ಸಾಕಷ್ಟು ದೌರ್ಜನ್ಯದಿಂದ ಕೂಡಿದೆ ಎಂದೇ ಹೇಳಲಾಗುತ್ತಿರುವ ಅನಿಮಲ್ ಚಿತ್ರವನ್ನು ನಟಿ ಮೇಘನಾ ರಾಜ್ ಶ್ಲಾಘಿಸಿದ್ದಾರೆ. ಅವರು ಹೇಳಿದ್ದೇನು?
ಯಾವುದೇ ಒಂದು ಚಿತ್ರ ಬಿಡುಗಡೆಯಾದಾಗ ಅದನ್ನು ನೋಡುವ ವೀಕ್ಷಕರ ಭಾವನೆ ಒಂದೇ ರೀತಿ ಆಗಿರಬೇಕೆಂದೇನೂ ಇಲ್ಲ. ಕೆಲವರಿಗೆ ಚಿತ್ರಗಳು ಇಷ್ಟವಾದರೆ, ಇನ್ನು ಕೆಲವರಿಗೆ ಅದು ಇಷ್ಟವಾಗದೇ ಹೋಗಬಹುದು. ಕೆಲವರಿಗೆ ನಾಯಕರು ಕೊಲೆ, ಸುಲಿಗೆ, ರಕ್ತಪಾತ ಹರಿಸುದು, ಲಾಂಗು ಮಚ್ಚು ಹಿಡಿದುಕೊಳ್ಳುವುದು ಇಷ್ಟವಾದರೆ, ಇದು ಇನ್ನು ಕೆಲವರಿಗೆ ಅಸಹ್ಯದ ಪರಮಾವಧಿ ಎನ್ನಿಸಬಹುದು. ಅದೇ ರೀತಿಯ ಚಿತ್ರ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ ಮತ್ತು ರಣಬೀರ್ ಕಪೂರ್, ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ನಟಿಸಿದ ಅನಿಮಲ್ ಚಿತ್ರ. ಈ ಚಿತ್ರದ ಭರಾಟೆ ಇನ್ನೂ ನಿಂತಿಲ್ಲ. ಸಿನಿಮಾ ಬಿಡುಗಡೆಯಾಗಿ ನಾಲ್ಕು ತಿಂಗಳು ಆಗಿದ್ದರೂ ಸಿನಿಮಾ ಜಗತ್ತಿನಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಉತ್ತರ ಅಮೆರಿಕದಲ್ಲಿ US $15 ಮಿಲಿಯನ್ (ಅಂದರೆ ಸುಮಾರು 125 ಕೋಟಿ ರೂಪಾಯಿ) ಒಟ್ಟು ಗಲ್ಲಾಪೆಟ್ಟಿಗೆ ಸಂಗ್ರಹದೊಂದಿಗೆ ಮೂರನೇ ಅತಿ ಹೆಚ್ಚು ಹಣ ಗಳಿಸಿದ ಹಿಂದಿ ಚಲನಚಿತ್ರವೆಂಬ ಖ್ಯಾತಿ ಗಳಿಸಿದೆ. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಇಲ್ಲಿಯವರೆಗೆ ಸುಮಾರು 930 ಕೋಟಿ ರೂಪಾಯಿ ವ್ಯವಹಾರ ಮಾಡಿದೆ. ಮಹಿಳೆಯರ ಮೇಲೆ ಮಿತಿಮೀರಿದ ದೌರ್ಜನ್ಯ, ಮೂರು ಪತ್ನಿಯರ ಮೇಲೆ ನಡೆಸುವ ಅತ್ಯಾಚಾರ, ಮಹಿಳೆಯನ್ನು ಕಾಮದ ವಸ್ತು ಎಂದು ಅಂದುಕೊಳ್ಳುವುದು, ಅಶ್ಲೀಲತೆ, ಬೂಟನ್ನು ನೆಕ್ಕು ಎಂದು ಪತ್ನಿಗೆ ನಾಯಕ ಹೇಳುವುದು... ಈ ರೀತಿಯ ವಿಷಯಗಳೇ ಹೆಚ್ಚಾಗಿದೆ ಎನ್ನುವುದು ಬಹುತೇಕರ ಅಭಿಮತ.
ಚಿತ್ರದ ಯಶಸ್ಸಿನ ಬಗ್ಗೆ ಇದಾಗಲೇ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. ಇದರ ಯಶಸ್ಸನ್ನು ಕಂಡು ಗೀತ ರಚನೆಕಾರ ಜಾವೇದ್ ಅಖ್ತರ್ ಶಾಕ್ ಆಗಿ ಹೇಳಿಕೆಯೊಂದನ್ನು ನೀಡಿದ್ದರು. ಪ್ರಸ್ತುತ ಚಲನಚಿತ್ರದ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಅನಿಮಲ್ ಚಿತ್ರವನ್ನು ನೇರವಾಗಿ ಉಲ್ಲೇಖಿಸದಿದ್ದರೂ ಅದರಲ್ಲಿರುವ ಮಿತಿ ಮೀರುವ ದೌರ್ಜನ್ಯದ ಬಗ್ಗೆ ಬೇಸರಿಸಿದ್ದರು. ಇಂದಿನ ಕಾಲಘಟ್ಟದಲ್ಲಿ ತಯಾರಾಗುತ್ತಿರುವ ಚಿತ್ರಗಳು ಮತ್ತು ಹಾಡುಗಳ ಯಶಸ್ಸಿನ ಜವಾಬ್ದಾರಿ ಕೂಡ ಪ್ರೇಕ್ಷಕರ ಮೇಲೆ ನಿಂತಿದೆ. ಯುವ ಚಲನಚಿತ್ರ ನಿರ್ಮಾಪಕರಿಗೆ ಇದು ಪರೀಕ್ಷಾ ಸಮಯ ಎಂದು ನಾನು ನಂಬುತ್ತೇನೆ. ಉದಾಹರಣೆಗೆ, ಪುರುಷನು ಮಹಿಳೆಗೆ ತನ್ನ ಶೂ ನೆಕ್ಕಲು ಕೇಳುವ ಚಲನಚಿತ್ರವಿದ್ದರೆ ಅಥವಾ ಮಹಿಳೆಗೆ ಕಪಾಳಮೋಕ್ಷ ಮಾಡುವುದು ಸರಿ ಎಂದು ಪುರುಷ ಹೇಳಿದರೆ ಆ ಚಿತ್ರ ಸೂಪರ್ ಹಿಟ್ ಆಗಿದ್ದರೆ ಅದು ತುಂಬಾ ಅಪಾಯಕಾರಿ ಎಂದು ಅಖ್ತರ್ ಹೇಳಿದ್ದರು.
ಹೆಣ್ಣಿನ ದೌರ್ಜನ್ಯ, ಅಶ್ಲೀಲತೆ ವಿಜೃಂಭಿಸುವ ಚಿತ್ರ ರಶ್ಮಿಕಾಗೆ ಒಳ್ಳೆಯ ಸಂದೇಶ ಕೊಡುವ ಸಿನಿಮಾವಂತೆ!
ಇದೀಗ ನಟಿ ಮೇಘನಾ ರಾಜ್ ಅವರೂ ಚಿತ್ರದ ಬಗ್ಗೆ ಮಾತನಾಡಿದ್ದು, ಅನಿಮಲ್ ಚಿತ್ರವನ್ನು ಅವರು ಶ್ಲಾಘಿಸಿದ್ದಾರೆ. ಮೇಘನಾ ರಾಜ್ ಅವರು ಇತ್ತೀಚೆಗೆ ರ‍್ಯಾಪಿಡ್ ರಶ್ಮಿ ಜೊತೆ ಮಾತನಾಡಿದ್ದಾರೆ. ತಮ್ಮ ಶ್ಲಾಘನೆಗೆ ಅವರು ತಮ್ಮದೇ ಆದ ಕಾರಣವನ್ನು ನೀಡಿದ್ದಾರೆ. ಮೇಘನಾ ಅವರ ಅಭಿಪ್ರಾಯದಲ್ಲಿ ಅನಿಮಲ್ ಚಿತ್ರದಲ್ಲಿ ಭಾವನೆಗಳನ್ನು ವಿಪರೀತವಾಗಿ ತೋರಿಸಲಾಗಿರುವುದು ನಿಜವಾದರೂ, ಇದು ಆಸಕ್ತಿಕರ ಸಿನಿಮಾ. ಆ ರೀತಿಯ ಸಿನಿಮಾ ಮಾಡೋದು ಕಷ್ಟ. ಈ ರೀತಿಯ ಸಿನಿಮಾನ ಮಾಡಲು ನಿಜಕ್ಕೂ ಧೈರ್ಯ ಬೇಕು ಎಂದಿರುವ ನಟಿ, ಅನಿಮಲ್‌ನಲ್ಲಿ ಗ್ರೇ ಶೇಡ್ಗಳು ಕಾಣಿಸಿಲ್ಲ. ಬ್ಲ್ಯಾಕ್ ಅಥವಾ ವೈಟ್ ಮಾತ್ರ ತೋರಿಸಲಾಗಿದೆ ಎಂದಿದ್ದಾರೆ.
ಮಾರಲ್ ಪೊಲೀಸಿಂಗ್ ಈ ಸಿನಿಮಾದಲ್ಲಿ ಹೆಚ್ಚಿದೆ ಎಂದಿರುವ ಮೇಘನಾ ರಾಜ್. ಇದರಲ್ಲಿ ತಪ್ಪೇನೂ ಇಲ್ಲ ಎಂದಿದ್ದಾರೆ. ಇದಕ್ಕೆ ಸ್ಪಷ್ಟನೆ ಕೊಟ್ಟಿರುವ ಅವರು, ದಿನನಿತ್ಯ ನಾವು ಮಾಡೋದನ್ನೇ ಸಿನಿಮಾದಲ್ಲಿ ತೋರಿಸಲಾಗುತ್ತದೆ. ಆದರೆ, ಅದನ್ನು ಸಿನಿಮಾದಲ್ಲಿ ತೋರಿಸಿದಾಗ ಪ್ರಶ್ನೆ ಮಾಡುತ್ತೇವೆಯಷ್ಟೇ. ಆದ್ದರಿಂದ ಸಿನಿಮಾ ನೋಡವಾಗ ಮಾರೆಲ್ ಪೋಲಿಸಿಂಗ್ನ ಬಿಟ್ಟು, ಸಿನಿಮಾವನ್ನು ಕಲೆಯಾಗಿ ನೋಡಬೇಕಷ್ಟೇ ಎಂದಿದ್ದಾರೆ. ಇದಕ್ಕೆ ಉದಾಹರಣೆ ಕೊಟ್ಟಿರುವ ಅವರು, ನಾವು ಮಾತಲ್ಲಿ ಕಥೆ ಹೇಳುವಾಗ ಒಬ್ಬ ಇದ್ದ, ಆತ ಹುಚ್ಚನಾಗಿದ್ದ ಎಂದು ಹೇಳುತ್ತೇವೆ. ಅದನ್ನು ಸಿನಿಮಾದಲ್ಲಿ ತೋರಿಸಿದರೆ ಇದನ್ನು ಹೇಗೆ ತೋರಿಸಿದಿರಿ ಎಂದು ಪ್ರಶ್ನೆ ಮಾಡುತ್ತೇವೆ. ಇದು ಸರಿಯಲ್ಲ. ಒಟ್ಟಿನಲ್ಲಿ ನನ್ನ ದೃಷ್ಟಿಯಲ್ಲಿ ಅನಿಮಲ್ ಆಸಕ್ತಿಕರ ಸಿನಿಮಾ ಎಂದಿದ್ದಾರೆ.
21 ವರ್ಷದ ಪುತ್ರಂಗೆ ಓಪನ್ನಾಗಿ ಸೆಕ್ಸ್ ಬಗ್ಗೆ ಕೇಳೋದಾ ಮಲೈಕಾ? ಅರ್ಹಾನ್ ತಿರುಗಿ ಹೇಳಿದ್ದೇನು?
ಮೇಘನಾ ರಾಜ್ ಅವರ ಮಾತಿಗೆ ಪರ-ವಿರೋಧ ವ್ಯಕ್ತವಾಗಿದೆ. ಇನ್ನು ನಟಿಯ ಕುರಿತು ಹೇಳುವುದಾರೆ, ಪತಿ ಚಿರಂಜೀವಿ ಮೃತಪಟ್ಟ ಬಳಿಕ ಚಿತ್ರರಂಗದಿಂದ ದೂರವಾಗಿ ಮಗ ರಾಯನ್ ಲಾಲನೆ ಪಾಲನೆಯಲ್ಲಿ ತೊಡಗಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಅಯಾಕ್ಟೀವ್ ಆಗಿರುವ ನಟಿ, ‘ತತ್ಸಮ ತದ್ಭವ’ ಸಿನಿಮಾ ಮೂಲಕ ಕಮ್‌ಬ್ಯಾಕ್ ಆಗಿದ್ದಾರೆ. ಇದು ಕಳೆದ ವರ್ಷ ರಿಲೀಸ್ ಆಗಿದೆ.