
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಿ ಅನೇಕ ತಿಂಗಳಾಗಿದೆ. ಇದೀಗ ಪ್ರಶಸ್ತಿ ಪ್ರದಾನ ಮಾಡುವ ಮಾಡುವ ಸಮಯ ಹತ್ತಿರ ಬಂದಿದೆ. ನವೆಂಬರ್ 1 ಕನ್ನಡ ರಾಜ್ಯೋತ್ಸವದ ದಿನ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ನವೆಂಬರ್ 1 ಸಂಜೆ 4 ಗಂಟಗೆ ವಿಧಾನ ಸೌಧದಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಜ್ ಕುಮಾರ್ ಕುಟುಂಬ, ಅನೇಕ ಸಾಹಿತಿಗಳು ಹಾಗೂ ಚಿತ್ರರಂಗದ ಗಣ್ಯರು ಉಪಸ್ಥಿತರಿರಲಿದ್ದಾರೆ. ಈ ಬಗ್ಗೆ ಮಾತನಾಡಿದ ಸಿಎಂ ಬೊಮ್ಮಾಯಿ, 'ನಮ್ಮ ನೆಚ್ಚಿನ ಪುನೀತ್ ರಾಜ್ ಕುಮಾರ್ ಅವ್ರಿಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡಲು ತೀರ್ಮಾನವಾಗಿದೆ. ನವೆಂಬರ್ 1 ರಂದು ವಿಧಾನಸೌಧದಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಿದ್ದೇವೆ. ವಿಧಾನಸೌಧದ ಮೆಟ್ಟಿಲಿನ ಮೇಲೆ ನವೆಂಬರ್ 1ರ ಸಂಜೆ 4 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. 2009ರ ನಂತರ ಯಾರಿಗೂ ಕೂಡ ಕರ್ನಾಟಕ ರತ್ನ ಪ್ರಶಸ್ತಿ ಕೊಟ್ಟಿರಲಿಲ್ಲ. ಈಗಾಗ್ಲೇ 8 ಜನರಿಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡಲಾಗಿದೆ. ಎಲ್ಲರ ಮನದಾಳದಲ್ಲಿ ಚಿರಸ್ಥಾಯಿಯಾಗಿ ಉಳಿದಿರುವ ಪುನೀತ್ ನಿಜವಾಗಿಯೂ ಕರ್ನಾಟಕ ರತ್ನ. ಯುವಜನತೆಗೆ ಸದಾ ಪ್ರೇರಣೆ ನೀಡುತ್ತಿದ್ದರು' ಎಂದು ಹೇಳಿದರು.
'ಪುನೀತ್ ಹೆಸರು ಚಿರಸ್ಥಾಯಿಯಾಗಬೇಕು, ಪ್ರೇರಣೆಯಾಗಬೇಕು ಎಂದು ಈ ಪುರಸ್ಕಾರ ನೀಡಲಾಗುತ್ತಿದೆ. ಹಲವಾರು ಶ್ರೇಷ್ಠ ಸಾಹಿತಿಗಳು, ಮುಖ್ಯ ಅತಿಥಿಗಳು, ನಟರು, ಸಚಿವರು, ಶಾಸಕರು, ಹಿರಿಯ ರಾಜಕಾರಣಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗ್ತಾರೆ. ಅರ್ಥಪೂರ್ಣ ಕಾರ್ಯಕ್ರಮ ಮಾಡಲಿದ್ದೇವೆ' ಎಂದು ಸಿಎಂ ಹೇಳಿದರು.
'ಪುನೀತ ಪರ್ವ'ಕ್ಕೆ ತಾರೆಗಳ ಸಮಾಗಮ: ಇಲ್ಲಿದೆ ಅಪ್ಪು ಬಳಗ!
ಇನ್ನು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಬಗ್ಗೆಯೂ ಮಾತನಾಡಿದರು. 'ನವೆಂಬರ್ 1 ಆದ ಮೇಲೆ ಬೆಂಗಳೂರಿನಲ್ಲೇ ಮೂರು ಕಾರ್ಯಕ್ರಮ ಮಾಡುತ್ತಿದ್ದೇವೆ.
10 ದಿನಗಳ ಹಂತರದಲ್ಲಿ ಬೆಂಗಳೂರಿನ ಮೂರು ಭಾಗಗಳಲ್ಲಿ ಅಪ್ಪು ಕಾರ್ಯಕ್ರಮ ಮಾಡಲು ತೀರ್ಮಾನಿಸಿದ್ದೇವೆ' ಎಂದು ಹೇಳಿದರು.
ಅಪ್ಪು ಅಭಿಮಾನದಲ್ಲಿ ಮಿಂದೇಳಲು ರೆಡಿಯಾಗಿ: ಪುನೀತ ಪರ್ವ ಕಾರ್ಯಕ್ರಮ ಹೇಗೆ ನಡೆಯುತ್ತೆ ಗೊತ್ತಾ?
ರಜನಿಕಾಂತ್ ಆಗಮನದ ನಿರೀಕ್ಷೆ
ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಿತ್ರರಂಗದ ಗಣ್ಯ ವ್ಯಕ್ತಿಗಳು ಆಗಮಿಸುವ ನಿರೀಕ್ಷೆ ಇದೆ. ಕರ್ನಾಟಕ ಮೂಲದ ದೊಡ್ಡ ದೊಡ್ಡ ಕಲಾವಿದರು ಭಾಗವಹಿಸುವ ಸಾಧ್ಯತೆ ಇದೆ. ಸೂಪರ್ ಸ್ಟಾರ್ ರಜನಿಕಾಂತ್, ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ , ದೀಪಿಕಾ ಪಡುಕೋಣೆ ಕರೆಸುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಸಿಎಂ ಬೊಮ್ಮಾಯಿ ಮಾಹಿತಿ ನೀಡಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.