
ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ‘ಪ್ರೇಮದ ಊರಲಿ’ ಸಿನಿಮಾಗೆ ಮತ್ತೋರ್ವ ಖ್ಯಾತ ತಾರೆಯ ಮೆಚ್ಚುಗೆಯ ಮಾತುಗಳು ಸಿಕ್ಕಿವೆ. ‘ಮಳೆ ಹುಡುಗಿ’ ಎಂದೇ ಖ್ಯಾತರಾಗಿರುವ ನಟಿ ಪೂಜಾ ಗಾಂಧಿ, ಸಿನಿಮಾ ವೀಕ್ಷಿಸಿ ಚಿತ್ರತಂಡದ ಪ್ರಯತ್ನಕ್ಕೆ ಮನಸಾರೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಚಿತ್ರದ ನಾಯಕಿ ರಮಿಕಾ ಶಿವು ಅವರ ಅಭಿನಯಕ್ಕೆ ಪೂಜಾ ಗಾಂಧಿ ಫಿದಾ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಬರೆದಿರುವ ಮೆಚ್ಚುಗೆಯ ಮಾತುಗಳು ಇದೀಗ ಗಮನ ಸೆಳೆಯುತ್ತಿವೆ.
ಕಥೆಯನ್ನೇ ನಂಬಿ ಗೆದ್ದ ಸಿನಿಮಾ
ಅತ್ಯುತ್ತಮವಾದ ಕಥೆ, ಕಥೆಯನ್ನೇ ನಂಬಿ ಬಂಡವಾಳ ಹೂಡುವ ನಿರ್ಮಾಪಕರಿದ್ದಾಗ ನಿರ್ಮಾಣವಾಗುವ ಸಿನಿಮಾ ‘ಪ್ರೇಮದ ಊರಲಿ’ ಎಂದು ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಪೂಜಾ ಗಾಂಧಿ, ಚಿತ್ರದ ಪ್ರತಿಯೊಂದು ವಿಭಾಗವನ್ನೂ ಪ್ರಶಂಸಿಸಿದ್ದಾರೆ. ರಂಗಾಯಣ ರಘು ಅವರ ಮನೋಜ್ಞ ಅಭಿನಯ, ನಾಯಕ ನಟ ಶ್ರೀರಾಮ್ ಅವರ ಪಾತ್ರ ಪೋಷಣೆ ಹಾಗೂ ನಿರ್ದೇಶಕ ಮನೋಜ್ ಕುಮಾರ್ ಅವರ ಕಥೆಯನ್ನು ತೆರೆಯ ಮೇಲೆ ಕಟ್ಟಿಕೊಟ್ಟಿರುವ ರೀತಿಯನ್ನು ಅವರು ಮೆಚ್ಚಿಕೊಂಡಿದ್ದಾರೆ. ಗಿಡ, ಮರ, ನದಿ, ಚೆಕ್‌ಡ್ಯಾಮ್, ಮಳೆ ಸೇರಿದಂತೆ ಫ್ರೇಮ್‌ನಲ್ಲಿ ಕಾಣಿಸಿಕೊಳ್ಳುವ ಪ್ರತಿಯೊಂದು ಅಂಶವನ್ನೂ ನಿರ್ದೇಶಕರು ಪರಿಣಾಮಕಾರಿಯಾಗಿ ಬಳಸಿಕೊಂಡಿರುವುದನ್ನು ಪೂಜಾ ಗಾಂಧಿ ವಿಶೇಷವಾಗಿ ಉಲ್ಲೇಖಿಸಿದ್ದಾರೆ. ಆದರೆ, ಅವರ ಪೋಸ್ಟ್‌ನಲ್ಲಿ ಹೆಚ್ಚು ಗಮನ ಸೆಳೆದಿದ್ದು ರಮಿಕಾ ಶಿವು ಅವರ ಅಭಿನಯದ ಕುರಿತಾದ ಮಾತುಗಳು.
'ಎಲ್ಲಿದ್ದೆ ಇಲ್ಲೀತನಕ, ಎಲ್ಲಿಂದ ಬಂದ್ಯವ್ವ, ನಿನ್ನ ಕಂಡು ನಾನಿಂದು ಕರಗಿದೆನು… ಓಹ್… ರಮಿಕಾ ಶಿವು, ಪಾತ್ರದಿಂದ ನೀವೇ??? ನಿಮ್ಮಿಂದ ಪಾತ್ರವೇ????' ಎಂದು ಬರೆದಿರುವ ಪೂಜಾ ಗಾಂಧಿ, ರಮಿಕಾ ಪಾತ್ರದಲ್ಲಿ ಅಷ್ಟು ಆವರಿಸಿಕೊಂಡಿದ್ದಾರೆ ಎಂಬುದನ್ನು ಮೆಚ್ಚಿಕೊಂಡಿದ್ದಾರೆ. 'ಬೇರ್ಪಡಿಸಲಾಗದಷ್ಟು ಆವರಿಸಿ, ಕಣ್ಣೀರಾಗಿಸಿದ್ದೀರಿ' ಎಂದು ರಮಿಕಾ ಅಭಿನಯಕ್ಕೆ ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ. ಅಷ್ಟೇ ಅಲ್ಲದೆ, ‘ಪ್ರೇಮದ ಊರಲಿ’ ಚಿತ್ರಕ್ಕಾಗಿ ದುಡಿದಿರುವ ಪ್ರತಿಯೊಬ್ಬರಿಗೂ ಸಲಾಂ! ಎಂದು ಇಡೀ ಚಿತ್ರತಂಡಕ್ಕೆ ಶುಭಾಶಯ ತಿಳಿಸಿದ್ದಾರೆ.
ಪೂಜಾ ಗಾಂಧಿಗೆ ರಮಿಕಾ ಶಿವು ಧನ್ಯವಾದ
ತಮ್ಮ ಅಭಿನಯಕ್ಕೆ ಪೂಜಾ ಗಾಂಧಿ ಅವರಂತಹ ಹಿರಿಯ ಹಾಗೂ ಖ್ಯಾತ ಕಲಾವಿದರಿಂದ ಮೆಚ್ಚುಗೆ ಸಿಕ್ಕಿರುವುದಕ್ಕೆ ರಮಿಕಾ ಶಿವು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. 'ಇದು ನಿಜವಾಗಿಯೂ ನನ್ನ ದಿನವನ್ನೇ ಸುಂದರವಾಗಿಸಿದೆ ಮೇಡಂ! ನಿಮ್ಮಂತಹ ದೊಡ್ಡ ಕಲಾವಿದರಿಂದ ನನ್ನ ಕೆಲಸಕ್ಕೆ ಮತ್ತು ನನ್ನ ಪಾತ್ರಕ್ಕೆ ಮೆಚ್ಚುಗೆ ಸಿಕ್ಕಿರುವುದು ನನಗೆ ತುಂಬಾ ದೊಡ್ಡ ವಿಷಯ. ನೀವು ನನಗಾಗಿ ಸಮಯ ತೆಗೆದುಕೊಂಡು ನನ್ನನ್ನು ಮೆಚ್ಚಿ ಬರೆದಿರುವುದಕ್ಕೆ ಹೃದಯಪೂರ್ವಕ ಧನ್ಯವಾದಗಳು ಮೇಡಂ. ನಿಮ್ಮ ಈ ಪ್ರೋತ್ಸಾಹ ನನಗೆ ತುಂಬಾ ಅಮೂಲ್ಯವಾದದ್ದು' ಎಂದು ರಮಿಕಾ ಶಿವು ಪ್ರತಿಕ್ರಿಯಿಸಿದ್ದಾರೆ.
ಬಿಗ್ ಬಜೆಟ್ ಸಿನಿಮಾಗಳ ನಡುವೆ ‘ಪ್ರೇಮದ ಊರಲಿ’ ಸದ್ದು
ಮನೋಜ್ ಕುಮಾರ್ ನಿರ್ದೇಶನದಲ್ಲಿ, ವೆನಿಲ್ಲಾ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವ ‘ಪ್ರೇಮದ ಊರಲಿ’ ಚಿತ್ರದಲ್ಲಿ ರಂಗಾಯಣ ರಘು, ಶ್ರೀರಾಮ್, ತಪಸ್ವಿನಿ ಪೂಣಚ್ಚ ಹಾಗೂ ರಮಿಕಾ ಶಿವು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಭಾವನಾತ್ಮಕ ಕಥಾಹಂದರ ಹಾಗೂ ಕಲಾವಿದರ ಅಭಿನಯದಿಂದ ಪ್ರೇಕ್ಷಕರ ಮನ ಗೆದ್ದಿರುವ ಸಿನಿಮಾ, ಇದೀಗ ಬಾಯಿಮಾತಿನ ಪ್ರಚಾರದ ಮೂಲಕವೇ ಮತ್ತಷ್ಟು ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುತ್ತಿದೆ.
ಇನ್ನು ವಿಶೇಷವೆಂದರೆ, ‘ಜೈಲರ್ 2’ ಹಾಗೂ ‘ರಣಬಾಲಿ’ಯಂತಹ ಬಿಗ್ ಬಜೆಟ್ ಸಿನಿಮಾಗಳ ಪೈಪೋಟಿಯ ನಡುವೆಯೂ ಕೇವಲ ಸುಮಾರು 2 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿರುವ ‘ಪ್ರೇಮದ ಊರಲಿ’ ತನ್ನ ಅಬ್ಬರವನ್ನು ಮುಂದುವರಿಸಿದೆ. ಪರಭಾಷೆ ಹಾಗೂ ಸ್ವಭಾಷೆಯ ಹಲವು ಸಿನಿಮಾಗಳ ಪೈಪೋಟಿಯ ನಡುವೆಯೂ ರಾಜ್ಯಾದ್ಯಂತ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವುದು ಚಿತ್ರತಂಡದ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ.
ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿರುವ ‘ಪ್ರೇಮದ ಊರಲಿ’ಗೆ ಚಿತ್ರರಂಗದ ತಾರೆಯರಿಂದಲೂ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. ಶಿವರಾಜ್‌ಕುಮಾರ್, ರಿಷಬ್ ಶೆಟ್ಟಿ ಹಾಗೂ ರಮೇಶ್ ಅರವಿಂದ್ ಸೇರಿದಂತೆ ಹಲವು ಪ್ರಮುಖರು ಸಿನಿಮಾದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ನಟ ವಸಿಷ್ಠ ಎನ್. ಸಿಂಹ ಹಾಗೂ ಅವರ ಪತ್ನಿ ಹರಿಪ್ರಿಯಾ ಕೂಡ ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ನಟಿ ರಶ್ಮಿಕಾ ಮಂದಣ್ಣ ಕೂಡ ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಚಿತ್ರದ ನಟಿ ತಪಸ್ವಿನಿ ಪೂಣಚ್ಚ ಅವರ ಅಭಿನಯದ ಕುರಿತು ಮಾತನಾಡಲು ವೈಯಕ್ತಿಕವಾಗಿ ಕರೆ ಮಾಡಿದ್ದಾರೆ ಎನ್ನಲಾಗಿದೆ.
ಇನ್ನು ದೊಡ್ಡ ಸ್ಟಾರ್‌ಗಳ ಸಿನಿಮಾಗಳ ನಡುವೆಯೂ ತನ್ನದೇ ಕಥೆ, ಭಾವನೆ ಮತ್ತು ಅಭಿನಯದ ಮೂಲಕ ಪ್ರೇಕ್ಷಕರನ್ನು ಸೆಳೆಯುತ್ತಿರುವ ‘ಪ್ರೇಮದ ಊರಲಿ’, ಸ್ಯಾಂಡಲ್‌ವುಡ್‌ನಲ್ಲಿ ಸದ್ಯದ ಗಮನಾರ್ಹ ಸಿನಿಮಾಗಳ ಪಟ್ಟಿಗೆ ಸೇರ್ಪಡೆಯಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.