
ಮೊದಲು ಮನಸಾರೆಯಲ್ಲಿ, ನಂತರ ಅವರೇ ಮುಖ್ಯಪಾತ್ರದಲ್ಲಿ ನಟಿಸಿದ ಡಕೋಟಾ ಎಕ್ಸ್‌ಪ್ರೆಸ್ ಚಿತ್ರದಲ್ಲಿ ಹೂವಿನ ಜತೆ ನಾರಿನಂತೆ ಸುಧಾಕರ್ ಕೂಡ ಬಣ್ಣ ಹಚ್ಚಿಯೇ ಬಿಟ್ಟರು. ಎಲ್ಲರೊಳಗೂ ಒಬ್ಬ ನಟನಿದ್ದಾನೆ ಎಂದು ನಂಬಿರುವ ಯೋಗರಾಜ ಭಟ್ಟರ ಕೈಗೆ ಸಿಕ್ಕಿದ ಮೇಲೆ ಕೇಳಬೇಕೇ? ಮೊದಲೇ ಒಂಚೂರು ತರಲೆ ವ್ಯಂಗ್ಯ ಮಾಡುತ್ತಿದ್ದ ಸುಧಾಕರ್ ಅಲ್ಲಿ ಮಿಂಚಿದರು. ಮುಂದಾದದ್ದು ಕಣ್ಣ ಮುಂದಿದೆ.
ಶೂಟಿಂಗ್ ಸೆಟ್‌ನಲ್ಲಿ ಹೃದಯಾಘಾತ: ಹಿರಿಯ ನಟ ರಾಕ್‌ಲೈನ್ ಸುಧಾಕರ್ ಇನ್ನಿಲ್ಲ
ಎಸ್ಸೆಸ್ಸೆಲ್ಸಿ ಫೇಲು. ಆಟೋ ತೊಳೆಯೋ ಕೆಲಸ. ಆಟೋ ಡ್ರೈವರು. ಕಬ್ಬನ್ ಪಾರ್ಕಲ್ಲಿ ಚಿಫ್ಸ್ ಮಾರಾಟ, ತೋಟದ ಕೆಲಸ. ಕಾರ್ ಡ್ರೈವರ್. ಪ್ರೊಡಕ್ಷನ್ ಮ್ಯಾನೇಜರ್. ಪೋಷಕ ನಟ. ಹೀಗೆ ಹಂತ ಹಂತವಾಗಿ ಏರುತ್ತಾ ಹೋದವರು ಸುಧಾಕರ್. ನೋಡನೋಡುತ್ತಿದ್ದಂತೆ ಇನ್ನೂರು ಸಿನಿಮಾ ಮುಗಿಸಿದ್ದ ಸುಧಾಕರ್ ಎಂದೂ ಮಾತಿಗೆ ಸಿಗುತ್ತಿರಲಿಲ್ಲ. ಒತ್ತಾಯಿಸಿದರೆ ತಲೆತಪ್ಪಿಸಿಕೊಳ್ಳುತ್ತಿದ್ದರು. ಹಿಡಿದು ಪ್ರಶ್ನೆ ಕೇಳಿದರೆ ಎಡಬಿಡಂಗಿ ಉತ್ತರ ಕೊಟ್ಟು ಪಾರಾಗಲು ನೋಡುತ್ತಿದ್ದರು. ಮಾಧ್ಯಮಗಳೇ ಕಲಾವಿದನಿಗೆ ಶತ್ರು ಎಂದು ತಮಾಷೆಯಾಗಿ ಹೇಳುತ್ತಿದ್ದರು.
ಸುಧಾಕರ್ ವಯಸ್ಸು 64. ಅವರಿಗೆ ಕೊರೋನಾ ಬಂದಾಗ ಎಲ್ಲರೂ ಅದೇ ಅವರಿಗೆ ಕುತ್ತಾಗುತ್ತದೆ ಅಂದುಕೊಂಡಿದ್ದರು. ಆದರೆ ಸುಧಾಕರ್ ಕೊರೋನಾ ಗೆದ್ದರು, ಹೃದಯಾಘಾತ ಅವರನ್ನು ಬದುಕಲು ಬಿಡಲಿಲ್ಲ.
ಪಂಚರಂಗಿ ಚಿತ್ರದ ಕುರುಡ, ಡ್ರಾಮಾ ಚಿತ್ರದ ಅಂಗಡಿ ಓನರ್, ಅಧ್ಯಕ್ಷ ಚಿತ್ರದ ಸವಾಲು ಹಾಕುವ ಆಸಾಮಿ, ಅಜಿತ್ ಚಿತ್ರದ ಹೆಂಡ್ತಿಗೆ ಹೆದರುವ ಗೃಹಸ್ತ- ಹೀಗೆ ಸುಧಾಕರ್‌ಗೆ ವೈವಿಧ್ಯಮಯ ಪಾತ್ರಗಳು ಸಿಕ್ಕವು. ಪರಮಾತ್ಮ, ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ, ಲವ್ ಇನ್ ಮಂಡ್ಯ, ವಾಸ್ತುಪ್ರಕಾರ, ಟೋಪಿವಾಲಾ, ಜೂಮ್ ಚಿತ್ರಗಳಲ್ಲೂ ಸ್ಮರಣೀಯ ಪಾತ್ರ ಮಾಡಿದ್ದಾರೆ ಅವರು.
ಅಕ್ರಮ ಹಣ ವರ್ಗಾವಣೆ: ರಾಗಿಣಿ, ಸಂಜನಾಗೆ ಇ.ಡಿ. ಗ್ರಿಲ್..!
ಸುಧಾಕರ್ ಹೆಸರಿನ ಮುಂದೆ ರಾಕ್‌ಲೈನ್ ಸೇರಿಕೊಂಡದ್ದು ಅವರು ರಾಕ್‌ಲೈನ್ ಸಂಸ್ಥೆ ಸೇರಿಕೊಂಡ ನಂತರ. ಕೊನೆ ತನಕವೂ ಅದು ಹಾಗೆಯೇ ಉಳಿಯಿತು. ಯೋಗರಾಜ್ ಭಟ್ಟರು ಒಬ್ಬರೇ ಇವರನ್ನು ಚಿಗಪ್ಪ ಅಂತಲೇ ಕರೆಕರೆದು ಅವಕಾಶ ಕೊಡುತ್ತಿದ್ದರು. ಏನಣ್ಣ ಅಂತ ದೊಡ್ಡವರನ್ನೂ ಏನ್ ದೇವ್ರೂ ಅಂತ ತನಗಿಂತ ಚಿಕ್ಕವರನ್ನೂ ಕರೀತಿದ್ದ ಸುಧಾಕರ್, ಒಂದು ಜೋಕು, ಅದಕ್ಕೊಂದು ತತ್ವಜ್ಞಾನ ಹೇಳಿ ಎಲ್ಲರನ್ನೂ ಚಿತ್ತು ಮಾಡುತ್ತಿದ್ದರು. ಅದೇ ಅವರ ಟ್ರೇಡ್‌ಮಾರ್ಕ್ ಕೂಡ ಆಗಿತ್ತು! ಹಿರಿಯ ಪತ್ರಕರ್ತರಾಗಿದ್ದ ವಿಜಯಸಾರಥಿ ಅವರನ್ನು ನಟನಾ ಜಗತ್ತಿಗೆ ಕರೆತಂದವರು ಇವರೇ ಎಂಬ ಗುಮಾನಿಯೂ ದಟ್ಟವಾಗಿದೆ.
ರಾಕ್‌ಲೈನ್ ನನ್ನ ದೇವರು, ಯೋಗರಾಜ ಭಟ್ರು ಮೇಷ್ಟು್ರ ಅನ್ನುತ್ತಿದ್ದ ಸುಧಾಕರ್ ಧ್ವನಿಯೇ ಅವರ ಸ್ಟೈಲ್ ಸ್ಟೇಟ್‌ಮೆಂಟು. ಈ ಗೊರಗೊರ ಸ್ವರ ರಹಸ್ಯ ಏನೂಂತ ನಂಗೊತ್ತಿಲ್ಲ. ದೇವರು ಕೊಟ್ಟಭಾಗ್ಯ ಅದು. ಸೊಪ್ಪು ಮಾರೋನು ವಿಚಿತ್ರ ಸ್ವರದಲ್ಲಿ ಕೂಗ್ತಾ ಇರ್ತಾನೆ. ಜನ ತಿರುಗಿ ನೋಡ್ತಾರೆ. ಅದು ಅವನ ಕಲೆ, ಇದು ನನ್ನ ಕಲೆ. ಎರ‚ಡೂ ಹೊಟ್ಟೆಪಾಡಿನಿಂದ ಹುಟ್ಟಿದ್ದು ಅಂತಿದ್ದರು ಸುಧಾಕರ್.
ಒಂದು ವಿಶಿಷ್ಟಧ್ವನಿ ಅಡಗಿದೆ. ಚಿತ್ರರಂಗ ಕೊಂಚ ಬಡವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.