ನಟ ದರ್ಶನ್ ತೂಗುದೀಪ ಜಾಮೀನು ಪಡೆದ ನಂತರ ಬೆನ್ನುಹುರಿ ನೋವಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದೆ ಥೆರಪಿ ಮುಂದುವರೆಸಿದ್ದಾರೆ. ಜಾಮೀನು ಅವಧಿ ಮುಗಿದ ನಂತರ ಹೈಕೋರ್ಟ್ ಸಾಮಾನ್ಯ ಜಾಮೀನು ಮಂಜೂರು ಮಾಡಿದ್ದು, ದರ್ಶನ್ ಇನ್ನೂ 3 ತಿಂಗಳು ಶಸ್ತ್ರಚಿಕಿತ್ಸೆಯನ್ನು ಮುಂದೂಡುವ ಸಾಧ್ಯತೆಯಿದೆ.
ಬೆಂಗಳೂರು (ಡಿ.13): ನಟ ದರ್ಶನ್ ತೂಗುದೀಪ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲಿಗೆ ಹೋಗಿ ಬೆನ್ನುಹುರಿ ನೋವಿನಿಂದ ಬಳಲುತ್ತಾ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದಾಗಿ ಹೇಳಿ ತುರ್ತಾಗಿ ಮಧ್ಯಂತರ ಜಾಮೀನು ಪಡೆದು ಹೊರಗೆ ಬಂದಿದ್ದರು. ಜಾಮೀನು ಪಡೆದು ಹೊರಗೆ ಬಂದು 6 ವಾರಗಳು ಕಳೆದರೂ ಬೆನ್ನುಹುರಿ ನೋವಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದೇ ಕೇವಲ ಥೆರಪಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಆದರೆ, ಇದೀಗ ದರ್ಶನ್‌ಗೆ ಸಾಮಾನ್ಯ ಜಾಮೀನು ಮಂಜೂರು ಮಾಡಲಾಗಿದ್ದು, ಇನ್ನೂ 3 ತಿಂಗಳ ಕಾಲ ಆಪರೇಷನ್ ಮಾಡಿಸಿಕೊಳ್ಳದಿರಲು ತೀರ್ಮಾನಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.
ಬಳ್ಳಾರಿ ಜೈಲಿನಲ್ಲಿದ್ದ ದರ್ಶನ್ ಭೇಟಿಗೆ ಅವರ ಹೆಂಡತಿ ವಿಜಯಲಕ್ಷ್ಮಿ ಅವರು ತೆರಳಿದಾಗ ತನಗೆ ಬೆನ್ನು ನೋವಿನಿಂದಾಗಿ ನಡೆಯಲು ಬರುವುದೇ ಇಲ್ಲ, ಇದಕ್ಕೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳದಿದ್ದರೆ ತಾನು ಶಾಶ್ವತ ಅಂಗ ನ್ಯೂನತೆಗೆ ಒಳಗಾಗುತ್ತೇನೆ ಎಂಬಂತೆ ನಡೆದುಕೊಂಡಿದ್ದ ನಟ ದರ್ಶನ್ ತೂಗುದೀಪ ಅವರನ್ನು ನೋಡಿದರೆ ಎಂತಹ ಕಲ್ಲು ಹೃದಯದವರ ಮನಸ್ಸೂ ಕೂಡ ಕರಗುವಂತಾಗಿತ್ತು. ಇದೇ ಆಧಾರದ ಮೇಲೆ ವೈದ್ಯರ ವರದಿಯನ್ನು ಆಧರಿಸಿ, ತನ್ನಿಷ್ಟದ ಖಾಸಗಿ ಆಸ್ಪತ್ರೆಯಲ್ಲಿ ಬೆನ್ನುಹುರಿಗೆ ತುರ್ತಾಗಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲೇಬೇಕು ಎಂದು ನ್ಯಾಯಾಲಯಕ್ಕೆ ಮಾಹಿತಿ ರವಾನಿಸಿ ಅ.30ರಂದು ಕೋರ್ಟ್‌ನಿಂದ ಮಧ್ಯಂತರ ಜಾಮೀನು ಪಡೆದುಕೊಂಡರು.
ಇದಾದ ನಂತರ ಬಳ್ಳಾರಿ ಜೈಲಿನಿಂದ ಹೊರಗೆ ಬಂದ ದಾಸ ದರ್ಶನ್ 2 ದಿನಗಳ ಕಾಲ ಹೆಂಡತಿ ಮಕ್ಕಳೊಂದಿಗೆ ಸಮಯ ಕಳೆದರು. ಇದೇ ವೇಳೆ ಮಗನ ಜನ್ಮದಿನಾಚರಣೆಯನ್ನೂ ಅದ್ಧೂರಿಯಾಗಿ ಆಚರಣೆ ಮಾಡಿದರು. ಇದಾದ ನಂತರ ಒಂದು ವಾರದ ಒಳಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ವರದಿ ನೀಡುವುದು ಅಗತ್ಯವಾಗಿದ್ದರಿಂದ ಮೂರ್ನಾಲ್ಕು ದಿನಗಳ ನಂತರ ರಾಜರಾಜೇಶ್ವರಿ ನಗರದ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳಲು ಮುಂದಾದರು. ಇದಾದ ನಂತರ ಪ್ರತಿವಾರ ಕೋರ್ಟ್‌ಗೆ ಚಿಕಿತ್ಸೆ ಪಡೆಯುತ್ತಿರುವ ವರದಿ ನೀಡುತ್ತಿದ್ದರು.
ಇದನ್ನೂ ಓದಿ: Breaking: ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್, ಪವಿತ್ರಾ ಸೇರಿ 7 ಮಂದಿಗೆ ಜಾಮೀನು!
undefined
ಇಂದಿಗೆ (ಡಿ.13ಕ್ಕೆ) ದರ್ಶನ್ ಅವರ 6 ವಾರಗಳ ಮಧ್ಯಂತರ ಜಾಮೀನು ಅವಧಿ ಮುಕ್ತಾಯಗೊಂಡ ನಂತರ ಒಟ್ಟು 7 ಜನ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್ ಮುಂದೆ ಆಗಮಿಸಿತ್ತು. ಅರ್ಜಿ ವಿಚಾರಣೆ ಮಾಡಿದ್ದರಿಂದ ಆದೇಶ ಕಾಯ್ದಿರಿಸಿದ್ದ ಹೈಕೋರ್ಟ್ ನ್ಯಾಯಮೂರ್ತಿ ವಿಶ್ವಜೀತ್ ಶೆಟ್ಟಿ ಅವರು ಅರ್ಜಿ ಸಲ್ಲಿಕೆ ಮಾಡಿದ್ದ ಎಲ್ಲ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಟ ದರ್ಶನ್ ಇನ್ನುಮುಂದೆ ತನಗೆ ಬಿಗ್ ರಿಲೀಫ್ ಸಿಕ್ಕಿದ್ದರಿಂದ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದನ್ನು ಇನ್ನೂ ಮುಂದೂಡಿಕೆ ಮಾಡಲಿದ್ದಾರೆ.
ಬಿಜಿಎಸ್ ಆಸ್ಪತ್ರೆ ವೈದ್ಯರು ದರ್ಶನ್‌ಗೆ ಆಪರೇಷನ್ ಮಾಡಿಸಿಕೊಳ್ಳಲು ಸಲಹೆ ನೀಡಿದ್ದು, ಅದರ ಸಾಧಕ-ಬಾಧಕಗಳ ಬಗ್ಗೆ ತಿಳಿಸಿದ್ದಾರೆ. ಆದರೆ, ನಟ ದರ್ಶನ್ ಶಸ್ತ್ರ ಚಿಕಿತ್ಸೆಗೆ ಒಪ್ಪದ ಹಿನ್ನೆಲೆಯಲ್ಲಿ ವೈದ್ಯರು ಕೂಡ ಸುಮ್ಮನಾಗಿದ್ದಾರೆ. ಇದೀಗ ಜಾಮೀನು ಸಿಕ್ಕಿದ್ದರಿಂದ ದರ್ಶನ್ ಆಪರೇಷನ್ ಮೊರೆ ಹೋಗದೇ ಕೇವಲ ಥೆರಫಿ ಚಿಕಿತ್ಸೆ ಮಾಡಸಿಕೊಳ್ಳಲು ಚಿಂತನೆ ಮಾಡಿದ್ದಾರೆ. ಇದರಿಂದಾಗಿ ದರ್ಶನ್ ಬೆನ್ನು ನೋವಿಗೆ ಫಿಸಿಯೋಥೆರಪಿ, ಎಪಿಡ್ಯೂರಲ್ ಸ್ಟಿರಾಯ್ಡ್ ಇಂಜೆಕ್ಷನ್, ವ್ಯಾಯಾಮ ಮಾಡಿಸಿಕೊಳ್ಳಲು ಹೇಳುವ ಸಾಧ್ಯತೆ. 3 ತಿಂಗಳ ಬಳಿಕವೂ ನೋವು ಕಡಿಮೆಯಾಗದೇ ಇದ್ದರೆ ಮಾತ್ರ ದರ್ಶನ್‌ಗೆ ಆಪರೇಷನ್ ಮಾಡುವುದು ಅನಿವಾರ್ಯ ಆಗಲಿದೆ. ಆದ್ದರಿಂದ ಇನ್ನೂ ಮೂರು ತಿಂಗಳು ದರ್ಶನ್ ಆಪರೇಶನ್ ಮಾಡಿಸಿಕೊಳ್ಳುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಪವಿತ್ರಾಗೌಡಗೆ ಜಾಮೀನು ಸಿಕ್ಕಿದರೂ ಜೈಲಿಂದ ಹೊರಗೆ ಬರೋದು ಡೌಟು!