ಈ ಸಿನಿಮಾ ನೋಡುವ ಪ್ರೇಕ್ಷಕರಿಗೆ ಒಂದು ಕೋಟಿ ಬಹುಮಾನ. ಲಾಟರಿಯಲ್ಲಿ ಗೆದ್ದವರಿಗೆ ಹತ್ತು ಕಾರು ಮತ್ತು ಚಿನ್ನಾಭರಣ...!
-ಸಿನಿಮಾ ಪ್ರೇಕ್ಷಕರಿಗೆ ಹೀಗೊಂದು ಸುವರ್ಣಾವಕಾಶ ನೀಡಿದ್ದು ‘ಶ್ರೀಭರತ ಬಾಹುಬಲಿ’ .
ಇದು ನಿರ್ದೇಶಕ ಮಂಜು ಮಾಂಡವ್ಯ ನಿರ್ದೇಶನದ ಚಿತ್ರ. ಅವರೇ ನಾಯಕ ನಟರೂ ಕೂಡ. ಚಿಕ್ಕಣ್ಣ ಹಾಗೂ ಮಂಜು ಮಾಂಡವ್ಯ ಚಿತ್ರದ ಹೀರೋ. ಜ.17ಕ್ಕೆ ಈ ಚಿತ್ರ ತೆರೆಗೆ ಬರುತ್ತಿದೆ. ರಾಜ್ಯಾದ್ಯಂತ 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಚಿತ್ರ ತೆರೆ ಕಾಣಲು ಸಜ್ಜಾಗಿದೆ. ಐಶ್ವರ್ಯ ಡೆವೆಲಪರ್ಸ್ ಸಂಸ್ಥೆಯ ಮೂಲಕ ಶಿವಕುಮಾರ್ ನಿರ್ಮಾಣ ಮಾಡಿದ ಸಿನಿಮಾ.
ಕಾಮಿಡಿ, ಸೆಂಟಿಮೆಂಟ್ ಜತೆಗೆ ಲವ್ ಆ್ಯಂಡ್ ಆ್ಯಕ್ಷನ್ ಅಂಶಗಳ ಮೂಲಕ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದೆ. ಚಿಕ್ಕಣ್ಣ ಇದ್ದಾರೆಂದರೆ ಕಾಮಿಡಿ ಇರಲೇಬೇಕೆನ್ನುವುದು ಸಹಜ. ಆದ್ರೆ ಅಷ್ಟೇ ಅಲ್ಲ, ಇಲ್ಲಿ ಎಲ್ಲಾ ರೀತಿಯ ರಂಜನೀಯ ಅಂಶಗಳು ಇವೆ ಎನ್ನುತ್ತಾರೆ ನಿರ್ದೇಶಕ ಕಮ್ ನಾಯಕ ನಟ ಮಂಜು ಮಾಂಡವ್ಯ.
90 ಲಕ್ಷ ವೆಚ್ಚದ ಯುದ್ಧ; 'ಶ್ರೀ ಭರತ ಬಾಹುಬಲಿ'ಯಾಗಿ ಚರಣ್ ರಾಜ್ ಪುತ್ರ!
ಚಿತ್ರದಲ್ಲಿ ಏನೇ ಇದ್ದರೂ, ಈಗ ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನು ಸೆಳೆಯುವುದೇ ದೊಡ್ಡ ಸವಾಲು. ಅದಕ್ಕೆ ಈ ಚಿತ್ರ ವಿಶೇಷ ತಂತ್ರ ಪ್ರಯೋಗಿಸುತ್ತಿದೆ. ಸಿನಿಮಾ ನೋಡುವ ಪ್ರೇಕ್ಷಕರಿಗೆ ಬಂಪರ್ ಆಫರ್ ಘೋಷಿಸಿದೆ. ಸಿನಿಮಾ ನೋಡಲು ಟಿಕೆಟ್ ಖರೀದಿಸಿವರೆಲ್ಲ , ತಾವು ಹೊಂದುವ ವಿಶೇಷ ಕೂಪನ್‌ಗೆ ಲಾಟರಿ ಹಾಕುವ ಯೋಜನೆ ಚಿತ್ರತಂಡದ್ದು.
ಆ ಲಾಟರಿ ಯೋಜನೆಯಲ್ಲಿ ವಿಜೇತರಾಗುವ ಒಟ್ಟು 20 ಮಂದಿ ಪ್ರೇಕ್ಷಕರಿಗೆ ಒಂದು ಕೋಟಿ ಮೌಲ್ಯದ ಬಂಪರ್ ಬಹುಮಾನ ನೀಡುವುದಾಗಿ ಪ್ರಕಟಿಸಿದೆ. ಇದರಲ್ಲಿ ಹತ್ತು ಕಾರು, ಚಿನ್ನಾಭರಣವೂ ಸೇರಿದೆ.‘ ಇದು ಚಿತ್ರ ನೋಡುವವರಿಗೆ ನಾವು ಕೊಡುತ್ತಿರುವ ಕೊಡುಗೆ. ಸಿನಿಮಾ ರಿಲೀಸ್ ಆದ ಎರಡು ವಾರಕ್ಕೆ ಲಾಟರಿ ಹಾಕುವ ಯೋಚನೆಯಿದೆ. ಅಲ್ಲಿ ವಿಜೇತರಾಗುವ 20 ಮಂದಿ ಅದೃಷ್ಟವಂತ ಪ್ರೇಕ್ಷಕರಿಗೆ ಒಂದು ಕೋಟಿ ಮೌಲ್ಯದ ಬಹುಮಾನ ಸಿಗಲಿದೆ’ ಎನ್ನುತ್ತಾರೆ ನಿರ್ದೇಶಕ ಮಂಜು ಮಾಂಡವ್ಯ.