ಓ ಕಾಸುಗಳೆ ನಿಮ್ಮ ನೋಡಿದಾಗ... ಹಳೆ ಕಾಲದ ನಾಣ್ಯ ನೋಡಿ ನೆನಪಿನಂಗಳಕ್ಕೆ ಜಾರಿಗೆ ಜಗ್ಗೇಶ್​

By Suvarna News  |  First Published Apr 8, 2024, 3:46 PM IST

ನಟ ಜಗ್ಗೇಶ್​ ಅವರು ಹಳೆಯ ಕಾಲದ ನಾಣ್ಯದ ಕುರಿತು ಒಂದು ಕವನ ಬರೆದಿದ್ದಾರೆ. ಇದರಲ್ಲಿ ಪಾಲಕರು, ತಾತ, ಸ್ನೇಹಿತರನ್ನೂ ನೆನಪಿಸಿಕೊಂಡಿದ್ದಾರೆ. 
 


ಕಾಲ ಅತಿ ವೇಗದಲ್ಲಿ ಬದಲಾಗುತ್ತಿದೆ, ಅದೇ ವೇಳೆ, ದುಡ್ಡಿನ ಬೆಲೆ ಕೂಡ. ಕೆಲವೇ ದಶಕಗಳ ಹಿಂದೆ ಎಲ್ಲರಿಗೂ ಬೇಕಾಗಿದ್ದ 5, 10, 20 ಪೈಸೆಗಳೆಲ್ಲವೂ ಈಗ ನೆನಪು ಮಾತ್ರ. ಇಂದಿನ ಎಷ್ಟೋ ಮಕ್ಕಳು ಈ ಪೈಸೆಗಳನ್ನು ನೋಡಿರಲು ಸಾಧ್ಯವೇ ಇಲ್ಲ. ಆದರೆ ಈ ಪೈಸೆಗಳೇ ಸರ್ವಸ್ವ ಆಗಿದ್ದ ಸಮಯದಲ್ಲಿ, ಅಂದು ಇದನ್ನು ಸಂಪಾದಿಸಲು ಕಷ್ಟಪಟ್ಟ ದಿನಗಳನ್ನು ನೆನಪಿಸಿಕೊಂಡಿದ್ದಾರೆ ನಟ ಜಗ್ಗೇಶ್​. ಸೋಷಿಯಲ್​ ಮೀಡಿಯಾದಲ್ಲಿ ಆಗಾಗ್ಗೆ ಕೆಲವು ಅಪ್​ಡೇಟ್​ಗಳನ್ನು ನೀಡುತ್ತಿರುವ ಜಗ್ಗೇಶ್​ ಅವರು ಇದೀಗ ಈ ಪೈಸೆಗಳ ಫೋಟೋಗಳನ್ನು ಶೇರ್​ ಮಾಡಿಕೊಂಡು ಕವನ ಬರೆದಿದ್ದಾರೆ. 

ಈ ಕವನದಲ್ಲಿ ಅಮ್ಮನ ಹುಂಡಿ, ಅಪ್ಪನ ಶ್ರಮ, ತಾತನ ಪ್ರೀತಿಯ ಕಾಣಿಕೆ, ಬಾಲ್ಯದ ಗೆಳೆಯರು, ಡಾ.ರಾಜ್​ಕುಮಾರ್ ಅವರ ಚಲನಚಿತ್ರ... ಹೀಗೆ ಹಲವಾರು ನೆನಪುಗಳನ್ನು ಮಾಡಿಕೊಂಡಿದ್ದಾರೆ.  ನಟ ಜಗ್ಗೇಶ್ ತುಂಬ ಭಾವುಕ ಜೀವಿ. ಅದು ಅವರ ಮಾತುಗಳನ್ನು ಕೇಳಿದವರಿಗೆ ಗೊತ್ತಾಗುತ್ತದೆ. ಅದರಲ್ಲೂ ಅವರಿಗೆ ಅಮ್ಮ ಎಂದರೆ ಪ್ರಾಣ. ತಮ್ಮ ತಾಯಿ ಬಗ್ಗೆ ಅನೇಕ ಬಾರಿ ಜಗ್ಗೇಶ್‌ ಸೋಶಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಹಿಂದೊಮ್ಮೆ  ಅಮ್ಮನ ಕೈರುಚಿಯನ್ನು ಸವಿಯವ ಮನಸ್ಸಾದ ಬಗ್ಗೆ ಹೇಳಿಕೊಂಡಿದ್ದರು. ಆದರೆ  ಅಮ್ಮ ಇಲ್ಲ ಎಂಬ ನೋವು ಅವರನ್ನು ಕಾಡುತ್ತಿದೆ ಎಂದೂ ಹೇಳಿದ್ದರು. 

Latest Videos

undefined

ಹುಟ್ಟುಹಬ್ಬದ ದಿನ ಮಂತ್ರಾಲಯದಿಂದಲೇ ಕ್ಷಮೆ ಕೋರಿದ ನಟ ಜಗ್ಗೇಶ್: ಸಿನಿಮಾದ ಕುರಿತೂ ನಟ ಹೇಳಿದ್ದೇನು?

ಅಪ್ಪ ಹಾಗೂ ತಾತನ ಬಗ್ಗೆ ಹಿಂದೊಮ್ಮೆ ನೆನಪಿಸಿಕೊಂಡಿದ್ದ ಜಗ್ಗೇಶ್​ ಅವರು, ತಾತ ರಾಜಣ್ಣನಂತೆ ನಟನಾಗು ಎಂದು ತಲೆಯಲ್ಲಿ ಹುಳಬಿಟ್ಟ. ಅದು ನನ್ನ ಚಿಂತನೆಯ ಚಿತೆಯಾಯಿತು. ಪರೀಕ್ಷೆ ಅರ್ಧ ಮನಸ್ಸಲ್ಲೆ ಓದಿ ಬರೆದೆ. ಕನ್ನಡಮಾತ್ರ ನನ್ನ ಅಚ್ಚುಮೆಚ್ಚಿನ ವಿಷಯವಾಯಿತು. ಕನ್ನಡ ವ್ಯಾಕರಣ ಸಿಹಿ ತಿನಿಸಂತೆ ಪ್ರೀತಿ! ಬಾಲ್ಯದಿಂದ ಕನ್ನಡ ಭಾಷೆ ಪ್ರೀತಿ ಹುಟ್ಟಿದರೆ ಸಾಯುವವರೆಗೂ ಅದು ಅವನ ಹೃದಯದ ನಾಡಿಬಡಿತದಂತೆ ಜೊತೆ ಉಳಿಯುತ್ತದೆ. ಸ್ವಾರ್ಥಕ್ಕೆ ಬಳಕೆಯಾದರೆ ಆತ್ಮದ್ರೋಹವಾಗುತ್ತದೆ ಎಂದಿದ್ದರು. ಪರೀಕ್ಷೆಯಲ್ಲಿ ಬಂದ ಮಾರ್ಕ್ಸ್​ ನೋಡಿ ಅಪ್ಪ ನಡುರಸ್ತೆಯಲ್ಲಿ   ಬೂಟಿನಲ್ಲಿ ಹೊಡೆದುಬಿಟ್ಟರು. ಅಪಮಾನ ಸಹಿಸಲಾಗದೆ ಆತ್ಮಹತ್ಯೆಗೆ ಯತ್ನಿಸಿದ್ದೆ. ಆಗ  ಶ್ರೀರಾಮಪುರದ ಕಿಟ್ಟಿ  ನನ್ನ ಬಾಚಿ ಎಳೆದು ರೈಲಿನ ಅನಾಹುತ ತಪ್ಪಿಸಿದ. ಆ ವಿಷಯ ತಿಳಿದು ಅಪ್ಪನಿಗೆ ದುಃಖವಾಗಿ ಮನನೊಂದು ಕಣ್ಣೀರಿಟ್ಟಿದ್ದರು ಎಂದಿದ್ದರು. ಹೀಗೆ ಸದಾ ಅಪ್ಪ,ಅಮ್ಮ, ತಾತನ ನೆನಪನ್ನು ಮಾಡಿಕೊಳ್ಳುತ್ತಲೇ ಇರುತ್ತಾರೆ ಜಗ್ಗೇಶ್​. 

ಅವರು ಬರೆ ಕವನ ಈ ರೀತಿ ಇದೆ: 

ಓ ಕಾಸುಗಳೆ ನಿಮ್ಮ ನೋಡಿದಾಗ
ಅಮ್ಮನ ದೇವರ ಹುಂಡಿ ನೆನಪಾಯಿತು
ಓ ಕಾಸುಗಳೆ ನಿಮ್ಮ ನೋಡಿದಾಗ
ಅಪ್ಪನ ಬೆವರಿನ ಶ್ರಮ ನೆನಪಾಯಿತು
ಓ ಕಾಸುಗಳೆ ನಿಮ್ಮ ನೋಡಿದಾಗ
ನನ್ನ ತಾತ ಕೊಟ್ಟ ಪ್ರೀತಿಕಾಣಿಕೆ
ನೆನಪಾಯಿತು
ಓ ಕಾಸುಗಳೆ ನಿನ್ನ ನಾ ಕೂಡಿಟ್ಟು
ಒಂದುದಿನ ಶ್ರೀಮಂತ ಆಗುವೆ ಎಂದ ಶಪತ
ನೆನಪಾಯಿತು
ಓ ಕಾಸುಗಳೆ ನೀವೆ ನನ್ನ ಬಾಲ್ಯಗೆಳೆಯರಾಗಿದ್ದು ನೆನಪಾಯಿತು
ಓ ಕಾಸುಗಳೆ ನಿಮ್ಮ ಬಳಸಿ ರಾಜಣ್ಣನ ಸಿನಿಮಾ
ನೋಡಿದ ನೆಪಾಯಿತು

ಓ ಕಾಸುಗಳೆ ನಿಮ್ಮ ಕಾಲದ ಸತ್ಯ ನ್ಯಾಯ ನೀತಿ ಗುರುಹಿರಿಯರ ಮೇಲಿನ ಗೌರವ ತಂದೆತಾಯಿ ಮೇಲಿನ ಭಕ್ತಿ ಶ್ರದ್ಧೆ ಸಮಾಜವೆ ದೇವರು ಎಂದ ಕಾಲ ಮಾಯವಾಗುವ ಸೂಚನೆ ಕಂಡು ಕಣ್ಮರೆಯಾಗಿಬಿಟ್ಟರ ಇಲ್ಲ ಕೆಟ್ಟಕಾಲ ನೋಡಬಾರದು ಎಂದು ಸಮಾಧಿ ಆದಿರ... ಸತ್ಯಕಾಲದ ನಿಮ್ಮ ನೆನಪು ನನ್ನ ಹೃದಯದಲ್ಲಿ ಇನ್ನು ಉಳಿದಿದೆ.

ಕಂಗನಾ ವಿರುದ್ಧ ಮಾತನಾಡಿ ನಾಯಕಿ 'ಕೈ'ಸುಟ್ಟುಕೊಂಡ ಬೆನ್ನಲ್ಲೇ ನಾಯಕನಿಂದ ಗೋಮಾಂಸದ ಪೋಸ್ಟ್​: ನಟಿ ತಿರುಗೇಟು

 

click me!