗ್ ಮಾಡುತ್ತಿದೆ. ಹಗಲು ರಾತ್ರಿ ನಡೆಯುತ್ತಿದ್ದ ಧಾರಾವಾಹಿ. ಪುಟ್ಟಿ ನನ್ನ ಹೆಗಲಿಗಂಟಿಕೊಂಡು ಹಗಲೂ ರಾತ್ರಿ ಬೇಸರವಿಲ್ಲದೆ ಆಸಕ್ತಿಯಿಂದ ಷೂಟಿಂಗ್ ನೋಡುತ್ತಿದ್ದಳು. ಒಮ್ಮೆ ಧಾರಾವಾಹಿಗೆ ಸಂಭಾಷಣೆ ಬರೆಯುತ್ತಾ ಕುಳಿತಿದ್ದೆ. ಮುಖ ಊದಿಸಿಕೊಂಡು ಹತ್ತಿರ ಬಂದು 'ಸೌಮ್ಯವಾದ ಕೋಪದಿಂದ' ' ಆಂಟಿ ನಾನು ಅವತ್ತಿಂದ ನೋಡ್ತಿದ್ದೀನಿ. ಧಾರಾವಾಹಿಯಲ್ಲಿ ನನ್ನ ಹೆಸರು ಯಾಕೆ ಇನ್ನೂ ಬಂದಿಲ್ಲ?' ಎಂದು ಕೇಳಿದಳು. ನನಗರ್ಥವಾಯ್ತು, ತನ್ನ ಪ್ರೀತಿಪಾತ್ರ ಆಂಟಿ ತನ್ನ ಹೆಸರಲ್ಲದೆ ಬೇರೆ ಹೆಸರುಗಳನ್ನು ಪಾತ್ರಗಳಿಗೆ ಇಡಲು ಸಾಧ್ಯವೆ? ಪಟ್ಟನೆ ನಾನು ಎಚ್ಚೆತ್ತು ಹೇಳಿದೆ ' ಅಚ್ಚು ಮುಂದಿನ ಸೀರಿಯಲ್ ನಲ್ಲಿ ಮುಖ್ಯಪಾತ್ರಧಾರಿಯ ಹೆಸರು ಅಚ್ಚು ಅಂತಾನೇ ಇರುತ್ತೆ ನೋಡು. 
ಪ್ರಾಮಿಸ್? ಎಂದಳು
ಪ್ರಾಮಿಸ್ ಎಂದೆ. ಅದರಂತೆ ನನ್ನ ಮುಂದಿನ ಮಕ್ಕಳ ಧಾರಾವಾಹಿ ಜಿಂ ಜಿಂ ಜಿಂಬಾದಲ್ಲಿ ಮುಖ್ಯಪಾತ್ರಧಾರಿಯ ಹೆಸರು ಅಚ್ಚು ಅಂತಾನೇ ಇಟ್ಟೆ
 ಮತ್ತೆ ಅವಕಾಶ ಸಿಕ್ಕಾಗಲೆಲ್ಲಾ ಅಚ್ಚುಗಳು ನನ್ನ ಎಲ್ಲಾ ಸೀರಿಯಲ್ ಗಳಲ್ಲೂ ಓಡಾಡಿಬಿಟ್ಟರು.
ಅಚ್ಚು..ಈ ಭೂಮಿಗೆ ಬರಲು ಒಳ್ಳೆಯ ಅಪ್ಪ, ಅಮ್ಮಂದಿರ ಆಯ್ಕೆ ಸರಿಯಾಗಿತ್ತು. ಅಣ್ಣನ ಆಯ್ಕೆ ಅದೃಷ್ಟದಿಂದ ಕೂಡಿತ್ತು, ಗಂಡನ ಆಯ್ಕೆಗೆ ಸ್ವರ್ಗದಿಂದ ದೇವತೆಗಳೆಲ್ಲಾ ಬಂದು ಹರಸಿದರು. ಮಗನ ಆಯ್ಕೆಯೂ ಸ್ವರ್ಗದಿಂದ ಬಂದ ಮುದ್ದಾದ ದೇವರಾಗಿತ್ತು. ಇಲ್ಲೇ ಸ್ವರ್ಗ ಸೃಷ್ಟಿಸಿದ್ದ ನೀನು, ಇಷ್ಟುಬೇಗ ನಿನ್ನ ತವರುಮನೆ oneway ಆ ಸ್ವರ್ಗಕ್ಕೆ ಹೋಗುವ ಆತುರವೇನಿತ್ತು? ಮರಳಿಬಾರದ ಲೋಕಕ್ಕೆ ಹೋಗಿಬಿಟ್ಟಿದ್ದೀಯ...
ಅಲ್ಲೂ ಹೀಗೆ ಸುಖವಾಗಿರು ಕಂದಾ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?