
ರಣವೀರ್ ಸಿಂಗ್ ಅವರ 'ಧುರಂಧರ್: ದಿ ರಿವೆಂಜ್' ಚಿತ್ರಕ್ಕಾಗಿ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಅದರಲ್ಲೂ ಮೊದಲ ಭಾಗ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿ ಆಲ್‌ಟೈಮ್ ಬ್ಲಾಕ್‌ಬಸ್ಟರ್ ಆಗಿತ್ತು. ಇದರ ನಡುವೆ 'ಧುರಂಧರ್ 2' ಚಿತ್ರದ ಮೊದಲ ವಿಮರ್ಶೆ ಈಗ ಮೀಡಿಯಾದಲ್ಲಿ ವೈರಲ್ ಆಗಿದೆ. ಅಂದಹಾಗೆ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಕೂಡ ರಿಲೀಸ್ ಆಗಲಿದೆ. ಈ ಎರಡೂ ಸಿನಿಮಾಗಳ ನಡುವೆ ಸ್ಪರ್ಧೆ ಇದೆ!
ನಿರ್ದೇಶಕ ಆದಿತ್ಯ ಧರ್ ಅವರ ಪತ್ನಿ ಮತ್ತು ನಟಿ ಯಾಮಿ ಗೌತಮ್ 'ಧುರಂಧರ್ 2' ಚಿತ್ರವನ್ನು ನೋಡಿದ್ದಾರಂತೆ. ಜನರ ನಿರೀಕ್ಷೆಗಿಂತ ಸಿನಿಮಾ ತುಂಬಾ ಚೆನ್ನಾಗಿದೆ ಎಂದು ಅವರು ಹೇಳಿದ್ದಾರೆ. ಈ ಸಿನಿಮಾ ನೋಡುವಾಗ ತಾನು ತುಂಬಾ ಭಾವುಕಳಾಗಿದ್ದೆ ಎಂದೂ ಯಾಮಿ ತಿಳಿಸಿದ್ದಾರೆ.
ಯಾಮಿ ಗೌತಮ್ ಅವರು ನ್ಯೂಸ್18 ರೈಸಿಂಗ್ ಭಾರತ್ ಶೃಂಗಸಭೆಯಲ್ಲಿ ಮಾತನಾಡುತ್ತಿದ್ದರು. ವರದಿಗಳ ಪ್ರಕಾರ, 'ಧುರಂಧರ್ 2' ಚಿತ್ರದಲ್ಲಿ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ 'ಧುರಂಧರ್ 2' ಬಗ್ಗೆ ಕೇಳಿದಾಗ, 'ಧುರಂಧರ್‌ಗೆ ಸಂಬಂಧಿಸಿದ ಯಾವುದೇ ಮುಖ್ಯ ಮಾಹಿತಿಯನ್ನು ಆದಿತ್ಯ ಅವರೇ ನೀಡುತ್ತಾರೆ. ಎಲ್ಲರಂತೆ ನನಗೂ ಆ ದಿನ (ಮಾರ್ಚ್ 19, 2026) ಚಿತ್ರಮಂದಿರದಲ್ಲಿ ಒಂದು ಪ್ರಮುಖ ಅಪಾಯಿಂಟ್‌ಮೆಂಟ್ ಇದೆ. ಹಾಗಾಗಿ ಅಲ್ಲೇ ಸಿಗೋಣ' ಎಂದಿದ್ದಾರೆ.
ಇದೇ ಸಂವಾದದಲ್ಲಿ ಯಾಮಿ, "ನಾನು 'ಧುರಂಧರ್ 2' ನೋಡಿದ್ದೇನೆ. ಇದು ನಿರೀಕ್ಷೆಗಿಂತಲೂ ಅದ್ಭುತವಾಗಿದೆ. ನಾನು ನಿಜವಾಗಿಯೂ ಭಾವುಕಳಾಗಿದ್ದೆ. ಆ ದಿನ ನನಗೆ ಫ್ಲೈಟ್ ಹಿಡಿಯಬೇಕಿತ್ತು, ಹಾಗಾಗಿ ಆದಿತ್ಯಗೆ ಏನೂ ಹೇಳಲಾಗಲಿಲ್ಲ. ಆದರೆ ನಂತರ ನಾನೇನೂ ಮಾಡಲು ಸಾಧ್ಯವಾಗಲಿಲ್ಲ. ಒಂದು ಸ್ಕ್ರಿಪ್ಟ್ ಓದಬೇಕಿತ್ತು, ಆದರೆ ಓದಲಾಗಲಿಲ್ಲ. ಏನನ್ನೋ ನೋಡಬೇಕಿತ್ತು, ಆದರೆ ನೋಡಲಾಗಲಿಲ್ಲ. ನಾನು ಸುಮ್ಮನೆ ಹೊರಗೆ ಸುಂದರವಾದ ಸೂರ್ಯಾಸ್ತವನ್ನು ನೋಡುತ್ತಾ, ಫ್ಲೈಟ್ ಲ್ಯಾಂಡ್ ಆದಾಗ ಆದಿತ್ಯಗೆ ಏನು ಹೇಳಲಿ ಎಂದು ಯೋಚಿಸುತ್ತಿದ್ದೆ. ಆ ಚಿತ್ರ ಮತ್ತು ನನ್ನ ಅನುಭವಕ್ಕೆ ನ್ಯಾಯ ಸಲ್ಲಿಸಬೇಕಿತ್ತು. ಆದಿತ್ಯ ತನ್ನ ಪ್ರೇಕ್ಷಕರನ್ನು ಮತ್ತು ದೇಶವನ್ನು ತುಂಬಾ ಪ್ರೀತಿಸುತ್ತಾರೆ. ಈ ಸಿನಿಮಾ ಮಾಡಲು ಅವರು ತಮ್ಮ ಸಂಪೂರ್ಣ ಜೀವವನ್ನೇ ಪಣಕ್ಕಿಟ್ಟಿದ್ದಾರೆ. 'ಧುರಂಧರ್ 2' ಪ್ರೇಕ್ಷಕರು ಎಂದಿಗೂ ಮರೆಯಲಾಗದ ಅನುಭವ ನೀಡಲಿದೆ" ಎಂದು ಹೇಳಿದರು.
ತಾನು 'ಆರ್ಟಿಕಲ್ 370' ಚಿತ್ರದ ಶೂಟಿಂಗ್‌ನಲ್ಲಿದ್ದಾಗ 'ಧುರಂಧರ್’ ಚಿತ್ರದ 40 ಪುಟಗಳ ಸ್ಕ್ರಿಪ್ಟ್ ಓದಿದ್ದೆ ಎಂದು ಯಾಮಿ ಇದೇ ವೇಳೆ ಬಹಿರಂಗಪಡಿಸಿದರು. ಸ್ಕ್ರಿಪ್ಟ್ ಓದುವಾಗ ಅವರ ಕಣ್ಣಲ್ಲಿ ನೀರು ಬಂದಿತ್ತಂತೆ ಮತ್ತು ಈ ಸಿನಿಮಾ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ತರುತ್ತದೆ ಎಂಬ ನಂಬಿಕೆ ಅವರಿಗಿತ್ತು.
ಡಿಸೆಂಬರ್ 5, 2025 ರಂದು ಬಿಡುಗಡೆಯಾದ 'ಧುರಂಧರ್' ವಿಶ್ವಾದ್ಯಂತ 1300 ಕೋಟಿ ರೂ.ಗಿಂತ ಹೆಚ್ಚು ಗಳಿಕೆ ಮಾಡಿತ್ತು. ಇದು ಹಿಂದಿ ಚಿತ್ರರಂಗದ ಎರಡನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿ ಹೊರಹೊಮ್ಮಿತು. ಈ ಸ್ಪೈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆಗೆ ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್, ಆರ್. ಮಾಧವನ್, ಸಂಜಯ್ ದತ್, ರಾಕೇಶ್ ಬೇಡಿ ಮತ್ತು ಸಾರಾ ಅರ್ಜುನ್ ನಟಿಸಿದ್ದರು. ಚಿತ್ರದ ಎರಡನೇ ಭಾಗ 'ಧುರಂಧರ್: ದಿ ರಿವೆಂಜ್' ಮಾರ್ಚ್ 19, 2026 ರಂದು ಬಿಡುಗಡೆಯಾಗಲಿದೆ. ಅಕ್ಷಯ್ ಖನ್ನಾ ಹೊರತುಪಡಿಸಿ ಹೆಚ್ಚಿನ ಕಲಾವಿದರು ಮತ್ತೆ ಕಾಣಿಸಿಕೊಳ್ಳಲಿದ್ದಾರೆ. ಯಶ್ ನಟನೆಯ 'ಟಾಕ್ಸಿಕ್' ಚಿತ್ರದೊಂದಿಗೆ ಕ್ಲ್ಯಾಶ್ ಆಗಲಿರುವ ಈ ಸಿನಿಮಾದಲ್ಲಿ ಇಮ್ರಾನ್ ಹಶ್ಮಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು ಎಂದು ವರದಿಗಳು ಹೇಳಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.