ಎಲ್ಲ ಕಳೆದುಕೊಂಡ್ರೂ, ಜನರ ಪ್ರೀತಿ ಗಳಿಸಿದೆ: ದ್ವಾರಕೀಶ್‌

By Kannadaprabha NewsFirst Published Aug 28, 2022, 12:01 PM IST
Highlights

- ದೊಡ್ಡ ಬಂಗಲೆ, ಹಣಕ್ಕಿಂತ ಜನರ ಪ್ರೀತಿ ಮುಖ್ಯ

- ಹಿರಿಯ ನಟನಿಗೆ ಈಗ 80

- ಫಿಲಂ ಚೇಂಬರ್‌ನಲ್ಲಿ ಸನ್ಮಾನ

‘ಸಿನಿಮಾಗಳಿಗಾಗಿ ನಾನು ಮನೆ, ಆಸ್ತಿಗಳನ್ನು ಕಳೆದುಕೊಂಡೆ. ಎಲ್ಲವನ್ನು ಮಾರಿ ಕಷ್ಟಗಳನ್ನು ಅನುಭವಿಸಿದೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ, ನಾನು ಮಾರಲಿಕ್ಕೇ ಆಗದೆ ಇರುವ ಮನೆಯನ್ನು ಮಂತ್ರಾಲಯದಲ್ಲಿ ಕಟ್ಟಿದ್ದೇನೆ. ಕಳೆದುಕೊಳ್ಳುವುದಕ್ಕೆ ಆಗದಂಥ ಆಸ್ತಿಯನ್ನು ಚಿತ್ರರಂಗದಲ್ಲಿ ಸಂಪಾದಿಸಿದ್ದೇನೆ’ ಎಂದು ಹಿರಿಯ ನಟ ದ್ವಾರಕೀಶ್‌ ಅವರು ಭಾವುಕರಾಗಿ ನುಡಿದರು.

80 ವರ್ಷ ತುಂಬಿರುವ ಹೊತ್ತಿನಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ದ್ವಾರಕೀಶ್‌, ‘20 ವರ್ಷಕ್ಕೆ ಚಿತ್ರರಂಗಕ್ಕೆ ಬಂದೆ. ಅಲ್ಲಿಂದ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ. 54 ಚಿತ್ರಗಳನ್ನು ನಿರ್ಮಿಸಿದ್ದೇನೆ. ನಾನು ಸಿನಿಮಾ ಆಸೆಗಳ ಹಿಂದೆ ಹೋದೆ. ಅದಕ್ಕಾಗಿ ನಾನು ಗಳಿಸಿ, ಕಟ್ಟಿಸಿದ ಮನೆಗಳನ್ನು ಮಾರಿಕೊಂಡೆ ನಿಜ. ಆದರೆ, ಮಾರಕ್ಕೇ ಆಗದ ಮನೆಯನ್ನು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಕಟ್ಟಿದ್ದೇನೆ. ಅದು ನನ್ನ ನಿಜವಾದ ಮನೆ. ಇದೆಲ್ಲ ಕ್ಷಣಿಕ ಮಾತ್ರ. ಇನ್ನೂ ಕಳೆದುಕೊಳ್ಳುವುದಕ್ಕೆ ಆಗದೆ ಇರುವ ಆಸ್ತಿ ಎಂದರೆ ನಾನು ಸತ್ತ ಮೇಲೆ ನನ್ನ ನೋಡಲು ಬರುವ ಕಲಾವಿದರು, ತಂತ್ರಜ್ಞರು ಮತ್ತು ಜನರ ಪ್ರೀತಿ. ಇದು ನನ್ನಿಂದ ಯಾವತ್ತೂ ದೂರ ಆಗಲ್ಲ. ದೊಡ್ಡ ಬಂಗಲೆಗಳು, ಹಣಕ್ಕಿಂತ ನಿಮ್ಮ ಪ್ರೀತಿ ಇದ್ದರೆ ಸಾಕು’ ಎಂದರು.

10.5 ಕೋಟಿಗೆ ದ್ವಾರಕೀಶ್‌ ಬಂಗಲೆ ಖರೀದಿಸಿದ ರಿಷಬ್‌ ಶೆಟ್ಟಿ!

‘ಆಗಿನ ಕಾಲಕ್ಕೆ 40 ಸಾವಿರ ಖರ್ಚು ಮಾಡಿ ‘ಮಮತೆಯ ಬಂಧನ’ ಸಿನಿಮಾ ಮಾಡಿದೆ. ಸೂಪರ್‌ ಹಿಟ್‌ ಆಯಿತು. ನಾನು ವಿಮಾನದಲ್ಲಿ ಬೆಂಗಳೂರಿಂದ ಮದ್ರಾಸ್‌ಗೆ ಹೋಗಲು ಆರಂಭಿಸಿದಾಗ ಟಿಕೆಟ್‌ ಬೆಲೆ 43 ರುಪಾಯಿ ಇತ್ತು. ಫಿಯೇಟ್‌ ಕಾರು ಇಟ್ಟುಕೊಂಡಿದ ಕನ್ನಡದ ಮೊದಲ ನಟ ನಾನು, ಅದಕ್ಕೆ 29 ರುಪಾಯಿನಲ್ಲಿ ಫುಲ್‌ ಟ್ಯಾಂಕ್‌ ತುಂಬಿಸಿಕೊಂಡು ಬೆಂಗಳೂರಿನಿಂದ ಮದ್ರಾಸ್‌ಗೆ ಹೋಗಿ ಬರುತ್ತಿದ್ದೆ. ‘ಹರಿಶ್ಚಂದ್ರ’ ಚಿತ್ರದಲ್ಲಿ ನಟಿಸಿದಕ್ಕೆ ನಾನು ತೆಗೆದುಕೊಂಡ ಸಂಭಾವನೆ 750 ರುಪಾಯಿ, ‘ಬಂಗಾರದ ಮನುಷ್ಯ’ ಚಿತ್ರಕ್ಕಾಗಿ 4 ಸಾವಿರ ತೆಗೆದುಕೊಂಡೆ. ಆ ಚಿತ್ರದಲ್ಲಿ ಡಾ ರಾಜ್‌ಕುಮಾರ್‌ ಬಿಟ್ಟರೆ ನಾನು ಅತ್ಯಂತ ದುಬಾರಿ ನಟ ಅನಿಸಿಕೊಂಡಿದ್ದೆ. ಇದೆಲ್ಲವೂ ನನಗೆ ಚಿತ್ರರಂಗ ಕೊಟ್ಟಿದ್ದು. ನಾನೇನೂ ತಂದಿಲ್ಲ. ಅದೇ ಚಿತ್ರರಂಗದಲ್ಲಿ ಸಿನಿಮಾಗಳನ್ನು ಮಾಡಲು ಎಲ್ಲವನ್ನೂ ಮಾರಿಕೊಂಡೆ. ಆ ಬಗ್ಗೆ ನನಗೆ ದುಃಖ ಇಲ್ಲ. ನಿಮ್ಮೆಲ್ಲರ ಪ್ರೀತಿ, ಬೆಂಬಲ, ನೆರವಿನಿಂದ ಇಷ್ಟೆಲ್ಲ ಮಾಡಿದೆ ಎನ್ನುವ ಹೆಮ್ಮೆ ಇದೆ’ ಎಂದು ದ್ವಾರಕೀಶ್‌ ಹೇಳಿದರು.

‘ನನ್ನ ಚಿತ್ರರಂಗಕ್ಕೆ ಕರೆತಂದ ನನ್ನ ಮಾವ ಹುಣಸೂರು ಕೃಷ್ಣ ಮೂರ್ತಿ, ಡಾ ರಾಜ್‌ಕುಮಾರ್‌, ಡಾ ವಿಷ್ಣುವರ್ಧನ್‌, ವರದಪ್ಪ, ಮೇಕಪ್‌ ಆರ್ಟಿಸ್ಟ್‌ಗಳಾಗಿದ್ದ ಮಾದವಯ್ಯ, ವೀರರಾಜು ಇವರು ನನ್ನ ಜೀವನದಲ್ಲಿ ಮರೆಯಲಾಗದ ವ್ಯಕ್ತಿಗಳು ಎಂದ ದ್ವಾರಕೀಶ್‌, ತುಂಬಾ ಚೆನ್ನಾಗಿ ಹೋಗುತ್ತದೆ ಎಂದು ಮಾಡಿದ್ದ ‘ನೀ ತಂದ ಕಾಣಿಕೆ’ ಸಿನಿಮಾ ಫ್ಲಾಪ್‌ ಆಯಿತು. ನಿರೀಕ್ಷೆಗಳನ್ನೇ ಇಟ್ಟುಕೊಳ್ಳದೆ ಮಾಡಿದ ‘ನೀ ಬರೆದ ಕಾದಂಬರಿ’ ಸಿನಿಮಾ ಸೂಪರ್‌ ಹಿಟ್‌ ಆಯಿತು. ಸಿನಿಮಾದಲ್ಲಿ ಸೋತಿದ್ದೇನೆ ಮತ್ತು ಗೆದ್ದಿದ್ದೇನೆ. ಅದು ಗೇಮ್‌. ನಾವು ಆಡುತ್ತಿರಬೇಕು ಅಷ್ಟೆ. ಗೆಲುವು ನಮ್ಮ ಕೈಯಲ್ಲಿ ಇರಲ್ಲ’ ಎಂದು ಅಭಿಪ್ರಾಯ ಪಟ್ಟರು.

ಆಪ್ತಮಿತ್ರ ನಾನೇ ಮಾಡಬೇಕಿತ್ತು: ರವಿಚಂದ್ರನ್

ಇದೇ ಸಂದರ್ಭದಲ್ಲಿ ಹಿರಿಯ ನಟಿ ಭವ್ಯ ಅವರು ‘ನೀ ಮೀಟಿದ ನೆನಪೆಲ್ಲವೂ ಎದೆ ತುಂಬಿ ಹಾಡಾಗಿದೆ’ ಎನ್ನುವ ಹಾಡಿನ ಮೂಲಕ ದ್ವಾರಕೀಶ್‌ ಅವರಿಗೆ ಶುಭ ಕೋರಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ ಮ ಹರೀಶ್‌, ಪ್ರಮುಖರಾದ ಸುಂದರ್‌ ರಾಜ್‌, ಜೈ ಜಗದೀಶ್‌, ಎನ್‌ ಕುಮಾರ್‌, ಚಿತ್ರದುರ್ಗ ಕುಮಾರ್‌, ಶಿಲ್ಪಾ ಶ್ರೀನಿವಾಸ್‌, ಕೆ ವಿ ಚಂದ್ರಶೇಖರ್‌, ಎಸ್‌ ಎ ಚಿನ್ನೇಗೌಡ, ಹಿರಿಯ ನಟ ಶ್ರೀನಾಥ್‌, ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶಣೈ, ಪ್ರೆಸ್‌ ಕ್ಲಬ್‌ ಅಧ್ಯಕ್ಷ ಶ್ರೀಧರ್‌ ಮುಂತಾದವರು ಹಾಜರಿದ್ದರು.

click me!