22 ವರ್ಷ ಕಷ್ಟಪಟ್ಟು ಗಳಿಸಿದ ವರ್ಚಸ್ಸಿಗೆ ಧಕ್ಕೆ, ರಾಜೀ ಸಾಧ್ಯವಿಲ್ಲ: ಕೋರ್ಟಲ್ಲಿ ಸುದೀಪ್‌ ಹೇಳಿಕೆ

By Kannadaprabha NewsFirst Published Aug 11, 2023, 9:50 AM IST
Highlights

ಎಂ.ಎನ್‌. ಕುಮಾರ್‌ ಮತ್ತು ಎಂ.ಎನ್‌. ಸುರೇಶ್‌ ವಿರುದ್ಧ ಮಾನಹಾನಿ ಕೇಸ.ಇಂದು ತೀರ್ಪು...

ಕನ್ನಡಪ್ರಭ ವಾರ್ತೆ ಬೆಂಗಳೂರು

ಚಿತ್ರ ನಿರ್ಮಾಪಕರಾದ ಎಂ.ಎನ್‌.ಕುಮಾರ್‌ ಮತ್ತು ಎಂ.ಎನ್‌. ಸುರೇಶ್‌ ಅವರ ವಿರುದ್ಧ ಮಾನಹಾನಿ ದಾವೆ ದಾಖಲಿಸಬೇಕು ಹಾಗೂ 10 ಸಾವಿರ ರು. ದಂಡ ಪಾವತಿಸಲು ಆದೇಶಿಸಬೇಕು ಎಂದು ಕೋರಿ ಸಲ್ಲಿಸಿರುವ ಖಾಸಗಿ ದೂರಿಗೆ ಸಂಬಂಧಿಸಿದಂತೆ ನಟ ಸುದೀಪ್‌ ಅವರ ಪ್ರಮಾಣೀಕೃತ ಹೇಳಿಕೆ ದಾಖಲಿಸಿಕೊಂಡ ಬೆಂಗಳೂರಿನ ಎಸಿಎಂಎಂ ನ್ಯಾಯಾಲಯ ಶುಕ್ರವಾರಕ್ಕೆ ತನ್ನ ಆದೇಶ ಕಾಯ್ದಿರಿಸಿದೆ.

Latest Videos

ಎಂ.ಎನ್‌. ಕುಮಾರ್‌ ಮತ್ತು ಎಂ.ಎನ್‌. ಸುರೇಶ್‌ ಅವರು ತಮ್ಮ ವಿರುದ್ಧ ಮಾನಹಾನಿ ಹೇಳಿಕೆ ಮತ್ತು ಸುಳ್ಳು ಆರೋಪ ಮಾಡಿದ್ದಾರೆ ಎಂದು ಆರೋಪಿಸಿ ನಟ ಸುದೀಪ್‌ ದಾಖಲಿಸಿರುವ ಖಾಸಗಿ ದೂರಿನ ವಿಚಾರಣೆಯನ್ನು ಗುರುವಾರ ವಿಚಾರಣೆ ನಡೆಸಿದ 13ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರಾದ ವೆಂಕಣ್ಣ ಬಸಪ್ಪ ಹೊಸಮನಿ ಅವರು ಆದೇಶ ಕಾಯ್ದಿರಿಸಿದ್ದಾರೆ.

ತಿರುಪತಿಯಲ್ಲಿ ಸುದೀಪ್; ಆ. 1ರಿಂದ ಕಿಚ್ಚ 46 ಅಬ್ಬರ ಶುರು!

ನ್ಯಾಯಾಲಯದ ಹಿಂದಿನ ನಿರ್ದೇಶನದಂತೆ ತಮ್ಮ ವಕೀಲರ ಜೊತೆಗೆ ಗುರುವಾರ ವಿಚಾರಣೆಗೆ ಹಾಜರಾದ ಸುದೀಪ್‌, ಎಂ.ಎನ್‌. ಕುಮಾರ್‌ ಮತ್ತು ಎಂ.ಎನ್‌. ಸುರೇಶ್‌ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಮನೆ ಕಟ್ಟಲು ತಮಗೆ ಹಣದ ನೆರವು ನೀಡಿರುವುದಾಗಿ ಅವರು ಸುದ್ದಿಗೋಷ್ಠಿ ನಡೆಸಿ ಸುಳ್ಳು ಹೇಳಿದ್ದಾರೆ. ಇದರಿಂದ ಹಲವರು ತಮ್ಮನ್ನು ಪ್ರಶ್ನೆ ಮಾಡಿದ್ದಾರೆ. ಇದರಿಂದ 22 ವರ್ಷಗಳಿಂದ ಚಿತ್ರರಂಗದಲ್ಲಿ ಕಷ್ಟಪಟ್ಟು ಗಳಿಸಿದ್ದ ತಮ್ಮ ಹೆಸರು ಹಾಗೂ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂಬುದು ಸೇರಿದಂತೆ ಖಾಸಗಿ ದೂರಿನಲ್ಲಿ ಉಲ್ಲೇಖಿಸಿರುವ ವಿಚಾರಗಳ ಬಗ್ಗೆ ಪ್ರಮಾಣೀಕೃತ ಹೇಳಿಕೆ ದಾಖಲಿಸಿ, ಕೆಲವೊಂದು ದಾಖಲೆ ಒದಗಿಸಿದರು.

ಈ ವೇಳೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ನಿರ್ಮಾಪಕರು ಕ್ಷಮೆ ಕೋರಿದರೆ ಅವರನ್ನು ಕ್ಷಮಿಸುವಿರಾ? ಅವರೊಂದಿಗೆ ರಾಜೀ ಸಂಧಾನ ಮಾಡಿಕೊಳ್ಳುವಿರಾ ಎಂದು ಸುದೀಪ್‌ಗೆ ಕೇಳಿದರು. ಈ ಪ್ರಶ್ನೆಗೆ ಸುದೀಪ್‌ ಯಾವುದೇ ಹೇಳಿಕೆ ನೀಡದಿದ್ದರೂ, ಅವರ ಪರ ವಕೀಲರು ಉತ್ತರಿಸಿ, ಪ್ರಕರಣದಲ್ಲಿ ನಿರ್ಮಾಪಕರೊಂದಿಗೆ ಯಾವುದೇ ರಾಜೀ ಮಾಡಿಕೊಳ್ಳುವುದಿಲ್ಲ. ಈ ರೀತಿ ಮಾನಹಾನಿ ಮಾಡಿದವರಿಗೆ ಪಾಠ ಕಲಿಸಬೇಕಿದೆ ಎಂದು ಹೇಳಿದರು.

ರವಿಚಂದ್ರನ್ ಪ್ರಕಟಿಸುವ ನಿರ್ಧಾರಕ್ಕೆ ಬದ್ಧರಾಗ್ತಾರಾ ಸುದೀಪ್-ಕುಮಾರ್ ?

ನಂತರ ಸುದೀಪ್‌ ನೀಡಿದ ಹೇಳಿಕೆಗಳನ್ನು ದಾಖಲಿಸಿಕೊಂಡ ನ್ಯಾಯಾಧೀಶರು, ಶುಕ್ರವಾರಕ್ಕೆ ಆದೇಶ ಕಾಯ್ದಿರಿಸಿದರು.

click me!