
ಬೆಂಗಳೂರು: ಹೊಸ ಸಂಬಂಧ ಶುರುವಾದಾಗ ಆರಂಭದಲ್ಲಿ ಎಲ್ಲವೂ ಅದ್ಭುತವಾಗಿರುತ್ತೆ. ಆದ್ರೆ ದಿನ ಕಳೆದಂತೆ ಹಳೆ ಕಥೆಯೇ ಮತ್ತೆ ಶುರು. ಸಂಗಾತಿಯ ನಡವಳಿಕೆಯಲ್ಲಿ ಬದಲಾವಣೆ, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳದಿರುವುದು, ಕೊನೆಗೆ ಮನಸ್ತಾಪದಿಂದ ಸಂಬಂಧವೇ ಮುರಿದು ಬೀಳುತ್ತೆ. ನಿಮ್ಮ ಲೈಫ್‌ನಲ್ಲೂ ಪದೇ ಪದೇ ಹೀಗೆ ಆಗ್ತಿದ್ರೆ, ಅದು ನಿಮ್ಮ ಕೆಟ್ಟ ಟೈಮ್ ಅಲ್ಲ. ಬದಲಿಗೆ, ನಿಮ್ಮ ಮನಸ್ಥಿತಿ ಮತ್ತು ಬಾಲ್ಯದ ಅನುಭವಗಳೇ ಇದಕ್ಕೆ ಕಾರಣ ಅಂತಾರೆ ಮನಃಶಾಸ್ತ್ರಜ್ಞರು. ಯಾಕೆ ಹೀಗಾಗುತ್ತೆ ಅಂತ ನೋಡೋಣ ಬನ್ನಿ.
ಮನಃಶಾಸ್ತ್ರದ ಪ್ರಕಾರ, ನಾವು ಚಿಕ್ಕವರಿದ್ದಾಗ ಮನೆಯಲ್ಲಿ ನೋಡಿದ ವಾತಾವರಣವೇ ನಮ್ಮ ಮುಂದಿನ ಸಂಬಂಧಗಳಿಗೆ ಒಂದು ಬ್ಲೂಪ್ರಿಂಟ್ ರೀತಿ ಕೆಲಸ ಮಾಡುತ್ತೆ. ತಂದೆ-ತಾಯಿಯ ನಡುವೆ ಪ್ರೀತಿ, ಗೌರವ ನೋಡಿ ಬೆಳೆದ ಮಕ್ಕಳು, ದೊಡ್ಡವರಾದ ಮೇಲೆ ತಮ್ಮ ಸಂಗಾತಿಯಲ್ಲೂ ಅದೇ ಗುಣಗಳನ್ನು ಹುಡುಕುತ್ತಾರೆ. ಆದರೆ, ಬಾಲ್ಯದಲ್ಲಿ ಜಗಳ, ಪ್ರೀತಿಯಿಲ್ಲದ ವಾತಾವರಣದಲ್ಲಿ ಬೆಳೆದವರು, ತಮಗೇ ಗೊತ್ತಿಲ್ಲದಂತೆ ಅಂಥದ್ದೇ ಕಷ್ಟದ ಸಂಬಂಧಗಳ ಕಡೆಗೆ ಆಕರ್ಷಿತರಾಗುತ್ತಾರೆ.
ತಜ್ಞರ ಪ್ರಕಾರ, ನಮ್ಮ ಮನಸ್ಸು ಯಾವಾಗಲೂ ತನಗೆ ಪರಿಚಿತವಾಗಿರುವ ಭಾವನೆಗಳನ್ನೇ ಹುಡುಕುತ್ತೆ. ಒಂದು ವೇಳೆ ನೀವು ಚಿಕ್ಕವರಿದ್ದಾಗ ಮನೆಯಲ್ಲಿ ಜಗಳ, ಕಿರುಚಾಟ, ಪ್ರೀತಿಯ ಕೊರತೆ ನೋಡಿ ಬೆಳೆದಿದ್ದರೆ, ನಿಮ್ಮ ಮೆದುಳಿಗೆ ಆ ಅಶಾಂತ ವಾತಾವರಣವೇ 'ನಾರ್ಮಲ್' ಅನಿಸಿಬಿಡುತ್ತೆ. ಹಾಗಾಗಿಯೇ, ದೊಡ್ಡವರಾದ ಮೇಲೆ ಯಾರಾದರೂ ನಿಮ್ಮನ್ನು ಪ್ರೀತಿ, ಗೌರವದಿಂದ ನೋಡಿಕೊಂಡರೆ ಅದು ಬೋರಿಂಗ್ ಅನಿಸಬಹುದು. ನಿಮಗೆ ಗೊತ್ತಿಲ್ಲದಂತೆ, ನಿಮ್ಮ ಮನಸ್ಸು ಹಳೆ ಗಾಯವನ್ನು ನೆನಪಿಸುವ ಕೋಪಿಷ್ಠ, ಭಾವನೆಗಳಿಲ್ಲದ ವ್ಯಕ್ತಿಗಳ ಕಡೆಗೆ ನಿಮ್ಮನ್ನು ಸೆಳೆಯುತ್ತೆ.
ನಿಜ ಹೇಳಬೇಕೆಂದರೆ, ಹಲವು ಬಾರಿ ನಮಗೆ ನಮ್ಮ ಮೇಲೆಯೇ ನಂಬಿಕೆ ಇರುವುದಿಲ್ಲ. 'ನನಗೆ ನಿಜವಾದ ಪ್ರೀತಿ, ಗೌರವ ಸಿಗಲು ಅರ್ಹತೆ ಇದೆಯಾ?' ಅನ್ನೋ ತಪ್ಪು ಕಲ್ಪನೆ ನಮ್ಮನ್ನು ಕಾಡುತ್ತಿರುತ್ತೆ. ಇದರಿಂದಾಗಿ, ನಮ್ಮನ್ನು ಸರಿಯಾಗಿ ನೋಡಿಕೊಳ್ಳದವರನ್ನೂ ನಾವು ಸಹಿಸಿಕೊಳ್ಳಬೇಕಾಗುತ್ತೆ. ಇದು ಒಂದು ವಿಷವರ್ತುಲದ ಹಾಗೆ. ಆತ್ಮವಿಶ್ವಾಸ ಕಡಿಮೆಯಾದಷ್ಟೂ ಕೆಟ್ಟ ಸಂಬಂಧಕ್ಕೆ ಬೀಳುವ ಸಾಧ್ಯತೆ ಹೆಚ್ಚಾಗಿರುತ್ತೆ.
ಈ ವಿಷವರ್ತುಲದಿಂದ ಹೊರಬರಬೇಕೆಂದರೆ, ಮೊದಲು ನಿಮ್ಮ ಹಳೆಯ ಸಂಬಂಧಗಳನ್ನು ವಿಶ್ಲೇಷಣೆ ಮಾಡಿಕೊಳ್ಳಬೇಕು. ನೀವು ಎಂಥವರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೀರಿ, ಯಾವ ತಪ್ಪುಗಳು ಮತ್ತೆ ಮತ್ತೆ ಆಗುತ್ತಿವೆ ಎಂಬುದನ್ನು ಗುರುತಿಸಬೇಕು. ಅಗತ್ಯವಿದ್ದರೆ, ಸ್ನೇಹಿತರು ಅಥವಾ ಮನಃಶಾಸ್ತ್ರಜ್ಞರ ಸಹಾಯ ತೆಗೆದುಕೊಳ್ಳಿ. ಎಲ್ಲಕ್ಕಿಂತ ಮುಖ್ಯವಾಗಿ, ನಿಮ್ಮನ್ನು ನೀವು ಪ್ರೀತಿಸುವುದು, ಗೌರವಿಸುವುದನ್ನು ಕಲಿತಾಗ ಮಾತ್ರವೇ, ಸರಿಯಾದ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಸಿಗುತ್ತೆ ಅಂತ ಮನಃಶಾಸ್ತ್ರಜ್ಞರು ಸಲಹೆ ನೀಡುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.