ಗೌರವ ಡಾಕ್ಟರೇಟ್ ಸ್ವೀಕರಿಸಿ ಭಾವುಕಾರದ ನಟ ರಮೇಶ್ ಅರವಿಂದ್

By Suvarna News  |  First Published Sep 14, 2022, 5:44 PM IST

ಬೆಳಗಾವಿ ರಾಣಿ ಚೆನ್ನಮ್ಮ ‌ವಿವಿಯ 10ನೇ ಘಟಿಕೋತ್ಸವದಲ್ಲಿ ನಟ ರಮೇಶ್ ಅರವಿಂದ್ ಸೇರಿ ಮೂವರಿಗೆ ಗೌರವ ಡಾಕ್ಟರೇಟ್ ನೀಡಲಾಯ್ತು. ಈ ವೇಳೆ ರಮೇಶ್ ಅರವಿಂದ್ ಭಾವುಕರಾದರು.


ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ


ಬೆಳಗಾವಿ, (ಸೆಪ್ಟೆಂಬರ್.14):
ರಾಣಿ ಚೆನ್ನಮ್ಮ ‌ವಿವಿಯ 10ನೇ ಘಟಿಕೋತ್ಸವ ಕಾರ್ಯಕ್ರಮ ಇಂದು(ಸೆ.14) ನಡೆಯಿತು. ಈ ವೇಳೆ ಖ್ಯಾತ ಕನ್ನಡ ಚಿತ್ರನಟ ರಮೇಶ್ ಅರವಿಂದ್ ಸೇರಿ ಮೂವರಿಗೆ ಗೌರವ ಡಾಕ್ಟರೇಟ್ ನೀಡಲಾಯಿತು. 

ಸಮಾಜ ಸೇವಾ ಕ್ಷೇತ್ರದದಲ್ಲಿಯ ಕೊಡುಗೆ ಪರಿಗಣಿಸಿ ನಗರಾಭಿವೃದ್ಧಿ ತಜ್ಞ ಹಾಗೂ ಸಮಾಜ ಸೇವಕರಾದ ವ್ಹಿ. ರವಿಚಂದರ್ ವೆಂಕಟರಾಮನ್ ಅವರಿಗೆ ‘ಡಾಕ್ಟರ್‌ ಆಫ್ ಸೈನ್ಸ್’, ಚಲನಚಿತ್ರ ಕ್ಷೇತ್ರದಲ್ಲಿನ ಸೇವೆ ಪರಿಗಣಿಸಿ ನಟ ಹಾಗೂ ನಿರ್ದೇಶಕರಾದ ರಮೇಶ್ ಅರವಿಂದ ಅವರಿಗೆ ‘ಡಾಕ್ಟರ್‌ ಆಫ್ ಲೆಟರ್ಸ್' ಮತ್ತು ಸಾಮಾಜಿಕ ಹಾಗೂ ಧಾರ್ಮಿಕ ವಲಯದಲ್ಲಿಯ ಅಪಾರ ಸೇವೆ ಪರಿಗಣಿಸಿ ಬೀದರನ ಬಸವತತ್ವ ಪ್ರಚಾರಕಿ, ಕಾಯಕ ದಾಸೋಹ ಪ್ರಚಾರಕಿ ಮಾತಾ ಅಕ್ಕ ಅನ್ನಪೂರ್ಣಾ ತಾಯಿ ಅವರಿಗೆ ‘ಡಾಕ್ಟರ್‌ ಆಫ್ ಲೆಟರ್ಸ್' ಗೌರವ ಡಾಕ್ಟರೇಟ್ ಪದವಿಗಳನ್ನು ನೀಡಿ ಗೌರವಿಸಲಾಯಿತು.

Tap to resize

Latest Videos

ವಿವಿಧ ವಿಭಾಗಗಳಲ್ಲಿ 48 ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಪ್ರಧಾ‌ನ ಮಾಡಲಾಯಿತು. ಸ್ನಾತಕೋತ್ತರ-ಪದವಿಯ 163 ವಿದ್ಯಾರ್ಥಿಗಳಿಗೆ ಪದಕ ವಿತರಣೆ ಮಾಡಲಾಯಿತು. ಆಂಧ್ರದ ಕೇಂದ್ರಿಯ ಬುಡಕಟ್ಟು ವಿವಿ ಕುಲಪತಿ ಪ್ರೊ. ಟಿ.ವಿ ಕಟ್ಟಿಮನಿ ಅವರಿಂದ ಘಟಿಕೋತ್ಸವ ಭಾಷಣ ಮಾಡಿದರು. 

Ramesh Aravind Formula ಯಶಸ್ಸಿಗೆ 13 ಮೆಟ್ಟಿಲು

ತಂದೆ ನೆನೆದು ಭಾವುಕರಾದ ರಮೇಶ್ ಅರವಿಂದ್

ಗೌರವ ಡಾಕ್ಟರೇಟ್ ಸ್ವೀಕರಿಸಿದ ಬಳಿಕ ಮಾತನಾಡುವ ವೇಳೆ ರಮೇಶ್ ಅರವಿಂದ್‌ ತಮ್ಮ ತಂದೆಯನ್ನು ನೆನೆದು ಭಾವುಕರಾದರು. ಗೌರವ ಡಾಕ್ಟರೇಟ್ ಸಿಕ್ಕಿದೆ ಎಂದು ಗೊತ್ತಾದ ತಕ್ಷಣ ಫ್ಯಾಮಿಲಿ ಗ್ರೂಪ್‌ಗೆ ಮೆಸೇಜ್ ಹಾಕಿದೆ‌. ನನ್ನ ಅಣ್ಣ, ಅಕ್ಕ, ತಮ್ಮ ಮೂರು ಜನ ಒಂದೇ ರಿಪ್ಲೈ ಕೊಟ್ರು. ಅಭಿನಂದನೆಗಳು ಅಪ್ಪ ಇದ್ದಿದ್ರೆ ತುಂಬಾ ಖುಷಿ ಪಟ್ಟೋರು ಅಂತಾ ರಿಪ್ಲೈ ಮಾಡಿದ್ರು‌. ಹೆತ್ತವರು ನಮ್ಮನ್ನು ನೋಡಿ ಖುಷಿಯಾಗುವಂತಹ ವಿಷಯಗಳು, ನಮ್ಮ ಆಪ್ತರು, ಕುಟುಂಬ ನಮ್ಮನ್ನ ನೋಡಿ ಖುಷಿಪಡುವ ವಿಷಯಗಳು ಸಿಕ್ಕಾಗ ನಮಗೂ ಖುಷಿ ಆಗಿಯೇ ಆಗುತ್ತೆ ಎಂದರು.

ನನಗೆ ಗೌರವ ಡಾಕ್ಟರೇಟ್ ನೀಡಿದ ರಾಜ್ಯಪಾಲರು, ರಾಣಿ ಚನ್ನಮ್ಮ ವಿವಿ ಕುಲಪತಿ & ಇಡಿ ಟೀಮ್‌‌ಗೆ ಧನ್ಯವಾದ. ಇದಕ್ಕೆಲ್ಲ ಕಾರಣ ಸಿನಿಮಾ, ಸಿನಿಮಾ ನನಗೆ ಎಲ್ಲವನ್ನೂ ಕೊಟ್ಟಿತು. ಅದ್ಭುತವಾದ ಸಿನಿಮಾ, ಪಾತ್ರಗಳನ್ನು ಕೊಟ್ಟಿತು. ಅದ್ಭುತವಾದ ನಟ, ನಟಿಯರ ಜೊತೆ ಅಭಿನಯಿಸುವ ಅವಕಾಶ ಕೊಟ್ಟಿದೆ‌. ನನಗೆ ಅನುಕೂಲವಾದ ಜೀವನ ಸಿನಿಮಾ ಕೊಟ್ಟಿದೆ‌. ಶ್ರೇಷ್ಠವಾದ ಡೈರೆಕ್ಟರ್‌ಗಳು, ಸಿನಿಮಾಟೋಗ್ರಾಫರ್, ಮ್ಯೂಸಿಕ್ ಡೈರೆಕ್ಟರ್, ಗ್ರೇಟ್ ಟೆಕ್ನಿಷಿಯನ್ ಜೊತೆ ಸೇರಿ ದೃಶ್ಯ ಕಾವ್ಯ ಮಾಡುವ ಅವಕಾಶ ಸಿನಿಮಾ ನನಗೆ ಕೊಟ್ಟಿದೆ. ಮೂರು ದಶಕಗಳ ಕಾಲ ನೀವು ನನ್ನ ಸ್ನೇಹಿತರಾಗಿದ್ದೀರಿ.‌ ಸಿನಿಮಾ ರಂಗದಲ್ಲಿ ನನಗೆ ಅವಕಾಶ ಕೊಟ್ಟ ಎಲ್ಲ ಮಹನೀಯರಿಗೆ ಧನ್ಯವಾದ.ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡ ಪ್ರತಿಯೊಬ್ಬರಿಗೂ ಧನ್ಯವಾದ ಎಂದು ಹೇಳಿದರು.

 ಸಿನಿಮಾ ಅನ್ನೋದು ಬಿಟ್ರೆ ನನ್ನ ಪುಟ್ಟ ಜಗತ್ತು ನನ್ನ ಫ್ಯಾಮಿಲಿ.‌ನನ್ನ ಅಮ್ಮ, ಹೆಂಡತಿ, ಮಗ, ಮಗಳು, ಅಳಿಯ ಸೇರಿ ಈ ಫ್ಯಾಮಿಲಿ ದೊಡ್ಡ ಸಪೋರ್ಟ್ ನನಗೆ. ಇಲ್ಲಿ ನೆಮ್ಮದಿ ಇಲ್ಲ ಅಂದ್ರೆ ಸಿನಿಮಾ ಜಾಗದಲ್ಲಿ ನಾನು ಏನು ಮಾಡಲಾಗುತ್ತಿರಲಿಲ್ಲ. ನನ್ನ ಕುಟುಂಬದವರಿಗೆ ಧನ್ಯವಾದಗಳು‌. ಮೂರನೇಯದ್ದು ನೀವು, ನಾನು ಮೊದಲ ಮಾಡಿದ ಸುಂದರ ಸ್ವಪ್ನ ಚಿತ್ರ, ಮೌನಗೀತೆಯಿಂದ  ಮಧುಮಾಸವರೆಗೂ ನೀವು ನನಗೆ ಸೈ ಎಂದಿದ್ದೀರಿ‌‌. ನಮ್ಮೂರ ಮಂದಾರ ಹೂವೇ, ಅಮೃತ ವರ್ಷಿಣಿ, ಅಮೆರಿಕ ಅಮೆರಿಕ, ಉಲ್ಟಾಪಲ್ಟಾ ಚಿತ್ರ ಬಂದಾಗ ನನ್ನ ಬೆನ್ನು ತಟ್ಟಿದೀರಿ.ಆಪ್ತಮಿತ್ರ,ರಾಮ ಶ್ಯಾಮ ಭಾಮ, ವೀಕೆಂಡ್ ವಿಥ್ ರಮೇಶ್ ಶೋ ಮಾಡಿದೆ ಆಗಲೂ ನೀವು ನನ್ನ ಜೊತೆಗಿದ್ರಿ‌. ನೀವು ನನ್ನ ಕೈ ಬಿಡಲಿಲ್ಲ, ಹಾಗಾಗಿ 30 ವರ್ಷ ನಾನಿಲ್ಲಿದೀನಿ ಇದಕ್ಕೆಲ್ಲ ಕಾರಣ ನೀವು. ಟಿಕೆಟ್ ತೆಗೆದುಕೊಂಡು ಚಿತ್ರ ನೋಡಿದ ಪ್ರತಿ ಪ್ರೇಕ್ಷಕನಿಗೂ ನನ್ನ ಧನ್ಯವಾದಗಳು' ಎಂದು ಮಾಧ್ಯಮದವರಿಗೆ, ಪ್ರೇಕ್ಷಕರಿಗೆ ನಟ ರಮೇಶ್ ಅರವಿಂದ್ ಧನ್ಯವಾದ ತಿಳಿಸಿದರು.

ಶ್ರೇಷ್ಠ, ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಕೈಜೋಡಿಸಿ ಎಂದ ರಾಜ್ಯಪಾಲ
ನವ ಪದವೀಧರ ಯುವಕ-ಯುವತಿಯರು ನವಭಾರತ, ಶ್ರೇಷ್ಠ ಹಾಗೂ ಆತ್ಮನಿರ್ಭರ ಭಾರತ ನಿರ್ಮಾಣದಲ್ಲಿ ಕೈಜೋಡಿಸಬೇಕು. ಭಾರತವನ್ನು ಸಾಧನೆ, ಸಮೃದ್ಧಿಯ ಉನ್ನತ ಶಿಖರದತ್ತ ಕೊಂಡೊಯ್ಯುವ ದಿಸೆಯಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಘನತೆವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಕರೆ ನೀಡಿದರು. 

ಭಾರತದ ನವ್ಯೋದ್ಯಮವು ಜಗತ್ತಿನ ಆಕರ್ಷಕ ಕೇಂದ್ರವಾಗಿದೆ. ಹೊಸ ಶಿಕ್ಷಣ ನೀತಿಯು‌ ನವಭಾರತ ನಿರ್ಮಾಣಕ್ಕೆ ಸಹಕಾರಿಯಾಗಲಿದೆ. ನೈಸರ್ಗಿಕ ಸಂಪನ್ಮೂಲಗಳ ಬಳಸಿಕೊಂಡು ನಮ್ಮ ಕ್ರಿಯಾಶೀಲತೆಯ ಮೂಲಕ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯೋಣ. ರಾಷ್ಟ್ರೀಯ ಶಿಕ್ಷಣ ನೀತಿ-2022ರ ಅನುಷ್ಠಾನದ ಜತೆಗೆ ಸಮಗ್ರ ಶಿಕ್ಷಣವನ್ನು ರಾಣಿ ಚೆನ್ನಮ್ಮ ವಿವಿ ನೀಡುತ್ತಿದೆ. ರಾಜ್ಯದ ಅತೀ ದೊಡ್ಡ ವಿವಿಗಳಲ್ಲಿ ರಾಣಿ ಚನ್ನಮ್ಮ ವಿವಿ ಕೂಡ ಒಂದು. ಕಡಿಮೆ ಅವಧಿಯಲ್ಲಿ ಉತ್ತಮ‌ ಶೈಕ್ಷಣಿಕ ಸಾಧನೆ ತೋರಿದ ಕುಲಪತಿ ಮತ್ತು ತಂಡಕ್ಕೆ ಅಭಿನಂದನೆ. ರಾಣಿ ಚೆನ್ನಮ್ಮ ಅವರ ತ್ಯಾಗ-ಬಲಿದಾನ ಹಾಗೂ ಶೌರ್ಯ-ಪರಾಕ್ರಮವನ್ನು ಸ್ಮರಿಸಿದ ಅವರು, ಯುವ ಸಮುದಾಯಕ್ಕೆ ರಾಣಿ ಚೆನ್ನಮ್ಮ ಪ್ರೇರಣೆಯಾಗಲಿ ಎಂದರು. 

ಗೌರವ ಡಾಕ್ಟರೇಟ್ ಪಡೆದುಕೊಂಡ ಮಹನೀಯರನ್ನು ಅಭಿನಂದಿಸಿದ ರಾಜ್ಯಪಾಲರು,  ಸಮಾಜದೆಡೆಗಿನ ತಮ್ಮ ಕರ್ತವ್ಯವನ್ನು ಹೀಗೆ ಮುಂದುವರಿಸಿಕೊಂಡು ಹೋಗಬೇಕು' ಎಂದು ತಿಳಿಸಿದರು‌. ಮಾತೃಭಾಷೆಗೆ ಆದ್ಯತೆ ದೊರಕಬೇಕು. ದೇಶದ ಸಾಂಸ್ಕೃತಿಕ ವೈಭವವನ್ನು ಮರುಸ್ಥಾಪಿಸುವುದರ ಜತೆಗೆ ಹೊಸ ಶಿಕ್ಷಣ ನೀತಿ ಯಶಸ್ವಿಗೆ ತಾವೆಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ವಸುದೈವ ಕುಟುಂಬಕಂ, ಸರ್ವೇ ಜನಃ ಸುಖಿನೋ ಭವಂತು ಎಂಬ ಮಾತುಗಳನ್ನು ಗಮನದಲ್ಲಿಟ್ಟುಕೊಂಡು ಈ ನಿಟ್ಟಿನಲ್ಲಿ ಸಾಗಬೇಕು. ಕ್ರೀಡೆಗಳಲ್ಲಿ ಇತರೆ ದೇಶಗಳು ಹೆಚ್ವಿನ ಪದಕ‌ ಗೆದ್ದಾಗ ನಾವು ಕೂಡ ಕ್ರೀಡೆಯಲ್ಲಿ ಇನ್ನಷ್ಟು ಸಾಧನೆ‌ ಮಾಡಬೇಕು ಎಂಬ ಆಶಯ‌ ನಮ್ಮೆಲ್ಲರದಾಗಿದೆ. ಈ ದಿಸೆಯಲ್ಲಿ ಯುವ ಸಮುದಾಯಕ್ಕೆ ಅಗತ್ಯ ಅವಕಾಶಗಳನ್ನು ಕಲ್ಪಿಸಬೇಕಿದೆ ಎಂದು ತಿಳಿಸಿದರು.

ಶಾಲೆ-ಪ್ರಯೋಗಾಲಯದ ಅಂತರ ಕಡಿಮೆಗೊಳಿಸಬೇಕು
ಘಟಿಕೋತ್ಸವ ಭಾಷಣ ಮಾಡಿದ ಆಂಧ್ರಪ್ರದೇಶದ ವಿಜಯನಗರಂ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಡಾ.ತೇಜಸ್ವಿ ಕಟ್ಟಿಮನಿ, 'ಶಾಲೆಯಲ್ಲಿನ ವಿಜ್ಞಾನ ಹಾಗೂ ಪ್ರಯೋಗಾಲಯದ ವಿಜ್ಞಾನದ ನಡುವೆ ಅಂತರವು ನಿರಂತರವಾಗಿ ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳಿಗೆ ವಿಜ್ಞಾನದ ಮಹತ್ವವನ್ನು ತಿಳಿಸುವ ಅಗತ್ಯವಿದೆ. ದೇಶದ ಅತ್ಯುನ್ನತ ಉನ್ನತ ಶಿಕ್ಷಣ ಸಂಸ್ಥೆಗಳಾಗಿರುವ ಐಐಟಿ, ಎನ್.ಐ.ಟಿ. ಹಾಗೂ ಕೇಂದ್ರೀಯ ವಿಶ್ವವಿದ್ಯಾಲಯಗಳು ಸಂಶೋಧನಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೈಯುತ್ತಿವೆ. ಆದರೆ ಈ ಸಂಸ್ಥೆಗಳಲ್ಲಿ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಇರುವುದರಿಂದ ಹೆಚ್ಚು ಜನರಿಗೆ ಕಲಿಕೆಯ ಅವಕಾಶ ಸಿಗುತ್ತಿಲ್ಲ. ಈ ಸಮಸ್ಯೆಯನ್ನು ನೀಗಿಸುವ ನಿಟ್ಟಿನಲ್ಲಿ ರಾಜ್ಯದ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಗುಣಮಟ್ಟ ಮತ್ತು ಮೂಲಸೌಕರ್ಯ ಕಲ್ಪಿಸಲು ಕೇಂದ್ರ ಸರ್ಕಾರ ಕೂಡ ಇನ್ನೂ ಹೆಚ್ಚಿನ ವಿಶೇಷ ಅನುದಾನ ಒದಗಿಸಬೇಕು ಎಂದು ಹೇಳಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಫಸ್ಟ್ ರ‍್ಯಾಂಕ್ ಪಡದುಕೊಂಡ 6 ಸ್ನಾತಕ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಾಗೂ ವಿಷಯವಾರು ಅತೀ ಹೆಚ್ಚು ಅಂಕ ಗಳಿಸಿದ 4 ವಿದ್ಯಾರ್ಥಿನಿಯರಿಗೆ ಸೇರಿ 11 ಸುವರ್ಣ ಪದಕಗಳನ್ನು ಪ್ರದಾನ ಮಾಡಲಾಯಿತು. 

ಬ್ಯಾಚುಲರ್ ಆಫ್ ಕಾಮರ್ಸ್ ವಿದ್ಯಾರ್ಥಿನಿ ವಿದ್ಯಾವತಿ ಗುಡೋದಗಿ, ಬ್ಯಾಚುಲರ್ ಆಫ್ ಸೈನ್ಸ್ ವಿದ್ಯಾರ್ಥಿನಿ ದೀಪಿಕಾ ಚೌವ್ಹಾಣ, ಮಾಸ್ಟರ್ ಆಫ್ ಆರ್ಟ್ಸ್ ಇನ್ ಕನ್ನಡ ವಿದ್ಯಾರ್ಥಿನಿ ದ್ರಾಕ್ಷಾಯಿಣಿ ವಾಲ್ಮಿಕಿ, ಮಾಸ್ಟರ್ ಆಫ್ ಆರ್ಟ್ಸ್ ಇನ್ ಸೋಶಿಯಾಲಜಿ ವಿದ್ಯಾರ್ಥಿ ತಾತ್ಯಾಸಾಬ್ ಧಾಬಡೆ, ಮಾಸ್ಟರ್  ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ವಿದ್ಯಾರ್ಥಿನಿ ಗೌರಾ ಅಣೆಪ್ಪನವರ, ಮಾಸ್ಟರ್ ಆಫ್ ಸೈನ್ಸ್ ಇನ್ ಮ್ಯಾಥೆಮ್ಯಾಟಿಕ್ಸ್ ವಿದ್ಯಾರ್ಥಿನಿ ಅನುಜಾ ಪಾಟೀಲ ಸುವರ್ಣ ಪದಕ ಪಡೆದುಕೊಂಡರು. 

ಇನ್ನು ನಟ ರಮೇಶ್ ಅರವಿಂದ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ರು. ಎಂಎಡ್‌ನಲ್ಲಿ ಪ್ರಥಮ ರ‌್ಯಾಂಕ್ ಪಡೆದ ಬಾಗಲಕೋಟ ಜಿಲ್ಲೆಯ ಉಮಾ ತನ್ನ ಅವಳಿ ಮಕ್ಕಳ ಜೊತೆ ನಟ ರಮೇಶ್ ಅರವಿಂದ್ ಜೊತೆ ಫೋಟೋ ತಗೆಸಿಕೊಂಡಿದ್ದು ವಿಶೇಷವಾಗಿತ್ತು.

click me!