
ಬೆಂಗಳೂರು (ಸೆ.20): ಕನ್ನಡ ನಾಡಿನ ಜೀವನದಿ ಕಾವೇರಿಯನ್ನು ತಮಿಳುನಾಡಿಗೆ ಹರಿಸುತ್ತಿರುವ ಸರ್ಕಾರದ ನಡೆಯ ವಿರುದ್ಧ ನಾಡಿನ ರೈತರು ಹಾಗೂ ಕನ್ನಡಪರ ಸಂಘಟನೆಗಳಿಂದ ತೀವ್ರ ಪ್ರತಿಭಟನೆ ನಡೆಯುತ್ತಿದ್ದರೂ, ಕನ್ನಡ ಸಿನಿಮಾ ನಟರು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸದ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಗಳು ಸಿನಿಮಾ ನಟರ ವಿರುದ್ಧ ಧಿಕ್ಕಾರ ಕೂಗಿ, ಕರ್ನಾಟಕ ಚಲನಚಿತ್ರ ಮಂಡಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ್ದವು. ಇದರ ಬೆನ್ನಲ್ಲಿಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಕಾವೇರಿ ಹೋರಾಟಕ್ಕೆ ಬೆಂಬಲಿಸಿದ ಬೆನ್ನಲ್ಲೇ ಕರುನಾಡ ಚಕ್ರವರ್ತಿ ಸುದೀಪ್ ಕೂಡ ಕಾವೇರಿ ಹೋರಾಟಕ್ಕೆ ಧುಮುಕಿದ್ದಾರೆ.
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ (ಹಳೆಯ ಟ್ವಿಟರ್)ನಲ್ಲಿ ಪೋಸ್ಟ್ ಮಾಡಿಕೊಂಡಿರುವ ಸುದೀಪ್ "ನಮ್ಮ ಕಾವೇರಿ ನಮ್ಮ ಹಕ್ಕು . ಅಷ್ಟು ಒಮ್ಮತದಿಂದ ಗೆಲ್ಲಿಸಿರುವ ಸರ್ಕಾರ ಕಾವೇರಿಯನ್ನೇ ನಂಬಿರುವ ಜನರನ್ನು ಕೈಬಿಡುವುದಿಲ್ಲ ಎಂದು ನಾನು ನಂಬಿದ್ದೇನೆ . ಈ ಕೂಡಲೇ ತಜ್ಞರು ಕಾರ್ಯತಂತ್ರ ರೂಪಿಸಿ ನ್ಯಾಯ ನೀಡಲಿ ಎಂದು ಒತ್ತಾಯಿಸುತ್ತೇನೆ . ನೆಲ -ಜಲ -ಭಾಷೆಯ ಹೋರಾಟದಲ್ಲಿ ನನ್ನ ಧ್ವನಿಯೂ ಇದೆ. ಕಾವೇರಿ ತಾಯಿ ಕರುನಾಡನ್ನು ಕಾಪಾಡಲಿ" ಎಂದು ಪೋಸ್ಟ್ ಮಾಡಿಕೊಂಡಿದ್ದಾರೆ.
ಕಾವೇರಿ ಹೋರಾಟಕ್ಕೆ ಧುಮಿಕಿದ ಮೊದಲ ಕನ್ನಡ ನಟ ದರ್ಶನ್ ತೂಗುದೀಪ
ಕನ್ನಡಿಗರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಬೆಂಬಲ ಸೂಚಿಸುತ್ತಿರುವ ನಟರು: ಕನ್ನಡ ನಾಡಿನ ರೈತರಿಗೆ ಅನ್ಯಾಯವಾದಾಗ ಮುನ್ನುಗ್ಗಿ ಬರುವಂಥ ಶಕ್ತಿ... ಕನ್ನಡ ಚಲನಚಿತ್ರ ರಂಗದಲ್ಲಿ ಡಾಕ್ಟರ್ ರಾಜಣ್ಣ ಮಂಡ್ಯದ ಗಂಡು ಅಂಬರೀಶ್. ವಿಷ್ಣುವರ್ಧನ್ ನವರಿಗೆ ಮಾತ್ರ ಇತ್ತು... ಇಂದು ಅವರ ಕೂಗಿಲ್ಲದೆ ಎಷ್ಟೋ ರೈತರು ಹಾಗೂ ಕನ್ನಡದ ಮಕ್ಕಳು ಪರಭಾಶಿಗರ ಒತ್ತಡಕ್ಕೆ ಸಿಲುಕಿ ನಮ್ಮ ಕನ್ನಡ ನಾಡಿನ ಜೀವನದಿ ಕಾವೇರಿಯನ್ನು ಕಳೆದುಕೊಳ್ಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥ ಚಲನಚಿತ್ರ ನಟರನ್ನು ನಂಬದೇ ಇನ್ನಾದರೂ 7 ಕೋಟಿ ಕನ್ನಡಿಗರು ರೈತರ ಪರವಾಗಿ ನಿಲ್ಲಬೇಕೆಂದು ನಿಮ್ಮಲ್ಲಿ ಕೈಮುಗಿದು ವಿನಂತಿಯನ್ನು ಮಾಡಿಕೊಳ್ಳುತ್ತೇನೆ. ರೈತ ಉಳಿದರೆ ನಾವೆಲ್ಲ, ರೈತನಿಲ್ಲದ ಜಗವಿಲ್ಲ. ನಮ್ಮ ನಿರಂತರ ಹೋರಾಟ ಕಾವೇರಿಗಾಗಿ ಎಂದು ಕನ್ನಡಿಗರ ರಕ್ಷಣಾ ವೇದಿಕೆಯು ಆಕ್ರೋಶ ವ್ಯಕ್ತಪಡಿಸಿತ್ತು. ಇದರ ಬೆನ್ನಲ್ಲಿಯೇ ಒಬ್ಬರೇ ನಟರು ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ.
ಸ್ಯಾಂಡಲ್‌ವುಡ್ ನಟರು ಕಾವೇರಿ ಹೋರಾಟಕ್ಕೆ ಬನ್ನಿ: ಯಶ್, ಸುದೀಪ್, ಶಿವರಾಜ್‌ಕುಮಾರ್ ವಿರುದ್ಧ ಆಕ್ರೋಶ
ಇನ್ನು ದರ್ಶನ್ ತೂಗುದೀಪ ಕೂಡ ತಮ್ಮ ಎಕ್ಸ್ ಪೇಜ್‌ಲ್ಲಿ "ಕರ್ನಾಟಕದ ಪಾಲಿನ ಕಾವೇರಿ ನೀರಿಗೆ ಕತ್ತರಿ ಹಾಕಿ ಮತ್ತಷ್ಟು ನೀರು ಪಡೆದುಕೊಳ್ಳುವ ಪ್ರಯತ್ನ ನಿರಂತರವಾಗಿ ನಡೆದು ಬಂದಿದೆ. ಈ ವರ್ಷ ನೀರಿನ ಅಭಾವ ರಾಜ್ಯದಲ್ಲಿ ಸಾಕಷ್ಟಿದೆ. ಈ ಸಮಯದಲ್ಲಿ ನೀರಾವರಿ ಪ್ರದೇಶಕ್ಕೆ ಹಾನಿಯಾಗುವ ಸಾಧ್ಯತೆ ಬಹಳಷ್ಟು ಇರುವ ಕಾರಣ ಎಲ್ಲಾ ಅಂಕಿ-ಅಂಶಗಳನ್ನು ಪರಿಗಣಿಸಿ ಆದಷ್ಟು ಬೇಗ ನ್ಯಾಯ ಸಿಗುವಂತಾಗಲಿ" ಎಂದು ಕರ್ನಾಟಕ ರೈತರು ಹಾಗೂ ಕನ್ನಡಪರ ಸಂಘಟನೆಗಳಿಗೆ ಬೆಂಬಲ ಸೂಚಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.