ಸಿಎಂ ಸಿದ್ದರಾಮಯ್ಯ ಪುತ್ರ ದಿವಂಗತ ರಾಕೇಶ್ ಸಿದ್ದರಾಮಯ್ಯ ನಾಯಕನಾಗಿ ನಟಿಸಿದ 'ನನಗೆ ನೀನು ನಿನಗೆ ನಾನು' ಸಿನಿಮಾವನ್ನು ಅವರ ಪುಣ್ಯ ತಿಥಿಯಂದು ಮರು ಬಿಡುಗಡೆ ಮಾಡಲು ಸಿದ್ಧತೆ ನಡೆಯುತ್ತಿದೆ.
ಬೆಂಗಳೂರು (ಜು.16): ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ದಿವಂಗತ ರಾಕೇಶ್ ಸಿದ್ದರಾಮಯ್ಯ ಬೆಲ್ಜಿಯಂನಲ್ಲಿ ಸಾವನ್ನಪ್ಪಿ ಜುಲೈ 30ಕ್ಕೆ ಬರೋಬ್ಬರಿ 7 ವರ್ಷ ತುಂಬಲಿದೆ. ಈ 7ನೇ ವರ್ಷದ ತಿಥಿಗೆ ರಾಕೇಶ್ ಸಿದ್ದರಾಮಯ್ಯ ನಾಯಕನಟನಾಗಿ ನಟಿಸಿರುವ "ನನಗೆ ನೀನು ನಿನಗೆ ನಾನು" ಸಿನಿಮಾ ಮತ್ತೊಮ್ಮೆ ಬಿಡುಗಡೆ ಮಾಡುವುದಕ್ಕೆ ತೆರೆಮರೆಯಲ್ಲಿಯೇ ಸಿದ್ಧತೆ ನಡೆಯುತ್ತಿದೆ.
ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಕೆಲವು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಅವು ತೆರೆಗೆ ಬರುವಲ್ಲಿ ಹಾಗೂ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡುವಲ್ಲಿ ವಿಫಲವಾಗಿವೆ. ಹೀಗಾಗಿ, ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಸಿದ್ದರಾಮಯ್ಯ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ಎಂಬುದೇ ಸಾಕಷ್ಟು ಜನರಿಗೆ ಗೊತ್ತಿಲ್ಲ. ಆದ್ದರಿಂದ, ರಾಕೇಶ್ ಸಿದ್ದರಾಮಯ್ಯ ಅವರು ತಮ್ಮ ಸಾವಿನ ಮುಂಚಿನ ದಿನಗಳಲ್ಲಿ ಬೆಳ್ಳಿತೆರೆಯ ನಟ-ನಟಿಯರ ಜೊತೆಗೆ ಕಾಣಿಸಿಕೊಂಡರೂ ಅವರು ಸಿನಿಮಾ ಕ್ಷೇತ್ರದಿಂದ ದೂರವಿದ್ದರು. ಬೆಲ್ಜಿಯಂಗೆ ಹೋದಾಗ ರಾಕೇಶ್ ಸಿದ್ದರಾಮಯ್ಯ ಅವರು ಅನಾರೋಗ್ಯದಿಂದ ಸಾವನ್ನಪ್ಪಿದ್ದು, ಈಗ ಅವರ ನಟನೆಯ ಲವ್ ಸ್ಟೋರಿ ಹಿನ್ನೆಲೆಯುಳ್ಳ "ನನಗೆ ನೀನು ನಿನಗೆ ನಾನು" (Nanage Neenu Ninage Naanu movie rerelease) ಸಿನಿಮಾ ಅವರ 7ನೇ ವರ್ಷದ ತಿಥಿ (ಜು.30) ದಿನದಂದು ಮರು ರಿಲೀಸ್‌ಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.
undefined
ರಾಕೇಶ್ ಸಿದ್ದರಾಮಯ್ಯ ಸ್ಯಾಂಡಲ್‌ವುಡ್‌ನಲ್ಲಿ ಒಳ್ಳಯ ನಟನಾಗಲು ಬಯಸಿದ್ದರು. ಇದರಿಂದಾಗಿಯೇ 'ನನಗೆ ನೀನು ನಿನಗೆ ನಾನು' (10/7/2002 ರಂದು ಶೂಟಿಂಗ್ ಪ್ರಾರಂಭ) ಎಂಬ ಚಲನಚಿತ್ರವನ್ನು ಪ್ರಾರಂಭಿಸಿದರು. ಚಿತ್ರದ ಶೂಟಿಂಗ್ ಆರಂಭವಾಗಿದ್ದರೂ ಚಿತ್ರ ತಡವಾಗಿ ಬಿಡುಗಡೆಯಾಗಿತ್ತು. ಆ ನಂತರ ರಾಕೇಶ್ ಬಗ್ಗೆ ಸುದ್ದಿಯೇ ಇರಲಿಲ್ಲ. ಜೊತೆಗೆ ಹಲವು ವರ್ಷಗಳ ನಂತರ ರಾಕೇಶ್ ರಾಜಕೀಯಕ್ಕೆ ಬಂದರು. ಅಲ್ಲಿ ಗುರುತಿಸಿಕೊಂಡು ಬೆಳೆಯುವ ಮುನ್ನವೇ ಬೆಲ್ಜಿಯಂನಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಎಲ್ಲರಿಂದ ಅಗಲಿದ್ದಾರೆ.
ರಾಕೇಶ್ ಸಾವಿಗೂ 13 ವರ್ಷಗಳ ಹಿಂದೆ ನಟಿಸಿದ 'ನನಗೆ ನೀನು ನಿನಗೆ ನಾನು' ಕನ್ನಡ ಸಿನಿಮಾವನ್ನು ಅನಿತಾ ಸುಬ್ರಹ್ಮಣ್ಯ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವು ಬೆಂಗಳೂರಿನ ಕರುಮಾರಿಯಮ್ಮ ದೇವಸ್ಥಾನದಲ್ಲಿ ಮಹಡಿಯಲ್ಲಿ ಶೂಟಿಂಗ್ ಮುಹೂರ್ತ ನೆರವೇರಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಮಗನ ಸಿನಿಮಾದ ಮುಹೂರ್ತದಲ್ಲಿ ಭಾಗವಹಿಸಿದರು. ಪ್ರವೀಣ್ ಡಿ ರಾವ್ ಸಂಗೀತ ನಿರ್ದೇಶನ, ಸುಬ್ರಹ್ಮಣ್ಯ ಕ್ಯಾಮರಾ ವಿಭಾಗ ನಿರ್ವಹಿಸಿದ್ದಾರೆ. ನನಗೇ ನೀನು ನಿನಗೆ ನಾನು ಆಲ್ಬಮ್ ಮೇ 08, 2003 ರಂದು ಜಾಂಕರ್ ಮ್ಯೂಸಿಕ್ ಲೇಬಲ್‌ನಲ್ಲಿ ಬಿಡುಗಡೆಯಾಗಿತ್ತು. ನನಗೇ ನೀನು ನಿನಗೆ ನಾನು ಸಿಡಿಯಲ್ಲಿ 8 ಹಾಡುಗಳಿವೆ. ಈಗಲೂ ಸಾಮಾಜಿಕ ಜಾಲತಾಣಗಳಲ್ಲಿ ಹಾಡುಗಳನ್ನು ಕೇಳಬಹುದು.
ಇನ್ನು ಈ ಸಿನಿಮಾ ನಿರ್ಮಾಣಕ್ಕೆ ಅನಿತಾ ಮತ್ತು ಸುಬ್ರಹ್ಮಣ್ಯ ಅವರು ಸಾಕಷ್ಟು ಹಣ ಹೂಡಿಕೆ ಮಾಡಿದ್ದರು. ಸಿನಿಮಾ ನಿರ್ಮಾಣದ ವೇಳೆ ಸಿದ್ದರಾಮಯ್ಯ ಅವರಿಗೆ ಆರ್ಥಿಕ ಸಹಾಯ ಮಾಡುವಂತೆ ಕೇಳಿಕೊಂಡರೂ ಇದಕ್ಕೆ ನಿರಾಕರಣೆ ಮಾಡಿದ್ದರಂತೆ. ಇನ್ನು ಸಿನಿಮಾ 2005ರಲ್ಲಿ ಬಿಡುಗಡೆ ಆಗಿದ್ದರೂ ಗಲ್ಲಾ ಪೆಟ್ಟಿಗೆಯಲ್ಲಿ ಭಾರಿ ಪ್ಲಾಫ್ ಆಗಿತ್ತು. ಆ ನಂತರ ಸಿದ್ದರಾಮಯ್ಯ ಪುತ್ರ ಸಿನಿಮಾದಲ್ಲಿ ಯಾವುದೇ ಪ್ರಯತ್ನ ಮಾಡಲಿಲ್ಲ. ಆದರೆ, ಅನಿತಾ ಮತ್ತು ಸುಬ್ರಹ್ಮಣ್ಯ ಸುಮಾರು 50 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ ಎಂದು ಕೇಳಿಬರುತ್ತಿದೆ. ಈಗ ಮತ್ತೊಮ್ಮೆ ರಿ ರಿಲೀಸ್ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪುತ್ರ ರಾಕೇಶ್ ಸಿದ್ದರಾಮಯ್ಯ ಅವರ ಅಭಿಮಾನಿಗಳು ಒತ್ತಾಯಿಸಿದ್ದಾರೆ.