ಕನ್ನಡದ ಹಿರಿಯ ನಟಿ ಲೀಲಾವತಿ ಅವರು 400ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ವಿಷ್ಣುವರ್ಧನ್ ಅವರ ನಾಗರಹಾವು ಸಿನಿಮಾದಲ್ಲಿ ಅವರ ಕೇವಲ ಎರಡೇ ಎರಡು ಶಬ್ದಗಳ ಡೈಲಾಗ್ ಇಂದಿಗೂ ಜನಪ್ರಿಯ.
ಬೆಂಗಳೂರು (ಡಿ.8): ಹೀರೋಯಿನ್ ಆಗಿ, ತಾಯಿಯಾಗಿ, ತಂಗಿಯಾಗಿ, ಅಜ್ಜಿಯಾಗಿ ಬಹುಶಃ ಹಿರಿಯ ನಟಿ ಲೀಲಾವತಿ ಅವರು ನಟಿಸದೇ ಇರುವ ಪಾತ್ರಗಳೇ ಇಲ್ಲ. ಕನ್ನಡ ಸೇರಿದಂತೆ ದಕ್ಷಿಣ ಭಾರತದ ತಮಿಳು, ತೆಲುಗು ಚಿತ್ರರಂಗದಲ್ಲು ಪ್ರಖ್ಯಾತ ನಟರೊಂದಿಗೆ ನಟಿಸಿದ್ದ ಲೀಲಾವತಿ ಇನ್ನು ನೆನಪು ಮಾತ್ರ. ಕಳೆದ ಕೆಲವು ತಿಂಗಳುಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಲೀಲಾವತಿ ಅವರಿಗೆ ಶುಕ್ರವಾರ ಆರೋಗ್ಯದಲ್ಲಿ ಇನ್ನಷ್ಟು ಏರುಪೇರಾಗಿತ್ತು. ನೆಲಮಂಗಲದ ಖಾಸಗಿ ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿಯೇ ಅವರ ಮೃತಪಟ್ಟಿದ್ದಾರೆ. ತಾಯಿ ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ಪುತ್ರ ಹಾಗೂ ನಟ ವಿನೋದ್ ರಾಜ್ ಆಸ್ಪತ್ರೆಯ ಎದುರೇ ಕುಸಿದು ಬಿದ್ದಿದ್ದಾರೆ. ಲೀಲಾವತಿ ಅವರ ನಿಧನದ ಬೆನ್ನಲ್ಲಿಯೇ ಚಿತ್ರರಂಗರದ ಹಲವು ಗಣ್ಯರು ಲೀಲಾವತಿ ಅವರ ಸಿನಿಮಾ ಪ್ರೀತಿ, ಕೃಷಿ-ವ್ಯವಸಾಯದ ಮೇಲೆ ಅವರಿಗಿದ್ದ ಆಸಕ್ತಿಯನ್ನು ನೆನಪಿಸಿಕೊಂಡಿದ್ದಾರೆ. ಅದರೊಂದಿಗೆ ತಾಯಿಯ ಕೊನೆಯ ದಿನಗಳಲ್ಲಿ ವಿನೋದ್ ರಾಜ್ ನೋಡಿಕೊಂಡ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕನ್ನಡದಲ್ಲಿ 400ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಲೀಲಾವತಿ ಅವರಿಗೆ ಆಸಕ್ತಿ ಇದ್ದಿದ್ದು ಕಾಮಿಡಿ ಪಾತ್ರಗಳಲ್ಲಿ. ಕಾಮಿಡಿ ಸಿನಿಮಾಗಳಲ್ಲೇ ಬಹಳವಾಗಿ ಇಷ್ಟಪಡುತ್ತಿದ್ದ ಲೀಲಾವತಿ ಅವರಿಗೆ ಹುಡುಕಿಕೊಂಡು ಬಂದ ಪಾತ್ರಗಳು ಹೆಚ್ಚಾಗಿ ಅಳುಮುಂಜಿಯೇ ಆಗಿದ್ದವು.
ಲೀಲಾವತಿ ಅವರ ಕಾಮಿಡಿ ಎಂದಾಗ ಸಾಕಷ್ಟು ಸಿನಿಮಾಗಳು ನೆನಪಾಗಬಹುದು. ಅದರಲ್ಲಿ ಪ್ರಮುಖವಾಗಿ ವಿಷ್ಣುವರ್ಧನ್ ಅಭಿನಯದ ನಾಗರಹಾವು ಚಿತ್ರದ ಅವರ ಪಾತ್ರ. ಮೇಷ್ಟ್ರ ಪತ್ನಿಯಾಗಿ ಮುಂಗೋಪಿ ರಾಮಚಾರಿಯನ್ನು ಅವರು ಸಂಭಾಳಿಸುವ ರೀತಿ ಪ್ರೇಕ್ಷಕರಿಂದ ಬಹಳ ಮೆಚ್ಚುಗೆ ವ್ಯಕ್ತವಾಗಿತ್ತು. ಅದರಲ್ಲೂ ರಾಮಾಚಾರಿ ಪ್ರತಿ ಬಾರಿ ಮಾತನಾಡಲು ಬಂದಾಗ ಅವರು ಹೇಳುತ್ತಿದ್ದ, 'ದೇವ್ರೇ.. ದೇವ್ರೇ..' ಎನ್ನುವ ಎರಡೇ ಮಾತುಗಳು ಇಂದಿಗೂ ಜನಪ್ರಿಯ. ನಾಗರಹಾವು ಸಿನಿಮಾದಲ್ಲಿ ಇವರ ತುಂಗಮ್ಮನ ಪಾತ್ರಕ್ಕೆ ಎಂದೆಂದಿಗೂ ಸಾವಿಲ್ಲ.
ಚಿಕ್ಕ ವಯಸ್ಸಿನಲ್ಲಿ ತಂದೆ ತಾಯಿಯನ್ನು ಕಳೆದುಕೊಂಡಿದ್ದ ಲೀಲಾವತಿ 12ನೇ ವಯಸ್ಸಿಗೆ ಬಣ್ಣದ ಜಗತ್ತಿಗೆ ಕಾಲಿರಿಸಿದ್ದರು. ಆರಂಭದಲ್ಲಿ ನಾಟಕಗಳಲ್ಲಿ ನಟಿಸುತ್ತಿದ್ದ ಲೀಲಾವತಿ ಕ್ರಮೇಣ ಸಿನಿಮಾಗಳಲ್ಲಿ ಗುರುತಿಸಿಕೊಳ್ಳಲು ಆರಂಭಿಸಿದ್ದರು. ಒಂದು ಹೊತ್ತಿನ ಊಟಕ್ಕಾಗಿ ಪಾತ್ರ ತೊಳೆದು ಬದುಕುತ್ತಿದ್ದ ಲೀಲಾವತಿ, ಶಂಕರ್ ಸಿಂಗ್ ಅವರ ನಾಗಕನ್ನಿಕಾ ಚಿತ್ರದಲ್ಲಿನ ಪುಟ್ಟ ಪಾತ್ರದ ಮೂಲಕ ಚಿತ್ರರಂಗಕ್ಕೆ ಬಂದಿದ್ದರು.
ಇನ್ನು ಡಾ.ರಾಜ್‌ಕುಮಾರ್ ಹಾಗೂ ಲೀಲಾವತಿಯವರ ಜೋಡಿ ಸೂಪರ್ ಹಿಟ್. ಅಂದಿನ ಕಾಲದಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್ ಎನಿಸಿಕೊಂಡಿದ್ದ ಸಿಪಾಯಿ ರಾಮು, ಭಕ್ತ ಕುಂಬಾರ, ವೀರ ಕೇಸರಿ, ರಣಧೀರ ಕಂಠೀರವ ಸೇರಿದಂತೆ ಇನ್ನೂ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಇನ್ನು ತಮಿಳಿನಲ್ಲಿ ಅವರು ನಟಿಸಿದ್ದ ಅವರ್ಗಳ್ ಚಿತ್ರದ ಪಾತ್ರವನ್ನು ಯಾರು ತಾನೆ ಮರೆಯಬಲ್ಲರು. ಕ್ರೂರತನವನ್ನೇ ತುಂಬಿಕೊಂಡಿದ್ದ ಮಗನಿಗೆ ಪಾಠ ಕಲಿಸುವ ತಾಯಿಯಾಗಿ ಅವರ ಪಾತ್ರ ಎಂದಿಗೂ ಜೀವಂತವಾಗಿ ಉಳಿಯಲಿದೆ. ಭಕ್ತ ಕುಂಬಾರ ಚಿತ್ರದಲ್ಲಿ ಗೋರನ ಪತ್ನಿಯಾಗಿ ಇವರ ಮನೋಜ್ಞ ಅಭಿಯನಕ್ಕೆ ಸಾಟಿಯೇ ಇಲ್ಲ.
ತಾಯಿ ಲೀಲಾವತಿ ಅಗಲಿಕೆ ಆಘಾತದಿಂದ ರಸ್ತೆಯಲ್ಲೇ ಕುಸಿದು ಬಿದ್ದ ಪುತ್ರ ವಿನೋದ್ ರಾಜ್!
ಸಂತ ತುಕಾರಾಂ ಹಾಗೂ ಮದುವೆ ಮಾಡಿ ನೋಡು ಚಿತ್ರದಲ್ಲಿನ ಲೀಲಾವತಿ ಅವರ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಒಲಿದು ಬಂದಿತ್ತು. ಇನ್ನು ಆರು ಬಾರಿ ಅವರು ರಾಜ್ಯ ಪ್ರಶಸ್ತಿ ಸ್ವೀಕರಿಸಿದ್ದರು. ತುಂಬಿದ ಕೊಡ, ಮಹಾತ್ಯಾಗ, ಗೆಜ್ಜೆ ಪೂಜೆ, ಸಿಪಾಯಿ ರಾಮು ಹಾಗೂ ಭಕ್ತ ಕುಂಬಾರ ಚಿತ್ರದಲ್ಲಿನ ಇವರ ಪಾತ್ರಗಳಿಗೆ ರಾಜ್ಯಪ್ರಶಸ್ತಿ ಸಿಕ್ಕಿದ್ದು ಮಾತ್ರವಲ್ಲ, ಜನಮಾನಸದಲ್ಲಿ ಎಂದೂ ಮರೆಯದ ಪಾತ್ರಗಳಾಗಿ ಉಳಿದುಕೊಂಡಿದೆ. 2009ರಲ್ಲಿ ಪುತ್ರ ವಿನೋದ್ ರಾಜ್ ಅಭಿನಯದ ಯಾರದು ಸಿನಿಮಾದಲ್ಲಿ ಕೊನೆಯ ಬಾರಿಗೆ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಂಡಿದ್ದರು.
ಸುದ್ದಿ ಅಪ್‌ಡೇಟ್: ನೆಲಮಂಗಲದ ಅಂಬೇಡ್ಕರ್ ಮೈದಾನದಲ್ಲಿ ಲೀಲಾವತಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಪುತ್ರ ವಿನೋದ್ ರಾಜ್ ತಿಳಿಸಿದ್ದಾರೆ.
Leelavati No More: ಅವರು ನನ್ನ ಮತ್ತೊಂದು ಅಮ್ಮ, ಲೀಲಾವತಿ ನಿಧನಕ್ಕೆ ನಟಿ ಶೃತಿ ಕಂಬನಿ