
ನಟ ಕಿಚ್ಚ ಸುದೀಪ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸುದೀರ್ಘ ಪತ್ರ ಬರೆದಿದ್ದು, “ಆಪರೇಶನ್ ಸಿಂದೂರ”ದ ವಿಜಯಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ತಾಯಿ ಸರೋಜಾ ನಿಧನರಾದಾಗ ಸುದೀಪ್ ಅವರಿಗೆ ಮೋದಿ ಅವರು ತಿಳಿಸಿದ ಸಂತಾಪಗಳನ್ನು ಇಲ್ಲಿ ಸ್ಮರಿಸಿದ್ದಾರೆ.
ಕಿಚ್ಚ ಸುದೀಪ
ನಟ, ನಿರ್ಮಾಪಕ, ನಿರ್ದೇಶಕ
ದಿನಾಂಕ: 09 ಮೇ 2025
ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರೇ,
ನಮಸ್ಕಾರ.
ಮೊದಲಿಗೆ, ನನ್ನ ತಾಯಿ ಶ್ರೀಮತಿ ಸರೋಜಾ ಸಂಜೀವ್ ಅವರ ನಿಧನಕ್ಕೆ ನೀವು ಕಳುಹಿಸಿದ ಹೃದಯಸ್ಪರ್ಶಿ ಸಂತಾಪ ಪತ್ರಕ್ಕೆ ಧನ್ಯವಾದಗಳು. ವೈಯಕ್ತಿಕ ನಷ್ಟದ ಆ ಕ್ಷಣದಲ್ಲಿ, ನಿಮ್ಮ ಮಾತುಗಳು ನನಗೆ ಶಕ್ತಿ ಮತ್ತು ಕರುಣೆಯನ್ನು ನೀಡಿದವು, ಅದನ್ನು ನಾನು ಎಂದಿಗೂ ಮರೆಯಲಾರೆ.
ಇಂದು, ನಾನು ಕೇವಲ ಕೃತಜ್ಞನಾದ ಮಗನಾಗಿ ಮಾತ್ರವಲ್ಲ, ಒಬ್ಬ ಹೆಮ್ಮೆಯ ಭಾರತೀಯನಾಗಿ ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ.
ರಾಷ್ಟ್ರವು ಆಪರೇಷನ್ ಸಿಂದೂರದ ಯಶಸ್ಸಿಗೆ ಅಭಿನಂದನೆಗಳನ್ನು ತಿಳಿಸುತ್ತಿದೆ. ನಾನು ಕೂಡ ಇದನ್ನು ಮೆಚ್ಚುತ್ತಿದ್ದೇನೆ. ಇದು ಕೇವಲ ಪ್ರತಿಕ್ರಿಯೆಯಾಗಿರಲಿಲ್ಲ, ಇದೊಂದು ಹೇಳಿಕೆಯಾಗಿತ್ತು. ಭಾರತವು ಹಿಂದೆ ಸರಿಯದು, ಭಾರತವು ಮರೆಯದು, ಭಾರತವು ಯಾವಾಗಲೂ ಎದ್ದೇಳುತ್ತದೆ ಎಂಬ ಧೈರ್ಯಶಾಲಿ ಮತ್ತು ನಿರ್ಣಾಯಕ ಸಂದೇಶವನ್ನು ವಿಶ್ವಕ್ಕೆ ತಿಳಿಸಿದೆ.
ನಿಮ್ಮಲ್ಲಿ, ನಾವು ಕೇವಲ ಮಾತುಗಳಿಂದ ಮಾರ್ಗದರ್ಶನ ಮಾಡುವ ನಾಯಕನನ್ನಲ್ಲ, ಬದಲಾಗಿ ದೃಢನಿಶ್ಚಯದಿಂದ ಮುನ್ನಡೆಸುವ ನಾಯಕನನ್ನು ಕಾಣುತ್ತೇವೆ. ಈ ಕಾರ್ಯಾಚರಣೆಯನ್ನು ನಡೆಸಿದ ಸ್ಪಷ್ಟತೆ, ವಿಶ್ವಾಸವು ನಮ್ಮ ಸಂಸ್ಕೃತಿಯ ಆತ್ಮವನ್ನು ಪ್ರತಿಬಿಂಬಿಸುತ್ತದೆ, ಅದು ಯಾವಾಗಲೂ ನಿರ್ಭೀತವಾಗಿದೆ, ಧಾರ್ಮಿಕವಾಗಿದೆ, ಸಂಕಲ್ಪಶೀಲವಾಗಿದೆ.
ಪ್ರತಿಯೊಬ್ಬ ಕನ್ನಡಿಗನೂ, ಸಂಪೂರ್ಣ ಕನ್ನಡ ಚಿತ್ರರಂಗವೂ ನಿಮ್ಮೊಂದಿಗೆ ದೃಢವಾಗಿ ನಿಲ್ಲುತ್ತದೆ. ನಿಮ್ಮ ಧೈರ್ಯದಿಂದ ನಾವು ಸ್ಫೂರ್ತಿಯನ್ನು ಪಡೆಯುತ್ತೇವೆ.
ನಿಮ್ಮ ನಾಯಕತ್ವದಲ್ಲಿ, ನಮ್ಮ ರಕ್ಷಣಾ ಪಡೆಗಳು ಅತುಲ್ಯವಾದ ನಿಖರತೆ, ಶಿಸ್ತು ಮತ್ತು ಶೌರ್ಯವನ್ನು ಪ್ರದರ್ಶಿಸಿವೆ. ಅವರ ಯಶಸ್ಸು ನಮ್ಮ ಹೆಮ್ಮೆಯಾಗಿದೆ.
ನಾವು ಒಂದೇ ಜನ, ಒಂದೇ ಧ್ವನಿ, ಒಂದೇ ರಾಷ್ಟ್ರವಾಗಿ ಒಗ್ಗಟ್ಟಾಗಿ ನಿಲ್ಲುತ್ತೇವೆ.
ಜೈ ಹಿಂದ್. ಜೈ ಕರ್ನಾಟಕ. ಜೈ ಭಾರತ.
ಶ್ರೀ ನರೇಂದ್ರ ಮೋದಿ,
ಮಾನ್ಯ ಪ್ರಧಾನ ಮಂತ್ರಿ, ಭಾರತ ಸರ್ಕಾರ,
ಸೌತ್ ಬ್ಲಾಕ್, ರೈಸಿನಾ ಹಿಲ್,
ನವದೆಹಲಿ - 110011
ಗೌರವ ಮತ್ತು ಒಗ್ಗಟ್ಟಿನೊಂದಿಗೆ,
ಸುದೀಪ್ ಸಂಜೀವ್,
ಭಾರತದ ಹೆಮ್ಮೆಯ ಪುತ್ರ,
ಬೆಂಗಳೂರು, ಕರ್ನಾಟಕ.
#359, 17ನೇ ಎ ರಸ್ತೆ, 26ನೇ ಮುಖ್ಯ ರಸ್ತೆ,
ಜೆ.ಪಿ.ನಗರ, 6ನೇ ಹಂತ, ಬೆಂಗಳೂರು - 560078
ಎರಡು ದಿನದ ಹಿಂದೆ ಹೇಳಿದ್ದೇನು?
ಒಂದೆರಡು ದಿನಗಳ ಹಿಂದೆ ʼಆಪರೇಶನ್ ಸಿಂದೂರʼದ ಬಗ್ಗೆ ಕಿಚ್ಚ ಸುದೀಪ್ ಅವರು ಟ್ವೀಟ್ ಮಾಡಿದ್ದರು. “ನಾನು ಭಾರತೀಯನಾಗಿ… ಈ ಪವಿತ್ರವಾದ ಭೂಮಿಯ ಮಗನಾಗಿ,
ಪಹಲ್ಗಾಮ್‌ನಲ್ಲಿ ನಡೆದಿರುವ ನೋವಿನ ಕಂಪನವನ್ನು ಅನುಭವಿಸಿದೆ. ಇಂದು, ನಾನು ನ್ಯಾಯದ ಗುಡುಗನ್ನು ಕೇಳುತ್ತಿದ್ದೇನೆ. ಆಪರೇಷನ್ ಸಿಂದೂರ: ಇದೊಂದು ಕೇವಲ ಮಿಷನ್ ಅಲ್ಲ, ಇದೊಂದು ಪವಿತ್ರ ಪ್ರತಿಜ್ಞೆ.ಭಾರತದ ಸಿಂದೂರಕ್ಕೆ ಈ ಹಿಂದೆ ಕಲೆ ಬಿದ್ದಿತ್ತು. ನಮ್ಮ ಶೂರ ಸೈನಿಕರು ಬೆಂಕಿಯಿಂದ ಮತ್ತು ನಿಖರತೆಯಿಂದ ಅದರ ಗೌರವವನ್ನು ಮರಳಿ ಸ್ಥಾಪನೆ ಮಾಡಿದ್ದಾರೆ. ನಮ್ಮ ಸಶಸ್ತ್ರ ಪಡೆಗಳಿಗೆ ನನ್ನ ಅನಂತ ಅನಂತ ಸಲಾಂ. ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಗೆ, ರಕ್ಷಣಾ ನಾಯಕತ್ವಕ್ಕೆ ಧನ್ಯವಾದಗಳು. ಕರ್ನಲ್ ಸೋಫಿಯಾ ಕುರೇಶಿ, ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್‌ರ ಚೂಪಾದ, ಘನತೆಯ ಬ್ರೀಫಿಂಗ್‌ಗೆ ಕೂಡ ಸಲಾಂ. ಭಾರತ ಮರೆಯುವುದಿಲ್ಲ. ಭಾರತ ಕ್ಷಮಿಸುವುದಿಲ್ಲ.
ಭಾರತ-ಪಾಕ್ ಸಂಘರ್ಷ ಹಿನ್ನೆಲೆ ಏನು?:
ಏಪ್ರಿಲ್ 22, 2025ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇಬ್ಬರು ಕನ್ನಡಿಗರು ಸೇರಿ 26 ಹಿಂದೂಗಳನ್ನು ಧರ್ಮ ಕೇಳಿ ಬಲಿ ಪಡೆದ ಪ್ರತೀಕಾರವಾಗಿ ಪಾಕಿಸ್ತಾನಕ್ಕೆ ಆಪರೇಷನ್ ಸಿಂದೂರದ ಮೂಲಕ ಮೇ 7, 2025ರಂದು ಭಾರತ ತಕ್ಕ ಪ್ರತೀಕಾರ ತೋರಿದೆ. ನಾಗರಿಕರ ಪ್ರಾಣಕ್ಕೆ ಹಾನಿಯಾಗದಂತೆ ಪಾಕ್ ಉಗ್ರರ ಅಡಗು ತಾಣಗಳ ಮೇಲೆ ದಾಳಿ ನಡೆಸಿದ ಭಾರತ, 9 ಉಗ್ರ ತಾಣಗಳನ್ನು ನಾಶ ಪಡಿಸಿದೆ. ಅಷ್ಟೇ ಅಲ್ಲ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಹಾಗೂ ಕ.ಸೋಫಿಯಾ ಖುರೇಷಿ ಮೂಲಕ ಭಾರತೀಯ ನಾರಿಯರ ಶಕ್ತಿ ಸಿಂಧೂರ ಕಿತ್ತು ಕೊಂಡಿದ್ದಕ್ಕೆ ಪ್ರತೀಕಾರವಾಗಿ ತೆಗೆದುಕೊಂಡ ಕ್ರಮಕ್ಕೆ ಇಡೀ ಜಗತ್ತಿಗೆ ಮಹಿಳೆಯರ ನೇತೃತ್ವದಲ್ಲಿಯೇ ಪ್ರತೀಕಾರ ತೀರಿಸಿದೆ. ಇಡೀ ಜಗತ್ತಿಗೆ ಈ ಮಹಿಳಾ ನಾಯಕರಿಂದಲೇ ಪತ್ರಿಕಾ ಗೋಷ್ಠಿ ಮಾಡಿಸಿ ಹೇಳಿದ್ದು ದೇಶದ ನಾರಿ ಶಕ್ತಿ ಸಾಮರ್ಥ್ಯವನ್ನು ಸಾರಿ ಸಾರಿ ಹೇಳಿದಂತಾಗಿದೆ. ಅಷ್ಟೇ ಅಲ್ಲ ಹಿಂದೂ ಎನ್ನುವ ಕಾರಣಕ್ಕೆ 26 ಅಮಾಯಕಕನ್ನು ಬಲಿ ಪಡೆದಿದ್ದಕ್ಕೆ ಪ್ರತೀಕಾರವಾಗಿ ಹಿಂದು-ಮುಸ್ಲಿಂ ಜಂಟಿಯಾಗಿಯೇ ನಡೆದ ಕಾರ್ಯಾಚರಣೆ ಬಗ್ಗೆ ಸುದ್ದಿ ಗೋಷ್ಠಿಯಲ್ಲಿ ವಿವರಿಸಿ, ದೇಶದ ಭದ್ರತಾ ವಿಷಯವಾಗಿ ಬಂದಾಗ ಭಾರತದಲ್ಲಿ ಮಹಿಳೆಯರೊಡಗೂಡಿ ಹಿಂದೂ-ಮುಸ್ಲಿಂ ಎಂದೆಂದಿಗೂ ಒಂದೇ ಎಂದು ಜಗತ್ತಿಗೆ ಸಾರಿ ಹೇಳಿದೆ.
ಭಾರತ ಅಳವಡಿಸಿಕೊಂಡಿರುವ ರಷ್ಯಾದ ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ಸ್ ಪಾಕಿಸ್ತಾನದ ಪಾಲಿಗೆ ದುಸ್ವಪ್ನವಾಗಿದೆ. ಭಾರತದ 15 ನಗರಗಳ ಮಿಲಿಟರಿ ಮತ್ತು ರೇಡಾರ್ ವ್ಯವಸ್ಥೆಗಳನ್ನು ಗುರಿಯಾಗಿರಿಸಿಕೊಂಡು ಪಾಕ್ ಕ್ಷಿಪಣಿ, ಡ್ರೋನ್ ದಾಳಿ ನಡೆಸಿದರೂ ಅವುಗಳನ್ನೆಲ್ಲ ಆಗಸದಲ್ಲೇ ಕರಾರುವಕ್ಕಾಗಿ ಹೊಡೆದುರುಳಿಸುವಲ್ಲಿ ಈ ರಕ್ಷಣಾ ವ್ಯವಸ್ಥೆ ಯಶಸ್ವಿಯಾಗಿದೆ. ಇದು ಪಾಕಿಸ್ತಾನಕ್ಕೆ ತೀವ್ರ ಮುಖಭಂಗವನ್ನುಂಟುಮಾಡಿದೆ. 'ಸುದರ್ಶನ ಚಕ್ರ' ಎಂದೇ ಕರೆಯಲ್ಪಡುವ ಈ ಏರ್ ಡಿಫೆನ್ಸ್ ಸಿಸ್ಟಮ್ ಭಾರತದ ಪಾಲಿನ ರಕ್ಷಾ ಕವಚವಾಗಿದೆ. ವಿಶ್ವದಲ್ಲೇ ಅತ್ಯಾಧುನಿಕ ಎನ್ನಲಾದ ಈ ರಕ್ಷಣಾ ವ್ಯವಸ್ಥೆ 600 ಕಿ.ಮೀ.ದೂರದಿಂದಲೇ ತನ್ನನ್ನ ಬರುವ ಗುರಿಯನ್ನು ಗುರುತಿಸಿ, 400 ಕಿ.ಮೀ.ದ ದೂರದಲ್ಲೇ ಅವುಗಳನ್ನು ಹೊಡೆದುರುಳಿಸಬಲ್ಲದು. ಭಾರತ ಇಂಥ ನಾಲ್ಕು ಎಸ್-400 ಡಿಫೆನ್ಸ್ ಸಿಸ್ಟಮ್ ಅನ್ನು ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್‌ನ ರಕ್ಷಣೆಗಾಗಿ ನಿಯೋಜಿಸಿದೆ.
ಭಾರತ-ಫಾಕಿಸ್ತಾನ ಸಂಘರ್ಷದ ಪ್ರತಿ ಕ್ಷಣದ ಮಾಹಿತಿಗಾಗಿ ಸುವರ್ಣ ನ್ಯೂಸ್‌ಗೆ ಟ್ಯೂನ್ ಆಗಿರಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.