ಸುಪ್ರೀಂ ಅಂಗಳದಲ್ಲಿ ದರ್ಶನ್ ಕೇಸ್; ಸರ್ಜರಿಗೆ ಒಪ್ತಾರಾ?

By Vaishnavi Chandrashekar  |  First Published Nov 19, 2024, 4:13 PM IST

ದರ್ಶನ್ ಆರೋಗ್ಯ ಹೇಗಿದೆ? ಸರ್ಜರಿ ಮಾಡಿಸಿಕೊಳ್ಳುತ್ತಾರಾ? ತಡವಾದರೆ ಸುಪ್ರೀಂ ಕೋರ್ಟ್ ಏನು ಹೇಳುತ್ತದೆ....  
 


ಹತ್ತೊಂಬತ್ತು ದಿನ. ಬಳ್ಳಾರಿ ಜೈಲಿನಿಂದ ಬಂದು ಬಿಜಿಎಸ್ ಆಸ್ಪತ್ರೆಯಲ್ಲಿ ರಂಗೋಲಿ ಹಾಕುತ್ತಿದ್ದಾನೆ ದಾಸ. ಬೆನ್ನು ನೋವು...ಕಾಲು ಕುಂಟು..ಸಕಲ ಕಾರಣ ನೀಡಿ ಹಾಸಿಗೆಯಲ್ಲಿ ಹೊರಳಾಡುತ್ತಿದ್ದಾನೆ. ಇಷ್ಟೆಲ್ಲ ಇದ್ದರೂ ಸರ್ಜರಿಗೆ ಮಾತ್ರ ಒಪ್ಪುತ್ತಿಲ್ಲ. ಇದನ್ನೇ ಕಾರಣ ಮಾಡಿಕೊಂಡು ಖಾಕಿ ಪಡೆ ಸುಪ್ರೀಂಗೆ ಜಾಮೀನು ರದ್ದು ಮಾಡಿ, ಮರಳಿ ಗೂಡಿಗೆ ಕಳಿಸಿ ಎಂದು ಹೇಳಲಿದೆ. ಸೋಮವಾರ ಸರ್ವೋಚ್ಛ ನ್ಯಾಯಾಲಯ ಇದಕ್ಕೆ ಉತ್ತರ ಕೊಡಲಿದೆ. ಅಕಸ್ಮಾತ್ ವಾಪಸ್ ಕಳಿಸಿ ಎಂದು ಬಿಟ್ಟರೆ ಏನು ಮಾಡಬೇಕು ? ವಿಚಾರಣೆ ಮುಂದೆ ಹೋದರೆ ಮತ್ಯಾವ ನಾಟಕ ಆರಂಭಿಸಬೇಕು ? ದಾಸನ ಸಂಚು ನಿಗೂಢವಾಗಿದೆ...

ಇಷ್ಟು ದಿನ ದರ್ಶನ್ ಅಂಡ್ ಗ್ಯಾಂಗ್ ಹೊಸ ಹೊಸ ಹೊಗೆ ಹಾಕುತ್ತಾ ಬಂದಿದ್ದಾರೆ. ಸರ್ಜರಿ ಮಾಡಬೇಕು, ಇಲ್ಲದಿದ್ದರೆ ಭವಿಷ್ಯದಲ್ಲಿ ಬರಗಾಲ ಕಾದಿದೆ. ಇನ್ನೊಂದು ಕಡೆ ಕಾಲು ಶಕ್ತಿ ಕಳೆದುಕೊಂಡಿದೆ. ಆಪರೇಶನ್ ಮಾಡದಿದ್ದರೆ ಲಕ್ವಾ ಹೊಡೆಯುತ್ತದೆ. ಹೀಗಂತ ರೀಲು ಸುತ್ತಿದ್ದೇ ಸುತ್ತಿದ್ದು. ಕೊನೆಗೂ ದರ್ಶನ್ ವಕೀಲರು ಮೀಸೆ ತಿರುವಿದರು. ಮಧ್ಯಂತರ ಜಾಮೀನು ಸಿಕ್ಕಿತು. ಅಲ್ಲಿಂದ ಇನ್ನೊಂದು ಶೂಟಿಂಗ್ ಆರಂಭ. ಅದೇ ಪ್ಯಾನ್ ಇಂಡಿಯಾ ಫಿಸಿಯೋಥೆರಪಿ ಪಿಕ್ಚರ್. ಈಗ ಅದೇ ರೀಲು ಮತ್ತೆ ಕಂಬಿ ಹಿಂದೆ ನಿಲ್ಲಿಸಿ ಕುಣಿಸುತ್ತಾ ? ಕಾಯಬೇಕು...

Tap to resize

Latest Videos

undefined

ಪಟ್ನಾದಲ್ಲಿ ಪುಷ್ಪ 2 ಟ್ರೈಲರ್​ ಲಾಂಚ್; ಶ್ರೀವಲ್ಲಿ ನೋಡಲು ಟವರ್ ಏರಿದ ಬಿಹಾರ್ ಬಾಯ್ಸ್!

ಜಾಮೀನು ಸಿಕ್ಕ ದಿನವೇ ಖಾಕಿ ಗರಂ ಆಗಿತ್ತು. ಗೃಹ ಇಲಾಖೆಗೆ ಪತ್ರ ಬರೆದು, ಈ ಜಾಮೀನು ಕ್ಯಾನ್ಸಲ್ ಮಾಡಬೇಕು. ಅದಕ್ಕಾಗಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲು ಅನುಮತಿ ಕೊಡಿ ಎಂದು ಕೇಳಿತ್ತು. ಅದ್ಯಾಕೊ ಕಾನೂನು ಇಲಾಖೆ ಗಡದ್ ನಿದ್ದೆ ಹೊಡೆಯುತ್ತಿತ್ತು. ಮೂರು ನಾಲ್ಕು ದಿನಗಳ ಹಿಂದೆ ಖುದ್ದು ಗೃಹ ಸಚಿವರೇ, `ಗೋ ಅಹೆಡ್' ಎಂದು ಬಿಡಬೇಕೆ ? ಖಾಕಿ ಮೈ ಕೊಡವಿ ಎದ್ದು ನಿಂತಿತು. ಕಮಿಶನರ್ ಅಖಾಡಕ್ಕೆ ಇಳಿದರು. ಎಸ್‌ಪಿಪಿ ಪ್ರಸನ್ನಕುಮಾರ್ ಲಾ ಪಾಯಿಂಟ್ ರೆಡಿ ಮಾಡಿದರು. ಸುಪ್ರೀಂ ಕೋರ್ಟ್ನಲ್ಲಿ ವಾದ ಮಾಡಲು ರಘುಪತಿ ಕಾಲರ್ ಟೈಟ್ ಮಾಡಿಕೊಂಡರು. ಈಗಾಗಲೇ ರಘುಪತಿ, ದಾಸನ ವಿರುದ್ಧ ವಾದ ಮಂಡಿಸಲು ಸಜ್ಜಾಗಿದ್ದಾರೆ. ಕನ್ನಡದಿಂದ ಇಂಗ್ಲಿಷ್‌ಗೆ ಕೆಲವು ವಾದದ ಪಾಯಿಂಟ್ ತರ್ಜುಮೆ ಮಾಡಲಾಗಿದೆ. ಯಾಕೆ ಬೇಲ್ ರದ್ದು ಮಾಡಬೇಕು ? ಇವರೆಲ್ಲ ಸೇರಿ ಹೇಗೆ ಆರೋಗ್ಯದ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ ಎನ್ನುವುದನ್ನು ಹೇಳಲಿದ್ದಾರೆ.  ಇನ್ನೊಂದು ಕಡೆ ದಾಸನ ಪರ ವಕೀಲರೂ ಮತ್ತೇನು ಕುಂಟುನೆಪ ಹೇಳಬೇಕೆಂದು ಸಂಚು ಮಾಡುತ್ತಿದ್ದಾರೆ. ಆದರೆ ಜಾಮೀನಿಗೆ ಕೊಟ್ಟ ಕಾರಣ ಮತ್ತು ಅದಕ್ಕೆ ಬದ್ದವಾಗಿರದ ವಿಷಯಕ್ಕೆ ಯಾವ ಸಬೂಬು ಹೇಳುತ್ತಾರೋ ? ಅದು ಬಯಲಾಗಲಿದೆ...

ಕಂಗನಾ 'ಎಮರ್ಜೆನ್ಸಿ'ಗೆ ಸಿಕ್ತು ಮುಕ್ತಿ; ದರ್ಶನ್ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ರೀ-ರಿಲೀಸ್‌ಗೆ ಸಜ್ಜು!

ಒಂದು ವೇಳೆ ಸುಪ್ರೀಂ ಕೋರ್ಟ್ ಜಾಮೀನು ರದ್ದು ಮಾಡಬೇಕು ಎಂದರೆ ಗತಿ ಏನು ? ಬಹುಶಃ ಆಗ ದಾಸ ಬೆನ್ನಿಗೆ ಕತ್ತರಿ ಹಾಕಿಕೊಳ್ಳಲು ಒಪ್ಪಬಹುದು. ಆಪರೇಶನ್ ನಂತರ ಇನ್ನಷ್ಟು ವಿಶ್ರಾಂತಿ ಬೇಕು, ಇನ್ನೊಬ್ಬರ ನೆರವೂ ಅಗತ್ಯ ಎಂದು ವಾದ ಮಂಡಿಸಬಹುದು. ಆಗ ಕೆಲವು ತಿಂಗಳು ಮನೆಯಲ್ಲಿ ಮಲಗಬಹುದು. ಹಾಗೆಯೇ ವಿಚಾರಣೆ ಕೆಲವು ವಾರ ಮುಂದಿಡಿದರೆ, ಆಗ ಸರ್ಜರಿ ಇಲ್ಲದೆ ಕಾಲ ತಳ್ಳುತ್ತಾನೆ ದಾಸ. ಒಟ್ಟಾರೆ ಅಡಕತ್ತರಿಯಲ್ಲಿ ಸಿಕ್ಕು ಸೀದು ಹೋಗುತ್ತಿದ್ದಾನೆ ಪಟ್ಟಣಗೆರೆ ಪರಮವೀರ. ಒಂದು ಕಡೆ ಕಂಬಿ...ಇನ್ನೊAದು ಕಡೆ ಕತ್ತರಿ...ಮಗದೊಮ್ಮೆ ಭವಿಷ್ಯದ ಭಯ...ದೇವುಡಾ... ದಾರಿ ಯಾವುದಯ್ಯ ನನಗೆ ? ಇದನ್ನು ನಿತ್ಯ ಕೇಳುತ್ತಿದ್ದಾನೆ ದಾಸ. ಅವರು ಬಿಟ್ಟರೆ ಇವರು...ಇವರು ಬಿಟ್ಟರೆ ಅವರು ಹಿಂಡಿ ಹಿಪ್ಪೆ ಮಾಡುತ್ತಿದ್ದಾರೆ.  ಜಾಮೀನು ಸಿಕ್ಕ ಮೇಲೆ ನಿರಾಳವಾಗಿದ್ದ. ಮತ್ತೆಂದೂ ಕಂಬಿ ಹಿಂದೆ ಹೋಗಬಾರದೆಂದು ಶಪಥ ಮಾಡಿದ್ದ. ಅದಕ್ಕಾಗಿಯೇ ಈತನ ವಕೀಲರು ವೆರೈಟಿ ವೆರೈಟಿ  ವಾಲಿಬಾಲ್ ಆಡುತ್ತಿದ್ದರು. ಅದನ್ನೇ ಈಗಲೂ ಮುಂದುವರೆಸಿದ್ದಾರೆ. ಆದರೆ ಖಾಕಿ ಸುಮ್ಮನೆ ಕೂಡುತ್ತದಾ ? ಬೆವರು ಸುರಿಸಿ ಆರೋಪಿಗಳಿಗೆ ಹೆಡಮುರಿಗೆ ಕಟ್ಟಿದೆ. ಅದಕ್ಕೊಂದು ತಾರ್ಕಿಕ ಅಂತ್ಯ ಕಾಣಿಸುವುದು ಬೇಡವಾ ? ಹೀಗಾಗಿಯೇ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದೆ. ದಿಕ್ಕೆಟ್ಟಿದ್ದಾನೆ ದಾಸ...

ರೇಣುಕಾ ಸ್ವಾಮಿ ಅದ್ಯಾವ ಗಳಿಗೆಯಲ್ಲಿ ಪವಿತ್ರಾಗೆ ಎರಡು ರುಪಾಯಿ ಸಂದೇಶ ಕಳಿಸಿದನೊ...ಪವಿತ್ರಾ ಇನ್ಯಾವ ಯಮಗಂಡ ಕಾಲದಲ್ಲಿ ಓದಿದಳೋ...ದರ್ಶನ್‌ಗೆ ಶನಿದೇವ ಪ್ರತ್ಯಕ್ಷನಾಗಿ ತಥಾಸ್ತು ಎಂದುಬಿಟ್ಟ...ಫಿನಿಶ್...ತೂಗುದೀಪ ನಿಲಯದ ಮುಂದೆ ಎಳ್ಳುನೀರು ಚೆಲ್ಲಿಬಿಟ್ಟಿತು ಖಾಕಿ. ಇದೆಲ್ಲ ಇಷ್ಟು ಬೇಗ ಮುಗಿಯುತ್ತದೆಂದು ತಿಳಿಯಬೇಡಿ. ಇದೆಲ್ಲ ಜಸ್ಟ್     ಟ್ರೈಲರ್...ಪಿಕ್ಚರ್ ಅಭಿ ಬಾಕಿ ಹೈ. ಅದುವರೆಗೆ ದರ್ಶನ್ ಸಣ್ಣ ಸಣ್ಣ ಮುಟ್ಟಾಟ...ತುಂಟಾಟ ಆಡುತ್ತಿರುತ್ತಾನೆ. ಫೈನಲಿ, ಸಕಲ ಸಂಜೆ ಸರ್ವನಾಶ ಮಾಡಿಕೊಂಡಿದ್ದಾನೆ. ಚಾಕಣಾ ಕನಸು ಕಾಣುತ್ತಿದ್ದಾನೆ..ಬೇಕಿತ್ತಾ ಬಯಲಾಟ ?

-ಮಹೇಶ್ ದೇವಶೆಟ್ಟಿ, ಏಷ್ಯಾನೆಟ್ ಸುವಣ

click me!