
ಮೊದಲ ಮಗುವಿನ ಸಂತಸದ ಬಳಿಕ ಈಗ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ದಂಪತಿ ಜೀವನದ ಮತ್ತೊಂದು ವಿಶೇಷ ಕ್ಷಣವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಪ್ಯಾರಿಸ್‌ನ ಐಫೆಲ್ ಟವರ್ ಎದುರು ಕ್ಲಿಕ್ಕಿಸಿಕೊಂಡ ಚಿತ್ರಗಳ ಮೂಲಕ ಎರಡನೇ ಮಗುವಿನ ಆಗಮನದ ಸಿಹಿಸುದ್ದಿ ನೀಡಿದ್ದ ಹರ್ಷಿಕಾ, ಇದೀಗ ವಿಭಿನ್ನ ಪರಿಕಲ್ಪನೆಯ ಬೇಬಿ ಬಂಪ್ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರೆಟ್ರೋ ಶೈಲಿಯಲ್ಲಿ ಮೂಡಿಬಂದಿರುವ ಈ ವಿಡಿಯೊಗೆ ಡಾ. ರಾಜ್‌ಕುಮಾರ್ ಮತ್ತು ಆರತಿ ಅಭಿನಯದ 'ಕಸ್ತೂರಿ ನಿವಾಸ' ಚಿತ್ರದ ಜನಪ್ರಿಯ 'ನೀ ಬಂದು ನಿಂತಾಗ' ಹಾಡನ್ನು ಹಿನ್ನೆಲೆಯಾಗಿ ಬಳಸಿರುವುದು ವಿಶೇಷ ಗಮನ ಸೆಳೆದಿದೆ.
ವಿಡಿಯೊ ಜೊತೆಗೆ ಭಾವನಾತ್ಮಕವಾಗಿ ಬರೆದುಕೊಂಡಿರುವ ಹರ್ಷಿಕಾ, '70ರ ದಶಕದ ಸಿನಿಮಾ ಲೋಕಕ್ಕೊಂದು ಪಯಣ. ನೀ ಬಂದು ನಿಂತಾಗ ಹಾಡು ರಾಜ್ ಸರ್ ಮತ್ತು ಆರತಿ ಅವರ ಆ ಸುಂದರ ಗೀತೆಯ ನೆನಪುಗಳನ್ನ ಮತ್ತೆ ಜೀವಂತಗೊಳಿಸುವ ಪ್ರಯತ್ನ. ಸೀರೆಯುಟ್ಟ ಮರ್ಲಿನ್ ಮನ್ರೋ ಥರ ಅನಿಸಿದ ಈ ಲುಕ್, ಮೇಕಪ್ ಎಲ್ಲವೂ ಪರಿಪೂರ್ಣ. ಈ ಶೂಟ್ ಬಗ್ಗೆ ಕೇಳಿದ್ದಾಗಿನಿಂದಲೂ ಮನಸ್ಸಿಗೆ ತುಂಬಾ ಇಷ್ಟ ಆಗಿತ್ತು. ಇವಾಗ ಈ ವಿಡಿಯೊ ನೋಡಿ ಇನ್ನೂ ಖುಷಿ ಆಗಿದೆ. ಅಮ್ಮನಾಗುವ ಈ ಸುಂದರ ಘಳಿಗೆಯನ್ನು ಇಷ್ಟು ಸುಂದರವಾಗಿ ಸೆರೆಹಿಡಿದ ನನ್ನ ತಂಡಕ್ಕೆ ಹೃದಯಪೂರ್ವಕ ಧನ್ಯವಾದಗಳು' ಎಂದು ತಿಳಿಸಿದ್ದಾರೆ.
ಇನ್ನು ಕೊಡಗು ಮೂಲದ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ 2023ರ ಆಗಸ್ಟ್ 24ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. 2024ರಲ್ಲಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದ ಈ ಜೋಡಿ, ಇದೀಗ ಕುಟುಂಬಕ್ಕೆ ಮತ್ತೊಂದು ಹೊಸ ಸದಸ್ಯನ ಆಗಮನದ ನಿರೀಕ್ಷೆಯಲ್ಲಿ ಸಂತಸದ ದಿನಗಳನ್ನು ಕಳೆಯುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.