ನಮಗ್ಯಾರೂ ಇಲ್ಲ ಸ್ವಾಮಿ, ನೀವೆ ಬಂಧುಬಳಗ.. ತಾಯಿ ಲೀಲಾವತಿ ಸಾವಿನ ಬಳಿಕ ವಿನೋದ್ ರಾಜ್ ಭಾವುಕವಾಗಿ ಮಾತನಾಡಿದ್ದು, ಅಂಬೇಡ್ಕರ್ ಗ್ರೌಂಡ್‌ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ.
ಬೆಂಗಳೂರು (ಡಿ.8): ಹಿರಿಯ ನಟಿ ಲೀಲಾವತಿ ಸಾವಿನ ಬೆನ್ನಲ್ಲಿಯೇ ನೆಲಮಂಗಲದ ಖಾಸಗಿ ಆಸ್ಪತ್ರೆಯ ಮುಂದೆ ಭಾರಿ ಪ್ರಮಾಣದಲ್ಲಿ ಜನರು ಜಮಾವಳೆಯಾಗುತ್ತಿದ್ದಾರೆ. ಇದರ ನಡುವೆ ಮಾತನಾಡಿರುವ ಪುತ್ರ ವಿನೋದ್ ರಾಜ್, 'ಭಗವಂತ ನನ್ನ ಒಂಟಿ ಮಾಡಿಬಿಟ್ಟ. ನನಗೆ ಯಾರೂ ಇಲ್ಲ. ನೀವೇ ಬಂಧು ಬಳಗ..' ಎಂದು ಹೇಳಿ ಕಣ್ಣೀರಿಟ್ಟಿದ್ದಾರೆ. ಏನ್ ಹೇಳಬೇಕು ಅಂತಾ ಅರ್ಥವಾಗುತ್ತಿಲ್ಲ. ಭಗವಂತ ನನ್ನ ಒಂಟಿ ಮಾಡಿಬಿಟ್ಟ. ಆಸ್ಪತ್ರೆಯನ್ನು ಉದ್ಘಾಟನೆ ಮಾಡಿಸಿಬಿಟ್ಟು ಒಳ್ಳೆಯ ಕೆಲಸ ಮಾಡಿದ್ರು. ಡಿಕೆ ಶಿವಕುಮಾರ್ ಅವರು, ಇಲ್ಲಿ ಇರುವ ಪೊಲೀಸರು, ಅಯ್ಯೋ ಈ ಸಾಹೇಬರು ಅದೆಷ್ಟು ಒದ್ದಾಡಿದ್ರು ಅನ್ನೋದು ನನಗೆ ಮಾತ್ರ ಗೊತ್ತು. ಪ್ರತಿ ಹಂತದಲ್ಲೂ ಇವರುಗಳು ನನಗೆ ಸ್ಫೂರ್ತಿ ತುಂಬುತ್ತಿದ್ದರು. ನನಗೆ ಇವರುಗಳು ಅಣ್ಣ ತಮ್ಮ.ನನಗೆ ಮತ್ತೆ ಯಾರೂ ಇಲ್ಲ. ನೀವುಗಳೇ ಬಂಧುಬಳಗ. ಅಂತ್ಯಸಂಸ್ಕಾರ ಹೇಗೆ ಮಾಡುತ್ತೇವೆ ಎನ್ನುವ ವಿವರಗಳನ್ನು ಇವರೇ ನೀಡುತ್ತಾರೆ. ಅಂಬೇಡ್ಕರ್ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡುತ್ತೇವೆ' ಎಂದು ಹೇಳಿ ವಿನೋದ್ ರಾಜ್ ಆಸ್ಪತ್ರೆಯಿಂದ ಹೊರನಡೆದಿದ್ದಾರೆ.
ಇನ್ನು ಅಂಬೇಡ್ಕರ್ ಗ್ರೌಂಡ್‌ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಶುಕ್ರವಾರ ರಾತ್ರಿಯಿಂದಲೇ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಲೀಲಾವತಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ನೆಲಮಂಗಲದ ಖಾಸಗಿ ಆಸ್ಪತ್ರೆಯ ಎದುರು ಜನ ಜಮಾಯಿಸಿದ್ದಾರೆ. ಲೀಲಾವತಿ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ನಟ ಶಿವರಾಜ್ ಕುಮಾರ್ ಕೂಡ ಆಸ್ಪತ್ರೆಗೆ ಆಗಮಿಸಿ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ಅದಾದ ಕೆಲ ಹೊತ್ತಿನಲ್ಲಿ ಆಸ್ಪತ್ರೆಗೆ ಅಂಬ್ಯುಲೆನ್ಸ್ ಆಗಮಿಸಿದ್ದು, ಆಸ್ಪತ್ರೆಯಿಂದ ಶವ ಅಥವಾ ಅಂಬೇಡ್ಕರ್ ಗ್ರೌಂಡ್‌ಗೆ ಸಾಗಿಸಲಾಗುತ್ತದೆ.
ಇನ್ನು ಅಂಬೇಡ್ಕರ್ ಗ್ರೌಂಡ್ ಮೈದಾನದಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿದೆ. ನಾಳೆ ಮಧ್ಯಾಹ್ನದವರೆಗೂ ಅಂಬೇಡ್ಕರ್ ಗ್ರೌಂಡ್ ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಇರಲಿದೆ. ಬಳಿಕ ಅವರ ಸೋಲದೇವನಹಳ್ಳಿಯ ತೋಟದಲ್ಲಿಯೇ ಅಂತ್ಯ ಸಂಸ್ಕಾರ ನಡೆಯಲಿದೆ. ಅಂತಿಮ ದರ್ಶನಕ್ಕೆ ಪೊಲೀಸ್ ಸಿಬ್ಬಂದಿ ಕೂಡ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಮೈದಾನದಲ್ಲಿ ಬ್ಯಾರಿಕೇಡ್ ಹಾಕಿ ವ್ಯವಸ್ಥೆ ಮಾಡಲಾಗುತ್ತಿದೆ. ಸೋಲದೇವನಹಳ್ಳಿಯ ಮನೆ ಬಳಿ ವಿಶಾಲವಾದ ಜಾಗ ಇಲ್ಲದ ಹಿನ್ನೆಲೆ, ಅಂಬೇಡ್ಕರ್ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಎಲ್ಲಾ ಕಲಾವಿದರು ಲೀಲಾವತಿ ಅವರ ಆಪ್ತರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
'ದೇವ್ರೇ..ದೇವೇ..' ಎನ್ನುತ್ತಲೇ ರಂಜಿಸಿದ್ದ ಲೀಲಾವತಿಗೆ ಸಿಕ್ಕಿದ್ದು ಬರೀ ಅಳುಮುಂಜಿ ಪಾತ್ರಗಳು!
ನಾಳೆ ಬೆಳಿಗ್ಗೆ 11-12 ಗಂಟೆವರೆಗೂ ಅಂತಿಮ ದರ್ಶನಕ್ಕೆ ಅವಕಾಶ ಇರಲಿದೆ. ತಹಸೀಲ್ದಾರ್ ನೇತೃತ್ವದಲ್ಲಿ ಈಗಾಗಲೇ ಅಂತಿಮ ದರ್ಶನಕ್ಕೆ ಸಿದ್ದತೆ ಮಾಡಲಾಗುತ್ತಿದೆ. ರಾತ್ರಿಯಿಡೀ ಅಂತಿಮ ದರ್ಶನಕ್ಕೆ ಅವಕಾಶ ಇರುತ್ತದೆ. ನಾಳೆ ಬೆಳಿಗ್ಗೆ 11 ಗಂಟೆ ಬಳಿಕ ಸೋಲದೇವನಹಳ್ಳಿ ತೋಟದ ಮನೆಗೆ ಪಾರ್ಥೀವ ಶರೀರ ರವಾನೆ. ಬಳಿಕ ತೋಟದ ಮನೆಯಲ್ಲೇ ಅಂತ್ಯಸಂಸ್ಕಾರ ಮಾಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಯಿ ಲೀಲಾವತಿ ಅಗಲಿಕೆ ಆಘಾತದಿಂದ ರಸ್ತೆಯಲ್ಲೇ ಕುಸಿದು ಬಿದ್ದ ಪುತ್ರ ವಿನೋದ್ ರಾಜ್!