
ಬೆಂಗಳೂರು (ಜೂ.13): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪ ಹೊತ್ತು ಬಂಧಿತರಾದ ಬಳಿಕ ತೀವ್ರ ಮಾನಸಿಕ ಒತ್ತಡಕ್ಕೊಳಗಾದ ನಟ ದರ್ಶನ್ ಅವರು ಮಂಗಳವಾರ ಆಹಾರ ಸೇವಿಸದೆ ಹಣ್ಣಿನ ರಸ ಕುಡಿದು ಹಸಿವು ನೀಗಿಸಿಕೊಂಡಿದ್ದಾರೆ. ಮೈಸೂರಿನಲ್ಲಿ ಮಂಗಳವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ದರ್ಶನ್ ಅವರನ್ನು ಬಂಧಿಸಿದ ಕಾಮಾಕ್ಷಿಪಾಳ್ಯ ಪೊಲೀಸರು, ಬಳಿಕ 11 ಗಂಟೆ ಸುಮಾರಿಗೆ ಅವರನ್ನು ಬೆಂಗಳೂರಿಗೆ ಕರೆತಂದರು. ಬಂಧನದ ಬಳಿಕ ಉಪಾಹಾರ ಸೇವಿಸುವಂತೆ ಪೊಲೀಸರು ನೀಡಿದ ಸೂಚನೆಗೆ ದರ್ಶನ್ ನಿರಾಕರಿಸಿದ್ದಾರೆ. ಬಳಿಕ ಮಧ್ಯಾಹ್ನ ಕೂಡ ದರ್ಶನ್ ಊಟ ಮಾಡಿಲ್ಲ.
ಆಗ ಆರೋಗ್ಯದ ದೃಷ್ಟಿಯಿಂದ ಆಹಾರ ಸೇವಿಸುವಂತೆ ಪೊಲೀಸರು ಒತ್ತಾಯಿಸಿದ ಬಳಿಕ ಅವರು ಹಣ್ಣಿನ ರಸ ಕುಡಿದಿದ್ದಾರೆ. ರಾತ್ರಿ ಮಜ್ಜಿಗೆ ಕುಡಿದು ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಅವರು ಮಲಗಿದ್ದಾರೆ. ನಿನ್ನೆ ದಿನವಿಡೀ ಮಾನಸಿಕ ಒತ್ತಡದಲ್ಲಿದ್ದ ದರ್ಶನ್ ಬೆಳಗ್ಗೆ ಸಹಜ ಸ್ಥಿತಿಗೆ ಮರಳಿದರು. ಬುಧವಾರ ಬೆಳಗ್ಗೆ ಉಪಾಹಾರಕ್ಕೆ ಎರಡು ಇಡ್ಲಿ ಸೇವಿಸಿದ ಅವರು, ಮಧ್ಯಾಹ್ನ ಹಾಗೂ ರಾತ್ರಿ ಊಟ ಮಾಡಿದ್ದಾರೆ. ವಿಚಾರಣೆಗೆ ಸಹ ಅವರು ಸ್ಪಂದಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಕ್ರಾಂತಿ ಸಿನಿಮಾ ಶೂಟಿಂಗ್ ನಡೆದಿದ್ದ ರಾ.ರಾ. ನಗರ ಶೆಡ್: ಬೆಂಗಳೂರಿನ ರಾಜರಾಜೇಶ್ವರಿ ನಗದ ಸ್ಥಳೀಯ ಮುಖಂಡಪಟ್ಟಣಗೆರೆಯ ಜಯಣ್ಣ ಅವರಿಗೆ ಸೇರಿದ ಜಾಗವನ್ನು ದೀಪಕ್ ಹಾಗೂ ಕಿಶೋರ್ ಎಂಬುವರು ಬಾಡಿಗೆ ಪಡೆದು ಶೆಡ್ ನಿರ್ಮಿಸಿದ್ದರು. ಈ ಶೆಡ್‌ನಲ್ಲಿ ಬ್ಯಾಂಕ್‌ಗಳಿಗೆ ಸಾಲ ತೀರಿಸದ ಗ್ರಾಹಕರ ವಾಹನಗಳನ್ನು ಬ್ಯಾಂಕ್ ಪರವಾಗಿ ಸಾಲ ವಸೂಲಾತಿ ಏಜೆನ್ಸಿಯವರು ಜಪ್ತಿ ಮಾಡಿ ಇಡುತ್ತಾರೆ. ಸಾಲ ಪಾವತಿ ಬಳಿಕ ವಾಹನಗಳನ್ನು ಶೆಡ್‌ನಿಂದ ಬಿಡುಗಡೆ ಮಾಡಲಾಗುತ್ತದೆ. ಆದರೆ ಶೆಡ್ ವಿಶಾಲ ಪ್ರದೇಶವಾಗಿದ್ದರಿಂದ ಚಲನಚಿತ್ರಗಳ ಚಿತ್ರೀಕರಣಕ್ಕೂ ಸಹ ಕೆಲವು ನಿರ್ದೇಶಕರು ಬಳಸಿಕೊಳ್ಳುತ್ತಾರೆ.
ಚಿತ್ರರಂಗವೇ ತಲೆತಗ್ಗಿಸುವಂತೆ ಆಗಿದೆ: ಹೇಗೆ ಬದುಕಬೇಕೆಂದು ಡಾ.ರಾಜ್ ನೋಡಿ ಕಲಿಯಿರಿ: ಸಾರಾ
ಅದೇ ಶೆಡ್‌ನಲ್ಲಿ ಕಳೆದ ವರ್ಷ ತೆರೆಕಂಡಿದ್ದ ದರ್ಶನ್ ನಟನೆಯ ಕ್ರಾಂತಿ ಸಿನಿಮಾ ಸಹ ಚಿತ್ರೀಕರಣಗೊಂಡಿತ್ತು. ಹೀಗಾಗಿ ಮೊದಲೇ ಈ ಶೆಡ್ ಬಗ್ಗೆ ದರ್ಶನ್‌ಗೆ ಗೊತ್ತಿತ್ತು. ಶನಿವಾರ ಮಧ್ಯಾಹ್ನ 3 ಗಂಟೆಗೆ ರೇಣುಕಾಸ್ವಾಮಿಯನ್ನು ಶೆಡ್ ಕರೆದೊಯ್ದಾಗ ಜಯಣ್ಣ ಅವರ ಬಂಧು ಪಟ್ಟಣಗೆರೆ ವಿನಯ್ ಹಾಗೂ ದರ್ಶನ್ ಸಹ ಇದ್ದರು. ಶೆಡ್ ಬಾಗಿಲು ತೆಗೆಯುವ ಮುನ್ನ ಮಾಲಿಕರಿಗೆ ಸೆಕ್ಯೂರಿಟಿ ಕರೆ ಮಾಡಿದ್ದರು. ಆಗ ವಿನಯ್ ಹೆಸರು ಹೇಳಿದಾಗ ಶೆಡ್ ಗೇಟ್ ತೆಗೆಯುವಂತೆ ಮಾಲಿಕರು ಸೂಚಿಸಿದ್ದರು ಎಂದು ತಿಳಿದು ಬಂದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.