'ಒಬ್ಬ ಸಾಧಕನಿಗೆ ಈ ಅಪಮಾನ ಸರಿಯಲ್ಲ..' ವಿಷ್ಣು ಸಮಾಧಿ ನೆಲಸಮ ಕುರಿತು ಧ್ರುವ ಸರ್ಜಾ ಆಕ್ರೋಶ

Published : Aug 09, 2025, 02:53 PM IST
Dhruva Sarja

ಸಾರಾಂಶ

ಡಾ. ವಿಷ್ಣುವರ್ಧನ್ ಅವರ ಅಭಿಮಾನ್ ಸ್ಟುಡಿಯೋದಲ್ಲಿದ್ದ ಸಮಾಧಿಯನ್ನು ತೆರವುಗೊಳಿಸಿದ್ದಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಚಾರದಲ್ಲಿ ನಟ ಧ್ರುವ ಸರ್ಜಾ ಅವರು ಅಭಿಮಾನಿಗಳ ಪರ ನಿಂತಿದ್ದು, 'ಸಾಧಕನಿಗೆ ಈ ಅಪಮಾನ ಸರಿಯಲ್ಲ' ಎಂದು ಹೇಳಿದ್ದಾರೆ. 

ಬೆಂಗಳೂರು (ಆ.9): ಅಭಿಮಾನ್‌ ಸ್ಟುಡಿಯೋದಲ್ಲಿದ್ದ ಸಾಹಸಸಿಂಹ ಡಾ. ವಿಷ್ಣುವರ್ಧನ್‌ ಅವರ ಸಮಾಧಿಯನ್ನು ರಾತ್ರೋರಾತ್ರಿ ತೆಗೆದುಹಾಕಲಾಗಿದೆ. ಈ ಕುರಿತಂತೆ ವಿಷ್ಣುವರ್ಧನ್‌ ಅಭಿಮಾನಿಗಳು ಅಭಿಮಾನ್‌ ಸ್ಟುಡಿಯೋದ ಜಾಗ ಹೊಂದಿರುವ ಬಾಲಣ್ಣ ಅವರ ಕುಟುಂಬ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕನ್ನಡ ಸಿನಿಮಾರಂಗದ ಹಿರಿಯ ತಾರೆಯ ಸಮಾಧಿಯನ್ನು ರಾತ್ರೋರಾತ್ರಿ ನೆಲಸಮ ಮಾಡಲಾಗಿದ್ದರೂ ಸ್ಯಾಂಡಲ್‌ವುಡ್‌ನ ಯಾವೊಬ್ಬ ಸ್ಟಾರ್‌ ನಟ ಕೂಡ ಇದರ ಬಗ್ಗೆ ಮಾತನಾಡಿರಲಿಲ್ಲ.

ಅಲ್ಲೊಂದು ಇಲ್ಲೊಂದು ಕೆಲವೊಂದು ಮಾತುಗಳು ಬಿಟ್ಟರೆ, ನೆಲಸಮ ಮಾಡಿರುವ ವಿಚಾರ ತಪ್ಪು ಇದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ನೇರವಾಗಿ ಮಾಧ್ಯಮದ ಮುಂದೆ ಯಾವೊಬ್ಬ ಸ್ಟಾರ್‌ ನಟ ಕೂಡ ಹೇಳಿಲ್ಲ.

ಇದರ ನಡುವೆ ಸ್ಟಾರ್‌ ನಟ ಧ್ರುವ ಸರ್ಜಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, 'ಒಬ್ಬ ಸಾಧಕನಿಗೆ ಈ ಅಪಮಾನ ಸರಿಯಲ್ಲ' ಎಂದು ಹೇಳಿದ್ದು ಮಾತ್ರವಲ್ಲದೆ, ಅಭಿಮಾನಿಗಳ ಜೊತೆ ನಾನಿದ್ದೇನೆ. ಅವರ ಮುಂದಿನ ನಡೆಗೆ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಬರೆದಿರುವ ಅವರು, 'ಸಾಧಕನಿಗೂ ಸಾವಿಲ್ಲ ಕಲೆಗೂ ಸಾವಿಲ್ಲ ವಿಷ್ಣು ಅಪ್ಪಾಜಿ ಅಜರಾಮರ ... ಕೋಟ್ಯಾಂತರ ಕನ್ನಡಿಗರ ಹೃದಯದಲ್ಲಿ ಗುಡಿ ಕಟ್ಟಿರುವ ವ್ಯಕ್ತಿಗೆ ಸ್ಮಾರಕ ಏಕೆ ಬೇಕು, ಆದರೂ ಸಹ ಈ ಒಂದು ನಾಡಿನಲ್ಲಿ ಇಂಥ ಒಬ್ಬ ಸಾಧಕನಿಗೆ ಈ ಅಪಮಾನ ಸರಿಯಲ್ಲ ಮನಸ್ಸಿಗೆ ಬಹಳಷ್ಟು ನೋವು ಉಂಟಾಗಿದೆ ಕೇಳಲು ಸಾಕಷ್ಟು ಪ್ರಶ್ನೆಗಳಿವೆ ಆದರೆ ಇದೆಲ್ಲದಕ್ಕೂ ಉತ್ತರ ನಾನು ಒಬ್ಬ ಕನ್ನಡಿಗನಾಗಿ ಒಬ್ಬ ಕಲಾವಿದನಾಗಿ ಈ ಒಂದು ಸಂದರ್ಭದಲ್ಲಿ ನಾನು ವಿಷ್ಣು ಸರ್ ಅಭಿಮಾನಿಗಳ ಜೊತೆ ಪ್ರಾಮಾಣಿಕವಾಗಿ ಇದ್ದೇನೆ ನಿಮ್ಮ ಮುಂದಿನ ನಡೆಗಾಗಿ ಕಾಯುತ್ತಿದ್ದೇನೆ ಜೈ ಕನ್ನಡಾಂಬೆ ವಿಷ್ಣು ದಾದಾ ಅಜರಾಮರ...' ಎಂದು ಬರೆದಿದ್ದಾರೆ.

ಇದಕ್ಕೆ ಕಾಮೆಂಟ್‌ ಮಾಡಿರುವ ಕೆಲವರು, 'ದಾದಾ ಪರವಾಗಿ ಧ್ವನಿ ಎತ್ತಿದಕ್ಕೆ ಧನ್ಯವಾದಗಳು. ಕೆಲವು ಗುಳ್ಳೆ ನರಿಗಳು ನಿಮ್ಮ ಮೇಲೆ ಕಾಂಟ್ರೋವರ್ಸಿ ಮಾಡೋಕೆ ಕಾಯ್ತಾ ಅವ್ರೆ ಆದಷ್ಟು ಬೇಗ ಅದಕ್ಕೂ ತಕ್ಕ ಉತ್ತರ ನೀಡಿ ' ಎಂದು ಬರೆದಿದ್ದಾರೆ. 'ದಾದಾ ಪರ ಧ್ವನಿ ಎತ್ತಿದ್ದಕ್ಕೆ ಧನ್ಯವಾದಗಳು ಅಣ್ಣ' ಎಂದು ಮತ್ತೊಬ್ಬರು ಬರೆದಿದ್ದಾರೆ.

'ವಿಷ್ಣು ದಾದಾ ಅವ್ರ ಸ್ಮಾರಕ ರಾತ್ರೋ ರಾತ್ರಿ ತೆರವುಗೋಳಿಸಿದ್ದು ತುಂಬಾ ನೋವಿನ ಸಂಗತಿಯಾಗಿದೆ ನಮಗೆ..' ಎಂದು ಅಭಿಮಾನಿಯೊಬ್ಬರು ಕಾಮೆಂಟ್‌ ಮಾಡಿದ್ದಾರೆ. 'ನ್ಯಾಯ ಎಲ್ಲಿದೆ.... ರಾತ್ರೋ ರಾತ್ರಿ ವಿಷ್ಣುವರ್ಧನ್ ಸರ್ ಸಮಾಧಿ ನೆಲ ಸಮ ಮಾಡಿದವರಿಗೆ ದೇವರು ನೋಡಿ ಕೊಳ್ಳುತ್ತಾನೆ. ಈ ವಿಚಾರದಲ್ಲಿ ಧ್ವನಿ ಎತ್ತಿದ ಧ್ರುವ ಸರ್ಜಾ ಬಾಸ್ ನಿಮಗೆ ಕೋಟಿ ಕೋಟಿ ನಮನಗಳು' ಎಂದು ಮತ್ತೊಬ್ಬ ಅಭಿಮಾನಿ ಪೋಸ್ಟ್‌ ಮಾಡಿದ್ದಾರೆ.

ಸಾಕಷ್ಟು ವಿವಾದದ ಬಳಿಕ ವಿಷ್ಣುವರ್ಧನ್‌ ಅವರ ಸ್ಮಾರಕವನ್ನು ಮೈಸೂರಿನಲ್ಲಿ ಅವರ ಕುಟುಂಬ ಸ್ಥಾಪಿಸಿದೆ. ಆದರೆ, ವಿಷ್ಣುವರ್ಧನ್‌ ಅವರನ್ನು ಕೊನೆಯಲ್ಲಿ ಮಣ್ಣು ಮಾಡಿದ ಜಾಗ ಎನ್ನುವ ಕಾರಣಕ್ಕೆ ಅಭಿಮಾನಿಗಳು ಇಂದಿಗೂ ಈ ಸ್ಥಳವನ್ನು ಆರಾಧಿಸುತ್ತಾರೆ. ಮೈಸೂರಿನಲ್ಲಿ ಸ್ಮಾರಕವಿರಲಿ, ಅಭಿಮಾನ್‌ ಸ್ಟುಡಿಯೋದ ಬರೀ 10 ಗುಂಟೆ ಭೂಮಿಯಲ್ಲಿ ವಿಷ್ಣುವರ್ಧನ್‌ ಅವರ ಪುಣ್ಯಭೂಮಿ ಇರಲಿ ಎಂದು ಮನವಿ ಮಾಡಿದ್ದರು. ಆದರೆ, ಕಮರ್ಷಿಯಲ್‌ ಕಾಂಪ್ಲೆಕ್ಸ್‌ ಕಟ್ಟುವ ಕಾರಣಕ್ಕಾಗಿ ವಿಷ್ಣು ಸಮಾಧಿಯನ್ನು ಹಿರಿಯ ನಟ ಬಾಲಣ್ಣ ಅವರ ಕುಟುಂಬ ಧ್ವಂಸ ಮಾಡಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ