
ಇಂಟ್ರಾವರ್ಟ್ ರಿಪೋರ್ಟರ್
ಸಿನಿಮಾ ಅಂದಮೇಲೆ ಅಲ್ಲಿ ಬಣ್ಣವಿರಬೇಕು, ಅದ್ದೂರಿತನವಿರಬೇಕು ನಿಜ. ಆದರೆ ಕೇವಲ ಆಡಂಬರವೇ ಸಿನಿಮಾವಾಗಲು ಸಾಧ್ಯವೇ? ಇಂದು ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ಪ್ರಯೋಗಗಳಿಗಿಂತ 'ಶೋಕಿ'ಗಳೇ ಹೆಚ್ಚಾಗುತ್ತಿವೆ. ಬುಡಾಪೆಸ್ಟ್‌ನ ಮ್ಯೂಸಿಕ್ ಕಂಪೋಸಿಂಗ್‌ನಿಂದ ಹಿಡಿದು, ಪ್ರೈವೇಟ್ ಜೆಟ್‌ಗಳ ಅಬ್ಬರದವರೆಗೆ; ಚಿತ್ರರಂಗದಲ್ಲಿ ಹೊಸತೊಂದು 'ದೌಲತ್ತು' ಸಂಸ್ಕೃತಿ ಮನೆಮಾಡಿದೆ. ಸಿನಿಮಾ ಬಿಡುಗಡೆಗೂ ಮುನ್ನವೇ ಕೋಟಿ ಕೋಟಿ ಖರ್ಚು ಮಾಡಿ ಮಾಡುವ ಹತ್ತಾರು ಈವೆಂಟ್‌ಗಳು ಅಂತಿಮವಾಗಿ ಪ್ರೇಕ್ಷಕನನ್ನು ಚಿತ್ರಮಂದಿರಕ್ಕೆ ಸೆಳೆಯುವಲ್ಲಿ ಎಡವುತ್ತಿವೆಯೇ? ಕಥೆಗಿಂತ ಕಟೌಟ್‌ಗೆ, ಸ್ಕ್ರಿಪ್ಟ್‌ಗಿಂತ ಸೆಲೆಬ್ರಿಟಿಗಳ ಬಿಲ್ಡಪ್‌ಗೆ ಮೊರೆಹೋಗುತ್ತಿರುವ ಇಂದಿನ ಟ್ರೆಂಡ್‌ಗಳು ನಿರ್ಮಾಪಕರ ಪಾಲಿಗೆ ವರವಾಗುವ ಬದಲು ಶಾಪವಾಗುತ್ತಿರುವುದು ಕಟು ಸತ್ಯ. ಕನ್ನಡ ಚಿತ್ರರಂಗವನ್ನು ಕಾಡುತ್ತಿರುವ ಇಂತಹ ಎಂಟು ಪ್ರಮುಖ 'ಶೋಕಿ'ಗಳು ಮತ್ತು ಅವುಗಳ ಹಿಂದಿನ ಅಸಲಿ ಮುಖವನ್ನು ಬಿಚ್ಚಿಡುವ ವಿಶೇಷ ವಿಶ್ಲೇಷಣೆ ಇಲ್ಲಿದೆ…
ಇದು ಲೇಟೆಸ್ಟ್ ಶೋಕಿ. ಬುಡಾಪೆಸ್ಟ್ ಅಥವಾ ಇನ್ಯಾವುದೋ ವಿದೇಶಗಳಿಗೆ ಹೋಗಿ ಸಂಗೀತ ಸಂಯೋಜನೆ ಮಾಡಿಸುವುದು. ಸಿನಿಮಾಗೆ ನಿಜವಾಗಿಯೂ ಅವಶ್ಯಕತೆ ಇದ್ದರೆ ಬುಡಾಪೆಸ್ಟ್‌ಗಲ್ಲ, ಹಾಲಿವುಡ್‌ಗೂ ಹೋಗಬಹುದು. ಕತೆಯೇ ಇಲ್ಲದಿದ್ದರೆ, ಅಲ್ಲೆಲ್ಲಾ ಹೋಗಿ ಬಂದರೆ ಅಲ್ಲಿ ತಿಂದ ತಿಂಡಿ ಕಾಸೂ ಹುಟ್ಟುವುದಿಲ್ಲ. ಅದೂ ಅಲ್ಲದೆ, ನಮ್ಮ ರವಿ ಬಸ್ರೂರು ಕುಂದಾಪುರದ ಬಸ್ರೂರಿಗೆ ಟಾಪ್ ತಂತ್ರಜ್ಞರನ್ನೆಲ್ಲಾ ಕರೆಸುತ್ತಾರೆ. ‘ಸು ಫ್ರಂ ಸೋ’ ತಂಡದವರು ಸುಮೇಧ್ ಕೆ. ಎಂಬ ಕಾಲೇಜು ಹೋಗುವ ತರುಣನ ಕೈಯಲ್ಲಿ ಸಂಗೀತ ಸಂಯೋಜಿಸಿ ಹಿಟ್ ಆಲ್ಬಂ ಕೊಟ್ಟರು. ಯಾವುದಕ್ಕೆ ಎಷ್ಟು ಖರ್ಚು ಮಾಡಿಸಬೇಕು ಎಂಬುದು ಗೊತ್ತಿರಬೇಕು.
ಪ್ರೀಮಿಯರ್ ಶೋ ಅನ್ನುವುದು ಪ್ರಚಾರ ತಂತ್ರವೂ ಹೌದು. ಆದರೆ ಅದು ಯಾವಾಗ ಎಂದರೆ ಸಿನಿಮಾ ಚೆನ್ನಾಗಿದ್ದಾಗ. ಕತೆಗೆ ಆದ್ಯತೆ ಕೊಡದೆ ಸಿನಿಮಾ ಮಾಡಿ ಪ್ರೀಮಿಯರ್ ಶೋ ಆಯೋಜಿಸಿ ಸೆಲೆಬ್ರಿಟಿಗಳನ್ನೆಲ್ಲಾ ಕರೆಸಿ ಹತ್ತಾರು ಕ್ಯಾಮೆರಾಗಳ ಮುಂದೆ ರಿವ್ಯೂ ಕೊಡಿಸುತ್ತಾರೆ. ಅತ್ತ ಅದು ಪ್ರಸಾರವೂ ಆಗಲ್ಲ. ಆದರೂ ಜನ ನಂಬಲ್ಲ. ಪ್ರೇಕ್ಷಕರು ನಂಬದೇ ಇರುವ ಇಂಥದ್ದೆಲ್ಲಾ ದುಡ್ಡು ವೇಸ್ಟು ಅನ್ನುವುದು ತಿಳಿಯುವಾಗ ಕೈಯೆಲ್ಲಾ ಖಾಲಿ ಆಗಿರುತ್ತದೆ. ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ.
ಸಿನಿಮಾ ಬಿಡುಗಡೆಗೆ ಕೆಲವು ದಿನಗಳ ಮೊದಲು ಡಿಸ್ಕೋ ಲೈಟ್‌ಗಳನ್ನು ಹಾಕಿ ಜಗಮಗ ಅಂತ ಪ್ರೀರಿಲೀಸ್ ಈವೆಂಟ್ ಮಾಡಿಸುತ್ತಾರೆ. ನಾಲ್ಕೈದು ಸ್ಟಾರ್‌ಗಳನ್ನು ಕರೆಸುತ್ತಾರೆ. ಅವರು ಪಾಪ ವಿಧಿ ಇಲ್ಲದೆ ಚಿತ್ರರಂಗಕ್ಕೆ ಒಳ್ಳೆಯದಾಗಲಿ ಎಂಬ ಆಶಯದಿಂದ, ಅಥವಾ ಕರೆದವರು ತಮ್ಮ ಸಿನಿಮಾಗೂ ನೆರವಾಗಬಹುದು ಎಂಬ ಆಸೆಯಿಂದ ಮೆಚ್ಚಿ ನಾಲ್ಕು ಮಾತನಾಡಿ ಹೋಗುತ್ತಾರೆ. ಅದರಿಂದ ಬಂದಿದ್ದೇನು ಎಂದು ಸಿನಿಮಾ ಜಾತ್ರೆ ಮುಗಿದ ಮೇಲೆ ನಿರ್ಮಾಪಕರನ್ನು ಕೇಳಬೇಕು ಪಾಪ.
ಪೆಟ್ರೋಲ್ ಕುಡಿಯುವುದು, ಕಲರ್ ಕಲರ್ ಕಾಗೆ ಹಾರಿಸೋದು, ಸಿನಿಮಾ ಹೆಸರಿಟ್ಟುಕೊಂಡು ಪನ್ ಮಾಡುವುದು ಇತ್ಯಾದಿಗಳೆಲ್ಲಾ ಈಗ ಸೃಜನಶೀಲ ಪ್ರಚಾರತಂತ್ರಗಳು. ಅದೂ ಅಲ್ಲದೆ, ಈಗ ಅದಕ್ಕೂ ಮುಂದೆ ಹೋಗಿ ಶೋಷಿತರ ಸಿನಿಮಾ ಎಂಬ ನರೇಟಿವ್ ಕೂಡ ಹುಟ್ಟಿಕೊಂಡಿದೆ. ಒಬ್ಬ ನಿಜವಾದ ಸಿನಿಮಾ ಪ್ರೇಕ್ಷಕನಿಗೆ ಇದೆಲ್ಲಾ ಬೇಕಾಗಿಲ್ಲ. ಸಿನಿಮಾಸಕ್ತರಲ್ಲದವರು ಇದೆಲ್ಲಾ ನೋಡುವುದೂ ಇಲ್ಲ.
ಒಂದು ಸಿನಿಮಾ ಮಾಡಿ ಬೇರೆ ರಾಜ್ಯಗಳಲ್ಲೂ ಬಿಡುಗಡೆ ಮಾಡುತ್ತೇವೆ ಎಂದು ಘೋಷಣೆ ಮಾಡುವುದು. ದೂರದ ಬೆಟ್ಟ ನುಣ್ಣಗೆ. ಹತ್ತಿರ ಹೋದಾಗಲೆ ಏಟು ಎಷ್ಟು ಭಯಂಕರವಾಗಿ ಬೀಳಬಹುದು ಎಂದು ಗೊತ್ತಾಗುವುದು. ಸದ್ಯಕ್ಕೆ ಸುಮಾರು ಮಂದಿ ಈ ಶೋಕಿಗೆ ದೊಡ್ಡ ಮಟ್ಟಿನಲ್ಲಿ ಪೆಟ್ಟು ತಿಂದಿದ್ದಾರೆ. ಮುಂದೆ ಇದೊಂದು ಪಾಠವಾದರೆ ಒಳ್ಳೆಯದು.
ಮಾತೆತ್ತಿದರೆ 5 ಭಾಷೆಗಳಲ್ಲಿ, 20 ಭಾಷೆಗಳಲ್ಲಿ, 30 ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಮಾಡುತ್ತೇವೆ ಎಂದು ಬಹಿರಂಗ ಘೋಷಣೆ ಮಾಡಲಾಗುತ್ತದೆ. ಕೊನೆಗೆ ಸಿನಿಮಾ ಬಿಡುಗಡೆ ಮಾಡುವ ಹೊತ್ತಿಗೆ ಒಂದು ಭಾಷೆಯಲ್ಲಿ ಸಿನಿಮಾ ಬಿಡುಗಡೆಯಾದರೆ ಸಾಕಪ್ಪಾ ಅನ್ನಿಸುತ್ತಿರುತ್ತದೆ. ಕಡೆಗೆ ಆ ಒಂದು ಸಿನಿಮಾಗೂ ಬಿಸಿನೆಸ್ ಮಾಡುವುದು ಕಷ್ಟವಾಗಿರುತ್ತದೆ.
ಮೊದಲ ಶೋ ಫುಲ್ ಮಾಡಿಸುವುದೂ ಒಂದು ಶೋಕಿ. ಆರ್ಗ್ಯಾನಿಕ್ ಆಗಿ ಪ್ರೇಕ್ಷಕರು ಬರುವುದು ಬಹಳ ಕಷ್ಟ ಇರುವ ಈ ಕಾಲದಲ್ಲಿ ಸಿಕ್ಕಸಿಕ್ಕವರನ್ನೆಲ್ಲಾ ಫ್ರೀ ಟಿಕೆಟ್ ಕೊಟ್ಟು ಕರೆಸುವ ಪರಿಪಾಠ ಬೆಳೆದು ಬಂದಿದೆ. ಕಳೆದವಾರ ಬಿಡುಗಡೆಯಾದ ಚಿತ್ರವೊಂದರ ಮೊದಲ ಪ್ರದರ್ಶನಕ್ಕೆ ಎಷ್ಟು ಜನರನ್ನು ಕರೆಸಿದ್ದರು ಎಂದರೆ ಮೆಟ್ಟಿಲ ಮೇಲೂ ಕೂತು ನೋಡಬೇಕಾದ, ಕುಣಿತ ಸಂಭ್ರಮದ ಅಬ್ಬರಕ್ಕೆ ಸ್ಕ್ರೀನ್ ಕೂಡ ಕಾಣಿಸದ ದುರ್ಭರ ಪರಿಸ್ಥಿತಿ ಎದುರಾಯಿತು. ಗೆದ್ದು ಬಿಟ್ರು ಈ ಸಿನಿಮಾದೋರು ಅಂದುಕೊಂಡ್ರೆ, ಮುಂದಿನ ಪ್ರದರ್ಶನದ ಸೀಟು ಲೆಕ್ಕ ಕೇಳಬೇಡಿ.
ಪ್ರೈವೇಟ್ ಜೆಟ್ ಶೋಕಿ ಇದ್ದಕ್ಕಿದ್ದಂತೆ ಶುರುವಾಗಿದ್ದು, ಎರಡು ಮೂರು ಸಿನಿಮಾ ತಂಡಗಳು ಪೆಟ್ಟು ಬಿದ್ದ ಮೇಲೆ ಕಡಿಮೆಯಾಗಿದೆ. ಅದರ ಜೊತೆ ಈ ಸುದೀರ್ಘ ಶೂಟಿಂಗ್ ಚಾಳಿ ಬೇರೆ ಶುರುವಾಗಿದೆ. ಪ್ಲಾನಿಂಗ್ ಇರದೆ ಶೂಟಿಂಗ್ ದೀರ್ಘವಾಗಿ ಬಜೆಟ್ ದುಪ್ಪಟ್ಟಾಗಿ ಒದ್ದಾಡುವಂತಾಗಿದೆ.
ಸಾಮಾನ್ಯವಾಗಿ ಈ ಎಲ್ಲಾ ಶೋಕಿಗಳಿಂದ ಮೊದಲು ಪೆಟ್ಟು ಬೀಳುವುದು ನಿರ್ಮಾಪಕರಿಗೆ. ಯಾಕೆಂದರೆ ಈಗ ಸ್ಯಾಟಲೈಟ್, ಓಟಿಟಿ ಬಿಸಿನೆಸ್ ಇಲ್ಲ. ಏನೇ ಬಂದರೂ ಥಿಯೇಟರ್‌ನಲ್ಲಿಯೇ ಬರಬೇಕು. ಅದಕ್ಕಾಗಿ ಹೋರಾಟ ನಡೆಸಬೇಕು. ಹಾಗಾಗಿ ಸಿನಿಮಾ ಮಾಡುವವರು ಶೋಕಿ ಬಿಟ್ಟು ಪಕ್ಕಾ ಪ್ಲಾನಿಂಗ್ ಮಾಡಿ ಸಿನಿಮಾ ಮಾಡಬೇಕು. ಮುಖ್ಯವಾಗಿ ಕತೆ, ಚಿತ್ರಕತೆಗೆ ಮರ್ಯಾದೆ ಕೊಡಬೇಕು. ಇಲ್ಲದಿದ್ದರೆ ಕೊನೆಗೆ ಬಯಲ ಶೂನ್ಯ ನೋಡಿಕೊಂಡು ನಿಲ್ಲಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.