ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಸಿಕ್ಕ ಹಿನ್ನೆಲೆಯಲ್ಲಿ ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿದ್ದ ನಟ ದರ್ಶನ್ ಅವರು ಬುಧವಾರ ಸಂಜೆ ಜೈಲಿನಿಂದ ಬಿಡುಗಡೆಯಾದರು.
ಬಳ್ಳಾರಿ (ಅ.31): ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಸಿಕ್ಕ ಹಿನ್ನೆಲೆಯಲ್ಲಿ ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿದ್ದ ನಟ ದರ್ಶನ್ ಅವರು ಬುಧವಾರ ಸಂಜೆ ಜೈಲಿನಿಂದ ಬಿಡುಗಡೆಯಾದರು. ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ದಿಂದ ಕಳೆದ ಆ.29ರಂದು ಬಳ್ಳಾರಿ ಜೈಲಿಗೆ ಸ್ಥಳಾಂತರ ಆಗಿದ್ದ ದರ್ಶನ್, 2 ತಿಂಗಳು ಬಳ್ಳಾರಿ ಜೈಲಿನ ಹೈ ಸೆಕ್ಯುರಿಟಿ ಸೆಲ್ ನಲ್ಲಿದ್ದರು. ಬುಧವಾರ ಜಾಮೀನು ಪ್ರಕ್ರಿಯೆ ಮುಗಿಸಿ ಸಂಜೆ 6.10ಕ್ಕೆ ಕುಂಟುತ್ತಲೇ ಹೊರಬಂದ ಅವರನ್ನು ಕಾರು ಹತ್ತಿಸಿದ ಬಳ್ಳಾರಿ ಪೊಲೀಸರು, ಆಂಧ್ರದ ಗಡಿಯ 25 ಕಿ. ಮೀ.ವರೆಗೆ ಭದ್ರತೆ ಒದಗಿಸಿದರು. ಆಂಧ್ರದ ಅನಂತಪುರ ಮಾರ್ಗವಾಗಿ ದರ್ಶನ್ ಬೆಂಗಳೂರಿಗೆ ತೆರಳಿದರು.
ಕಣ್ಣಂಚಲ್ಲಿ ನೀರು: ತಮಗೆ ಆರು ವಾರಗಳ ಷರತ್ತು ಬದ್ಧ ಮಧ್ಯಂತರ ಜಾಮೀನು ಸಿಕ್ಕಿದೆ ಎಂದು ಜೈಲಧಿಕಾರಿಗಳು ಮಾಹಿತಿ ನೀಡುತ್ತಿದ್ದಂತೆ ದರ್ಶನ್ ಕೆಲ ಹೊತ್ತು ಕಣ್ಣುಮುಚ್ಚಿ ದೇವರನ್ನು ಸ್ಮರಿಸಿದರು. ಈ ವೇಳೆ ಅವರ ಕಣ್ಣಂಚಿನಲ್ಲಿ ನೀರು ಜಿನುಗಿತು. ಬಳಿಕ ಜಾ ಮೀನು ವಿಚಾರ ಹೇಳಲು ಆಗಮಿಸಿದ್ದ ಜೈಲಧಿಕಾರಿಗೆ ಕೃತಜ್ಞತೆ ಹೇಳಿ ಮೌನವಾದರು. ಕನಕ ದುರ್ಗಮ್ಮ ದೇವಿ ದೇಗುಲಕ್ಕೆ ವಿಜಯಲಕ್ಷ್ಮಿ ಭೇಟಿ: ಜಾಮೀನು ನಿರೀಕ್ಷೆ ಹಿನ್ನೆಲೆಯಲ್ಲಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬ ಸದಸ್ಯರ ಬಳ್ಳಾರಿಗೆ ಆಗಮಿಸಿದ್ದರು. ಜೈಲಿಗೆ ತೆರಳಿ ದರ್ಶನ್‌ರನ್ನು ಕರೆದುಕೊಂಡು ಹೋಗುವ ಮುನ್ನ ವಿಜಯಲಕ್ಷ್ಮಿ ಅವರು ಬಳ್ಳಾರಿಯ ಅಧಿದೇವತೆ ಕನಕ ದುರ್ಗಮ್ಮ ದೇವಸ್ಥಾನಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಜೈಲು ಸಮೀಪ ದರ್ಶನ್ ಅಭಿಮಾನಿಗಳ ಸಂಭ್ರಮ: ನಟ ದರ್ಶನ್‌ಗೆ ಜಾಮೀನು ಸಿಕ್ಕ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳು ಬಳ್ಳಾರಿ ಜೈಲು ಸಮೀಪ ಸಂಭ್ರಮಾಚರಿಸಿದರು. ಬೆಳಗ್ಗೆಯಿಂದಲೇ ಜೈಲು ಬಳಿ ಜಮಾಯಿಸಿದ್ದ ಅಭಿಮಾನಿಗಳು ದರ್ಶನ್ ಫೋಟೋ ಹಿಡಿದು ಘೋಷಣೆ ಕೂಗಿದರು. ಮುನ್ನೆಚ್ಚರಿಕಾ ಕ್ರಮವಾಗಿ ಜೈಲು ಮುಂಭಾಗದ ರಸ್ತೆಯನ್ನು ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿತ್ತು. ಭದ್ರತೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಜೈಲು ಬಳಿ ನಿಯೋಜಿಸಲಾಗಿತ್ತು.
ಇವರೇ ಚಿರಂಜೀವಿ, ಅಲ್ಲು ಅರ್ಜುನ್, ನಿತಿನ್‌ಗೆ ಫೇವರಿಟ್ ಡ್ಯಾನ್ಸ್ ಕೊರಿಯೋಗ್ರಾಫರ್: ಯಾಕೆ ಗೊತ್ತಾ?
ಜೈಲಿಂದ ಹೊರಬಂದ ದರ್ಶನ್ ಕಾರು ಹತ್ತಿ ಕುಟುಂಬ ಸದಸ್ಯರೊಂದಿಗೆ ತೆರಳುತ್ತಿದ್ದಂತೆ ಕೆಲ ಅಭಿಮಾನಿಗಳು ಬೈಕ್, ಕಾರು ಮೂಲಕ ಅವರನ್ನು ಹಿಂಬಾಲಿಸಿದರು. ಅವರ ಪರ ಘೋಷಣೆ ಕೂಗಿದರು.ಇದೇ ವೇಳೆ ಚಾಮ ರಾಜನಗರದಲ್ಲಿ ದರ್ಶನ್ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬೆಂಗಳೂರಿನ ಆರ್.ಆರ್.ನಗರದ ಅವರ ನಿವಾಸದ ಬಳಿ ಹಲವು ಅಭಿಮಾನಿಗಳು ಜಮಾಯಿಸಿ, ದರ್ಶನ್ ಆಗಮನಕ್ಕಾಗಿ ಕಾದಿದ್ದರು.