ಚಿಕ್ಕ ಬಾಲ್ಕನಿಯಲ್ಲೇ ಬ್ಯೂಟಿಫುಲ್ಲಾಗಿ ಗಿಡ ಬೆಳೆಸುವುದು ತೋರಿಸಿದ ನಟಿ ಅದಿತಿ ಪ್ರಭುದೇವ. ಅವರು ಕೊಟ್ಟಿರುವ ಟಿಪ್ಸ್ ಏನು?
ಟೆರೇಸ್ ಗಾರ್ಡನ್ ಕಾನ್ಸೆಪ್ಟ್ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಪಟ್ಟಣ ಪ್ರದೇಶಗಳಲ್ಲಿ ಜಾಗಗಳೇ ಇಲ್ಲದ ಕಾರಣ, ಮನೆಯ ಮೇಲ್ಗಡೆಯಲ್ಲಿಯೇ ವಿಧ ವಿಧ ಗಿಡ, ಮರಗಳನ್ನು ಬೆಳೆಸಿದವರಿದ್ದಾರೆ. ಕೆಲವರು ಷೋ ಗಿಡ, ಹೂವಿನ ಗಿಡಗಳನ್ನು ಪಾಟ್ನಲ್ಲಿ ಬೆಳೆಸಿದ್ದರೆ, ಟೆರೇಸ್ ಅಥವಾ ಬಾಲ್ಕನಿ ದೊಡ್ಡದಾಗಿದ್ದು, ಗಿಡ ಪ್ರೇಮಿಗಳಾಗಿದ್ದವರು ದೊಡ್ಡ ದೊಡ್ಡ ಹಣ್ಣಿನ ಮರಗಳನ್ನೂ ಬೆಳೆಸಿ ಅಸಾಧ್ಯ ಎನ್ನುವ ಕೆಲಸವನ್ನೂ ಮಾಡುತ್ತಿದ್ದಾರೆ. ಅಪರೂಪದ ಗಿಡಗಳನ್ನು ಬೆಳೆಸಿ ಫಸಲನ್ನು ತೆಗೆಯುವುದು ನೋಡಿದರೆ ಅಬ್ಬಾ, ಅಸಾಧ್ಯ ಎನ್ನುವುದು ಯಾವುದೂ ಇಲ್ಲ ಎನ್ನಿಸುವುದೂ ಉಂಟು. ಆದರೆ ಹಲವರಿಗೆ ಅದರಲ್ಲಿಯೂ ಮಹಿಳೆಯರಿಗೆ ಇರುವ ಚಿಕ್ಕ ಬಾಲ್ಕನಿಯಲ್ಲಿಯೇ ಕುಂಡಗಳನ್ನು ನೆಟ್ಟು ಚಿಕ್ಕ ಪುಟ್ಟ ಹೂವಿನ ಗಿಡಗಳು, ಷೋ ಗಿಡಗಳು ಇಲ್ಲವೇ ಸೊಪ್ಪು-ತರಕಾರಿಗಳನ್ನು ಬೆಳೆಸುವ ಹಂಬಲ ಇರುತ್ತದೆ. ಇದನ್ನು ಮೆಂಟೇನ್ ಮಾಡುವುದು ಕೆಲವೊಮ್ಮೆ ಕಷ್ಟವಾಗಿದ್ದರೂ ಸರಿಯಾದ ಆರೈಕೆ ಮಾಡಿದರೆ ಸುಲಭದಲ್ಲಿ ಇದನ್ನು ಸಾಧಿಸಿ ತೋರಿಸಬಹುದು.
ಇದರ ಬಗ್ಗೆ ಕೆಲವೊಂದು ಟಿಪ್ಸ್ ನೀಡುತ್ತಲೇ ತಮ್ಮ ಮನೆಯ ಬಾಲ್ಕನಿಯಲ್ಲಿ ಪಾಟ್ನಲ್ಲಿ ಗಿಡಗಳನ್ನು ಹೇಗೆ ನೆಡಲಾಗಿದೆ ಎಂಬ ಬಗ್ಗೆ ನಟಿ ಅದಿತಿ ಪ್ರಭುದೇವ ಅವರು ತಿಳಿಸಿಕೊಟ್ಟಿದ್ದಾರೆ. ಅಂದಹಾಗೆ, ಸ್ಯಾಂಡಲ್‌ವುಡ್ ಬೆಡಗಿ ಅದಿತಿ ಪ್ರಭುದೇವ್ (Aditi Prabhudev) ಈಗ ಕೇವಲ ಚಿತ್ರನಟಿ ಮಾತ್ರವಲ್ಲದೇ ಅಪ್ಪಟ ಗೃಹಿಣಿ ಕೂಡ. ಕಿರುತೆರೆ ನಟಿಯಾಗಿ ಬಣ್ಣದ ಬದುಕಿಗೆ ಪದಾರ್ಪಣೆ ಮಾಡಿದ ನಟಿ, ಸ್ಯಾಂಡಲ್ವುಡ್ನಲ್ಲಿ ಬೇಡಿಕೆ ಇರುವಾಗಲೇ ಹಸೆಮಣೆ ಏರಿದರು. ಅದಿತಿ, ಕೂರ್ಗ್ ಮೂಲದ ಉದ್ಯಮಿ ಯಶಸ್ ಜೊತೆ ದಾಂಪತ್ಯ ಬದುಕನ್ನು ಎಂಜಾಯ್ ಮಾಡ್ತಿದ್ದಾರೆ. ಸಿನಿಮಾ ಜೊತೆಗೆ ವೈವಾಹಿಕ ಬದುಕನ್ನು ಬ್ಯಾಲೆನ್ಸ್ ಮಾಡ್ತಿದ್ದಾರೆ. ‘ಧೈರ್ಯಂ’, ‘ಬಜಾರ್’, ‘ಸಿಂಗ್’, ‘ಬ್ರಹ್ಮಚಾರಿ’, ‘ಒಂಬತ್ತನೆ ದಿಕ್ಕು’, ‘ತೋತಾಪುರಿ’, ‘ತ್ರಿಬಲ್ ರೈಡಿಂಗ್’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಅದಿತಿ ಪ್ರಭುದೇವ ಅವರು ಸದ್ಯ ಗೃಹಿಣಿಯಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ, ಇಂಜಿನಿಯರಿಂಗ್ ಪದವಿ ಮುಗಿಸಿ ಮ್ಯಾನೇಜ್‍ಮೆಂಟ್ ನಲ್ಲಿ ಮಾಸ್ಟರ್ ಮುಗಿಸಿದವರು. ಇದರ ಹೊರತಾಗಿಯೂ ಅಡುಗೆಯಲ್ಲಿಯೂ ಇವರದ್ದು ಎತ್ತಿದ ಕೈ. ಅಡುಗೆ, ಆರೋಗ್ಯಕ್ಕೆ ಸಂಬಂಧಿಸಿದ ಕೆಲವೊಂದು ಟಿಪ್ಸ್ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.
ಸಿಂಪಲ್ ಅವಲಕ್ಕಿಗೆ ಟೇಸ್ಟಿ ಬೆಂಡೇಕಾಯಿ ಫ್ರೈ: ನಟಿ ಅದಿತಿ ಪ್ರಭುದೇವ ರೆಸಿಪಿ ನೋಡಿದ್ರೆ ಬಾಯಲ್ಲಿ ನೀರೂರತ್ತೆ!
ಇದೀಗ ಬಾಲ್ಕನಿಯಲ್ಲಿ ಗಿಡ ನೆಡುವ ಟಿಪ್ಸ್ ಹೇಳಿಕೊಟ್ಟಿದ್ದಾರೆ. ಮನೆಯಲ್ಲಿ ಕಬೋರ್ಡ್ ಬಳಸಿ ಉಳಿದಿರುವ ವಸ್ತುಗಳಿಂದ ಬಾಲ್ಕನಿಯಲ್ಲಿ ಗಿಡಗಳನ್ನು ನೆಡಲು ಶೆಲ್ಫ್ ಮಾಡಿಸಿಕೊಂಡಿರುವುದಾಗಿ ಹೇಳಿದ್ದಾರೆ ನಟಿ. ನಂತರ, ಮಣ್ಣು, ಗೊಬ್ಬರ, ಕೋಕೋಪಿಟ್ಗಳನ್ನು ಮಿಕ್ಸ್ ಮಾಡಿ ಗಿಡಗಳಿಗೆ ಅಗತ್ಯ ಇರುವ ಗೊಬ್ಬರ, ಪೋಷಕಾಂಶಗಳನ್ನು ರೆಡಿ ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಕುಂಡಗಳಲ್ಲಿನ ಗಿಡಗಳಿಗೆ ಗೊಬ್ಬರ ಹಾಕುವಾಗ ಕೆಲವು ಗಿಡಗಳಿಂದ ಇಂತಿಷ್ಟೇ ಮಿಶ್ರಣ ಇರಬೇಕು ಎನ್ನುತ್ತಾರೆ. ಆದರೆ ಷೋ ಗಿಡಗಳು ಹಾಗೂ ಹೂವಿನ ಗಿಡಗಳಿಗೆ ಅಂದಾಜು ಗೊಬ್ಬರ ಹಾಕಿದರೂ ನಡೆಯತ್ತೆ. ಇದೇ ಕಾರಣಕ್ಕೆ ಯಾವುದೇ ಪ್ರಮಾಣವಿಲ್ಲದೇ ಗೊಬ್ಬರ ಮಿಕ್ಸ್ ಮಾಡಿಕೊಂಡಿರುವುದಾಗಿ ಹೇಳಿರುವ ನಟಿ ಅದನ್ನು ಹೇಗೆ ಕುಂಡದಲ್ಲಿ ಹಾಕಿ ಗಿಡಗಳನ್ನು ನೆಡಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಮನೆಯಲ್ಲಿ ಗಿಡಗಳು ಇದ್ದರೆ ಅದರ ಖುಷಿನೇ ಬೇರೆ. ಗಿಡಗಳನ್ನು ಬೆಳೆಸುವುದರಲ್ಲಿ ಇರುವ ಖುಷಿ ಮತ್ತೊಂದಿಲ್ಲ ಎನ್ನುವುದು ಬಹುತೇಕ ಮಹಿಳೆಯರ ಅನಿಸಿಕೆ. ಅಂಥವರಿಗೆ ಮನೆಗೆಲಸದ ಜೊತೆಗೆ ಗಿಡಗಳನ್ನು ಬೆಳೆಸುವುದೂ ಕಷ್ಟ ಎನಿಸುವುದೇ ಇಲ್ಲ. ನಟಿಯರ ಮನೆಯಲ್ಲೇನು ಆಳು ಕಾಳುಗಳು ಎಲ್ಲರೂ ಇರುತ್ತಾರೆ, ಬೇರೆ ಕೆಲಸ ಇವರಿಗೆ ಇರುವುದಿಲ್ಲ ಎನ್ನುವವರೂ ಇದ್ದಾರೆ. ಆದರೆ ಈ ರೀತಿ ಗಿಡಗಳ ಮೇಲೆ ಪ್ರೀತಿ ಇರುವ ಮಹಿಳೆಯರು ಮನೆಗೆಲಸದ ಜೊತೆಗೂ ಹಾಬಿ ಎನ್ನುವಂತೆ ಗಿಡಗಳನ್ನು ಬೆಳೆಸುವುದು ಇದೆ. ಇದನ್ನೇ ನಟಿ ಅದಿತಿ ಅವರೂ ಹೇಳಿದ್ದು, ಪ್ರತಿ ದಿನ ಒಂದು 15 ನಿಮಿಷ ಸಾಕು, ಗಿಡಗಳನ್ನು ಪ್ರೀತಿಯಿಂದ ಆರೈಕೆ ಮಾಡಿದರೆ ಅವು ಕೂಡ ಚೆನ್ನಾಗಿ ಬೆಳೆಯುತ್ತವೆ ಎಂದಿದ್ದಾರೆ. ನಂತರ ಗಿಡಗಳ ನಡುವೆ ಒಂದಿಷ್ಟು ಲೈಟಿಂಗ್ಸ್ ಮಾಡಿದ್ದಾರೆ. ಷೋ ಗಿಡಗಳನ್ನು, ಹ್ಯಾಂಗಿಗ್ ಪಾಟ್ಗಳನ್ನು ಹಾಕಿದರೆ ಬಾಲ್ಕನಿ ಇನ್ನಷ್ಟು ಸುಂದರವಾಗಿ ಕಾಣಿಸುತ್ತದೆ ಎನ್ನುವುದನ್ನು ನಟಿ ತೋರಿಸಿಕೊಟ್ಟಿದ್ದಾರೆ.
ಹಾಲು ಒಡೆಯದೇ ಬೆಲ್ಲದ ಟೀ ಮಾಡುವ ವಿಧಾನ ಹೇಳಿಕೊಟ್ಟ ನಟಿ ಅದಿತಿ ಪ್ರಭುದೇವ