
ಬೆಂಗಳೂರು (ಮಾ.09): ಸ್ಯಾಂಡಲ್‌ವುಡ್‌ನ 'ಚಾಲೆಂಜಿಂಗ್ ಸ್ಟಾರ್' ದರ್ಶನ್ ಅಲಿಯಾಸ್ ಡಿ-ಬಾಸ್ (Darshan) ಈಗ ಕೊಲೆ ಪ್ರಕರಣವೊಂದರ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ರೇಣುಕಾಸ್ವಾಮಿ ಸಾವಿನ ಪ್ರಕರಣದಲ್ಲಿ ದರ್ಶನ್ ಜೈಲು ಪಾಲಾಗಿದ್ದರೂ, ಅವರ ಅಭಿಮಾನಿಗಳ ಕ್ರೇಜ್ ಹಾಗೂ ಅಂಧಾಭಿಮಾನ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ಇದಕ್ಕೆ ತಾಜಾ ಉದಾಹರಣೆ ಎನ್ನುವಂತೆ ನವದಂಪತಿಗಳಿಬ್ಬರು ಮದುವೆಯಾದ ತಕ್ಷಣವೇ ದರ್ಶನ್ ಮನೆಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಸಾಮಾನ್ಯವಾಗಿ ಮದುವೆಯಾದ ನಂತರ ನವದಂಪತಿಗಳು ದೇವಸ್ಥಾನಗಳಿಗೆ ಹೋಗುವುದು ಅಥವಾ ಹಿರಿಯರ ಆಶೀರ್ವಾದ ಪಡೆಯುವುದು ರೂಢಿ. ಆದರೆ, ದರ್ಶನ್ ಅವರ ಈ ಅಭಿಮಾನಿ ಜೋಡಿ ಮಾತ್ರ ಮದುವೆಯ ಬಟ್ಟೆಯಲ್ಲೇ, ಕಲ್ಯಾಣ ಮಂಟಪದಿಂದ ನೇರವಾಗಿ ರಾಜರಾಜೇಶ್ವರಿ ನಗರದಲ್ಲಿರುವ (RR Nagar) ದರ್ಶನ್ ಅವರ ನಿವಾಸಕ್ಕೆ ಬಂದಿದ್ದಾರೆ. ದರ್ಶನ್ ಮನೆಯೇ ಇವರಿಗೆ ದೇಗುಲ, ದರ್ಶನ್ ಅವರೇ ಇವರಿಗೆ ದೇವರು ಎನ್ನುವಂತೆ ಈ ದಂಪತಿಗಳು ವರ್ತಿಸಿದ್ದಾರೆ.
ದರ್ಶನ್ ಮನೆಯ ಮುಂಭಾಗದಲ್ಲಿರುವ ಗಣಪತಿಯ ವಿಗ್ರಹಕ್ಕೆ ಮೊದಲು ಪೂಜೆ ಸಲ್ಲಿಸಿದ ದಂಪತಿಗಳು, ನಂತರ ಅಲ್ಲಿರುವ ದರ್ಶನ್ ಅವರ ಬೃಹತ್ ಕಟೌಟ್‌ಗೆ ಹಾರ ಹಾಕಿ, ಕರ್ಪೂರ ಹಚ್ಚಿ ಪೂಜೆ ಸಲ್ಲಿಸಿದ್ದಾರೆ. ದರ್ಶನ್ ಫೋಟೋಗೆ ಕೈಮುಗಿದು ತಮ್ಮ ಹೊಸ ಜೀವನಕ್ಕೆ ಅವರ ಆಶೀರ್ವಾದ ಬೇಕು ಎಂದು ಪ್ರಾರ್ಥಿಸಿದ್ದಾರೆ. "ದರ್ಶನ್ ಅವರು ನಮಗೆ ದೇವರು, ಅವರ ಮೇಲಿನ ಪ್ರೀತಿ ಎಂದಿಗೂ ಕಡಿಮೆ ಆಗುವುದಿಲ್ಲ" ಎಂಬ ಸಂದೇಶವನ್ನು ಈ ಮೂಲಕ ಸಾರಿದ್ದಾರೆ.
ಈ ಅಪರೂಪದ ಮತ್ತು ಅಚ್ಚರಿಯ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿದೆ. ದರ್ಶನ್ ಅಭಿಮಾನಿಗಳು ಈ ವಿಡಿಯೋವನ್ನು 'ದಾಸನ ಮೇಲಿನ ಅಪ್ಪಟ ಪ್ರೀತಿ' ಎಂದು ಸಂಭ್ರಮಿಸುತ್ತಿದ್ದರೆ, ಸಾಮಾನ್ಯ ಜನರು ಮಾತ್ರ ಈ ಅಂಧಾಭಿಮಾನಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 'ಒಬ್ಬ ಆರೋಪಿಯನ್ನು ಈ ಮಟ್ಟಕ್ಕೆ ದೇವರೆಂದು ಪೂಜಿಸುವುದು ಎಷ್ಟು ಸರಿ?' ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ರೇಣುಕಾಸ್ವಾಮಿಯ ಜೀವಕ್ಕೆ 'ಡೆವಿಲ್' ಆಗಿದ್ದ ದರ್ಶನ್, ಇವರಿಗೆ 'ಗಾಡ್' ಆಗಿರುವುದು ವಿಪರ್ಯಾಸ ಎಂಬ ಕಮೆಂಟ್‌ಗಳು ಹರಿದು ಬರುತ್ತಿವೆ.
ಒಟ್ಟಿನಲ್ಲಿ, ದರ್ಶನ್ ಜೈಲಿನಲ್ಲಿದ್ದರೂ ಅವರ ಅಭಿಮಾನಿಗಳ ನಿಷ್ಠೆ ಮಾತ್ರ ಬದಲಾಗಿಲ್ಲ. ಕಾನೂನು ತನ್ನ ಕೆಲಸ ಮಾಡುತ್ತಿದ್ದರೆ, ಅಭಿಮಾನಿಗಳು ಮಾತ್ರ ತಮ್ಮ ನೆಚ್ಚಿನ ನಟನಿಗಾಗಿ ಪ್ರಾರ್ಥನೆ, ಪೂಜೆಗಳನ್ನು ಮುಂದುವರಿಸಿದ್ದಾರೆ. ಈ ವಿಡಿಯೋ ಈಗ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.