
ಮೂಕಹಕ್ಕಿ ಸಿನಿಮಾ ನಂತರ ನಿರ್ದೇಶಕ ನೀನಾಸಂ ಮಂಜು ಕನ್ನೇರಿ ಎಂಬ ನೈಜ ಘಟನೆ ಆಧಾರಿತ ಸಿನಿಮಾ ಹೊತ್ತು ಬಂದಿದ್ದಾರೆ. ಫಸ್ಟ್ ಲುಕ್ ಪೋಸ್ಟರ್ ಮೂಲಕ ಕುತೂಹಲ ಹುಟ್ಟು ಹಾಕಿರುವ ಈ ಚಿತ್ರ ಕಾಡುವ ಹಾಡಿನೊಂದಿಗೆ ಮತ್ತೊಂದಿಷ್ಟು ನಿರೀಕ್ಷೆಯನ್ನು ಪ್ರೇಕ್ಷಕರ ಮನದಲ್ಲಿ ಹುಟ್ಟುಹಾಕಿದೆ.
ಹೌದು, ಕನ್ನೇರಿ ಚಿತ್ರದ ಮನಮುಟ್ಟುವ ಬೆಟ್ಟ ಕಣಿವೆಗಳ ಹಾಡಿನ ಲಿರಿಕಲ್ ವೀಡಿಯೋವನ್ನು ಚಿತ್ರತಂಡ ಇಂದು ಬಿಡುಗಡೆ ಮಾಡಿದೆ. ಖ್ಯಾತ ನಟಿ ಶ್ರುತಿ ಈ ಹಾಡನ್ನು ಬಿಡುಗಡೆ ಮಾಡುವ ಮೂಲಕ ಕನ್ನೇರಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
‘ಬೆಟ್ಟ ಕಣಿವೆಗಳ’ ಹಾಡು ಇಡೀ ಸಿನಿಮಾದ ಜೀವಾಳ ಎನ್ನುವಂತಿದ್ದು, ಪ್ರತಿ ಸಾಲು ಕೂಡ ಕೇಳುಗರನ್ನು ಕಾಡದೇ ಇರದು. ಅಷ್ಟು ಮನಮುಟ್ಟುವ ಅರ್ಥಗರ್ಭಿತ ಸಾಲುಗಳನ್ನು ಬರೆದಿದ್ದು ಕೋಟಿಗಾನಹಳ್ಳಿ ರಾಮಯ್ಯ. ಕಾಡಿನ ಜನರ ಬದುಕಿನ ನಲಿವುಗಳು ಹಾಗೂ ಆ ಬದುಕನ್ನು ತೊರೆದಾಗ ಆಗುವ ನೋವು ಎರಡನ್ನೂ ಒಳಗೊಂಡಿರುವ ಹಾಡಿಗೆ ಮಣಿಕಾಂತ್ ಕದ್ರಿ ಸಂಗೀತ ಸ್ಪರ್ಶವಿದ್ದು, ಗಾಯಕ ಸಚಿನ್ ಅರಬಳ್ಳಿ ಅಷ್ಟೇ ಜೀವತುಂಬಿ ಹಾಡಿದ್ದಾರೆ.
ಕಡಲ ತೀರದ ಭಾರ್ಗವನ ಟೀಸರ್ ಬಿಡುಗಡೆ!
ಕನ್ನೇರಿ ನೈಜ ಘಟನೆ ಆಧಾರಿತ ಸಿನಿಮಾವಾಗಿದ್ದು, ಈ ಚಿತ್ರಕ್ಕೆ ಕ್ಷೀರಸಾಗರ ಅವರ ‘ಜೇನು: ಆಕಾಶದ ಅರಮನೆ’ ಕಾದಂಬರಿ ಎಳೆಯ ಸ್ಪೂರ್ತಿಯೂ ಇದೆ. ಕೋಟಿಗಾನಹಳ್ಳಿ ರಾಮಯ್ಯ ಚಿತ್ರಕ್ಕೆ ಕಥೆ ಬರೆದಿದ್ದು, ಚಿತ್ರಕಥೆ ಬರೆದು ನೀನಾಸಂ ಮಂಜು ನಿರ್ದೇಶನ ಮಾಡಿದ್ದಾರೆ.
ಚಿತ್ರದ ಮುಖ್ಯ ಭೂಮಿಕೆಯಲ್ಲಿ ಅರ್ಚನಾ ಮಧುಸೂದನ್ ನಟಿಸಿದ್ದು, ಅನಿತಾ ಭಟ್, ಎಂ.ಕೆ.ಮಠ್, ಅರುಣ್ ಸಾಗರ್, ಕರಿಸುಬ್ಬು, ಸರ್ದಾರ್ ಸತ್ಯ ಒಳಗೊಂಡ ಪ್ರತಿಭಾನ್ವಿತರ ತಾರಾಬಳಗವಿದೆ. ಬುಡ್ಡಿದೀಪ ಸಿನಿಮಾ ಹೌಸ್ ಬ್ಯಾನರ್ ನಡಿ ಪಿ ಪಿ ಹೆಬ್ಬಾರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಗಣೇಶ್ ಹೆಗ್ಡೆ ಛಾಯಾಗ್ರಹಣ, ಸುಜಿತ್ ಎಸ್ ನಾಯಕ್ ಸಂಕಲನ ಕನ್ನೇರಿ ಚಿತ್ರಕ್ಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.