ಜಮೀರ್ ಅಹಮದ್‌ ಪುತ್ರನ ಎರಡನೇ ಚಿತ್ರಕ್ಕೆ Tharun Sudhir ನಿರ್ದೇಶನ!

By Kannadaprabha NewsFirst Published Jan 12, 2022, 8:55 AM IST
Highlights

ಮಾಜಿ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರ ಪುತ್ರ ಝೈದ್‌ ಖಾನ್‌ ನಟನೆಯ ಮೊದಲ ಸಿನಿಮಾ ‘ಬನಾರಸ್‌’ ಬಿಡುಗಡೆ ಮೊದಲೇ ಎರಡನೇ ಚಿತ್ರದ ತಯಾರಿ ನಡೆದಿದೆ. ಝೈದ್‌ ಖಾನ್‌ ನಟನೆಯ ಎರಡನೇ ಚಿತ್ರವನ್ನು ತರುಣ್‌ ಸುಧೀರ್‌ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಮಾಜಿ ಸಚಿವ ಜಮೀರ್‌ ಅಹಮದ್‌ ಖಾನ್‌ (Zameer Ahmed Khan) ಅವರ ಪುತ್ರ ಝೈದ್‌ ಖಾನ್‌ (Zaid Khan) ನಟನೆಯ ಮೊದಲ ಸಿನಿಮಾ ‘ಬನಾರಸ್‌’ (Banaras) ಬಿಡುಗಡೆ ಮೊದಲೇ ಎರಡನೇ ಚಿತ್ರದ ತಯಾರಿ ನಡೆದಿದೆ. ಝೈದ್‌ ಖಾನ್‌ ನಟನೆಯ ಎರಡನೇ ಚಿತ್ರವನ್ನು ತರುಣ್‌ ಸುಧೀರ್‌ (Tharun Sudhir) ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ‘ಬನಾರಸ್‌’ ಚಿತ್ರದ ಕೆಲ ದೃಶ್ಯಗಳನ್ನು ನೋಡಿ ಅದರ ಪ್ರಮೋಷನ್‌ಗೆ (Promotion) ತರುಣ್‌ ಸುಧೀರ್‌ ಚಿತ್ರತಂಡಕ್ಕೆ ಕೆಲ ಸಲಹೆಗಳನ್ನು ಕೊಟ್ಟಿದ್ದಾರೆ. ಈ ಹೊತ್ತಿನಲ್ಲಿ ಝೈದ್‌ ಖಾನ್‌ಗೆ ಸಿನಿಮಾ ಮಾಡುವ ಪ್ಲಾನ್‌ ಕೂಡ ಮಾಡಿದ್ದಾರೆ ಎನ್ನುವುದು ಸದ್ಯದ ಸುದ್ದಿ.

ಇನ್ನು, ಕೆಲ ತಿಂಗಳ ಹಿಂದಷ್ಟೇ 'ಬನಾರಸ್' ಚಿತ್ರದ ಫಸ್ಟ್ ಲುಕ್ (First Look) ಹಾಗೂ ಮೋಷನ್ ಪೋಸ್ಟರ್ (Motion Poster) ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar)  ಸಮಾಧಿಯ ಮುಂದೆ ಬಿಡುಗಡೆ ಮಾಡಲಾಗಿತ್ತು. ಅಪ್ಪು ಸಮಾಧಿಗೆ ಹೂವಿನ ಹಾರ ಹಾಕಿ, ಪೋಟೋಗೆ ಪೂಜೆ ಸಲ್ಲಿಸಿ ಸಿನಿಮಾದ ಪೋಸ್ಟರ್​ನ ಲಾಂಚ್ ಮಾಡಲಾಗಿತ್ತು. ಇದಕ್ಕೂ ಮುನ್ನ ಚಿತ್ರತಂಡ ಡಾ.ರಾಜಕುಮಾರ್, ಪಾರ್ವತಮ್ಮ ರಾಜ್‍ಕುಮಾರ್  ಹಾಗೂ ಅಂಬರೀಶ್ ಅವರ‌ ಸಮಾಧಿಗಳಿಗೆ ಪೂಜೆ ಸಲ್ಲಿಸಿದ್ದರು. ಈ ಚಿತ್ರದಲ್ಲಿ ಝೈದ್‌ ಖಾನ್‌ಗೆ ಸೋನಾಲ್ ಮೊಂತೆರೋ (Sonal Monteiro) ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

Actor Pramod: ಪ್ರೀಮಿಯರ್ ಪದ್ಮಿನಿ ಹುಡುಗನ ಕೈಯಲ್ಲಿ 6 ಚಿತ್ರಗಳು

'ಬನಾರಸ್' ಸಿನಿಮಾದ ಪೋಸ್ಟರ್ ಲಾಂಚ್ ಅನ್ನು ಪುನೀತ್ ರಾಜ್​ಕುಮಾರ್ ಮಾಡಬೇಕಿತ್ತು. ಆದರೆ ಅಪ್ಪು ಆಗಲಿಕೆ ಕಾರಣದಿಂದ ಇದು ಸಾಧ್ಯವಾಗಿಲ್ಲ. ಹಾಗಾಗಿ ಅಪ್ಪು ಅಗಲಿಕೆಯ ನಂತರ ಸಮಾಧಿ ಬಳಿ ಪೋಸ್ಟರ್ ಲಾಂಚ್ ಮಾಡಲಾಗಿದೆ. ನ್ಯಾಷನಲ್ ಖಾನ್ಸ್ ಪ್ರೊಡಕ್ಷನ್ಸ್ ಸಂಸ್ಥೆಯ ಕಡೆಯಿಂದ ಅದ್ದೂರಿಯಾಗಿ ನಿರ್ಮಾಣಗೊಂಡಿರುವ ಈ ಚಿತ್ರದ ಮೋಷನ್ ಪೋಸ್ಟರ್ ಹಾಗೂ ಫಸ್ಟ್ ಲುಕ್‌ಗೆ ಬಿಡುಗಡೆಯಾದ ಕೆಲವೇ ಹೊತ್ತಿನಲ್ಲಿ ನಿರೀಕ್ಷೆಗೂ ಮೀರಿ ಸಿನಿರಸಿಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಪೋಸ್ಟರ್ ಲಾಂಚ್ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕರು, ನಿರ್ದೇಶಕ ಜಯತೀರ್ಥ, ನಿರ್ದೇಶಕ ಎ ಹರ್ಷ, ಹಾಸ್ಯ ನಟ ಸುಜಯ್ ಶಾಸ್ತ್ರಿ ಭಾಗಿಯಾಗಿದ್ದರು.

ಇಡೀ ಚಿತ್ರ ಮೂಡಿ ಬಂದಿರುವ ಅದ್ಧೂರಿತನ ಮತ್ತು ವಿಭಿನ್ನ ಕಥೆಯ ಸುಳಿವನ್ನು ಈ ಮೋಷನ್ ಪೋಸ್ಟರ್ ಮತ್ತು ಫಸ್ಟ್ ಲುಕ್‌ನಲ್ಲಿ ಕಾಣಬಹುದಾಗಿದೆ. 'ಬೆಲ್​ ಬಾಟಂ' (Bell Bottom) ಸಿನಿಮಾ ಮೂಲಕ ದೊಡ್ಡ ಗೆಲುವು ಪಡೆದ ನಿರ್ದೇಶಕ ಜಯತೀರ್ಥ (Jayatheertha) ಅವರು 'ಬನಾರಸ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಪ್ರತಿಷ್ಠಿತ ಲಹರಿ ಮ್ಯೂಸಿಕ್ (Lahari Music)​, ಟಿ-ಸಿರೀಸ್​ (T-Series) ಸಂಸ್ಥೆಗಳು ಜಂಟಿಯಾಗಿ ಚಿತ್ರದ ಆಡಿಯೋ ಹಕ್ಕುಗಳನ್ನು ದಾಖಲೆ ಮೊತ್ತಕ್ಕೆ ಖರೀದಿ ಮಾಡಿವೆ.  ಹಲವಾರು ಅದ್ಭುತಗಳನ್ನು ತನ್ನೊಡಲಲ್ಲಿ ಬಚ್ಚಿಟ್ಟುಕೊಂಡಿರುವ ಈ ಚಿತ್ರದ 90ರಷ್ಟು ಚಿತ್ರೀಕರಣವನ್ನು ಬನಾರಸ್‌ನ ಮನಮೋಹಕ ಪರಿಸರದಲ್ಲಿ ನಡೆಸಲಾಗಿದ್ದು, 84 ಘಾಟ್ ಪ್ರದೇಶಗಳಲ್ಲಿ ಚಿತ್ರೀಕರಣಗೊಂಡಿದೆ.

ಜೊತೆ ಜೊತೆಯಲಿ ಧಾರಾವಾಹಿ ಬದುಕು ಬದಲಿಸಿತು: Megha Shetty

'ಬನಾರಸ್​' ಚಿತ್ರಕ್ಕೆ ಅದ್ವೈತ ಗುರುಮೂರ್ತಿ ಕ್ಯಾಮೆರಾ ಕೈಚಳಕ, ಎ. ವಿಜಯ್, ಡಿಫ್ರೆಂಟ್ ಡ್ಯಾನಿ ಸಾಹಸ ನಿರ್ದೇಶನ, ರಘು ನಿಡುವಳ್ಳಿ ಸಂಭಾಷಣೆ, ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ, ಎ.ಹರ್ಷ ನೃತ್ಯ ನಿರ್ದೇಶನವಿದೆ. ಎನ್.ಕೆ ಪ್ರೊಡಕ್ಷನ್ಸ್ ಬ್ಯಾನರ್ ನಡಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ತಿಲಕ್ ರಾಜ್ ಬಲ್ಲಾಳ್ ಬಂಡವಾಳ ಹಾಕಿ ಅದ್ದೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅಜನೀಶ್​ ಬಿ. ಲೋಕನಾಥ್​ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು, ದೇವರಾಜ್, ಅಚ್ಯುತ್ ಕುಮಾರ್, ಸುಜಯ್ ಶಾಸ್ತ್ರಿ, ಸಪ್ನ ರಾಜ್, ಬರ್ಕತ್ ಅಲಿ ಸೇರಿದಂತೆ ಹಲವು ಕಲಾವಿದರ ತಾರಾಬಳಗವಿದೆ. ಕನ್ನಡ, ತೆಲುಗು, ತಮಿಳು ಸೇರಿದಂತೆ ಐದು ಭಾಷೆಗಳಲ್ಲಿ 'ಬನಾರಸ್​'  ಚಿತ್ರ ತೆರೆಕಾಣಲಿದೆ.

click me!