ಸದಾ ಟೀಕೆಗಳಿಂದಲೇ ಸುದ್ದಿಯಲ್ಲಿರುವ ನಟ ಪ್ರಕಾಶ್ ರಾಜ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ದಕ್ಷಿಣದ ಅತ್ಯಂತ ವಿವಾದಾತ್ಮಕ ನಟ ಎನಿಸಿಕೊಳ್ತಿರುವುದು ಏಕೆ ನಟ?
ಪ್ರಕಾಶ್ ರಾಜ್ ಭಾರತೀಯ ಚಿತ್ರರಂಗದ ಅತ್ಯುತ್ತಮ ನಟರಲ್ಲಿ ಒಬ್ಬರು ಮತ್ತು ಅವರು ಪ್ರತಿ ಚಿತ್ರದಲ್ಲೂ ತಮ್ಮ ಬಹುಮುಖತೆಯನ್ನು ಸಾಬೀತುಪಡಿಸಿದ್ದಾರೆ. ಆದರೆ ವರ್ಷಗಳಲ್ಲಿ ಅವರು ವಿವಾದಾತ್ಮಕ ದಕ್ಷಿಣ ಕಲಾವಿದರಲ್ಲಿ ಒಬ್ಬರೆಂದೇ ಕುಖ್ಯಾತಿಯನ್ನೂ ಗಳಿಸಿದ್ದಾರೆ. ಸಾಮಾನ್ಯವಾಗಿ ದಕ್ಷಿಣ ಭಾರತದ ಕಲಾವಿದರು ಯಾವುದೇ ವಿವಾದಕ್ಕೆ ಒಳಗಾಗದೇ ಸಾಮಾಜಿಕ ಜಾಲತಾಣದಿಂದ ದೂರವೇ ಉಳಿಯುತ್ತಾರೆ. ಆದರೆ ನಟ ಪ್ರಕಾಶ್ ರಾಜ್ ಈ ಎಲ್ಲಾ ನಟರಿಗಿಂತಲೂ ಭಿನ್ನ ವ್ಯಕ್ತಿತ್ವ ಉಳ್ಳವರು. ಅವರು ಪ್ರಸ್ತುತ ಸನ್ನಿವೇಶದ ಕುರಿತು ಅದರಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಸದಾ ಪ್ರತ್ಯಕ್ಷ ಮತ್ತು ಪರೋಕ್ಷ ಟೀಕೆಗಳನ್ನು ಮಾಡುತ್ತಲೇ ಇರುತ್ತಾರೆ. ಸ್ವಲ್ಪ ಜನಪ್ರಿಯತೆ ಕುಗ್ಗಿತು ಎಂದಾಕ್ಷಣ, ಯಾವುದೋ ಕೆಟ್ಟ ಪೋಸ್ಟ್ ಹಾಕಿ, ಟ್ರೋಲ್ಗೆ ಒಳಗಾದರೂ ಸರಿ, ಒಟ್ಟಿನಲ್ಲಿ ಸುದ್ದಿಯಲ್ಲಿ ಇರುವುದು ಇವರಿಗೆ ಇಷ್ಟ ಎಂದು ಹಲವರು ನಟನ ಕಾಲೆಳೆಯುವುದೂ ಇದೆ. ಇಂಥ ಪೋಸ್ಟ್ಗಳಿಗಾಗಿ ಒಂದಷ್ಟು ಮಂದಿಯಿಂದ ಹೊಗಳಿಸಿಕೊಳ್ಳುತ್ತಾರೆ. ಆದರೆ ಇದೇ ವೇಳೆ, ಇದೇ ಕಾರಣಕ್ಕೆ ಇವರಷ್ಟು ಕೆಟ್ಟ ಕಮೆಂಟ್ಗಳನ್ನು ಹಾಗೂ ಟೀಕೆಗಳನ್ನು ಎದುರಿಸುವ ದಕ್ಷಿಣದ ನಟರೂ ಬೇರಾರೂ ಇಲ್ಲ ಎಂದೇ ಹೇಳಬಹುದು. ಕೆಲವು ವೇಳೆ ಕಾನೂನು ಕುಣಿಕೆಯೂ ಇವರ ಮೇಲೆ ಸುತ್ತುತ್ತಿದ್ದುದು ಉಂಟು.
ಅಂದಹಾಗೆ ಇಂದು ಅಂದರೆ ಮಾರ್ಚ್ 26 ನ ಪ್ರಕಾಶ್ ರಾಜ್ ಅವರ 59ನೇ ಜನ್ಮದಿನ. ಅವರ ಜನ್ಮದಿನದಂದು, ಪ್ರಕಾಶ್ ರಾಜ್ ಅವರ ದೃಷ್ಟಿಕೋನಕ್ಕಾಗಿ ಚರ್ಚೆಯ ವಿಷಯವಾದ ಕೆಲವೊಂದು ನೋಟಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ. ಹಿಂದೊಮ್ಮೆ ಪ್ರಕಾಶ್ ರಾಜ್ ಅವರು, ಲುಂಗಿ ಮತ್ತು ಶರ್ಟ್‌ನಲ್ಲಿ ಕಾಫಿ ಸುರಿಯುತ್ತಿರುವ ವ್ಯಕ್ತಿಯ ಚಿತ್ರವನ್ನು ಪೋಸ್ಟ್ ಮಾಡಿದ್ದರು ಮತ್ತು ಇದು ಚಂದ್ರಯಾನದ ಮೊದಲ ನೋಟ ಎಂದು ಬರೆದಿದ್ದರು. ಈ ಪೋಸ್ಟ್ ನಿಂದ ಇವರು ಇನ್ನಿಲ್ಲದ ಕೆಟ್ಟ ಬೈಗುಳಗಳನ್ನು ಎದುರಿಸಿದರು. ನಂತರ ಭಾರಿ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ತಮ್ಮ ಹೇಳಿಕೆಗೆ ಸಮಜಾಯಿಷಿ ಕೊಡಲು ಪ್ರಯತ್ನಿಸಿದರೂ ಅದು ವರ್ಕ್ಔಟ್ ಆಗಲಿಲ್ಲ. ಯಾವುದೇ ವ್ಯಕ್ತಿಯ ವಿರುದ್ಧ ಇವರಿಗೆ ಕೆಟ್ಟ ಅಭಿಪ್ರಾಯ ಇದ್ದಿರಬಹುದು. ಆದರೆ ಇಡಿ ವಿಶ್ವವೇ ಚಂದ್ರಯಾನದಿಂದ ಭಾರತದತ್ತ ದೃಷ್ಟಿ ಬೀರುತ್ತಿರುವ ಸಮಯದಲ್ಲಿ, ಭಾರತದ ಕಾರ್ಯಕ್ಕೆ ವಿಶ್ವದ ಮೂಲೆಮೂಲೆಗಳಿಂದ ಶ್ಲಾಘನೆ ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿ, ನಟ ಇಂಥ ಕಮೆಂಟ್ ಮಾಡಿರುವುದಕ್ಕೆ ಅತ್ಯಂತ ಕೆಟ್ಟ ಕಮೆಂಟ್ಗಳೂ ನಟನ ವಿರುದ್ಧ ಕೇಳಿಬಂದವು. ನಂತರ ಪ್ರಕಾಶ್ ರಾಜ್ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದರಿಂದ ಕಾನೂನು ಸಂಕಷ್ಟಕ್ಕೆ ಸಿಲುಕಿದರು.
ನಟನಾಗಬೇಕೆಂದ್ರೆ ಸಿನಿಮಾನೇ ಯಾಕೆ ಮಾಡ್ಬೇಕು? ದುಡ್ಡಿಗಾಗಿ ವಿಲನ್ನೂ ಆಗ್ಬಿಟ್ಟೆ: ಪ್ರಕಾಶ್ ರಾಜ್
ಹಿಂದೂ ವಿರೋಧಿ ಹೇಳಿಕೆಯಂತೂ ಪ್ರಕಾಶ್ ರಾಜ್ರಿಂದ ಮಾಮೂಲು. ಚಂದ್ರಯಾನದ ಮೇಲಿನ ಇದೇ ಪೋಸ್ಟ್ ಆಕ್ಷೇಪಣೆ ಮತ್ತು ಹಿಂದೂ ವಿರೋಧಿ ಹೇಳಿಕೆಯಾಗಿಯೂ ಕಂಡುಬಂದಿತ್ತು. ಪ್ರಕಾಶ್ ರಾಜ್ ಅವರ ಮನೆಯ ಹೊರಗೆ ಪ್ರತಿಭಟನೆ ನಡೆಸಲಾಯಿತು ಮತ್ತು ಅಲ್ಲಿ ಅವರು ತಮ್ಮನ್ನು ಸಮರ್ಥಿಸಿಕೊಂಡರು. ನಾನು ಹಿಂದೂ ವಿರೋಧಿ ಎಂದು ಹೇಳುತ್ತಾರೆ, ಆದರೆ ನಾನು ಮೋದಿ ವಿರೋಧಿ, ಅಮಿತ್ ಷಾ ವಿರೋಧಿ ಮತ್ತು ಹೆಗಡೆ ವಿರೋಧಿ ಎಂದು ಹೇಳುತ್ತೇನೆ ಎಂದಿದ್ದರು.
ಇದೇ ವೇಳೆ, ಇನ್ನೊಂದು ಘಟನೆಯಲ್ಲಿ ಪ್ರಕಾಶ್ ರಾಜ್ ಅವರು, ಹಿಂದಿ ಹೇರಿಕೆ ಕುರಿತು ಮಾತನಾಡಿದ್ದರು. ನನಗೆ ಹಿಂದಿ ಮಾತನಾಡಲು ತಿಳಿದಿಲ್ಲ ಮತ್ತು ಅದನ್ನು ಯಾರೂ ತನ್ನ ಮೇಲೆ ಹೇರಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದರು. ಅವರು ತಮ್ಮ ವೈರಲ್ ಟ್ವೀಟ್‌ನಲ್ಲಿ "ನನ್ನ ಮೂಲ, ನನ್ನ ಮಾತೃಭಾಷೆ ಕನ್ನಡ. ಅದಕ್ಕೆ ಅವಮಾನ ಮಾಡಿ ನಿಮ್ಮ ಭಾಷೆಯನ್ನು ಹೇರಿದರೆ ನಾನು ಪ್ರತಿಭಟಿಸುತ್ತೇನೆ. ನೀವು ನನಗೆ ಬೆದರಿಕೆ ಹಾಕುತ್ತೀರಾ ಎಂದು ಬರೆದುಕೊಂಡಿದ್ದರು. ನಾನು 7 ಭಾಷೆಗಳನ್ನು ಮಾತನಾಡುತ್ತೇನೆ. ಭಾಷೆಯನ್ನು ಕಲಿಯುವುದು ಮತ್ತು ಮಾತನಾಡುವುದು ಎಂದರೆ ಅದರ ಜನರನ್ನು ಗೌರವಿಸುವುದು. ನಾನು ಕೆಲಸ ಮಾಡುವ ಜನರ ಪ್ರತಿಯೊಂದು ಭಾಷೆಯನ್ನು ನಾನು ಕಲಿತಿದ್ದೇನೆ. ನಾನು ನನ್ನ ಭಾಷೆಯನ್ನು ಯಾರ ಮೇಲೂ ಹೇರುವುದಿಲ್ಲ. ಆದರೆ ನೀವು ನನ್ನ ಭಾಷೆಯನ್ನು ಅವಮಾನಿಸಿ ನಿಮ್ಮ ಮೇಲೆ ಹೇರಿದರೆ ನಾನು ಪ್ರತಿಭಟಿಸುತ್ತೇನೆ ಎಂದಿದ್ದರು.
ರಾಜಕೀಯದ ಮೇಲಿನ ದೃಷ್ಟಿಕೋನದಿಂದಾಗಿ ತನ್ನ ಕೆಲಸದ ಮೇಲೆ ಪರಿಣಾಮ ಬೀರುತ್ತಿದೆ ಎಂದು ನಟ ತನ್ನ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಇದು ನನ್ನ ಮತ್ತು ವೃತ್ತಿ ಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಈಗ, ಕೆಲವರು ನನ್ನೊಂದಿಗೆ ಕೆಲಸ ಮಾಡುವುದಿಲ್ಲ, ಏಕೆಂದರೆ ಅವರಿಗೆ ನಾನು ಬೇಡವಾಗಿದ್ದೇನೆ. ಆದರೂ ನಾನು ಬಲಶಾಲಿ ಮತ್ತು ಶ್ರೀಮಂತನಾಗಿದ್ದೇನೆ, ಎಲ್ಲವನ್ನೂ ಕಳೆದುಕೊಳ್ಳುವಷ್ಟು ಶ್ರೀಮಂತನಾಗಿದ್ದೇನೆ. ನನ್ನ ಭಯವು ಯಾರೊಬ್ಬರ ಶಕ್ತಿಯಾಗಿರುತ್ತದೆ ಎಂದು ನಾನು ಯಾವಾಗಲೂ ಭಾವಿಸುತ್ತೇನೆ ಎಂದಿದ್ದರು.
ಡ್ರಾಮಾ ಜ್ಯೂನಿಯರ್ಸ್ ವೇದಿಕೆಗೆ ಪ್ರಕಾಶ್ ರಾಜ್: ಪ್ರೇಕ್ಷಕರಿಂದ ಭಾರಿ ವಿರೋಧ- ಏನೆಲ್ಲಾ ಹೇಳಿದ್ರು ನೋಡಿ...