ತೆರೆ ಮೇಲೆ ಭೂಗತ ಲೋಕದ ಪುಟಗಳು;ಅದ್ದೂರಿಯಾಗಿ ಸೆಟ್ಟೇರಿದ ಎಂಆರ್‌ ಚಿತ್ರ!

By Kannadaprabha NewsFirst Published Dec 18, 2020, 10:37 AM IST
Highlights

ನಿರ್ದೇಶಕ ರವಿಶ್ರೀವತ್ಸ ಅವರು ಮುತ್ತಪ್ಪ ರೈ ಅವರ ಜೀವನ ಪುಟಗಳನ್ನು ತೆರೆ ಮೇಲೆ ತರುತ್ತಿದ್ದಾರೆ, ಅದರ ಪೂರ್ವ ತಯಾರಿಯ ಭಾಗವಾಗಿ ಚಿತ್ರದ ನಾಯಕನ ಅದ್ದೂರಿ ಫೋಟೋ ಶೂಟ್‌ ಕೂಡ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.

ಇತ್ತೀಚೆಗೆ ಈ ಚಿತ್ರಕ್ಕೆ ಅಷ್ಟೇ ಕಲರ್‌ಫುಲ್ಲಾಗಿ ಮುಹೂರ್ತ ನಡೆಯಿತು. ಬಹುಶಃ ಲಾಕ್‌ಡೌನ್‌ ನಂತರ ಇಷ್ಟುದೊಡ್ಡ ಮಟ್ಟಕ್ಕೆ ಮುಹೂರ್ತ ಮಾಡಿಕೊಂಡ ಚಿತ್ರ ಇದೇ ಇರಬೇಕು. ಚಿತ್ರರಂಗದ ಹಲವು ಗಣ್ಯರು ಆಗಮಿಸಿ ಚಿತ್ರಕ್ಕೆ ಶುಭ ಕೋರಿದರು. ಈ ಹಿಂದೆ ‘ಡೆಡ್ಲಿ ಸೋಮ’ ಚಿತ್ರವನ್ನು ನಿರ್ಮಿಸಿದ ಶೋಭ ರಾಜಣ್ಣ ಅವರೇ ಈ ಚಿತ್ರದ ನಿರ್ಮಾಪಕರು. ಅವರ ಪುತ್ರ ದೀಕ್ಷಿತ್‌ ಚಿತ್ರದ ನಾಯಕ. ಕೇರಳ ನಟಿ ಸೌಮ್ಯ ಮೆನನ್‌ ಚಿತ್ರದ ನಾಯಕಿ. ಗುರು ಕಿರಣ್‌ ಸಂಗೀತ, ಮಾಥ್ಯೂ ರಾಜನ್‌ ಛಾಯಾಗ್ರಾಹಣ ಚಿತ್ರಕ್ಕಿದೆ.

ಮುತ್ತಪ್ಪ ರೈ ಬಯೋಪಿಕ್‌ 'MR' ಚಿತ್ರದ ಮುಹೂರ್ತ! 

ರವಿಶ್ರೀವತ್ಸ ಮಾತಿಗೆ ನಿಂತರು. ‘ಹಲವು ವರ್ಷಗಳಿಂದ ಈ ಚಿತ್ರವನ್ನು ನಿರ್ಮಿಸಬೇಕೆಂದು ಕಾಯುತ್ತಿದ್ದೆ. ಮುತ್ತಪ್ಪ ರೈ ಅವರು ಬದುಕಿದ್ದಾಗಲೇ ಈ ಕತೆ ಮಾಡಿಕೊಂಡಿದ್ದೆ. ಆಗ ಅವರನ್ನು ಭೇಟಿ ಕತೆ ಕೂಡ ಹೇಳಿದ್ದೆ. ಆದರೆ, ಅವರಲ್ಲಿ ಇದ್ದ ಭಯ ಈ ಚಿತ್ರ ಆಗ ಮಾಡಲು ಆಗಲಿಲ್ಲ. ಆ ಮೇಲೆ ತುಂಬಾ ಮಂದಿ ಎಂಆರ್‌ ಬಯೋಗ್ರಫಿಯನ್ನು ಸಿನಿಮಾ ಮಾಡಲು ಹೋದರು. ಅದು ಆಗಲ್ಲ ಅಂತ ನನಗೆ ಗೊತ್ತಿತ್ತು. ಒಬ್ಬ ಸಾಮಾನ್ಯ ವ್ಯಕ್ತಿಯ ನೋವನ್ನು ನಾನು ಆ ಚಿತ್ರದ ಮೂಲಕ ಹೇಳುತ್ತಿದ್ದೇನೆ. ಒಬ್ಬ ವ್ಯಕ್ತಿಯನ್ನು ವ್ಯವಸ್ಥೆ ಹೇಗೆ ಬಳಸಿಕೊಳ್ಳುತ್ತದೆ ಎಂಬುದನ್ನು ಈ ಚಿತ್ರದಲ್ಲಿ ನೋಡಬಹುದು. ಹಾಗೆ ರೌಡಿಸಂ ಜತೆಗೆ ಪ್ರೇಮ ಕತೆಯನ್ನು ಹೇಳುತ್ತಿದ್ದೇನೆ. ಈ ಕತೆ ನಡೆಯುವುದು 1952 ರಿಂದ 1989 ನಡುವೆ. ಜನವರಿಯಿಂದ ಚಿತ್ರೀಕರಣ ಶುರುವಾಗಲಿದೆ’ ಎಂದರು ರವಿಶ್ರೀವತ್ಸ.

ಮುತ್ತಪ್ಪ ರೈ ಚಿತ್ರಕ್ಕೆ ಸೌಮ್ಯಾ ಮೆನನ್‌ ನಾಯಕಿ; 'MR' ಸಿನಿಮಾದಲ್ಲಿ ಕೇರಳದ ಬ್ಯೂಟಿ! 

ಒಟ್ಟು ಈ ಚಿತ್ರದ ಕತೆ ಮೂರು ಭಾಗಗಳಲ್ಲಿ ಬರಲಿದೆ. ಅಲ್ಲಿಗೆ ‘ಎಂಆರ್‌’ ಎಂಬುದು ಮೂರು ಪಾರ್ಟ್‌ಗಳ ಸಿನಿಮಾ. ಈ ಚಿತ್ರದ ನಾಯಕ ದೀಕ್ಷಿತ್‌ ಅವರಿಗೆ ಮೊದಲ ಚಿತ್ರವೇ ದೊಡ್ಡ ನಿರ್ದೇಶಕರ ಆ್ಯಕ್ಷನ್‌ ಕಟ್‌ನಲ್ಲಿ ಬರುತ್ತಿರುವುದಕ್ಕೆ ಖುಷಿಗೊಂಡಿದ್ದರು. ‘ಎಂಆರ್‌’ ಚಿತ್ರದ ಕತೆ ಹೇಳುವಾಗ ತುಂಬಾ ಖುಷಿಯಿಂದ ಕೇಳುತ್ತಿದ್ದರಂತೆ. ತಮ್ಮ ತಂದೆ ನಿರ್ಮಾಪಕ ಎನ್ನುವ ಕಾರಣಕ್ಕೆ ಸುಮ್ಮನೆ ಹೀರೋ ಆಗುತ್ತಿಲ್ಲವಂತೆ. ಸಾಕಷ್ಟುತಯಾರಿ ಮಾಡಿಕೊಂಡೇ ಈ ಚಿತ್ರದಲ್ಲಿ ನಟಿಸುತ್ತಿರುವುದಾಗಿ ದೀಕ್ಷಿತ್‌ ಹೇಳಿಕೊಂಡರು. ‘15 ವರ್ಷಗಳ ನಂತರ ರವಿಶ್ರೀವತ್ಸ ಅವರ ಜತೆ ಕೆಲಸ ಮಾಡುತ್ತಿದ್ದೇನೆ. ರೌಡಿಸಂ ಸಿನಿಮಾ ಆದರೂ ಸಂಗೀತಕ್ಕೆ ಹೆಚ್ಚು ಜಾಗ ಇದೆ. ನಿರ್ದೇಶಕರು ವೈಲೆನ್ಸ್‌ ಮಾಡಿದರೆ ನಾನು ವೈಲೆನ್‌ ನುಡಿಸುತ್ತೇನೆ. ಲಾಂಗ್‌ ಎತ್ತಿದರೆ ಸಾಂಗ್‌ ಶುರುವಾದಂತೆ’ ಎಂದು ತಮ್ಮದೇ ಸ್ಟೈಲಿನಲ್ಲಿ ಚಿತ್ರದ ಹಾಡುಗಳ ಬಗ್ಗೆ ಹೇಳಿದ್ದು ಸಂಗೀತ ನಿರ್ದೇಶಕ ಗುರು ಕಿರಣ್‌ ಅವರು.

ಭೂಗತ ಲೋಕದಲ್ಲಿ ಅತ್ಯಂತ ಬುದ್ಧಿವಂತ ಹಾಗೂ ನಯವಂಚಕ ಎನಿಸಿಕೊಂಡವರು ಆಯಿಲ್‌ ಕುಮಾರ ಎಂಬುದು ಆ ದಿನಗಳ ಪೊಲೀಸ್‌ ದಾಖಲೆಗಳು ಹಾಗೂ ರೌಡಿಸಂ ಪುಟಗಳು ಹೇಳುತ್ತವೆ. ಅಂಥ ವಂಚಕನ ಪಾತ್ರದಲ್ಲಿ ಪ್ರಶಾಂತ್‌ ಸಂಬರಗಿ ನಟಿಸುತ್ತಿದ್ದಾರೆ. ನಟನೆ ಜತೆಗೆ ಈ ಚಿತ್ರಕ್ಕೆ ಎದುರಾಗುವ ಕಾನೂನಿ ತೊಡಕುಗಳನ್ನು ನಿವಾರಿಸುವ ನಿಟ್ಟಿನಲ್ಲೂ ಪ್ರಶಾಂತ್‌ ಸಂಬರಗಿ ಚಿತ್ರತಂಡಕ್ಕೆ ನೆರವಾಗಿದ್ದಾರಂತೆ. ನಟ ಅರವಿಂದ್‌ ರಾವ್‌ ಅವರು ಇಲ್ಲಿ ಬೆಕ್ಕಿನಕಣ್ಣು ರಾಜೇಂದ್ರನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ‘ಎಲ್ಲರು ಸೇರಿ ಒಂದು ಅದ್ದೂರಿಯಾದ ಚಿತ್ರವನ್ನು ನಿರ್ಮಿಸುತ್ತಿದ್ದೇವೆ. ಕನ್ನಡಕ್ಕೆ ಇದೊಂದು ದೊಡ್ಡ ಬಜೆಟ್‌ನ ಸಿನಿಮಾ ಆಗಲಿದೆ’ ಎಂದರು ನಿರ್ಮಾಪಕ ಶೋಭ ರಾಜಣ್ಣ ಅವರು.

click me!