11 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಕಾರಣ ನೀಡಿ ಬಿಬಿಎಂಪಿ ಅಧಿಕಾರಿಗಳು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮಾಲೀಕತ್ವದ ರಾಕ್ ಲೈನ್ ಮಾಲ್ ಮತ್ತು ಮೋಹನ್ ಥೀಯೇಟರ್ ಗೆ ಬೀಗ ಜಡಿದಿದ್ದಾರೆ.
ಬೆಂಗಳೂರು (ಫೆ.14): ಆಸ್ತಿ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಕಾರಣ ನೀಡಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮಾಲೀಕತ್ವದ ರಾಕ್ ಲೈನ್ ಮಾಲ್ ಮತ್ತು ಮೋಹನ್ ಥೀಯೇಟರ್ ಗೆ ಬೀಗ ಜಡಿದಿದ್ದಾರೆ.
ಇತ್ತೀಚೆಗೆ ಬಿಡುಗಡೆ ಕಂಡಿರುವ ಕಾಟೇರ 100 ಕೋಟಿ ಕ್ಲಬ್ ಸೇರಿದೆ. ಈ ಚಿತ್ರದ ನಿರ್ಮಾಪಕರಾಗಿರುವ ರಾಕ್ ಲೈನ್ ವೆಂಕಟೇಶ್ ಬರೋಬ್ಬರಿ 11 ಕೋಟಿ ತೆರಿಗೆ ಪಾವತಿ ಬಾಕಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ದಾಸರಹಳ್ಳಿ ವಲಯ ಬಿಬಿಎಂಪಿ ಅಧಿಕಾರಿಗಳು ಜಾಲಹಳ್ಳಿ ಕ್ರಾಸ್ ಬಳಿ ಇರುವ ರಾಕ್ ಲೈನ್ ಮಾಲ್ ಮತ್ತು ಮೋಹನ್ ಥೀಯೇಟರ್ ಗೆ ಬೀಗ ಜಡಿದಿದ್ದಾರೆ.
ಆಸ್ತಿ ತೆರಿಗೆ ಪಾವತಿಸುವಂತೆ ಹಲವಾರು ಭಾರಿ ಬಿಬಿಎಂಪಿ ಅಧಿಕಾರಿಗಳು ನೋಟೀಸ್ ಕೊಟ್ಟಿದ್ದರು, ಆದರೆ ಇದ್ಯಾವುದಕ್ಕೂ ಉತ್ತರಿಸದ ರಾಕ್‌ಲೈನ್ ಹಲವು ವರ್ಷದಿಂದ ಕೋಟ್ಯಾಂತರ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಹೀಗಾಗಿ ಪೊಲೀಸರು ಹಾಗೂ ಮಾರ್ಷಲ್ ಗಳ ಸಮ್ಮುಖದಲ್ಲಿ, ಬಿಬಿಎಂಪಿ ವಲಯ ಆಯುಕ್ತರಾದ ಪ್ರೀತಿ ಗೆಹ್ಲೋಟ್ ನೇತೃತ್ವದ ತಂಡದಿಂದ ಬೀಗ ಜಡಿದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದಾಸರಹಳ್ಳಿ ಜಂಟಿ ಆಯುಕ್ತ ಬಾಲಶೇಖರ್, 11. 50 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿದೆ. 11 ವರ್ಷದಿಂದ ತೆರಿಗೆ ಕಟ್ಟಿಲ್ಲ. ಒಂದು ಬಾರಿ 1 ಕೋಟಿ 10 ಲಕ್ಷ ಕಟ್ಟಿದ್ದಾರೆ. 26 ಲಕ್ಷ ಚೆಕ್ ಕೊಟ್ಟಿದ್ದಾರೆ. ಈಗ ನೋಟಿಸ್ ಕೊಟ್ಟಿದ್ದೇವೆ ಅವರು ಕಟ್ಟಿಲ್ಲ. ಇವತ್ತು ಮಾಲ್ ಸೀಲ್ ಮಾಡಿದ್ದೇವೆ ಎಂದಿದ್ದಾರೆ.
ರಾಕ್ ಲೈನ್ ಮಾಲ್ ಮ್ಯಾನೇಜರ್ ಪ್ರಕಾಶ್ ಹೇಳಿಕೆ ನೀಡಿ, ನಿನ್ನೆ ರಾತ್ರಿ 9.30 ರ ವೇಳೆಗೆ ಬಿಬಿಎಂಪಿ ಅವರು ಬಂದಿದ್ದಾರೆ. ನಮಗೆ ನೋಟಿಸ್ ಕೊಟ್ಟಿಲ್ಲ ಏನಿಲ್ಲ. ಸುಮ್ನೆ ನೋಟಿಸ್ ತೋರಿಸಿ ವಾಪಾಸ್ ಅವರೇ ಇಟ್ಟುಕೊಂಡಿದ್ದಾರೆ. ಕೇಳಿದ್ರೆ ನಮಗೆ ಹೈ ಪ್ರೆಶರ್ ಇದೆ ಮಾಲ್ ಸೀಜ್ ಮಾಡ್ತೇವೆ ಅಂದಿದ್ದಾರೆ. ಹೈಕೋರ್ಟ್ ನಲ್ಲಿ ಒಂದು ವರ್ಷದ ಹಿಂದೆ ಇತ್ಯರ್ಥ ಆಗಿದೆ. 2023ರಲ್ಲಿ ಹೈಕೋರ್ಟ್ ಸೂಚನೆ ಮೇರೆ 1.56 ಲಕ್ಷ ಬಿಬಿಎಂಪಿಗೆ ಡೆಪಾಸಿಟ್ ಮಾಡಿದ್ದೇವೆ. ಅದಾದ ಬಳಿಕ ಏನಾದ್ರು ಅಬ್ಜೆಕ್ಷನ್ ಇದ್ರೆ ಹಾಕಿ ಅಂತಾ ಹೈಕೋರ್ಟ್ ಬಿಬಿಎಂಪಿಗೆ ಸೂಚನೆ ಕೊಟ್ಟಿದೆ. ಬಿಬಿಎಂಪಿ ಯಾವುದೇ ಅಬ್ಜೆಕ್ಷನ್ ಹಾಕಿಲ್ಲ. ಈಗ ಏಕಾ ಏಕಿ ಬಂದು ಪ್ರೆಷರ್ ಇದೇ ಅಂತಾ ಸೀಲ್ ಮಾಡಿದ್ದಾರೆ ಎಂದು ಹೇಳಿದ್ದಾರೆ.