‘ದರ್ಶನ್ ಅವರ ಎರಡು ಸಿನಿಮಾಕ್ಕೆ ಬಂಡವಾಳ ಹೂಡಿದ್ದೀನಿ. ಈ ಘಟನೆಗೆ ವಿಷಾದವಿದೆ. ಈ ಪ್ರಕರಣದಲ್ಲಿ ತಪ್ಪು, ಸರಿಗಳನ್ನು ಕಾನೂನು ನಿರ್ಧರಿಸುತ್ತೆ. ಸಮಾಜದಲ್ಲಿ ಯಾವ ರೀತಿ ಬದುಕಬೇಕು ಎಂಬುದನ್ನು ಡಾ. ರಾಜ್ ನೋಡಿ ಕಲಿಯಬೇಕು.
ಬೆಂಗಳೂರು (ಜೂ.13): ‘ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಪ್ರತ್ಯಕ್ಷವಾಗಿ ಭಾಗಿಯಾಗಿದ್ದಾರೋ ಪರೋಕ್ಷವಾಗಿ ಸಹಕರಿಸಿದ್ದಾರೋ ಗೊತ್ತಿಲ್ಲ. ಆದರೆ ಈ ಹತ್ಯೆ ಮಾತ್ರ ಖಂಡನೀಯ. ದೊಡ್ಡ ತಪ್ಪು, ಅನ್ಯಾಯ. ಇದರಿಂದ ಇಡೀ ಚಿತ್ರರಂಗ ತಲೆ ತಗ್ಗಿಸುವಂತಾಗಿದೆ’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ. ಸುರೇಶ್ ಹೇಳಿದ್ದಾರೆ.
ದರ್ಶನ್ ಅಭಿಮಾನಿ, ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ‘ಕಾನೂನಿನ ಮುಂದೆ ಎಲ್ಲರೂ ತಲೆ ಬಾಗಲೇಬೇಕು. ದರ್ಶನ್ ಅವರು ಒಳ್ಳೆ ವ್ಯಕ್ತಿಯೇ. ಆದರೆ ಕೆಲವೊಮ್ಮೆ ವಿವೇಚನೆ ಕಳೆದುಕೊಂಡು ವರ್ತಿಸುತ್ತಾರೆ. ಜೀವದ ಜೊತೆಗೆ ಆಟ ಆಡೋದು ದೊಡ್ಡ ತಪ್ಪು. ಅವರನ್ನು ಇಷ್ಟೆತ್ತರಕ್ಕೆ ಬೆಳೆಸಿದ ಅಭಿಮಾನಿಗಳ ಗತಿ ಏನು? ಅವರನ್ನೇ ನಂಬಿಕೊಂಡು ಬಂಡವಾಳ ಹೂಡಿರುವ ನಿರ್ಮಾಪಕರ ಕಥೆ ಏನು? ಈಗ ಇಂಡಸ್ಟ್ರಿಯಲ್ಲಿ ಇರುವುದು ಕೆಲವೇ ಕೆಲವು ಸ್ಟಾರ್ ನಟರು. ಅವರೂ ಹೀಗೆ ಮಾಡಿಕೊಂಡರೆ ಸಿನಿಮಾ ರಂಗದ ಕಥೆ ಏನಾಗಬೇಕು?’ ಎಂದು ಪ್ರಶ್ನಿಸಿದ್ದಾರೆ.
ಇನ್ನೊಂದೆಡೆ ಈ ಬಗ್ಗೆ ಮಾತನಾಡಿದ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ ಗೋವಿಂದು, ‘ದರ್ಶನ್ ಅವರ ಎರಡು ಸಿನಿಮಾಕ್ಕೆ ಬಂಡವಾಳ ಹೂಡಿದ್ದೀನಿ. ಈ ಘಟನೆಗೆ ವಿಷಾದವಿದೆ. ಈ ಪ್ರಕರಣದಲ್ಲಿ ತಪ್ಪು, ಸರಿಗಳನ್ನು ಕಾನೂನು ನಿರ್ಧರಿಸುತ್ತೆ. ಸಮಾಜದಲ್ಲಿ ಯಾವ ರೀತಿ ಬದುಕಬೇಕು ಎಂಬುದನ್ನು ಡಾ. ರಾಜ್ ನೋಡಿ ಕಲಿಯಬೇಕು. ದರ್ಶನ್ ಈ ಪ್ರಕರಣದಲ್ಲಿ ಎಡವಿದ್ದಾರೆ ಅನಿಸುತ್ತದೆ. ಇದು ಚಿತ್ರರಂಗಕ್ಕೆ ಶೋಭೆ ತರುವಂಥದ್ದಲ್ಲ’ ಎಂದು ಹೇಳಿದ್ದಾರೆ. ರೇಣುಕಾಸ್ವಾಮಿ ತಪ್ಪು ಮಾಡಿದ್ದರೆ ಕರೆದು ಬುದ್ದಿ ಹೇಳಬೇಕಿತ್ತು. ಸ್ವಾಮಿ ಅವರ ತಂದೆ, ತಾಯಿ, ಪತ್ನಿಗೆ ನಾನು ಧೈರ್ಯ ಹೇಳುತ್ತೇನೆ, ಮಗನನ್ನು ಕಳೆದುಕೊಂಡ ಹಿರಿಯ ಜೀವಗಳಿಗೆ ದುಃಖ ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಹಾರೈಸಿದ್ದಾರೆ.
ಹೊಡೆದು ಕೊಂದ ದರ್ಶನ್ ಗ್ಯಾಂಗ್‌ನಲ್ಲಿ ಇನ್ನೂ ನಾಲ್ವರು ನಾಪತ್ತೆ: ತೀವ್ರ ತಲಾಶ್
ಠಾಣೆ ಮುಂದೆ ದರ್ಶನ್‌ಗೆ ಅಭಿಮಾನಿಗಳ ಜೈಕಾರ: ಕೊಲೆ ಪ್ರಕರಣ ಸಂಬಂಧ ನಟ ದರ್ಶನ್‌ರನ್ನು ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮಾಡುವಾಗ ಠಾಣೆ ಹೊರಗೆ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಪರವಾಗಿ ಘೋಷಣೆ ಕೂಗಿದರು. ಪೊಲೀಸರ ಒಂದು ತಂಡ ಮೈಸೂರಿಗೆ ತೆರಳಿ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದ ನಟ ದರ್ಶನ್‌ನನ್ನು ಬಂಧಿಸಿ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಗೆ ಕರೆತಂದರು ದರ್ಶನ್ ಬಂಧಿಸಿ ವಿಚಾರಣೆಗೆ ಕರೆತಂದಿರುವ ವಿಚಾರ ತಿಳಿದು ಭಾರೀ ಸಂಖ್ಯೆಯ ಅಭಿಮಾನಿಗಳು ಪೊಲೀಸ್ ಠಾಣೆ ಬಳಿ ಜಮಾಯಿಸಿದ್ದರು.ಠಾಣೆ ಒಳಗೆ ನಟ ದರ್ಶನ್‌ನನ್ನು ವಿಚಾರಣೆ ನಡೆಯುತ್ತಿದ್ದರೆ, ಹೊರಗೆ ಅಭಿಮಾನಿಗಳು ‘ಡಿ ಬಾಸ್’ಗೆ ಜೈ, ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಜೈ, ಸ್ಯಾಂಡಲ್‌ವುಡ್ ಕಿಂಗ್ ದರ್ಶನ್‌ಗೆ ಜೈ’ ಇತ್ಯಾದಿ ಜಯಘೋಷಣೆ ಕೂಗಿ ಅಭಿಮಾನ ಮೆರೆದರು. ಈ ನಡುವೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಠಾಣೆ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.