ಚಿರಂಜೀವಿ ಸರ್ಜಾ ಅವರ ಸಮಾಧಿಯ ಬಳಿ ತಮ್ಮ ಧ್ರುವ ಸರ್ಜಾ ಮಗಳ ಜೊತೆ ಆಟವಾಡುತ್ತಿದ್ದು, ಅದರ ವಿಡಿಯೋ ವೈರಲ್ ಆಗಿದೆ.
ಚಿರಂಜೀವಿ ಸರ್ಜಾ ಹಾಗೂ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇಬ್ಬರ ಬಾಂಧವ್ಯ ಎಲ್ಲರಿಗೂ ಗೊತ್ತೇ ಇದೆ. ಅಣ್ಣ ಚಿರಂಜೀವಿ ಸರ್ಜಾ ಅಂದರೆ ಧ್ರುವಾ ಅವರಿಗೆ ಅಷ್ಟೊಂದು ಬಾಂಧವ್ಯವಿತ್ತು. ದಿಢೀರನೇ ಚಿರಂಜೀವಿ ಸರ್ಜಾ 2020ರ ಜೂನ್ 7ರಂದು ಹೃದಯಾಘಾತದಿಂದ ಅಗಲಿದಾಗ, ಧ್ರುವ ಸರ್ಜಾ ಮಾನಸಿಕವಾಗಿ ಕುಸಿದಿದ್ದರು. ಇವರಿಬ್ಬರು ಕೇವಲ ಅಣ್ಣ ತಮ್ಮ ಆಗಿರಲಿಲ್ಲ, ಬದಲಿಗೆ ಸ್ನೇಹಿತರಂತೆ ಇದ್ದರು. ಒಬ್ಬರಿಗೆ ಇನ್ನೊಬ್ಬರು ಬೆನ್ನೆಲುಬಾಗಿ ನಿಂತವರು. ಅಣ್ಣನ ನೆನಪಿಗೆ ಧ್ರುವ ಅವರು ಕನಕಪುರ ರಸ್ತೆಯ ನೆಲಗುಳಿಯ ಬಳಿ ಇರುವ ಧ್ರುವ ಸರ್ಜಾ ಫಾರ್ಮ್ ಹೌಸ್‌ನಲ್ಲಿ ಸಮಾಧಿ ನಿರ್ಮಿಸಿದ್ದಾರೆ. ಕೆಲವು ದಿನಗಳ ಹಿಂದೆ ಫಾರ್ಮ್‌ಹೌಸ್‌ಗೆ ಭೇಟಿ ನೀಡಿರುವ ಧ್ರುವ ಯಾರಿಗೂ ಹೇಳದ ಹಾಗೆ ಅಣ್ಣನ ಸಮಾಧಿ ಪಕ್ಕದಲ್ಲಿರುವ ಜಾಗದಲ್ಲಿ ದಿಂಬು ಬೆಡ್‌ಶೀಟ್ ಹಾಕಿಕೊಂಡು ಮಲಗಿದ್ದರು.
ಇದಾದ ಬಳಿಕ, ಧ್ರುವ ಸರ್ಜಾ ಅವರು ತಮ್ಮ ಪತ್ನಿ ಪ್ರೇರಣಾ ಸೀಮಂತ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಇಲ್ಲಿಯೇ ಮಾಡಿದ್ದರು. ಧ್ರುವ ಸರ್ಜಾ ಪತ್ನಿ ಪ್ರೇರಣಾ ಮತ್ತೊಂದು ಮಗುವಿಗೆ ಜನ್ಮ ನೀಡುತ್ತಿದ್ದಾರೆ. ಪ್ರೇರಣಾ ಇನ್ನೇನು ಮೂರ್ನಾಲ್ಕು ದಿನದಲ್ಲಿ ಮತ್ತೆ ತಾಯಿ ಆಗ್ತಾರೆ. ಹೀಗಾಗಿ ಧ್ರುವ ಸರ್ಜಾ ತನ್ನ ಮುದ್ದಿನ ಮಡದಿಗೆ ಸೀಮಂತ ಮಾಡಿದ್ದಾರೆ. ಸೀಮಂತ ಶಾಸ್ತ್ರದಲ್ಲಿ ಇಡೀ ಸರ್ಜಾ ಕುಟುಂಬ ಭಾಗಿ ಆಗಿದ್ದು, ಇದು ನಡೆದದ್ದು ಕೂಡ ಸಮಾಧಿ ಸಮೀಪ ಎನ್ನುವುದು ವಿಶೇಷ. ಈ ಜಾಗಕ್ಕೆ ಹೋದ್ರೆ ಧ್ರುವನಿಗೆ ಅದೇನೋ ನೆಮ್ಮದಿ. ತನ್ನಣ್ಣ ಜೊತೆಗಿದ್ದಾನೆ ಅನ್ನೋ ಭಾವ. ಹೀಗಾಗೆ ಧ್ರುವ ಪ್ರೇರಣಾ ಸೀಮಂತವನ್ನ ಇಲ್ಲೇ ಮಾಡಿದ್ದು ಮತ್ತೆ ಚಿರು ಆಗಮನಕ್ಕೆ ಇಡೀ ಸರ್ಜಾ ಕುಟುಂಬ ಕಾಯುತ್ತಿದೆ ಅಂತ ಹೇಳಿದ್ದರು.
ಅಣ್ಣನ ವಿಷಯದಲ್ಲಿ ಸಿಕ್ಕಾಪಟ್ಟೆ ಎಮೋಷನಲ್ ಧ್ರುವ ಸರ್ಜಾ, ಚಿರು ಸಮಾಧಿ ಬಳಿ ಪತ್ನಿಗೆ ಸೀಮಂತ ಶಾಸ್ತ್ರ
ಇದೀಗ ಸಾಮಾಜಿಕ ಜಾಲತಾಣದಲ್ಲಿ ಇನ್ನೊಂದು ವಿಡಿಯೋ ವೈರಲ್ ಆಗಿದೆ. ಅದರಲ್ಲಿ ಧ್ರುವ ಸರ್ಜಾ ಅವರು ತಮ್ಮ ಮೊದಲ ಮಗಳ ಜೊತೆ ಆಡುತ್ತಿರುವುದನ್ನು ನೋಡಬಹುದು. ಮಗಳನ್ನು ತಬ್ಬಿ ಮುದ್ದಾಡುತ್ತಿದ್ದು, ಆಕೆಯನ್ನು ಎದೆಯ ಮೇಲೆ ಹಾಕಿಕೊಂಡು ಲಾಲಿ ಹಾಡುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋಗೆ ಸಹಸ್ರಾರು ಮಂದಿ ಕಮೆಂಟ್ ಮಾಡಿದ್ದು, ಚಿರು ಮತ್ತು ಧ್ರುವ ಅಭಿಮಾನಿಗಳು ಭಾವುಕರಾಗಿದ್ದಾರೆ. ಹಾರ್ಟ್ ಇಮೋಜಿಗಳಿಂದ ಕಮೆಂಟ್ ಬಾಕ್ಸ್ನಲ್ಲಿ ಸುರಿಮಳೆಯಾಗುತ್ತಿದೆ. ಅಂದಹಾಗೆ 2022ರ ಅಕ್ಟೋಬರ್ನಲ್ಲಿ ಧ್ರುವ ಮತ್ತು ಪ್ರೇರಣಾ ಅವರಿಗೆ ಮಗಳು ಹುಟ್ಟಿದ್ದಳು.
ಈ ಹಿಂದೆ ಅಣ್ಣನನ್ನು ನೆನೆದು ಭಾವುಕರಾಗಿದ್ದ ಧ್ರುವ ಒಂದು ಘಟನೆಯನ್ನು ನೆನಪಿಸಿಕೊಂಡಿದ್ದರು. 'ಮದುವೆಯಾದ ಹೊಸತರಲ್ಲಿ ನಡೆದ ಘಟನೆ. ನಾನು ನನ್ನ ಅಣ್ಣ ಸಖತ್ ಕ್ಲೋಸ್. ಯಾವ ಲೆವೆಲ್‌ಗೆ ಅಂತ ಎಕ್ಸಪ್ರೆಸ್ ಮಾಡೋಕೆ ಆಗಲ್ಲ. ಮದುವೆ ಆದ್ಮೇಲೆ ಅದು ಶುರುವಾಗುತ್ತೆ. ಅಯ್ಯೋ ನಮ್ಮ ಅಣ್ಣ ನನ್ನ ಜೊತೆ ಟೈಂ ಸ್ಪೆಂಡ್ ಮಾಡ್ತಿಲ್ಲ. ಅದು ನಾನು ಹೇಳಲಿಲ್ಲ ಆದರೆ ಅಣ್ಣಂಗೆ ಅರ್ಥ ಆಯ್ತು. ಏನೋ ಕಡ್ಡಿ ನಾನು ನಿನ್ನ ಜೊತೆ ಇಲ್ಲ ಅಂತ ಒಂದು ತರ ಆಗ್ತಿದ್ಯಾ ಅಂತಿದ್ದ. ನನ್ನ ಅತ್ತಿಗೆ ಹುಟ್ಟುಹಬ್ಬ ದಿನ ಅಣ್ಣ ಮತ್ತು ಅಮ್ಮ ಬಂದು ಸ್ವೀಟ್ ಕೊಟ್ಟ ಅಣ್ಣ 'ಮಚ್ಚಾ ಇದು ನನ್ನ ಹೆಂಡ್ತಿ ನಿನಗೆ ಗೊತ್ತಲ್ಲ ಅಂದ ನಾನು ಫುಲ್ ಕನ್ಫ್ಯೂಷನ್‌ನಲ್ಲಿ ನಿಂತುಕೊಂಡೆ. ನನ್ನ ತಾಯಿ ನೋಡಪ್ಪ ಅತ್ತಿಗೆ ಅಂದ್ರೆ ತಾಯಿ ತರ ಇವರು ನಿನಗೆ ಎರಡನೇ ತಾಯಿ ಅಂತ ಪರಿಚಯ ಮಾಡಿಸಿಕೊಟ್ಟರು' ಎಂದು ಧ್ರುವ ಸರ್ಜಾ ಹೇಳಿಕೊಂಡಿದ್ದರು.
ಅಣ್ಣ ಚಿರು ಸಮಾಧಿಯಲ್ಲಿ ಮಲಗಿದ ಧ್ರುವ ಸರ್ಜಾ; ವಿಡಿಯೋ ವೈರಲ್